ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜ್ಞಾನ-ತಂತ್ರಜ್ಞಾನ ಸಂಬಂಧಿ ಲೇಖನಗಳಿಗೆ ಆಹ್ವಾನ

By Staff
|
Google Oneindia Kannada News

ಮಾನ್ಯ ಕನ್ನಡಾಭಿಮಾನಿಗಳೆ,

2006ರ ಸೆಪ್ಟೆಂಬರ್‌ 1, 2ಮತ್ತು 3ರಂದು, ಅಕ್ಕ ಸಹಯೋಗದೊಂದಿಗೆ ಕಾವೇರಿ ಕನ್ನಡಸಂಘವು ವಿಶ್ವಕನ್ನಡ ಸಮ್ಮೇಳನವನ್ನು ವಾಷಿಂಗ್ಟನ್‌ ಕ್ಷೇತ್ರದಲ್ಲಿ ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಮತ್ತು ಅತ್ಯಂತ ಆತ್ಮೀಯ ವಾತಾವರಣದಲ್ಲಿ ಜರುಗಿಸಲು ಕಾರ್ಯತತ್ಪರವಾಗಿರುವ ಸಂಗತಿ ಈಗಾಗಲೇ ನಿಮಗೆ ತಿಳಿದಿರಬಹುದು.

ನಮ್ಮ ಹೆಮ್ಮೆಯ ಕರ್ನಾಟಕ ರಾಜ್ಯವು ಸುವರ್ಣಸಂಭ್ರಮದಲ್ಲಿರುವ ಈ ಸಂದರ್ಭದಲ್ಲೇ ನಮ್ಮ ಸಮ್ಮೇಳನವೂ ನಡೆಯುತ್ತಿರುವುದರಿಂದ ಸುವರ್ಣಪುಷ್ಪಕ್ಕೆ ಸುಗಂಧದಂತೆ ಈ ಸಮ್ಮೇಳನ ರೂಪುಗೊಳ್ಳಬೇಕೆಂಬುದು ನಮ್ಮೆಲ್ಲರ ಮಹದಭಿಲಾಷೆ. ಈ ವಿಶ್ವಕನ್ನಡ ಸಮ್ಮೇಳನದ ಅಂಗವಾಗಿ ಸ್ಮರಣಸಂಚಿಕೆಯನ್ನು ಮತ್ತು ಸಂಚಿಕೆಯ ಜತೆಯಲ್ಲೇ ಸಾಹಿತ್ಯಿಕ ಪುರವಣಿಗಳನ್ನು ಹೊರತರುವ ನಮ್ಮ ಯೋಜನೆಯನ್ನು ಡಿಸೆಂಬರ್‌ 22, 2005ರಂದು ಈ ಅಂತರ್ಜಾಲ ಪತ್ರಿಕೆಯಲ್ಲಿಯೇ ಪ್ರಕಟಿಸಿದ್ದೇವೆ.

ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಒಂದು ಸಾಹಿತ್ಯ ಪುರವಣಿಯನ್ನು ಹೊರತರುವುದು ನಮ್ಮ ಉದ್ದೇಶವಾಗಿದೆ. ಈ ಕ್ಷೇತ್ರದಲ್ಲಿಯ ಅತ್ಯಾಧುನಿಕ ಬೆಳವಣಿಗೆಗಳ ವಿಷಯಗಳನ್ನು ಸರಳಗನ್ನಡದಲ್ಲಿ ಜನಸಾಮಾನ್ಯರಿಗೆ ತಿಳಿಯುವಂತೆ ಬರೆದಿರುವ ಪ್ರಬಂಧಗಳನ್ನು ಆಯ್ಕೆ ಮಾಡಲಾಗುವದು. ಈ ಪುರವಣಿಗೆಗೆ ತಾವು ಸರಳಗನ್ನಡದಲ್ಲಿ ಲೇಖನಗಳನ್ನು ಬರೆದು ಕಳುಹಿಸಿರೆಂದು ವಿನಂತಿಸುತ್ತೇವೆ.

ಪ್ರಬಂಧಗಳು ತಜ್ಞರಿಗೆ ಮಾತ್ರ ತಿಳಿಯುವಂತಹ ಕ್ಲಿಷ್ಟತೆಯವಾಗಿರಬಾರದೆ ವಿನಹ ಎಲ್ಲರಿಗೂ ಸುಲಭವಾಗಿ ತಿಳಿಯುವ ಮಟ್ಟದ್ದಾಗಿರಬೇಕು. ಪ್ರಬಂಧಗಳು ಎಷ್ಟರ ಮಟ್ಟಿಗೆ ಸಾಮಾನ್ಯ ಕನ್ನಡಿಗರಲ್ಲಿ ಓದುವ ಉತ್ತೇಜನ ನೀಡುತ್ತವೆ ಮತ್ತು ಕನ್ನಡ ತಾಂತ್ರಿಕ ಬರವಣಿಗೆಯ ಬೆಳವಣಿಗೆಗೆ ಪೂರಕವಾಗಿವೆ ಎಂಬುದರ ಮೇಲೆ ಅವುಗಳ ಅಂತಿಮ ಆಯ್ಕೆ ಮಾಡಲಾಗುವದು.

ಕನ್ನಡದ ಬಳಕೆಯಲ್ಲಿರುವ ಪದಗಳನ್ನು ಉಪಯೋಗಿಸುವ ಪ್ರಯತ್ನವಿರಲಿ. ತಾಂತ್ರಿಕ ಶಬ್ದಗಳಿಗೆ ಕನ್ನಡದ ಶಬ್ದಗಳು ಇರದಿದ್ದಲ್ಲಿ, ಲೇಖಕರು ಅವಶ್ಯಕತೆಗೆ ತಕ್ಕಂತೆ ಹೊಸ ಕನ್ನಡ ಶಬ್ದಗಳನ್ನು ಸೂಚಿಸಬಹುದು. ಯಾರಿಗೆ ಗೊತ್ತು? ನಿಮ್ಮ ಶಬ್ದಗಳು ವಿಶ್ವವೇ ಒಪ್ಪಿಕೊಳ್ಳುವ ಶಬ್ಧಗಳಾಗಬಹುದು! ಅದಾಗದಿದ್ದಲ್ಲಿ ಇಂಗ್ಲಿಷ್‌ ಭಾಷೆಯಲ್ಲಿನ ಪದಗಳನ್ನೇ ಉಪಯೋಗಿಸಿಕೊಳ್ಳಬಹುದು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿಯ ಯಾವುದೇ ವಿಷಯವನ್ನು ಆಯ್ದುಕೊಳ್ಳಬಹುದು. ಉದಾಹರಣೆಗೆ ಈ ಕೆಳಗಿನ ವಿಷಯಗಳನ್ನು ಪರಿಗಣಿಸಬಹುದು.

* ಜೀವತಂತ್ರಜ್ಞಾನದಿಂದ (Biotechnology) ಕೃಷಿ ವರ್ಧನೆ ಮತ್ತು ಔಷಧಗಳ ಉತ್ಪಾದನೆಗೆ ಸಂಬಂಧಿಸಿದ ಆಧುನಿಕ ಸಂಶೋಧನೆಗಳು.
* ಜೀವಕೋಶ ಚಿಕಿತ್ಸೆ (Gene Therapy)
* ಗುಣಕ ಜೀವಾಣು ಸಂಶೋಧನೆ ಮತ್ತು ಚಿಕಿತ್ಸೆ (Stem Cell Research and Therapy)
* ಔಷಧ ಸಂಶೋಧನೆ, ಬೆಳವಣಿಗೆ ಮತ್ತು ಮಾರಾಟದ ಪರವಾನಿಗೆಯ ಪದ್ಧತಿ (Drug Discovery, Development and Approval Process)
* ಅಂತರ್ಜಾಲ ಮದ್ದು ಮತ್ತು ದೂರಚಿಕಿತ್ಸೆ (Internet medicine and Telemedicine)
* ಹೃದಯರೋಗ, ಕ್ಯಾನ್ಸರ್‌, ಮಕ್ಕಳ ಕಾಯಿಲೆ, ಕಿವಿ-ಮೂಗು-ಗಂಟಲು, ಕಣ್ಣು, ಅಲರಿkುರ್, ಎಚ್‌-ಐ.ವಿ ಮುಂತಾದ ರೋಗಗಳ ಉಪಶಮನ.
* ಪರಮಾಣು ತಂತ್ರಜ್ಞಾನ (Nuclear Technology)
*ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಅನ್ವೇಷಣೆ
*ತ್ಯಾಜ್ಯ ವಸ್ತುಗಳ ನಿರ್ಮೂಲನೆ ಮತ್ತು ನಿರ್ವಹಣೆ
* ಸಂಖ್ಯಾಶಾಸ್ತ್ರ ಮತ್ತು ಅದರ ಅಳವಡಿಕೆ
* ರಕ್ಷಣಾತಂತ್ರಜ್ಞಾನ (Defense Technology)
* ಮಾಹಿತಿ ತಂತ್ರಜ್ಞಾನ, ಅಂತರ್ಜಾಲ ಸಂಪರ್ಕ, ಅಂತರ್ಜಾಲ ದೂರವಾಣಿ ಮತ್ತು ಆರಕ್ಷಣೆ(Information Technology, telecommunication, VOIP, Internet Security)
* ಜ್ಞಾನ ನಿರ್ವಹಣೆ (Knowledge Management)

ವಿಮಾನತಂತ್ರ, ವಾಹನತಂತ್ರ, ಗಣಕತಂತ್ರ, ಹೈಬ್ರಿಡ್‌ ತಂತ್ರಜ್ಞಾನದ ವಾಹನಗಳು ಮುಂತಾದ ವಿಷಯಗಳಬಗ್ಗೆ ಸಹ ಸಾಕಷ್ಟು ಬರೆಯಲು ಸಾಧ್ಯತೆಗಳಿವೆ. ಜನಸಾಮಾನ್ಯರು ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ವಿಶೇಷ ಆಸಕ್ತಿಯಿಂದ ಓದುವದರಿಂದ ವೈದ್ಯರಿಗೆ ಈ ವಿಷಯಗಳ ಪ್ರಬಂಧಗಳನ್ನು ಬರೆಯಲು ಆದರದ ಸ್ವಾಗತ.

ಪುರವಣಿಗೆ ಸಂಬಂಧಿಸಿದ ನಿಯಮ-ನಿಬಂಧನೆ-ಆಶಯಗಳು ಈ ಕೆಳಗಿನಂತಿವೆ.

* ಬರಹಗಳು ಕನ್ನಡದಲ್ಲೇ ಇರಲಿ. ತಾಂತ್ರಿಕ ಶಬ್ದಗಳನ್ನು ಕನ್ನಡ ಹಾಗು ಇಂಗ್ಲಿಷ್‌ನಲ್ಲಿ ಬರೆಯಿರಿ.

* ಬರಹ ಸ್ವಂತದ್ದೇ ಆಗಿರಬೇಕು. ಇತರರ ಸಾಹಿತ್ಯಿಕ ಬರಹಗಳನ್ನು ಕಳಿಸುವುದಾದರೆ, ಕರ್ತೃವಿನ ಹೆಸರನ್ನು ಬರೆಯಲು ಮರೆಯಬೇಡಿ. ಇತರರ ಪ್ರಕಟಿತ ಅಥವಾ ಅಪ್ರಕಟಿತ ಲೇಖನಗಳನ್ನು ಕಳುಹಿಸುವುದಾದರೆ, ಅಥವಾ ಅವರ ಕೃತಿಗಳನ್ನು ಕನ್ನಡಾನುವಾದ ಮಾಡುವದಾದರೆ ಅವರ ಅನುಮತಿ ಪಡೆಯುವುದು ನಿಮ್ಮ ಜವಾಬ್ದಾರಿ.

* ಕನ್ನಡ ಬರಹಗಳನ್ನು ಬರಹ 5.0 ಅಥವಾ 6.0 ಉಚಿತ ತಂತ್ರಾಂಶದಲ್ಲಿ ಟೈಪ್‌ ಮಾಡಿ, ಈಮೈಲ್‌ ಅಟ್ಯಾಚ್‌ಮೆಂಟ್‌ ರೂಪದಲ್ಲೇ ಕಳಿಸಿದರೆ ಕೆಲಸ ಸುಲಭವಾಗುತ್ತದೆ. ಹಸ್ತಪ್ರತಿಗಳನ್ನು ಸ್ವೀಕರಿಸಿ ಅದನ್ನು ಮತ್ತೆ ಟೈಪ್‌ ಮಾಡುವ ಸಂಪನ್ಮೂಲಗಳು ನಮ್ಮಲ್ಲಿಲ್ಲವಾದ್ದರಿಂದ ಸಾಫ್ಟ್‌ಕಾಪಿ ಸಲ್ಲಿಕೆಗಳಿಗೆ ಮಾತ್ರ ಅವಕಾಶ. ಬರಹ ಉಚಿತ ತಂತ್ರಾಂಶವನ್ನು www.baraha.comನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

* ಲೇಖನಗಳು 2500 ಪದಗಳನ್ನು ಮೀರಬಾರದು. (ಗರಿಷ್ಠ ಟೈಪಿಸಿದ 5 ಪುಟಗಳು- 8.5 ್ಡ 11.0). ವಿಷಯಕ್ಕೆ ಸಂಬಂಧಿಸಿದ ಛಾಯಾಚಿತ್ರಗಳ ಸಂಖ್ಯೆ ನಾಲ್ಕಕ್ಕೆ ಸೀಮಿತವಾಗಿದ್ದು ಅವು'ಜಿಫ್‌" ಅಥವಾ ಜೆಪಿಇಜಿ ನಲ್ಲಿ ಇರಲಿ.

* ಬರಹಗಳನ್ನು ಇ- ವಿಳಾಸಕ್ಕೆ ಕಳಿಸಿ : [email protected]

* ಬರಹದ ಜೊತೆಗೆ ನಿಮ್ಮ ಪೂರ್ಣ ಹೆಸರು, ಇ- ಮೇಲ್‌ ವಿಳಾಸ, ದೂರವಾಣಿ ಸಂಖ್ಯೆ, ನಗರ- ದೇಶ ಬರೆಯಿರಿ. ನಿಮ್ಮ ಒಂದು ವರ್ಣ ಭಾವಚಿತ್ರ ಸಹ ಬೇಕು. ('ಜಿಫ್‌" ಅಥವಾ 'ಜೆಪಿಇಜಿ" ಕಡತರೂಪದಲ್ಲಿ). ಒಂದೆರಡು ಪ್ಯಾರಾಗ್ರಾಫ್‌ಗಳಲ್ಲಿ ನಿಮ್ಮ ಪರಿಚಯ ಬರಹವೂ ಜತೆಗಿರಲಿ. ಸಂಚಿಕೆಯಲ್ಲಿ ಲೇಖಕರ ಬಗ್ಗೆ ಮಾಹಿತಿಯನ್ನು ಮುದ್ರಿಸಲೂ ಪ್ರಯತ್ನಿಸಲಾಗುವುದು.

* ಬರಹಗಳನ್ನು ಕಳುಹಿಸಲು ಕೊನೆಯ ದಿನಾಂಕ ಮಾರ್ಚ್‌ 15, 2006.

ನಮಸ್ಕಾರಗಳೊಂದಿಗೆ

ಡಾ। ಮೈಸೂರು ನಟರಾಜ ಮತ್ತು ಡಾ। ರವಿ ಹರಪನಹಳ್ಳಿ
ಸಂಪಾದಕರು (ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ)

2006 ವಿಶ್ವಕನ್ನಡ ಸಮ್ಮೇಳನ ಸ್ಮರಣಸಂಚಿಕೆ ಸಮಿತಿ
ಸಂಜೀವ ಮನಗೋಳಿ (ವ್ಯವಸ್ಥಾಪಕ ಸಂಪಾದಕ)
ಶ್ರೀವತ್ಸ ಜೋಶಿ
ಡಾ। ಮೈಸೂರು ನಟರಾಜ
ಡಾ। ಕೆ. ಎಲ್‌. ವಸಂತ
ಡಾ। ರವಿ ಹರಪನಹಳ್ಳಿ

ಶಶಿಕಲಾ ಚಂದ್ರಶೇಖರ
ಕುಂಭಾಸಿ ಶ್ರೀನಿವಾಸ ಭಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X