ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೈರಪ್ಪನವರಿಂದ ಲಹರಿ ಹರಿದಾಸ್‌ ಮತ್ತು ಜೋಶಿವರೆಗೆ

By Staff
|
Google Oneindia Kannada News

ಎಸ್ಕೆ. ಶಾಮಸುಂದರ
[email protected]

ಬಾಲ್ಟಿಮೋರ್‌ ವಿಶ್ವಕನ್ನಡ ಸಮ್ಮೇಳನದಲ್ಲಿ ಕಾರ್ಯಕ್ರಮಗಳ ಮಹಾಪೂರ. ಎಲ್ಲ ವಯೋಮಾನದವರಿಗೆ, ಅನೇಕ ಬಗೆಯ ಅಭಿರುಚಿಗಳನ್ನು ಪ್ರೋತ್ಸಾಹಿಸುತ್ತಾ ಪೋಷಿಸುವ ಕನ್ನಡ ಕುಲಸಂಜಾತರಿಗೆ ಅಲ್ಲಿ ಮನರಂಜನೆ ಮತ್ತು ಮನೋವಿಕಾಸಕ್ಕೆ ಇಂಬುಕೊಡುವ ರಸಗವಳ ಚಾಚೂ ತಪ್ಪದ ರೀತಿಯಲ್ಲಿ ಅಚ್ಚುಕಟ್ಟಾಗಿ ತಯಾರಾಗುತ್ತಿದೆ.

ಈ ಕಾರ್ಯಕ್ರಮದ ವಿವರಗಳನ್ನು ವಿಶ್ವಕನ್ನಡ ಸಮ್ಮೇಳನಕ್ಕೇ ಮೀಸಲಾದ ನಮ್ಮ ವಿಶೇಷ ಪುರವಣಿ ವಿಭಾಗದಲ್ಲಿ ಕಾಲಕಾಲಕ್ಕೆ ನೀವು ವೀಕ್ಷಿಸುತ್ತೀರಿ. ಹೆಚ್ಚು ವಿವರಗಳನ್ನು ಅಪೇಕ್ಷಿಸುವವರು ಸಮ್ಮೇಳನದ ಮುಖವಾಣಿ www.akkaonline.org ಜಾಲತಾಣದಲ್ಲಿ ಕಾಣಬಹುದು. ಈ ಜಾಲತಾಣ ದಿನದಿನದಿಂದ ದಿನಕ್ಕೆ ತನ್ನನ್ನು ತಾನು ನವೀಕರಿಸಿಕೊಳ್ಳುತ್ತಾ, ಹೊಸಹೊಸ ವಿಷಯ ವಿವರಗಳನ್ನು ಒದಗಿಸುತ್ತಾ ಸಾಗುತ್ತಿದೆ. ಜಾಲತಾಣವನ್ನು ನಿರ್ವಹಿಸುತ್ತಿರುವವರು; ಕಾವೇರಿ/ಅಕ್ಕ ಜಂಟಿಯಾಗಿ ಆಯೋಜಿಸಿರುವ ಸಮ್ಮೇಳನದ 'ಆಸ್ಥಾನ ಕಲಾವಿದ" ರೆಂದು ಹೆಸರುವಾಸಿಯಾದ ಕಲಾವಿದ ಹರಿದಾಸ್‌ ಲಹರಿ. ಜಾಲತಾಣ ಮಾತ್ರವಲ್ಲದೆ ಸಮ್ಮೇಳನದ ಬ್ಯಾನರ್‌ಗಳು, ರಂಗಸಜ್ಜಿಕೆ, ಕೈಮರಗಳು ಮುಂತಾದ ಕಲಾಭೂಮಿಕೆಯನ್ನು ಲಹರಿ ನಿರ್ಮಿಸುತ್ತಿದ್ದಾರೆ. ಹರಿದಾಸ್‌ ಅವರು ಮೂಲಭೂತವಾಗಿ ಚಿತ್ರ ಕಲಾವಿದ.

ಅವರು ಹಾಗೂ ಅವರ ಸೋದರ ನಿರ್ವಹಿಸುವ ಜಾಲತಾಣವೊಂದಿದೆ. ಅಲ್ಲಿ ಆಕರ್ಷಕ ಚಿತ್ರಗಳು ಮಾರಾಟಕ್ಕಿವೆ. ಆಸಕ್ತಿ ಇರುವವರು ಜಾಲತಾಣಕ್ಕೆ (www.lahari.com) ಒಮ್ಮೆ ಭೇಟಿಕೊಡಬಹುದು.

*

ಸಮ್ಮೇಳನದ ಸುದ್ದಿ ಪತಾಕೆಗಳನ್ನು ಹಾರಿಸುವ ಕೆಲಸವನ್ನು ನಿರ್ವಹಿಸುವುದಕ್ಕೆ ಒಂದು ವಿಭಾಗವಿದೆ. ಅದಕ್ಕೆ 4ನೇ ವಿಶ್ವಕನ್ನಡ ಸಮ್ಮೇಳನ 'ವಾರ್ತಾ ಮತ್ತು ಪ್ರಚಾರ" ಇಲಾಖೆ ಎಂದು ಹೆಸರು. ಸಮ್ಮೇಳನದ ಸುದ್ದಿ ಅಂಶಗಳನ್ನು ಆಯ್ದು ಅಚ್ಚುಕಟ್ಟಾಗಿ ಬರೆದು ಮಾಧ್ಯಮಗಳಿಗೆ ಕಳಿಸಿಕೊಡುವ ಜವಾಬ್ದಾರಿ ಶ್ರೀವತ್ಸಜೋಶಿ ಅವರದು. ವಿ ಕ. ಸ ನ. (ವಿಶ್ವ ಕನ್ನಡ ಸಮ್ಮೇಳನ) ಶೀರ್ಷಿಕೆಯಲ್ಲಿ ಪಿಡಿಎಫ್‌ನಲ್ಲಿ ಹೊರಹೊಮ್ಮುವ ಇ-ಸುದ್ದಿ ಪತ್ರಿಕೆಯ ಹೆಸರು 'ನಗಾರಿ".

ಜೋಶಿ ಅವರೊಬ್ಬ ನುರಿತ ಬರಹಗಾರರಾದ್ದರಿಂದ ಹಾಗೂ ಸುದ್ದಿಮನೆಯ ನಾಡಿಮಿಡಿತಗಳನ್ನು ಬಲ್ಲವರಾದ್ದರಿಂದ ಅವರಿಗೆ ಮತ್ತು ಸಮ್ಮೇಳನ ವ್ಯವಸ್ಥಾಪಕರಿಗೆ ಸುದ್ದಿ ಸಂಹವನದ ವಿಭಾಗದಲ್ಲಿ ತಲೆನೋವಿಲ್ಲ. ಅಂದಹಾಗೆ, ದಟ್ಸ್‌ಕನ್ನಡ ಡಾಟ್‌ಕಾಂನಲ್ಲಿ ವಿಚಿತ್ರಾನ್ನ ಅಂಕಣ ನಿರ್ವಹಿಸುತ್ತಿರುವ ಲೇಖಕ ಶ್ರೀವತ್ಸ ಜೋಶಿಯವರೇ , ಈ ಜೋಶಿ ಎನ್ನುವುದು ನಿಮಗೆ ನೆನಪಿರಲಿ.

*

ಜೋಶಿ ಅವರು ರವಾನಿಸುವ 'ನಗಾರಿ"ಯ ಇತ್ತೀಚಿನ ಸಂಚಿಕೆಯಲ್ಲಿ ಒಂದು ಸುದ್ದಿ ಇಣುಕಿದೆ. ಅದೆಂದರೆ :

ಬಾಲ್ಟಿಮೋರ್‌ ಸಮ್ಮೇಳನದ ಆಧ್ಯಾತ್ಮಿಕ ಒಲವುಗಳು.

ಈ ಮಾಲಿಕೆಯಲ್ಲಿ ಏರ್ಪಾಟಾಗಿರುವ ಒಂದು ವಿಚಾರ ಸಂಕಿರಣ : ಕರ್ನಾಟಕಕ್ಕೆ ಜೈನ ಧರ್ಮದ ಕೊಡುಗೆ ಮತ್ತು ಕರ್ನಾಟಕದಲ್ಲಿ ಬೌದ್ಧ ಧರ್ಮ. ಸಂಕಿರಣದಲ್ಲಿ ಎರಡು ವಿಷಯಗಳ ಬಗ್ಗೆ ಇಬ್ಬರು ಪರಿಣಿತರು ಮಾತನಾಡುತ್ತಾರೆ, ಆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌. ಎಲ್‌. ಭೈರಪ್ಪ ವಹಿಸುತ್ತಾರೆ !!

ಧರ್ಮಶ್ರೀ ಕಾದಂಬರಿಯಿಂದ ಮಂದ್ರದವರೆಗೆ ಭೈರಪ್ಪನವರನ್ನು ಓದಿಕೊಂಡು ಬಂದಿರುವ ಕನ್ನಡ ಕಾದಂಬರಿಪ್ರಿಯರಿಗೆ ಈ ಸುದ್ದಿ ಚಕಿತಗೊಳಿಸದಿರುವುದಿಲ್ಲ. ಆಧ್ಯಾತ್ಮಕ್ಕೂ ಭೈರಪ್ಪನವರಿಗೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ನನಗಂತೂ ಅನಿಸುತ್ತಿದೆ(ಅವರ ಕಾದಂಬರಿಗಳಲ್ಲಿ ಆಧ್ಯಾತ್ಮದ ಸ್ಪರ್ಶವಿರಬಹುದು, ಭೈರಪ್ಪನವರು ಹಿಮಾಲಯದ ಒಳಹೊಕ್ಕಿರಬಹುದು ಅದು ಬೇರೆ ಸಂಗತಿ!).

ಕನ್ನಡಿಗರಿಗೆ ಆಧುನಿಕ ಕನ್ನಡ ಓದಿನ ಹುಚ್ಚು ಹಚ್ಚಿಸಿದವರು ನಾಲ್ಕೇ ಮಂದಿ. ಮೊದಲು ಪತ್ತೇದಾರಿ ಕಾದಂಬರಿಕಾರ ಎನ್‌. ನರಸಿಂಹಯ್ಯ, ನಂತರ ಅ.ನ.ಕೃ, ನಂತರ ತ್ರಿವೇಣಿ, ಆನಂತರ ಎಸ್‌. ಎಲ್‌. ಭೈರಪ್ಪ. ಕಳೆದ ಮೂವತ್ತು ವರ್ಷಗಳ ಕಾಲದುದ್ದಕ್ಕೂ ಕನ್ನಡ ಕಾದಂಬರಿಪ್ರಿಯರನ್ನು ಆಯಸ್ಕಾಂತದಂತೆ ಸೆಳೆದ ಭೈರಪ್ಪನವರು, ಆ.ನ.ಕೃ. ನಂತರದ ಕಾದಂಬರಿ ಸಾರ್ವಭೌಮರೇ ಸರಿ.

ಭೈರಪ್ಪನವರನ್ನು ಕನ್ನಡಿಗರು ಎಷ್ಟು ಓದಿದ್ದಾರೋ ಅದಕ್ಕಿಂತ ಹತ್ತುಪಟ್ಟು ಹೆಚ್ಚು ಮಂದಿ ಇತರ ಭಾಷಿಕರು ಓದಿಕೊಂಡಿದ್ದಾರೆ. ಭಾರತದುದ್ದಕ್ಕೂ ಹತ್ತು ಹಲವು ಭಾಷೆಗಳಿಗೆ ಅವರ ಕಾದಂಬರಿಗಳು ಭಾಷಾಂತರಗೊಂಡಿವೆ. ಭೈರಪ್ಪನವರ ಕೃತಿಗಳನ್ನು ಓದದೆ ಭಾರತೀಯ ಸಾಹಿತ್ಯದ ಓದು ಮುಗಿಯುವುದಿಲ್ಲ ಎನ್ನುವ ಮಾತೂ ಇದೆ.

ಇಂಥ ಕಾದಂಬರಿಕಾರರನ್ನು ಕನ್ನಡಿಗರು ಅನವರತ ಓದಿ ಗೌರವಿಸಿ ಆಗಿದೆ. ಅವರ ಕೃತಿಗಳನ್ನು ಬಿಕರಿ ಮಾಡುವ ಚಿಕ್ಕಪೇಟೆಯ ಜಂಗಮಮೇಸ್ತ್ರಿಗಲ್ಲಿಯ ಸಾಹಿತ್ಯ ಭಂಡಾರದಲ್ಲಿ ಇವತ್ತು ಒಂದು ಪುಸ್ತಕದ ದಾಸ್ತಾನೂ ಇಲ್ಲ. ಯಾಕೆ ಅವರು ಕಾಪಿಗಳನ್ನು ಪುನಾ ಪ್ರಿಂಟ್‌ ಮಾಡುತ್ತಿಲ್ಲವಾ? ಹೊಟ್ಟೆ ತುಂಬಿತಾ?

ಯಾಕಾದರೂ ಆಗಲಿ. ಭೈರಪ್ಪನವರು ವಿಶ್ವಕನ್ನಡ ಸಮ್ಮೇಳನದ ಆಧ್ಯಾತ್ಮಿಕ ಅಂಗಳದಲ್ಲಿ ಅಧ್ಯಕ್ಷರಾಗಿ ಭಾಗವಹಿಸಲಿ. ಆದರೆ, ಅವರ ಕಾದಂಬರಿಗಳ ವಸ್ತು-ವಿನ್ಯಾಸ-ಪಾತ್ರ, ಪಾತ್ರಪೋಷಣೆ , ಲೇಖಕರ ಒಲವು ನಿಲವುಗಳನ್ನು ಅರಿಯಲು ಸಾಧ್ಯವಾಗುವ ಒಂದು ಕಾರ್ಯಕ್ರಮ (Open House with Dr. S.L. Bhyrappa) ಸಮ್ಮೇಳನದ ಸಾಹಿತ್ಯ ವಿಭಾಗದಲ್ಲಿ ಅಡಕವಾಗಿರಲಿ ಎಂಬುದು ನಿಮ್ಮ ಈ ವಿಶ್ವಾಸಿಯ ಆಶಯವಾಗಿದೆ.

ಸಮಗ್ರ ಭಾರತದ ಓರ್ವ ಮೇರು ಲೇಖಕನೊಂದಿಗೆ ಮುಖಾಮುಖಿಯಾಗಲು ಉತ್ತರ ಅಮೆರಿಕಾದ ಕಾದಂಬರಿ ಪ್ರಿಯರಿಗೆ ಇದೊಂದು ಅಪೂರ್ವ ಅವಕಾಶ. ನಾಗತಿಹಳ್ಳಿ ಚಂದ್ರಶೇಖರ್‌ ಥರ, ಶ್ರೀನಿವಾಸ ಕಪ್ಪಣ್ಣ ಥರ, ಎಸ್ಕೆ. ಶಾಮಸುಂದರ ಥರ ಭೈರಪ್ಪನವರು ಅಮೆರಿಕಾಗೆ ಪದೇಪದೇ ಹೋಗುವವರಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X