• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಸುವರ್ಣ ವಾಹಿನಿ’ಯಾಳಗೆ ಪದ್ಯಗಳ ಅರಮನೆ!

By Staff
|
 • ನಳಿನಿ ಮೈಯ, ಡೇರಿಯನ್‌, ಚಿಕಾಗೋ
 • (ಮುಂದುವರಿದುದು)

  ಶಶಿಕಲಾ ಚಂದ್ರಶೇಖರ್‌ ಅವರ ಹನಿಗವನಗಳಲ್ಲಿ ಪದಗಳು ಬಳುಕುತ್ತವೆ, ಕುಲುಕುತ್ತವೆ, ಲಾಸ್ಯವಾಡುತ್ತವೆ! ಭಾಷೆಯ ಲಾಲಿತ್ಯದಲ್ಲಿ ಶಶಿಕಲಾ ಅವರದು ಸಿದ್ಧ ಹಸ್ತ! ‘‘ಮಿಡುಕಿದ ನಕ್ಷತ್ರಗಳು’’ ಕವನದ ಈ ಸಾಲುಗಳು ನನ್ನ ಮಾತಿಗೆ ಸಾಕ್ಷೀಭೂತವಾಗಿವೆ. ‘ಅಮಾವಾಸ್ಯೆಯ ಕತ್ತಲಲ್ಲಿ ಚಂದ್ರಮನನ್ನು ಹುಡುಕಹೊರಟ ಹುಡುಗಿಯ ಜೊತೆಗಿದ್ದ ಗಂಟಲ ಬಿಕ್ಕು, ದುಂಡುಗಲ್ಲದ ಮೇಲೆ ಜಾರುತ್ತಿದ್ದ ಬೆಚ್ಚನೆಯ ಹನಿ ಕಂಡು ನಿಟ್ಟುಸಿರಿಟ್ಟ ನಕ್ಷತ್ರಗಳು ಮಿನುಗುವ ಬದಲು ಮಿಡುಕಿದವು.’

  ಜಯರಾಮ ಉಡುಪರ ‘‘ಹೃನ್ಮನೋರುತಿ’’ ಹೃದಯ-ಮನಸ್ಸುಗಳನ್ನು ಪ್ರಕೃತಿ-ಪುರುಷ ಎಂದು ಪರಿಭಾವಿಸಿ ಬರೆದ ಕವನ. ಚೆನ್ನಾಗಿ ಮೂಡಿ ಬಂದಿದೆ. ‘‘ಅಲ್ಪಾಯಸ್ಸು’’ ಕವನದಲ್ಲಿ ಕೆ.ಎಲ್‌.ವಸಂತ್‌ ಅವರು ‘ಒಳ್ಳೆಯದಕ್ಕೆಲ್ಲ ಅಲ್ಪಾಯಸ್ಸು, ಅದೇ ನಿನ್ನ (ದೇವರ) ಶಿಫಾರಸ್ಸು’ ಅಂತ ವಾದಿಸುತ್ತಾರೆ. ಪೂರ್ಣಿಮಾ ಸುಬ್ರಹ್ಮಣ್ಯಮ್‌ ಅವರ ‘‘ಕನ್ನಡಿಯ ಕಥೆ’’ ಮತ್ತು ಸಂಧ್ಯಾ ರವೀಂದ್ರನಾಥ್‌ ಅವರ ‘‘ಕುಂಭ’’ ಎರಡೂ ಗಹನವಾದ ಆಧ್ಯಾತ್ಮಿಕ ಸಂದೇಶವನ್ನೊಳಗೊಂಡ ಸುಂದರ ಭಾವಗೀತೆಗಳು.

  ಮಾಯಾ ಹರಪನಹಳ್ಳಿ, ಶೃತಿ ಸತೀಶ್‌, ಕುಂಭಾಸಿ ಶ್ರೀನಿವಾಸ ಭಟ್‌, ವೆಂಕಟ್‌ ಅವರೆಲ್ಲರೂ ಬರೆದ ಹನಿಗವನಗಳು ಚಿನಕುರುಳಿಯಂತೆ ‘‘ಚಟಪಟಗುಟ್ಟುತ ಸಿಡಿಯುವ’’ ಸೊಗಸು ಓದಿದವರಿಗೇ ಗೊತ್ತು!

  In the pages of Suvarnavahiniಪ್ರೆಮಗೀತೆಗಳನ್ನು ಬರೆಯುವುದರಲ್ಲಿ ಸುಕುಮಾರ್‌ ರಘುರಾಮ್‌ ಅವರದ್ದು ಎತ್ತಿದ ಕೈ! ಈ ಸಂಚಿಕೆಯಲ್ಲಿರುವ ‘‘ಕನಸಿನ ಪುಟಗಳು’’ ಇದಕ್ಕೆ ನಿದರ್ಶನ. ಉದ್ದಕ್ಕೂ ಅವರು ‘ಕಳೆದು ಹೋದ ಕನಸು...ಮರೆತು ಹೋದ ಕನಸು... ಹುದುಗಿ ಹೋದ ಕನಸು’ ಅಂತ ಹೇಳಿಕೊಂಡು ಬಂದರೂ ಮುಂದಿನ ಸಾಲುಗಳಲ್ಲೇ ಆ ಕನಸು ಎಷ್ಟು ಸುಂದರವಾಗಿತ್ತು ಎಂಬ ವರ್ಣನೆ ಇದೆ.

  ತ್ರಿವೇಣಿ ಶ್ರೀನಿವಾಸ ರಾವ್‌ ಅವರು ಬರೆದ ‘‘ನಿರಂತರ ಅನ್ಯನಾಗೇ ಉಳಿದವನಿಗೆ’’ ಕವನದಲ್ಲಿ ‘ವಾಸ್ತವಕ್ಕೆ ಬೆನ್ನು ತಿರುಗಿಸಿದ ಮತ, ಮಠಗಳಭಿಮಾನಿ’ಗೆ ಬರೆದ ಸಂದೇಶವಿದೆ. ‘ಪ್ರೇಮಮಯಿ ಬಸಿರ ಹೊರತಾಗಿ ಯಾವ ವಿರಾಟ ಪುರುಷನ ಅಂಗಾಂಗಗಳೂ ನಿನ್ನಿರವಿಗೆ ಕಾರಣವಾಗಲಿಲ್ಲ ಎಂಬ ಪ್ರಾಥಮಿಕ ತಿಳಿವು ನಿನ್ನರಿವಿಗೆ ಬಂದರೆ ಸಾಕು’ ಎಂದು ತಿಳಿ ಹೇಳುತ್ತಾರೆ!

  ವಿಕ್ರಮ್‌ ಹತ್ವಾರ್‌ ಅವರು ಬರೆದ ‘ಅಚಿಂತ್ಯ’ ಮತ್ತು ‘ಅಸಮಾನ’ ಎರಡು ಕವನಗಳೂ ಬುದ್ಧಿಯ ಅಳವಿಗೆ ಮೀರಿದ ಭಾವಕ್ಕೆ ಮಾತ್ರ ದಕ್ಕುವ ದಿವ್ಯ ಶಕ್ತಿಯೊಂದನ್ನು ಕುರಿತು ಬರೆದ ಕವನಗಳಾಗಿದ್ದು ಚೆನ್ನಾಗಿವೆ! ಕಟ್ರೀನಾ ಮತ್ತು ರೀಟಾ ಎಂಬ ಹೆಸರಿನ ಚಂಡ ಮಾರುತಗಳ ಬಗ್ಗೆ ಬರೆದ ಕವನ ಸುಪ್ತದೀಪ್ತಿಯವರ ‘‘ಅಕ್ಕ-ತಂಗಿಯರ ಸುಳಿಯಲ್ಲಿ’’. ‘ಸೂರು ತಲೆ ಹಾರಿರಲು ಮಂಚದಡಿ ಕನಸುಗಳೆ?’ ಎಂದು ಶುರುವಾಗುತ್ತದೆ. ಹೃದಯಂಗಮವಾಗಿದೆ.

  ವಲಸೆಗಾರರನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆದ ಕವನ ‘‘ಕರ್ಮಯೋಗಿ ಎಂಬ ಇರುವೆ’’ (ಎಚ್‌.ಆರ್‌.ಸತೀಶ್‌ ರಾವ್‌ ಅವರದ್ದು). ‘‘ಮುಂದೆ ತನ್ನ ಪರಿವಾರ ದೊಡ್ಡದಾಗಿ ಬೆಳೆದೂ ಎಲ್ಲೋ ಏನೋ ಕಳೆದುಕೊಂಡ ಭಾವ ಬಿಟ್ಟು ಹೋಗದು’’ ಎಂಬ ಒಂದೇ ಮಾತಿನಲ್ಲಿ ವಲಸೆ ಬಂದವರ ಮನಃ ಸ್ಥಿತಿಯನ್ನು ಸಮರ್ಥವಾಗಿ ಸೆರೆ ಹಿಡಿದಿದ್ದಾರೆ!

  ಮೈ.ಶ್ರೀ. ನಟರಾಜ್‌ ತಿಳಿ ಹಾಸ್ಯದ ಕವನಗಳಿಗೆ ಹೆಸರಾದವರು. ‘‘ನಿಸಾರ್‌ ಅಹ್ಮದ್ದೋ, ಸಸಾರ್‌ ಅಹ್ಮದ್ದೋ’’ ಕವನದಲ್ಲಿ ‘ಕನ್ನಡ ಶಾಲೆಗ್‌ ಕಳ್ಸಿ, ಕನ್ನಡ ಚನ್ನಾಗ್‌ ಕಲ್ಸಿ ಕನ್ನಡಕ್‌ ಮಾಡಿದ್ರಲ್ಲ ಉಪಕಾರ ಅಬ್ಬಾಜಾನ್‌! ಎಲ್ಲರ್‌ ಹಂಗೇ ನಿಮ್ಮನ್ನೂ ಉರ್ದು ಶಾಲೆಗ್‌ ಕಳ್ಸಿದ್ರೆ ಎಂಥಾ ನುಕ್ಸಾನ್‌ ಆಗ್ತಿತ್ತಲ್ಲ’, ‘ಗೋಕುಲಾಷ್ಟಮಿಗೂ, ಇಮಾಂಸಾಬ್ರಿಗೂ ಏನ್‌ ಸಂಬಂಧ ಅನ್ನೋ ಗಾದೇನೇ ಸುಳ್‌ ಮಾಡ್ದೋರ್‌ ಸಾರ್‌, ತಾವು’, ‘ಬೆಣ್ಣೆ ಕದ್ದ ನಮ್ಮ ಕೃಷ್ಣ ಅಂತ ಅಯ್ಯಂಗಾರ್ರ ತಲೇ ಮೇಲ್‌ ಹೊಡೆದ್‌ ಹಂಗ್‌ ಬರ್ದ್‌ ಬಿಟ್ರಲ್ಲ ದೇವ್ರೂ’. ಈ ಸಾಲುಗಳನ್ನು ಓದುತ್ತಿರಬೇಕಾದರೆ ಎಷ್ಟು ಬೇಡ ಅಂದರೂ ಮುಖದ ಮೇಲೆ ಮುಗುಳ್ನಗೆಯೊಂದು ಹಾದು ಹೋಗುತ್ತದೆ!

  ಕೊನೆಯ ಕವನ ‘‘ನನ್‌ ಜೀವಕ್ಕ ನೀನೇ ರತ್ನಕ್ಕ’’ ಆಡು ಮಾತಿನಲ್ಲೇ ರತ್ನಕ್ಕ ಎಂಬಾಕೆಯ ಸಾವಿನ ಬಗ್ಗೆ ಶೋಕಿಸುವ ಈ ಕವನ ಹೃದಯವನ್ನು ತಟ್ಟುತ್ತದೆ. ‘ವೋದದ್ದು ನೀನಲ್ಲ ಪಿರುತಿ, ಕರ್ಣೆ, ಅಂತಕ್ಕರ್ಣ ಕಣೆ....ನೀ ಯಾಕ್‌ ಇಂಗ್ಮಾಡ್ದಿ ನನ್‌ ಜೀವಕ್ಕ ರತ್ನಕ್ಕ, ಯಾರ್ಗೇಳ್ಕೊಳ್ಳಿ ನೀ ವೊಂಟೋದಕ್ಕಾದ ನಂದುಕ್ಕ’ ಎನ್ನುವಾಗ ಆ ದುಃಖ ನಮ್ಮನ್ನು ಮುಟ್ಟುತ್ತದೆ, ಎದೆಯನ್ನು ತಟ್ಟುತ್ತದೆ.

  ಮಕ್ಕಳು ಬರೆದ ಇಂಗ್ಲಿಷ್‌ ಕವನಗಳು ಅವರವರ ವಯಸ್ಸಿಗೆ ತಕ್ಕಂತೆ ಇವೆ. ಪುಟ್ಟ ಕೃತ್ತಿಕ ಮನಗೋಳಿ ಬರೆದ ‘‘ವಾಟ್‌ ಇಫ್‌’’ ಕವನ ಒಂಭತ್ತು ವರ್ಷದ ಪುಟ್ಟ ಬಾಲೆಯ ಯೋಚನಾ ಲಹರಿಯನ್ನು ಪ್ರತಿಬಿಂಬಿಸುತ್ತದೆ. ಭರತ್‌ ಕೃಷ್ಣಮೂರ್ತಿ, ಅತೀತ್‌ ಮತ್ತು ಅನನ್ಯ ಹಿರೇಮಠ್‌, ಸುನಾಮಿಯ ಬಗ್ಗೆ ಬರೆದ ಹರಿಣಿ ನರಸಿಂಹನ್‌ ಎಲ್ಲರಲ್ಲೂ ಬರೆಯುವ ಉತ್ಸುಕತೆ ಎದ್ದು ಕಾಣುತ್ತದೆ. ‘ಪುಣ್ಯ ಕೋಟಿ’ ಕಥೆಯನ್ನು ‘‘ಎ ಕೌ’ಸ್‌ ಬ್ಯಾಲಡ್‌’’ ಎಂದು ಇಂಗ್ಲಿಷಿಗೆ ಅನುವಾದ ಮಾಡಿದ ಚೇತನಾ ನೀರ್ಚಲ್‌ ಅವರ ಸಾಹಸವನ್ನು ಮೆಚ್ಚಬೇಕು! ಮೂಲ ಭಾವಕ್ಕೆ ಚೂರೂ ಕುಂದು ಬಾರದಂತೆ ಈ ಅನುವಾದ ಮಾಡಲಾಗಿದೆ.

  ಒಟ್ಟಿನಲ್ಲಿ ಹಲವು ಬಗೆಯ ಭಕ್ಷ್ಯ ಭೊಜ್ಯಗಳನ್ನೊಳಗೊಂಡ ಹಬ್ಬದೂಟ ಈ ಸುವರ್ಣವಾಹಿನಿ. ಇಲ್ಲಿ ಕೋಸಂಬರಿ ಇದೆ, ಪಾಯಸವೂ ಇದೆ, ನಾಲಿಗೆಗೆ ಖಾರವಾದ ಉಪ್ಪಿನ ಕಾಯಿ ಇದೆ, ತಂಪಾದ ರಸಾಯನವೂ ಇದೆ. ಬುದ್ಧಿಯ, ಭಾವದ ಮೂಲೆ ಮೂಲೆಯನ್ನೂ ಹದವಾಗಿ ತಟ್ಟುವ ಕವನ, ಲೇಖನಗಳಿವೆ. ಲೇಖಕರಿಗೆ ಹಾಗೂ ಸಂಪಾದಕರಿಗೆ ಅಭಿನಂದನೆಗಳು.

  ‘ಸುವರ್ಣವಾಹಿನಿ’ : ನೋಟ ಎರಡು

  ‘ಸುವರ್ಣವಾಹಿನಿ’ : ನೋಟ ಒಂದು

  ನುಡಿ ಹಬ್ಬದ ಚಿತ್ರಪಟಗಳು :

  ಮತ್ತೆ ಸಿಗೋಣ - 3ನೇ ದಿನ

  ಮೆರವಣಿಗೆಯ ನೋಟ- 2ನೇ ದಿನ

  ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ

  ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :

  ವಿಶ್ವಕನ್ನಡ ನುಡಿಹಬ್ಬದ ಸಮಗ್ರ ಚಿತ್ರಣ

  ಪೂರ್ವ ಸಿದ್ಧತೆ Be a patronate! Use .in e-mail Post Your Views

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more