• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಲ್ಲೇನೋ ಇರಬೇಕು.. ಇರಲೇಬೇಕು!

By Staff
|

‘ಒಬ್ಬನೇ ಇದ್ದರೆ ಧ್ಯಾನ, ಇಬ್ಬರಾದರೆ ಮಾತು, ಮೂವರು ಸೇರಿದರೆ ಅಲ್ಲೊಂದು ಸಮ್ಮೇಳನ’ ಎನ್ನುವಂಥ ಸ್ಥಿತಿ ಇದ್ದ ಉತ್ತರ ಅಮೆರಿಕದಲ್ಲಿ ಇವತ್ತು ಕನ್ನಡ ಸಮ್ಮೇಳನವೆಂಬ ಕಲ್ಪನೆಗೆ ಹೊಸ ಅರ್ಥ ವ್ಯಾಪ್ತಿ ಪಸರಿಸಿದೆ.

ಸಂಖ್ಯಾಬಲ, ಬುದ್ಧಿಬಲ, ಹಣಬಲದ ಜತೆಯಲ್ಲೇ ಕನ್ನಡದ ಬಗೆಗಿನ ವಾತ್ಸಲ್ಯ ಮತ್ತು ಕರ್ನಾಟಕದ ಅಸಮತೋಲನಗಳನ್ನು ತಿದ್ದುವ ಆಶೋತ್ತರಗಳು ಇಮ್ಮಡಿಯಾಗಬೇಕೆನ್ನುವುದು ಇಂಥ ಸಮ್ಮೇಳನದ ಮೂಲ ಉದ್ದೇಶ. ಉದ್ದೇಶಗಳು ಅಂದವಾಗಿಯೇ ಕಾಣಿಸುತ್ತವೆ. ಆದರೆ ಸಮ್ಮೇಳನವನ್ನು ಚೆನ್ನಾಗಿ ಮಾಡಬೇಕೆಂಬ ಕಾರ್ಯಕರ್ತರ ಬೆವರಿನಲ್ಲಿ ಹಾಗೂ ಮನರಂಜನೆಯ ಸರಕುಗಳನ್ನು ಮನದುಂಬಿಕೊಳ್ಳುವ ಅಮಾಯಕ ಕನ್ನಡ ಭಕ್ತರ ಸಂಭ್ರಮಗಳಲ್ಲಿ ಉದ್ದೇಶಗಳು ಕಳೆದು ಹೋಗುತ್ತವೆ ಎಂಬ ಅನುಮಾನಗಳ ನೆರಳಲ್ಲೇ ಮತ್ತೊಂದು ವಿಶ್ವಕನ್ನಡ ಸಮ್ಮೇಳನ ಕುಣಿಯಲು ಗೆಜ್ಜೆ ಕಟ್ಟುತ್ತಿದೆ.

ವಾಷಿಂಗ್ಟನ್‌ಗೆ ಹೊಂದಿಕೊಂಡಿರುವ ಬಾಲ್ಟಿಮೋರ್‌ ನಗರದಲ್ಲಿ ಲೇಬರ್‌ ಡೇ ರಜಾ ಕಾಲದಲ್ಲಿ ವ್ಯವಸ್ಥೆಯಾಗಿರುವ ಕನ್ನಡ ನುಡಿ ಹಬ್ಬ ಲೆಕ್ಕಕ್ಕೆ ನಾಲ್ಕನೇ ವಿಶ್ವಕನ್ನಡ ಸಮ್ಮೇಳನ. ಹ್ಯೂಸ್ಟನ್‌(2000), ಡೆಟ್ರಾಯಿಟ್‌(2002), ಫ್ಲಾರಿಡಾ (2004) ಸಮ್ಮೇಳನಕ್ಕೆ ಮುಂಚೆ 1998ರಲ್ಲಿ ಅರಿಜೋನಾದ ಫೀನಿಕ್ಸ್‌ ನಗರದಲ್ಲಿ ಸಮ್ಮೇಳನದ ಬೀಜಗಳು ಮೊಳಕೆಯಾಗಿತ್ತು. ಅಕ್ಕ ಒಂದು ಸಂಸ್ಥೆಯಾಗಿ ರೂಪುಗೊಂಡದ್ದು ಅಲ್ಲಿ. ಜಯರಾಮ ನಾಡಿಗ್‌, ವತ್ಸ ಕುಮಾರ್‌ ಮುಂದಾಳತ್ವದಲ್ಲಿ ಹ್ಯೂಸ್ಟನ್‌ ಸಮ್ಮೇಳನ ತುಂಬ ಶಿಸ್ತಿನಿಂದ ಜರುಗಿತೆಂದು ಕೇಳಿಪಟ್ಟಿದ್ದೇನೆ. ಬರಲಿರುವ ಸಮ್ಮೇಳನಗಳಿಗೆ ಹ್ಯೂಸ್ಟನ್‌ ಅನುಭವದ ರೋಲ್‌ಮಾಡೆಲ್‌ ಆಗಬೇಕೆನ್ನುವಷ್ಟರ ಮಟ್ಟಿಗೆ ಅಲ್ಲಿ ಕಂಡವರು ಮೆಚ್ಚಿ ಮಾತನಾಡಿದ್ದರು.

ಕಾರುಗಳ ನಾಡು ಡೆಟ್ರಾಯಿಟ್‌ಗೆ ಕನ್ನಡಿಗರ ತೇರು ಭರ್‌ ಅಂತ ಬರುವ ಹೊತ್ತಿಗೆ ಅಕ್ಕ ಸಂಸ್ಥೆ ಸಾಂಸ್ಥಿಕವಾಗಿ ಗಟ್ಟಿಮುಟ್ಟಾಗಿತ್ತು. ವಿಜೃಂಭನೆಯ ಅಬ್ಬರದಲ್ಲಿ 4000 ಕನ್ನಡಿಗರ ಜನಸಂದಣಿಯಲ್ಲಿ ಮಹತ್ವಾಕಾಂಕ್ಷೆಯ ಆ ಜಾತ್ರೆ ಅಮರ್‌ನಾಥ ಗೌಡ ಅವರ ಸಹನಶೀಲತೆಯಲ್ಲಿ ಗಡಿದಾಟಿತು.

ಹನುಮಂತನ ಬಾಲದಂತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯಲ್ಲಿ, ನಿಸಾರ್‌ ಅಹಮದ್‌ ಅವರ ಮನೋಜ್ಞ ಉಪನ್ಯಾಸ ಗಾಳಿಯಲ್ಲಿ ತೇಲುವ ಗಂಧವಾಯಿತು. ಅಪ್ಪಗೆರೆ ತಿಮ್ಮರಾಜು ‘ಚೆಲ್ಲಿದರು ಮಲ್ಲಿಗೆಯಾ ಹಾಡುತ್ತಿದ್ದರೆ’, ವಿಜಯ ಪಂಡಿತ್‌ ಅವರ ಪಾಕಶಾಲೆಯಲ್ಲಿ ಚೆಂದದ ಮಲ್ಲಿಗೆ ಇಡ್ಲಿಗಳಿಗೆ ಸರತಿಸಾಲಿನಲ್ಲಿ ನಿಂತಿದ್ದ ಹಸಿದ ಕನ್ನಡಿಗರ ಕಾಲುಗಳು ನೋಯುತ್ತಿದ್ದವು. ಡೆಟ್ರಾಯಿಟ್‌ನಲ್ಲಿ ತಾನೇತಾನಾಗಿದ್ದ ಲೋಕಾಂತ, ಸೂರ್ಯರಶ್ಮಿಗಳ ನಾಡು ಫ್ಲಾರಿಡಾಗೆ ಬರುವ ಹೊತ್ತಿಗೆ ಏಕಾಂತವಾಗತೊಡಗಿತು. ಸಮ್ಮೇಳನದ ಜ್ಯೋತಿ ಕಲಶವನ್ನು ಡೆಟ್ರಾಯಿಟ್‌ನಿಂದ ತಂದವರು ಡಾ. ರೇಣುಕಾ ರಾಮಪ್ಪ.

ಚಂಡಮಾರುತದ ಅಬ್ಬರಕ್ಕೆ ಸಿಲುಕದಂತೆ ಕನ್ನಡದ ದೀಪವನ್ನು ಅಂಗೈಯಲ್ಲಿ ಕಾಪಾಡಿದರು ಅವರು. ಸಕಲ ವ್ಯವಸ್ಥೆಗಳು ಮೇಳೈಸಿದ್ದ ಗೇಲಾರ್ಡ್‌ ಪಾಮ್‌ ರೆಸಾರ್ಟ್‌ನಲ್ಲಿ 1500ಕ್ಕೂ ಕನ್ನಡಿಗರು ಆನಂದವಾಗಿ ಕಾಲಕಳೆದರು. ಬರಗೂರು ರಾಮಚಂದ್ರಪ್ಪ ಅವರ Electrifying ಭಾಷಣ, ಸಿದ್ದರಾಮಯ್ಯನವರ ನಾಲಕ್ಕು ಹುಸಿನಗೆ, ಎಸ್ಪಿ ಬಾಲಸುಬ್ರಮಣ್ಯಂ ಅವರ ರಸಮಂಜರಿಯ ರಸಗವಳಕ್ಕೆ ನಲಿದ ಜನಸ್ತೋಮ ಪ್ರಾಕೃತಿಕ ವಿಕೋಪವನ್ನು ಗೆದ್ದು ಜಯಶೀಲರಾದಂತೆ ಭಾವಿಸಿದರು. ಚಂಡಮಾರುತದ ರುದ್ರನರ್ತನಕ್ಕೆ ಕನ್ನಡ ಮಲಯ ಮಾರುತ ತಲೆಬಾಗದಿದ್ದುದು ಆರ್‌ಲ್ಯಾಂಡೊ ಸಮ್ಮೇಳನದ ಹೆಗ್ಗಳಿಕೆಯಾಯಿತು.

ಇದೀಗ ನೀವು ಸಾಕ್ಷಿಯಾಗಲಿರುವ ಬಾಲ್ಟಿಮೋರ್‌ ಸಮ್ಮೇಳನ ಏರ್ಪಡಿಸಿರುವವರು ಅಮೆರಿಕದ ಸೀನಿಯರ್‌ ಕನ್ನಡ ಕೂಟ ಕಾವೇರಿ. ಕಾವೇರಿಯಲ್ಲಿ ಬಹುತೇಕರು ಕುಶಲಕರ್ಮಿಗಳಾಗಿದ್ದರಿಂದ ಕಾರ್ಯಕ್ರಮದ ಪ್ರತಿಯಾಂದು ವಿವರವೂ ಕಂಪ್ಯೂಟರ್‌ನಲ್ಲಿ ಹೊರಹೊಮ್ಮುತ್ತಿರುವುದರಿಂದ ಇದೊಂದು ಟೈಲರ್‌ ಮೇಡ್‌ ಸಮ್ಮೇಳನ ಎಂದು ಬಿರುದಾಂಕಿತವಾದರೆ ನನಗೇನೂ ಆಶ್ಚರ್ಯವಿಲ್ಲ.

ಯಾಕೆಂದರೆ, ಬದುಕುವ ಕಲೆಯನ್ನು ಪಾಠ ಮಾಡುವ ರವಿಶಂಕರ್‌, ಮಂಜುನಾಥನ ಕೃಪೆಯ ವೀರೇಂದ್ರ ಹೆಗ್ಗಡೆಯರು, ಎದೆತುಂಬಿ ಹಾಡುವ ಎಸ್ಪಿ, ಶಾಸ್ತ್ರೀಯ ಸಂಗೀತ ಹಾಡುಗಾರರು, ಅಧ್ಯಾತ್ಮ ಶಿಬಿರಗಳು, ಹಾಸ್ಯಮೇಳದ ವಿದೂಷಕರು, ಉಪೇಂದ್ರ, ರಮ್ಯ, ಗುರುಕಿರಣ್‌, ತಾರಾ ಮೇಳಗಳು, ಪುಸ್ತಕ ಬಿಡುಗಡೆಗಳು, ಮಾರಾಟ ಮಳಿಗೆಗಳು, ಸಂಕಿರಣಗಳು, ಭೈರಪ್ಪನವರೊಂದಿಗೆ ಸಂವಾದಗಳು, ಚಂದ್ರಶೇಖರ ಪಾಟೀಲರ ಸ್ವಗತಗಳು, ಮಕ್ಕಳ ಹಾಡು ಪಾಡುಗಳ ನಡುವೆ ಸಿ.ಡಿ, ಡಿ.ವಿ.ಡಿ ಬಿಡುಗಡೆಗಳು, ಡೊಳ್ಳು ಕುಣಿತಗಳ ಮಧ್ಯೆ, ರಾಜಕಾರಣಿಗಳ ಕೊರೆತ ಮತ್ತು ಕಣವಿಯವರ ಕವಿವಾಣಿ ಸಮ್ಮೇಳನದಲ್ಲಿ ಸಮನ್ವಯವಾಗಬೇಕು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ. ಆರಂಭದಲ್ಲಿ ದೋಸ್ತಿ ಸರ್ಕಾರದ ಈ ಭಲೇ ಜೋಡಿ, ಅಮೆರಿಕಾಕ್ಕೆಬರಲು ಉತ್ಸುಕವಾಗಿತ್ತು. ಆದರೆ ರಾಜ್ಯದಲ್ಲೀಗ ಜನಾರ್ದನ ರೆಡ್ಡಿಯ ಗಣಿ ಬಾಂಬ್‌ಗಳು ಧೂಳೆಬ್ಬಿಸಿವೆ. ಆ ಧೂಳು ತಮ್ಮ ಕಣ್ಣಿಗೆ ಬೀಳದಂತೆ ಕುಮಾರಸ್ವಾಮಿ ಶತಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಸಮ್ಮೇಳನದ ಜ್ಯೋತಿ ಬೆಳಗಿಸುವುದು ಅನುಮಾನ.

ಯಾರು ಬರಲಿ ಬಿಡಲಿ.. ಕನ್ನಡಮ್ಮ ತೇರು ಮುನ್ನುಗ್ಗಲಿದೆ. ಕಾರಣ; ತೇರನೆಳೆಯುವ ಕೈಗಳಿವೆ... ಕೈಗಳಲಿ ಕಸುವಿದೆ.. ಇನ್ನೇನು ಬೇಕು?

ಪೂರ್ವ ಸಿದ್ಧತೆ Be a patronate! Use .in e-mail

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more