• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅರುಣನ ಋಣವ ತೀರಿಸಲೊಂದು ಆತ್ಮೀಯ ಪತ್ರ...

By Staff
|

ವಿಶ್ವಕನ್ನಡ ಸಮ್ಮೇಳನದ ಉಬ್ಬರವೆಲ್ಲ ಈಗ ತಣಿದರೂ ಕೆಲವು ಅನುಭವಗಳು ನಮ್ಮ ಸ್ಮರಣೆಯಲ್ಲಿ ಬಹುಕಾಲ ಉಳಿಯುತ್ತವೆ. ಮೂರು ದಿನಗಳ ಜಾತ್ರೆಯ ಅಂಗವಾಗಿ ಅಲ್ಲಿ ನಡೆದ ಸಾಂಸ್ಕೃತಿಕ, ಸಾಹಿತ್ಯಕ ಕಾರ್ಯಕ್ರಮಗಳನ್ನು ಹಲವರು ಬೇರೆ-ಬೇರೆ ರೀತಿಯಲ್ಲಿ ಅನುಭವಿಸಿದ್ದಾರೆ. ಇಂತಹ ದೊಡ್ಡ ಸಮ್ಮೇಳನವನ್ನು ಏರ್ಪಡಿಸುವಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿದರೂ ಅವೆಲ್ಲವನ್ನೂ ಸಾಕಷ್ಟು ಬಗೆಹರಿಸಿ ಸಮ್ಮೇಳನವನ್ನು ಏರ್ಪಡಿಸಿದ ಕಾರ್ಯಕರ್ತರಿಗೆ ನನ್ನ ಅಭಿನಂದನೆಗಳು.

ನಾನಿಲ್ಲಿ ಬಾಲ್ಟಿಮೋರಿನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನವೆಂಬ ‘ಜಾತ್ರೆ’ಯಲ್ಲಿ ನನಗಾದ ವಿಶಿಷ್ಟ ಅನುಭವಗಳನ್ನು ಓದುಗರೊಡನೆ ಹಂಚಿಕೊಳ್ಳಲು ಹೊರಟಿದ್ದೇನೆ:

ನಾನೂ ನನ್ನ ಸಹಧರ್ಮಿಣಿ ಲಕ್ಷ್ಮಿಯೂ ಬಾಲ್ಟಿಮೋರ್‌ ತಲುಪಿದ್ದು ಸಪ್ಟಂಬರ್‌ 1, ಶುಕ್ರವಾರ ಬೆಳಗ್ಗೆ. ಆಗ ಅಲ್ಲಿ ಮಳೆ ಬರುತ್ತಿತ್ತು. ಹಾಗಾಗಿ ಹೋಟೆಲ್‌ನಲ್ಲಿ ಚೆಕ್‌ ಮಾಡಿದ ನಂತರ ಕನ್ವೆನ್‌ಷನ್‌ ಹಾಲಿಗೆ ಹೋಗಲು ಸ್ವಲ್ಪ ಸಮಸ್ಯೆಯಾಗಿತ್ತು. ಸ್ವಲ್ಪ ಹೊತ್ತು ಕಾದ ಮೇಲೆ, ಮಳೆ ಸ್ವಲ್ಪ ಕಡಿಮೆಯಾದ ಚಿಹ್ನೆ ತೋರಿದ್ದುದರಿಂದ, ಅಲ್ಲಿಗೆ ಹೊರಟೆವು. ಆದರೆ, ನಮಗೆ ಅದನ್ನು ತಲುಪುವ ದಾರಿ ಗೊತ್ತಿರಲಿಲ್ಲ. ಅಲ್ಲಿದ್ದ ಕೆಲವು ಸ್ವಯಂಸೇವಕರನ್ನು ಕೇಳಿದಾಗ ಅವರು ‘.....ಇಲ್ಲಿಂದ ಎಡಕ್ಕೆ ತಿರುಗಿ, ಆಮೇಲೆ ಬಲಕ್ಕೆ ತಿರುಗಿ ಸೀದಾ ನಡೆದರೆ ಸಿಗುವುದೇ ಕನ್ವೆನ್‌ಷನ್‌ ಸೆಂಟರ್‌ ...’ ಅಂತ ಹೇಳಿದರು.

ಬಾಲ್ಟಿಮೋರಿಗೆ ಹೊಸಬರಾದ ನಮಗೆ ಅದು ಕನ್‌ಫೂಷನ್‌ಗೆ ಎಡೆಮಾಡಿತು. ದೃಷ್ಟಿ ಮಂದದಿಂದಾಗಿ ಪರಿಚಯವಿಲ್ಲದ ಸ್ಥಳಗಳಲ್ಲಿ ನಡೆಯುವುದು ನನಗೆ ತೀರ ಕಷ್ಟವಾಗುತ್ತಿತ್ತು. ಜೊತೆಗೆ ಮಳೆ ಬೇರೆ. ನಮ್ಮ ಬಳಿ ಛತ್ರಿಯೂ ಇದ್ದಿಲ್ಲ. ನನ್ನ ಬೋಳು ತಲೆಯ ಮೇಲೆ ಮಳೆ ಬಿದ್ದಲ್ಲಿ ನೆಗಡಿಯಾಗುವುದಂತೂ ಬಲು ಬೇಗ. ಇತ್ತೀಚೆಗೆ, ವಯಸ್ಸಾದಂತೆಲ್ಲ ನನ್ನನ್ನು ಇಂಥ ಸಮಸ್ಯೆಗಳು ತೊಂದರೆಗೀಡುಮಾಡುತ್ತಿದ್ದುವು. ಆದರೂ ಸಾಹಸ ಮಾಡಿ ಅಲ್ಲಿಗೆ ಹೊರಟೇ ಬಿಟ್ಟೆವು.

ಆಗ ಒಬ್ಬ ಸ್ವಯಂಸೇವಕ ನಮಗೆ ಮಾಡಿದ ಉಪಕಾರವನ್ನು ನಾನು ಮರೆಯಲಾರೆ. ಅವನ ಹೆಸರು ಅರುಣ್‌ ಎಂದು. ಆತ, ನನ್ನ ವಯಸ್ಸು ಮತ್ತು ದೃಷ್ಟಿದೋಷವನ್ನು ಗಮನಿಸಿ, ‘....... ಅಣ್ಣಾ, ನಾನು ನಿಮ್ಮನ್ನು ಅಲ್ಲಿಗೆ ಕರೆದೊಯ್ಯುವೆ...’ ಎಂದು ಹೇಳಿ ನನ್ನ ಕೈ ಹಿಡಿದು ಕರೆದುಕೊಂಡು ಹೊರಟ. ನಾನು ಮಳೆಯಲ್ಲಿ ನೆನೆಯುವೆನೆಂದು ಅರಿತು ತನ್ನ ಜಾಕೆಟನ್ನು ನನಗೆ ಕೊಟ್ಟು, ‘ಅಣ್ಣಾ, ಅದನ್ನು ನಿಮ್ಮ ತಲೆಯ ಮೇಲಿಟ್ಟುಕೊಳ್ಳಿ....’ ಅಂತ ಹೇಳಿ, ನಾನೆಷ್ಟು ಬೇಡವೆಂದರೂ ಆತ ನನ್ನ ತಲೆಗೇರಿಸಿಯೇ ಬಿಟ್ಟ ತನ್ನ ಜಾಕೆಟ್ಟನ್ನು. ಅಲ್ಲಲ್ಲಿ ಮೆಟ್ಟಿಲು, ಹಳ್ಳ ಮುಂತಾದುವುಗಳು ಸಿಕ್ಕಿದಾಗ ನನ್ನ ಕೈಹಿಡಿದು ಸಹಾಯ ಮಾಡಿದ. ಕನ್‌ವೆನ್‌ಷನ್‌ ಹಾಲನ್ನು ತಲುಪಿದ ಮೇಲೆ ಅವನಿಗೆ ಜಾಕೆಟನ್ನು ಕೊಟ್ಟ ಮೇಲೆ ಅವನ ವಿಚಾರ ಹೆಚ್ಚಿಗೆ ತಿಳಿಯುವ ಮೊದಲೇ ಜನಸ್ತೋಮದಲ್ಲಿ ಮಾಯವಾದ. ಮನಸ್ಸಿನಲ್ಲೇ ಅವನಿಗೆ ಕೃತಜ್ಞತೆ ತಲುಪಿಸಿದೆ.

ಭಾನುವಾರ, ಸಪ್ಟಂಬರ 3 ಬೆಳಿಗ್ಗೆ ಉಪಹಾರದ ವೇಳೆ ತಿಂಡಿ ತೆಗೆದುಕೊಂಡು ಒಂದು ಟೇಬಲ್‌ನಲ್ಲಿ ಕುಳಿತುಕೊಂಡು ತಿನ್ನುತ್ತಿದ್ದಾಗ, ಕಾಫಿ ತರಲು ಮರೆತಿದ್ದುದರ ಅರಿವಾಗಿ, ನನ್ನವಳ ಹತ್ತಿರ ‘....ಅಯ್ಯೋ ಕಾಫಿ ತರಲು ಮರೆತೆ...’ ಎಂದು ಹೇಳಿದ್ದನ್ನು ಒಬ್ಬ ಸ್ವಯಂಸೇವಕ ಕೇಳಿಸಿಕೊಂಡಿರಬೇಕು. ತಿಂಡಿ ಮುಗಿಯುವಷ್ಟರಲ್ಲಿ ಆತ ಕಪ್‌ನಲ್ಲಿ ಕಾಫಿ ತಯಾರಿಸಿ ತಂದುಕೊಟ್ಟ. ಯಾರೆಂದು ತಿರುಗಿ ನೋಡಿದಾಗ ಅದೇ ಅರುಣ್‌! ‘.....ಅಣ್ಣಾ, ಕಾಫಿಗೆ ಸಕ್ಕರೆ ಹಾಕಲಿಲ್ಲ.... ನೀನು ಸಕ್ಕರೆ ತಿನ್ನುವುದಿಲ್ಲವೆಂದು ಊಹಿಸಿದೆ...’ಎಂದು ಆತ್ಮೀಯವಾಗಿ ಹೇಳಿದ. ನಾನು ಅವನಿಗೆ ಕೃತಜ್ಞತೆಗಳನ್ನು ಹೇಳುತ್ತಿದ್ದಂತೆ ತಿರುಗಿ ಆತ ಮಾಯವಾದ. ಬಹುಶಃ ನನ್ನಂಥ ಇತರರಿಗೆ ಸಹಾಯ ಮಾಡಲೆಂದೋ ಏನೋ!

ಇದಕ್ಕೆ ತೀರ ಭಿನ್ನವಾದ ಇನ್ನೊಂದು ಅನುಭವವನ್ನು ನಾನಿಲ್ಲಿ ತಿಳಿಸಲೇ ಬೇಕು. ಅಕ್ಕ ಸಮ್ಮೇಳನದಲ್ಲಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದ ಒಬ್ಬ ಮಹನೀಯರ ಬಳಿ ಯಾವುದೋ ವಿಷಯಕ್ಕಾಗಿ ಸಹಾಯ ಅಪೇಕ್ಷಿಸಿ ಅವರನ್ನು ಕೇಳಲು ಹೊರಟಿದ್ದೆ. ಅವರು ನನಗೆ ತೀರ ಪರಿಚಯದವರೇ ಆಗಿದ್ದರು. ಆದರೆ, ಅವರು ಸಾಹಿತಿ ಭೈರಪ್ಪನವರ ಹತ್ತಿರ ಅವರನ್ನು ಒಲಿಸಿಕೊಳ್ಳಲೆಂದೋ ಏನೋ ಮಾತನಾಡುತ್ತಿದ್ದರು. ಆ ಮಾತಿನ ಮಧ್ಯೆ ನನ್ನ ಸಮಸ್ಯೆಗೆ ಉತ್ತರ ನೀಡಲು ಏನೂ ಕಷ್ಟವಿದ್ದಿರಲಿಲ್ಲ. ಆದರೆ, ಅವರು ನನ್ನನ್ನು ಲಕ್ಷಕ್ಕೆ ತೆಗೆದುಕೊಳ್ಳದೇ ಭೈರಪ್ಪನವರ ಹಿಂದೆ ಓಡುತ್ತಿದ್ದರು. ಇದೊಂದು ಸಾಮಾನ್ಯ ಘಟನೆಯಾದರೂ ಅದು ನನ್ನ ಮನಸ್ಸಿಗೆ ಬೇಸರ ತಂದಿತ್ತು.

ವಾಪಾಸು ಬರುತ್ತ ವಿಮಾನದಲ್ಲಿ ಈ ಎರಡು ಸಂದರ್ಭಗಳನ್ನು ಮೆಲುಕು ಹಾಕುತ್ತಿದ್ದೆ. ಒಬ್ಬ ಪರಿಚಯವಿಲ್ಲದ ನಿಸ್ವಾರ್ಥ ಸಹಾಯಕ! ಇನ್ನೊಬ್ಬರು ಪರಿಚಯವಿದ್ದೂ ಸಹಾಯ ಮಾಡುವ ಅಪೇಕ್ಷೆ ಇಲ್ಲದವರು! ಎರಡು ವ್ಯಕ್ತಿತ್ವಗಳೂ ಒಂದಕ್ಕೊಂದು ವಿಭಿನ್ನ! ಇಬ್ಬರ ಪ್ರಯಾರಿಟಿಗಳೂ ಬೇರೆ ಬೇರೆ! ಅದನ್ನೇ ನನ್ನವಳ ಬಳಿ ಹೇಳುತ್ತಿದ್ದೆ.

ಆಕೆ ನನ್ನನ್ನು ‘ನೀವು ಆ ಅರುಣ್‌ನ ವಿಳಾಸ, ಫೋನ್‌ ನಂಬರ್‌ ತೆಗೆದುಕೊಂಡಿದ್ದೀರಾ....? ಅವನಿಗೊಂದು ಕೃತಜ್ಞತೆ ಸಲ್ಲಿಸುವ ಸಂದೇಶವನ್ನಾದರೂ ಕಳುಹಿಸಬೇಕು....’ ಎಂದು ಹೇಳಿದಾಗಲೇ ನನ್ನ ಕರ್ತವ್ಯ ಲೋಪದ ಅರಿವಾದುದು. ನಾನು ಅವನ ಬಗ್ಗೆ ಏನೊಂದೂ ವಿವರಗಳನ್ನು ಪಡೆದಿರಲಿಲ್ಲ. ನಾನೊಬ್ಬ ಸ್ವಾರ್ಥಿಯಾಗಿದ್ದೆ. ನನಗೂ ಭೈರಪ್ಪನವರ ಹಿಂದೆ ಓಡುತ್ತಿದ್ದ ಆ ಸ್ನೇಹಿತರಿಗೂ ಚೂರೂ ವ್ಯತ್ಯಾಸವಿರಲಿಲ್ಲ.

ನನಗೆ ಸಹಾಯ ಮಾಡಿದ ಅರುಣ್‌ ಎಂಬವನಿಗೆ ನನ್ನ ಕೃತಜ್ಞತೆಗಳನ್ನು ಇದನ್ನು ಆತ ನೋಡಿಯಾನೆಂಬ ನಂಬಿಕೆಯಿಂದ ಈಗಾದರೂ ತಲುಪಿಸುತ್ತಿದ್ದೇನೆ. ಇಂತಹ ನಿಸ್ವಾರ್ಥ ಸ್ವಯಂಸೇವಕರೇ ಆ ಅಧಿವೇಶನಕ್ಕೆ ಯಶಸ್ಸು ತಂದು ಕೊಟ್ಟವರು.

ಅನಂತ ಧನ್ಯವಾದಗಳು ಅರುಣ್‌, ನೀನೆಲ್ಲೇ ಇದ್ದರೂ!

ನುಡಿ ಹಬ್ಬದ ಚಿತ್ರಪಟಗಳು :

ಮತ್ತೆ ಸಿಗೋಣ - 3ನೇ ದಿನ

ಮೆರವಣಿಗೆಯ ನೋಟ- 2ನೇ ದಿನ

ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ

ಎಸ್ಪಿ ಬಾಲಸುಬ್ರಮಣ್ಯಂ ಗಾನ ಸುರಭಿ

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :

ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ

ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?

ಪೂರ್ವ ಸಿದ್ಧತೆ Be a patronate! Use .in e-mail Post Your Views

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more