ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ನಿಜಕ್ಕೂ ಸುವರ್ಣ ಕರ್‌‘ನಾಟಕೋತ್ಸವ’!

By Staff
|
Google Oneindia Kannada News
ಈ ಸಲದ ವಿಶ್ವ ಕನ್ನಡ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿವಿಧ ಕಲಾಪ್ರಕಾರಗಳ ರುಚಿಕರ ಮಿಶ್ರಣವಿರುವ ಸಮಾಚಾರ ನಿಮಗೀಗಾಗಲೇ ಗೊತ್ತಿದೆ. ಅದರ ಪೈಕಿ ನಾಟಕ ಪ್ರದರ್ಶನಗಳದ್ದೇ ಒಂದು ಪ್ರತ್ಯೇಕ ಪಟ್ಟಿ ಮಾಡಿದರೆ ಒಟ್ಟು ಎಷ್ಟು ಎಂಟ್ರಿ ಇವೆ ಗೊತ್ತಾ? ಗೆಸ್‌ ಮಾಡಿ. ಐದಾರು? ಎಂಟು-ಹತ್ತು? ಅಲ್ಲ! ಸ್ಕಿಟ್ಟು, ಪ್ರಹಸನ, ಕಾಮಿಡಿ, ಟ್ರಾಜಿಡಿ ಅದೂ ಇದೂ ಎಲ್ಲ ವಿಧದ್ದೂ ಸೇರಿ ಒಟ್ಟು ಹದಿನಾಲ್ಕು ನಾಟಕಗಳು! ಅದಕ್ಕೇ ಹೇಳಿದ್ದು ಇದು ಸುವರ್ಣ ಕರ್‌‘ನಾಟಕೋತ್ಸವ’ ಎಂದು.

ನಾಟಕ ರಂಗದ ಪರದೆ ಸರಿಯುವ ಮುನ್ನ ಒಂದು ಕರ್ಟೇನ್‌ ರೈಸರ್‌, ಜಸ್ಟ್‌ ನಾಟಕಗಳ ಬಗ್ಗೆ, ಇಲ್ಲಿದೆ ನಿಮಗಾಗಿ! ನಾಟಕಗಳ ಹೆಸರಿನ ಅಕಾರಾದಿ ಕ್ರಮದಲ್ಲಿ ಈ ಪಟ್ಟಿ.

* *

  1. ಅಂಗೈ ಅಗಲ ಆಕಾಶ :

    ಸುಷ್ಮಾ ಆಶುತೋಷ್‌ ನಿರ್ಮಾಣದಲ್ಲಿ ವರ್ಜೀನಿಯಾದ ’ಸಂವೇದನ’ ತಂಡದ ಪ್ರಸ್ತುತಿ.

    ಮೂವರು ಪ್ರತಿಭಾನ್ವಿತ ಲಲನಾಮಣಿಗಳು 21ನೇ ಶತಮಾನದ ಎವರೇಜ್‌ ಹೆಣ್ಮಕ್ಕಳಂತೆ, ವೃತ್ತಿ ಮತ್ತು ಮನೆವಾಳ್ತೆಗಳ ಸಮತೋಲವನ್ನು ಕಾಪಾಡುತ್ತ ಬದುಕು ಸವೆಸುತ್ತಿರುವವರು. ಅವರ ಕಣ್ಣಲ್ಲಿ ಕನಸುಗಳಿವೆ, ಏನನ್ನಾದರೂ ಸಾ-ಧಿ-ಸಬೇಕೆಂಬ ಛಲವಿದೆ. ಇರಲಿ, ಟೈಮ್‌ ಬಂದಾಗ ಅದನ್ನೆಲ್ಲ ಮಾಡೋಣ ಅಂತ ಮುಂದೂಡುತ್ತಿದ್ದವರಿಗೆ ಒಂದು ದಿನ ಇದ್ದಕ್ಕಿದ್ದಂತೆ ಜ್ಞಾನೋದಯವಾಗುತ್ತದೆ - ಹಾಗೆ ಟೈಮ್‌ ಬರುತ್ತದೆಂದು ಕುಳಿತಿದ್ದರೆ ಏನೂ ಆಗದು. ಆಗದು ಎಂದು ಕೈಕಟ್ಟಿ ಕುಳಿತರೆ ಕೆಲಸವೂ ಸಾಗದು. ಅವಕಾಶ ಸಿಕ್ಕಿದಾಗ ಉಪಯೋಗಿಸಿಕೊಳ್ಳುವುದೇ ಜಾಣತನ. ಕೊನೆಗೂ ಅವರ ಕನಸು ನನಸಾಗುತ್ತದೆಯೇ? ನಾಟಕ ನೋಡಿ ತಿಳಿದುಕೊಳ್ಳಿ!

  2. ಏಕೀಕರಣ :

    ಹಾಸ್ಯಬ್ರಹ್ಮ ’ಬೀಚಿ’ ಬರೆದ ಚೇತೋಹಾರಿ ನಗೆನಾಟಕ. ರವಿ ಹರಪ್ಪನಹಳ್ಳಿ ನಿರ್ದೇಶನದಲ್ಲಿ ಕಾವೇರಿ ಕನ್ನಡ ಸಂಘದ ಕಲಾವಿದರ ಪ್ರಸ್ತುತಿ.

    ಐವತ್ತು ವರ್ಷಗಳ ಹಿಂದೆ ಕರ್ನಾಟಕ ರಾಜ್ಯ (ಆಗ ’ಮೈಸೂರು’ ರಾಜ್ಯ)ದ ಏಕೀಕರಣವಾದಾಗ ವಿವಿಧ ಪ್ರಾಂತ್ಯಗಳ ಜನ ಬೇರೆಬೇರೆ ಭಾಷೆಗಳನ್ನಾಡುವವರು ಒಟ್ಟುಗೂಡಿದಾಗ ಎಂತಹ ಹಾಸ್ಯಸನ್ನಿವೇಶಗಳು, ತಮಾಷೆ-ಎಡವಟ್ಟುಗಳು ಆಗಿದ್ದಿರಬಹುದು ಎಂಬ ಹಿನ್ನೆಲೆಯಲ್ಲಿ ಚುರುಕಿನ ಸಂಭಾಷಣೆಯ ನಗೆಕಾರಂಜಿ.

  3. ಕುಜದೋಷವೊ ಶುಕ್ರದೆಸೆಯಾ :

    ಒಂದಕ್ಕಿಂತ ಒಂದು ಮೇಲೆನಿಸುವಂಥ ನಗೆನಾಟಕಗಳನ್ನು ಅಮೆರಿಕನ್ನಡಿಗರಿಗೆ ಮೆಲುಕಲು ಕೊಡುತ್ತ ಬಂದಿರುವ ಅಲಮೇಲು ಐಯಂಗಾರ್‌ (ಉತ್ತರ ಕ್ಯಾಲಿಫ‚ೋರ್ನಿಯಾ) ರಚಿಸಿ ನಿರ್ದೇಶಿಸಿರುವ ನಗೆನಾಟಕ.

    ಗಂಡಸರು ಮಂಗಳಗ್ರಹದಿಂದ ಮತ್ತು ಹೆಂಗಸರು ಶುಕ್ರಗ್ರಹದಿಂದ ಬಂದು ಈ ಭೂಲೋಕದಲ್ಲಿ ಒಡನಾಡಿಗಳಾಗಿರುವುದಂತೆ! ನಿಜಕ್ಕೂ ಹೌದೇ? ಗಂಡು-ಹೆಣ್ಣಿನ ಸಂಬಂಧ ಅನಾದಿಕಾಲದಿಂದಲೂ ಯಾಕೆ ಇಷ್ಟೊಂದು ಕಾಂಪ್ಲಿಕೇಟೆಡ್ಡು? ಎಂದಾದರೂ ಅದು ಇಂಪ್ರೂವಿಸುವ ಲಕ್ಷಣಗಳಿವೆಯಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಈ ನಾಟಕದಲ್ಲಿ ನಿಮಗೆ ಉತ್ತರ ಸಿಗಲೂಬಹುದು!

  4. ಕೃಷ್ಣಸಂಧಾನ :

    ದಕ್ಷಿಣ ಕ್ಯಾಲಿಫ‚ೋರ್ನಿಯಾದ ’ರಂಗಧ್ವನಿ’ ತಂಡದ ಪ್ರಸ್ತುತಿ. ನಿರ್ಮಾಣ ಮತ್ತು ನಿರ್ದೇಶನ - ಅಮೆರಿಕದಾದ್ಯಂತ ’ಯಮ’ ಸರಣಿಯಿಂದ ಕನ್ನಡಿಗರನ್ನು ನಕ್ಕುನಗಿಸಿದ ವಲ್ಲೀಶ ಶಾಸ್ತ್ರಿ.

    ನಾಟಕದಲ್ಲೊಂದು ನಾಟಕ! ಅಶಿಕ್ಷಿತ ಅಥವಾ ಅರೆಶಿಕ್ಷಿತ ಹಳ್ಳಿಗರನ್ನು ಒಟ್ಟುಹಾಕಿ ನಾಟಕ ಮಾಡಿಸುವ ಡ್ರಾಮಾಡೈರೆಕ್ಟರನ ಪೊರಪಾಟು ಹೇಗಿರುತ್ತದೆ, ಊಹಿಸಿ! ಆ ಹಳ್ಳಿಗರ ಉಚ್ಚಾರ - ‘ಅ’ ಎನ್ನುವಲ್ಲಿ ‘ಹ’, ‘ಹ’ ಎನ್ನುವಲ್ಲಿ ‘ಅ’, ಮತ್ತೆ ಪರಸ್ಪರ ಕ್ಷುಲ್ಲಕ ವೈಷಮ್ಯಗಳು ಡ್ರಾಮಾಪ್ರಾಕ್ಟೀಸ್‌ನಲ್ಲೂ ಪ್ರತ್ಯಕ್ಷವಾಗುವುದು, ಜತೆಯಲ್ಲೇ ತನ್ನ ಪಾತ್ರ ಇಂಪ್ರೆಸಿವ್‌ ಆಗಿ ಬರಬೇಕೆಂಬ ಮಹದಾಸೆ... ಅಂತೂ ಕೃಷ್ಣಸಂಧಾನವಾಗುತ್ತದೆಯೇ ಇಲ್ಲವೇ ನೀವೇ ನೋಡಿ!

  5. ಜಮಖಂಡಿ ಮದುವೆ :

    ಪಿಟ್ಸ್‌ಬರ್ಗ್‌ನ ನಯನತಾರಾ ಸ್ವಾಮಿ ಅವರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಹಾಸ್ಯರಸಾಯನದ ಸಂಗೀತನಾಟಕ.

    ನಿಜಜೀವನದಲ್ಲೇ ಒಂದು ಮದುವೆಯೆಂದ ಮೇಲೆ ಅದರಲ್ಲಿ ಎಷ್ಟೊಂದು ಮೆಲೊಡ್ರಾಮಾ ಇರೋದಿಲ್ಲ!? ವಧು-ವರ ಇಬ್ಬರ ಕಡೆಯವರದೂ ಏನೇನೊ ಅಪೇಕ್ಷೆಗಳು, ನಿರೀಕ್ಷೆಗಳು, ಪೊಳ್ಳುಪ್ರತಿಷ್ಠೆಗಳು, ಸಂಕೋಚ ಬಿಗುಮಾನಗಳು - ಒಂದು ಮದುವೆಯನ್ನು ’ನಾಟಕ’ವಾಗಿಸಲು ಇನ್ನೇನು ಇನ್‌ಗ್ರೇಡಿಯೆಂಟ್ಸು ಬೇಕು? ಕಥಾನಾಯಕ ‘ಚಂದ್ರು’ವಿನ ಮದುವೆಯಲ್ಲಿನ ಕೆಲವು ತಮಾಷೆಪ್ರಸಂಗಗಳು ನಿಮ್ಮದೇ ಮದುವೆಯಲ್ಲಿ ಅಥವಾ ನಿಮಗೆ ಗೊತ್ತಿರುವವರ ಪೈಕಿ ಮದುವೆಯಲ್ಲಿ ಅನುಭವಿಸಿದ ನೆನಪನ್ನು ಮಾಡಬಹುದು!

  6. ಜೋಕುಮಾರಸ್ವಾಮಿ :

    ಪ್ರಖ್ಯಾತ ಕವಿ ನಾಟಕಕಾರ ಚಂದ್ರಶೇಖರ ಕಂಬಾರ ವಿರಚಿತ ಮತ್ತು ದಿ। ಬಿ.ವಿ.ಕಾರಂತ ನಿರ್ದೇಶನದ ಈ ನಾಟಕ ಬೆಂಗಳೂರಿನ ’ಬೆನಕ’ ತಂಡದ ಪ್ರಸ್ತುತಿ. ಖ್ಯಾತ ಚಿತ್ರನಿರ್ಮಾಪಕ, ನಟ, ಮತ್ತು ನಿರ್ದೇಶಕ ಟಿ.ಎಸ್‌.ನಾಗಾಭರಣ ನೇತೃತ್ವದಲ್ಲಿ ಪ್ರದರ್ಶನಗೊಳ್ಳುವ ಈ ನಾಟಕ ಸಮ್ಮೇಳನದ ಪ್ರಧಾನ ಆಕರ್ಷಣೆಗಳಲ್ಲೊಂದು.

    ಉತ್ತರಕರ್ನಾಟಕದ ಗ್ರಾಮ್ಯಭಾಷೆ ಮತ್ತು ಜನಪದ ಸೊಗಡಿನ ‘ಬಯಲಾಟ’ ಮಾದರಿಯಲ್ಲಿ ಪ್ರಸ್ತುತಗೊಳ್ಳುವ ನಾಟಕವು, ಜೋಕುಮಾರಸ್ವಾಮಿಯನ್ನು ಅರ್ಚಿಸಿದರೆ ಬಂಜೆಗೂ ಮಕ್ಕಳಾಗುತ್ತವೆಯೆಂಬ ನಂಬಿಕೆಯ ಸುತ್ತ ಹೆಣೆದ ಕಥೆ. ಮನುಷ್ಯಸಹಜ ಕಾಮ ಕ್ರೋಧ ಲೋಭ ಮತ್ಸರಾದಿ ಗುಣಗಳ ಮಾರ್ಮಿಕ ಅಭಿವ್ಯಕ್ತಿ. ದಿ।ಬಿ.ವಿ.ಕಾರಂತರು ‘ಬೆನಕ’ ವನ್ನು ಸ್ಥಾಪಿಸಿದ್ದಾಗ ಕಂಡಿದ್ದ ಕನಸುಗಳನ್ನು ಸಾಕಾರಗೊಳಿಸುವ, ಈ ಕಲಾಪ್ರಕಾರವನ್ನು ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಕಾರಂತರ ಕಟ್ಟಾ ಅನುಯಾಯಿಯಾದ ನಾಗಾಭರಣರ ಮಹತ್ವಾಕಾಂಕ್ಷೆಯ ಯೋಜನೆ.

  7. ಡ್ಯಾಂಡಿಮ್ಯಾನ್‌ ಶೋ :

    ನ್ಯೂಜೆರ್ಸಿಯ ಬೃಂದಾವನ ಕನ್ನಡಕೂಟದ ವಿಜಯೇಂದ್ರ ಮೂರ್ತಿ ಅವರ ರಚನೆ ಮತ್ತು ನಿರ್ದೇಶನ.

    ಅಮೆರಿಕನ್ನಡಿಗರಿಗೆ (ಟಿವಿ ನೋಡುವ ಅಭ್ಯಾಸವಿರುವವರಿಗೆ) ‘ಡೇವಿಡ್‌ ಲೆಟರ್‌ಮಾನ್‌’ ಶೋ ಗೊತ್ತೇ ಇದೆ. ಅಂಥದ್ದೇ ಒಂದು ಟಾಕ್‌-ಶೋ ಇಲ್ಲಿದೆ. ಅದರ ನಿರ್ವಾಹಕ ದಂಡಪತಿ ಉಪಾಧ್ಯಾಯ ಇಲ್ಲಿ ಅಮೆರಿಕೆಗೆ ಬಂದು ‘ಡ್ಯಾಂಡಿ’ ಆದವನು. ಟಾಕ್‌-ಶೋದಲ್ಲಿ ಅವನ ಅತಿಥಿಗಳಾದರೂ ಎಂಥವರು ಗೊತ್ತಾ? ‘ಸುಬ್ಬಮ್ಮನ ಕೊಬ್ಬು ಇಳಿಸುವ ಅಡುಗೆವಿಧಾನ’ ಪುಸ್ತಕವನ್ನು ಬರೆದ ಸೌತ್‌ಎಂಡ್‌ ಸರ್ಕಲ್‌ ಸುಬ್ಬಮ್ಮನಂಥವರು. ಪ್ರಚಲಿತ ಸಾಮಾಜಿಕ, ರಾಜಕೀಯ, ಕ್ರೀಡೆ, ಚಿತ್ರರಂಗದ ವಿದ್ಯಮಾನಗಳ ಬಗ್ಗೆ ಡ್ಯಾಂಡಿಮನ್‌ನ ವಿಶ್ಲೇಷಣೆ ಕೇಳಲು ಮರೆಯದಿರಿ!

  8. ಪಂಚಭೂತಗಳು:

    ಕೆ.ಗುಂಡಣ್ಣ ವಿರಚಿತ ನಗೆನಾಟಕ, ನ್ಯೂಯಾರ್ಕ್‌ ಕನ್ನಡಕೂಟದ ಎನ್‌.ಕೃಷ್ಣಮೂರ್ತಿ ನಿರ್ದೇಶನದಲ್ಲಿ.

    ಈ ನಾಟಕ ಆಡುವವರು ನಗಿಸಿ, ನೋಡುವವರು ನಲಿದು, ನಿತ್ಯಜೀವನದ ಕಷ್ಟಗಳನ್ನು ಒಂದು ಗಂಟೆಯ ಹೊತ್ತಾದರೂ ಮರೆಯಬೇಕು. ಹಾಗಂತ ನಾಟಕದಲ್ಲಿ ಯಾವ ಸಮಸ್ಯೆಯನ್ನೂ ಪ್ರಸ್ತಾಪಿಸಿಲ್ಲ, ಅಥವಾ ಬಗೆಹರಿಸುವ ಸಾಧ್ಯಾಸಾಧ್ಯತೆಯನ್ನೂ ಚರ್ಚಿಸಿಲ್ಲ. ನೂರು ಪ್ರತಿಶತ ಮನರಂಜನೆಗೋಸ್ಕರ ಈ ನಾಟಕ!

  9. ಬೆರಳ್‌ಗೆ ಕೊರಳ್‌ :

    ಕುವೆಂಪು ವಿರಚಿತ ಈ ಪೌರಾಣಿಕ ನಾಟಕ ಕಾವೇರಿ ಕನ್ನಡ ಸಂಘದ ಕಲಾವಿದರ ಪ್ರಸ್ತುತಿ. ನಿರ್ಮಾಣ ಸುಮಾ ಮುರಳೀಧರ್‌, ನಿರ್ದೇಶನ ತಾವರೆಕೆರೆ ಶ್ರೀಕಂಠಯ್ಯ.

    ಮಹಾಭಾರತದಲ್ಲಿ ಬರುವ ಏಕಲವ್ಯನ ಕಥೆ ಈ ನಾಟಕದ ವಸ್ತು. ಕುವೆಂಪು ಅವರ ಅನನ್ಯ ಶೈಲಿಯಲ್ಲಿ ಅದಕ್ಕೆ ಗುರುಭಕ್ತಿ, ಪ್ರೀತಿ ಮತ್ತು ತ್ಯಾಗಗಳ ಹೃದಯಸ್ಪರ್ಶಿ ಚಿತ್ರಣ. ಏಕಲವ್ಯ ಮತ್ತು ಅವನ ‘ಅಬ್ಬೆ’ಯ ನಡುವಿನ ಕರುಳಿನಸಂಬಂಧ, ಗುರುವಿನ ಬಗ್ಗೆ ಏಕಲವ್ಯನ ನಿಷ್ಠೆ, ಅಶ್ವತ್ಥಾಮನಿಗೆ ತನ್ನ ತಂದೆ ದ್ರೋಣನೊಂದಿಗಿನ ವೈರುದ್ಧ್ಯ, ಮತ್ತು ಇವೆಲ್ಲಕ್ಕಿಂತ ಹೆಚ್ಚಾಗಿ ಕೊನೆಗೆ ಏಕಲವ್ಯನಲ್ಲಿ ದ್ರೋಣಾಚಾರ್ಯನ ಮಹತ್ತರ ಬೇಡಿಕೆ - ಇವೆಲ್ಲ ಈ ಶಕ್ತಿಶಾಲಿ ನಾಟಕದ ಮೂರು ಅಂಕಗಳಲ್ಲಿ ಅಡಕವಾಗಿವೆ!

  10. ವಿಶೇಷ ಅತಿಥಿ :

    ನ್ಯೂಜೆರ್ಸಿ-ಡೆಲವೇರ್‌-ಪೆನ್ಸಿಲ್ವೇನಿಯಾದ ‘ತ್ರಿವೇಣಿ’ ಕನ್ನಡಕೂಟದ ಪ್ರಸ್ತುತಿ. ರಚನೆ ಎಸ್‌. ರಾಮಮೂರ್ತಿ, ನಿರ್ದೇಶನ ಭಗವತಿ ರಾಮಮೂರ್ತಿ.

    ಪುರುಷೋತ್ತಮ-ಗಾಯತ್ರಿ ದಂಪತಿಯ ಮನೆಗೆ ಒಬ್ಬ ಕಳ್ಳ ನುಗ್ಗುತ್ತಾನೆ. ಪುರುಶೋತ್ತಮ ಒಬ್ಬ ಫಿ‚ಲ್ಮ್‌ ಸ್ಟೋರಿರೈಟರ್‌ ಬಡಪಾಯಿ ಎಂಬುದು ಕಳ್ಳನಿಗೆ ಗೊತ್ತಾಗುತ್ತದೆ. ಆಗಲೇ ಅಲ್ಲಿಗೆ ಒಬ್ಬ ಚಿತ್ರನಿರ್ಮಾಪಕ ‘ಜೀ.ಕೆ’ಯ ಪ್ರವೇಶವಾಗುತ್ತದೆ. ಕಳ್ಳ ಅಡಗಿಕೊಳ್ಳುತ್ತಾನೆ. ಪುರುಶೋತ್ತಮನ ಮನೆಗೆ ಜೀ.ಕೆ ಬಂದದ್ದೇಕೆಂದರೆ ಸ್ವತಃ ಡಾ।ರಾಜ್‌ಕುಮಾರ್‌ ಅವರೇ ಪುರುಶೋತ್ತಮ ಬರೆದ ಕಥೆಯಲ್ಲಿ ಆಸಕ್ತಿ ತೋರಿದ್ದಾರೆ ಎಂದು ತಿಳಿಸಲು! ಜೀ.ಕೆ ಹೊರಟುಹೋದ ನಂತರ ಕಳ್ಳ ಈಚೆ ಬಂದು ತಾನೊಬ್ಬ ನಿರುದ್ಯೋಗಿ ನಟನೆಂದೂ, ರಾಜ್‌ಭಕ್ತನೆಂದೂ, ಜೀ.ಕೆಯ ಹೊಸ ಚಿತ್ರದಲ್ಲಿ ತನಗೆ ಪಾತ್ರ ಸಿಗಲು ಪುರುಶೋತ್ತಮನ ವಶೀಲಿ ಬೇಕೆಂದೂ ಅವಲತ್ತು ತೋಡಿಕೊಳ್ಳುತ್ತಾನೆ. ಆಮೇಲೇನಾಯಿತು...?

  11. ವ್ಯಾ-ಧಿಗೆ ತಕ್ಕ ವೈದ್ಯ :

    ಉಮೇಶ್‌ ಕೆ ಜೊಯಿಸ್‌ ನಿರ್ದೇಶನದಲ್ಲಿ ತ್ರಿವೇಣಿ ಕನ್ನಡ ಕೂಟದವರ ಪ್ರಸ್ತುತಿ ಈ ಹಾಸ್ಯನಾಟಕ.

    ಸರಸಣ್ಣ ಒಬ್ಬ ಸ್ಕೂಲ್‌ ಮೇಷ್ಟ್ರು. ಅವನಿಗೆ ನಾಟಕ ಮತ್ತು ಸಂಗೀತದ ಕ್ರೇಜು. ಅವನ ಹೆಂಡತಿ ವಿನೋದಮ್ಮಳಿಗೋ ಬಡತನ ಮತ್ತು ಗಂಡನ ಖಯಾಲಿಗಳೆಲ್ಲ ಸಾಕುಸಾಕಾಗಿದೆ. ಅವಳು ಒಂದು ಭಲೇ ಐಡಿಯಾ ಹಾಕಿ ಸರಸಣ್ಣನನ್ನು ಮೇಷ್ಟ್ರಾಗಿದ್ದವನನ್ನು ಏಕಾಏಕಿ ಡಾಕ್ಟರನ್ನಾಗಿ ಮಾಡಿಬಿಡುತ್ತಾಳೆ! ಅದೂ ಏನು, ಸಕಲರೋಗನಿವಾರಕ ವೈದ್ಯ! ಡಾ।ಸರಸಣ್ಣನ ಮೊದಲ ಕೇಸು ಶ್ರೀಪತಿರಾಯನ ಮಗಳು ವನಜಳ ಚಿಕಿತ್ಸೆ. ಅವಳಿಗೆ ಮಾತು ಬಾರದು (ಅದೂ ಢೋಂಗಿ. ತನಗಿಷ್ಟವಿಲ್ಲದವನೊಡನೆ ಮದುವೆಮಾಡುತ್ತಾರೆಂದು ಆಕೆಯ ಸೋಗು). ಡಾ।ಸರಸಣ್ಣ ಹೇಗೆ ಅವಳನ್ನು ರಿಪೇರಿ ಮಾಡುತ್ತಾನೆ...?

  12. ಸನ್ಮಾನ ಸುಖ :

    ಬ್ಲೂಮಿಂಗ್ಟನ್‌ (ಇಲಿನಾಯ್‌)ನ ಶರತ್‌ ಯೆಲ್ಲಂದೂರ್‌ ಅವರು ರಚಿಸಿ ನಿರ್ದೇಶಿಸಿರುವ ನಗೆನಾಟಕ.

    ಒಬ್ಬ ಬಡಪಾಯಿ ಲೇಖಕ. ಅವನನ್ನು ಸನ್ಮಾನಿಸುವ ಉಮೇಧು ಆ ಪಟ್ಟಣದ ಕಾರ್ಖಾನೆಯಾಂದರ ಕಾರ್ಮಿಕರ ಸಂಘಕ್ಕೆ. ಅದು ಅವರ ಸಂಘದ ವಾರ್ಷಿಕೋತ್ಸವ ಸಮಾರಂಭದ ಸ್ಪೆಷಲ್‌. ಆ ಫ‚ಂಕ್ಷನ್‌ನ ದಿನವೇ ಸ್ಥಳೀಯ ಪುಢಾರಿಯಾಬ್ಬ ಚುನಾವಣೆಯಲ್ಲಿ ಗೆದ್ದುಬರುತ್ತಾನೆ. ಸರಿ, ಕಾರ್ಮಿಕಸಂಘದವರು ಬಡಪಾಯಿ ಲೇಖಕನ ಬದಲು ಪುಢಾರಿಗೇ ಸನ್ಮಾನ ಮಾಡುತ್ತಾರೆ, ಈತ ಕಣ್‌ಕಣ್‌ ಬಿಟ್ಟು ನೋಡುತ್ತಿರುವಂತೆಯೇ! ಮುಂದೆ...?

  13. ಹುಚ್ಚೂರಾವ್‌ ಏಂಡ್‌ ಸನ್ಸ್‌ :

    ವರ್ಜೀನಿಯಾದ ಗ್ಲೆನ್‌ ಅಲೆನ್‌ನ ಶ್ರೀನಾಥ ಭಲ್ಲೆ ಅವರು ಬರೆದು ನಿರ್ದೇಶಿರುವ ಪ್ರಹಸನ.

    ಶಾಮರಾವ್‌ ತನ್ನ ದೋಸ್ತಿ ಹುಚ್ಚೂರಾವ್‌ನನ್ನು ಭೇಟಿಯಾಗುತ್ತಾನೆ, ಅವನ ಮೂವರು ಗಂಡುಮಕ್ಕಳ ಪೈಕಿ ಒಬ್ಬನಾದರೂ ತನ್ನ ಮಗಳ ಕೈಹಿಡಿಯುವಂತಾಗಬಹುದು ಎಂಬ ದೂರಾಲೋಚನೆಯಿಂದ. ಆ ಮೂವರೂ ಕೆಲ್ಸಕ್ಕೆ ಬಾರದ ನಾಲಾಯಕ್‌ ಎಂದು ಗೊತ್ತಾದಾಗ ಹುಚ್ಚೂರಾಯನನ್ನೇ ಮಗಳನ್ನು ವರಿಸುವಂತೆ ಕೇಳಿಬಿಡುತ್ತಾನೆ! ಆದರೆ ವಾಸ್ತವದಲ್ಲಿ ಶಾಮರಾವ್‌ ಯಾರು? ಹುಚ್ಚೂರಾವ್‌ ಯಾರು? ಅದು ರಹಸ್ಯ! ನಾಟಕ ನೋಡಿದಾಗಲೇ ನಿಮಗೆ ಗೊತ್ತಾಗುವುದು!

  14. Akka - The first women liberators (A skit in English)

    ಕಾವೇರಿ ಕನ್ನಡ ಸಂಘದ ಯುವ ಸದಸ್ಯರ ಪ್ರಸ್ತುತಿ. ನಿರ್ಮಾಣ ಮತ್ತು ನಿರ್ದೇಶನ ಹರೀಶ್‌ ಹಿರೇಮಠ್‌.

    ಶಿವಶರಣೆ ಅಕ್ಕಮಹಾದೇವಿ ಮತ್ತು ಕರ್ನಾಟಕದ ಇತರ ಸ್ತ್ರೀ ವಿಮೋಚನಾ ಚಳುವಳಿಗಾರರ ಸಾಹಸಗಾಥೆ.

*

ಈಗಾಗಲೇ ಗಮನಿಸಿದಂತೆ ಇವುಗಳಲ್ಲಿ ಹೆಚ್ಚಿನವು ನಗೆಯುಕ್ಕಿಸುವ ನಾಟಕಗಳು. ‘ನಕ್ಕುನಕ್ಕು ನಿಮ್ಮ ಹೊಟ್ಟೆ ಹುಣ್ಣಾದರೆ ನಾವು ಜವಾಬ್ದಾರರಲ್ಲ...’ ಎಂದು ನಾಟಕತಂಡದವರೇ ಎಚ್ಚರಿಕೆ ಕೊಟ್ಟಿರುತ್ತಾರೆ. ನೋಡೋಣವಂತೆ, ಸಮ್ಮೇಳನದ ಮೂರು ದಿನಗಳಲ್ಲಿ ಬೇರಾವ ಚಿಂತೆಯೂ ಇಲ್ಲದೆ ಸಡಗರ ಸಂಭ್ರಮದಲ್ಲಿ ಕಳೆವಾಗ ಇವಿಷ್ಟು ನಾಟಕಗಳೂ ಮನರಂಜನೆಗಿವೆಯೆಂದರೆ ಇನ್ನೇನು ಬೇಕು? ನಾಟಕದವರಿಗೆಲ್ಲ ಜಯವಾಗಲಿ!


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X