ಕನ್ನಡ ಹಬ್ಬದಲ್ಲಿ ನುಡಿ ನಮನ
ಈ ಸಂದರ್ಭದಲ್ಲಿ ತೀ.ನಂ.ಶ್ರೀಯವರ ಹಿರಿಯ ಮಗಳು, ಅಳಿಯ ಹಾಗೂ ಮೊಮ್ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದದ್ದು ಒಂದು ವಿಶೇಷ. ಕನ್ನಡದ ಮೊಟ್ಟಮೊದಲ ಪದವಾದ ‘ಇಸಿಲ’ವನ್ನು ಅಶೋಕನ ಪ್ರಾಕೃತ ಶಾಸನದಲ್ಲಿ ಕಂಡುಹಿಡಿದ ಡಿ.ಎಲ್.ನರಸಿಂಹಾಚಾರ್ ಅವರ ಸಾಹಿತ್ಯ ಸೇವೆಯನ್ನು ಕೊಂಡಾಡಿದ ಭಟ್ಟರು ರಂ.ಶ್ರೀ.ಮುಗುಳಿಯವರ ಕನ್ನಡ ಸೇವೆಯನ್ನೂ ಸ್ಮರಿಸಿದರು.
ಕನ್ನಡದ ಮಹಿಳಾ ಹಾಸ್ಯ ಲೇಖಕರಲ್ಲಿ ಅಗ್ರಗಣ್ಯರಾದ ಟಿ.ಸುನಂದಮ್ಮನವರ ಬಗ್ಗೆ ಮಾತನಾಡಿದ ಸರೋಜ ನಾರಾಯಣರಾವ್ ಅವರು, ಸುನಂದಮ್ಮನವರು ಸಾಹಿತ್ಯವಲ್ಲದೇ ಸ್ತ್ರಿ ವಿಮೋಚನ ಕ್ಷೇತ್ರದಲ್ಲಿ ದುಡಿದದ್ದನ್ನೂ ನೆನೆಸಿಕೊಂಡರು. ಪ್ರಖ್ಯಾತ ‘ಕೊರವಂಜಿ’ ಪತ್ರಿಕೆಯ ಒಬ್ಬರೇ ಮಹಿಳಾ ಲೇಖಕರು ಸುನಂದಮ್ಮನವರಾಗಿದ್ದರು ಎಂಬ ಅಚ್ಚರಿಯ ಸಂಗತಿಯನ್ನು ಪ್ರಸ್ತಾಪಿಸಿದರು.
‘ಕುಲಶೇಖರಿ’ ಎನ್ನುವ ಕಾವ್ಯನಾಮದಿಂದ ಚಿರಪರಿಚಿತರಾದ ಉಷಾದೇವಿಯವರು ‘ಆಧುನಿಕ ಕನ್ನಡ ಲೇಖಕಿಯರ’ ಬಗ್ಗೆ ಮಾತನಾಡುತ್ತ ನಂಜನಗೂಡು ತಿರುಮಲಾಂಬ, ಜನಕಜೆ, ಎನ್.ವಿ.ಭಾಗ್ಯಲಕ್ಷ್ಮಿ, ಮತ್ತು ಪ್ರತಿಭಾ ನಂದಕುಮಾರ್ ಮುಂತಾದ ಶ್ರೇಷ್ಠ ಬರಹಗಾರರನ್ನು ನೆನೆದರು.
‘ಕಾವ್ಯ ಪ್ರಯೋಜನ’ವನ್ನು ಪ್ರಸ್ತಾಪಿಸಿದ ಲೀಲಾ ಪ್ರಕಾಶ್ ರವರು ಋಷಿಯಾಗದವನು ಕವಿಯಾಗಲಾರ, ಕಾವ್ಯಕ್ಕೆ ರಮಣೀಯತೆ ಬೇಕು, ಬರಿಯ ಪ್ರಾಸವಲ್ಲ ಸೌಂದರ್ಯವೂ ಬೇಕು ಎಂದು ಅಭಿಪ್ರಾಯಪಟ್ಟರು. ಧರ್ಮ, ಅರ್ಥ, ಕಾಮ, ಮೋಕ್ಷವನ್ನು ಕಾವ್ಯ ಹೊಂದಬೇಕು ಎಂದ ಲೀಲಾ ಪ್ರಾಕಾಶ್ ರವರು ಭರ್ತೃಹರಿಯನ್ನು ನೆನೆಯುತ್ತ ಕವಿಗೆ ಸಾವಿಲ್ಲ, ಮರಣವಿಲ್ಲ, ಮುಪ್ಪಿಲ್ಲ ಎಂದರು.
‘ಶಾಲೆಗಳಲ್ಲಿ ಕನ್ನಡ ಕಲಿಕೆ’ಯನ್ನು ವಿಶ್ಲೇಷಿಸುತ್ತ ಚಂಪಾರವರು ಕನ್ನಡವನ್ನು ಎರಡು ರೀತಿಯಲ್ಲಿ ಕಲಿಸಬಹುದು - ಭಾಷೆಯಾಗಿ ಹಾಗೂ ಮಾಧ್ಯಮವಾಗಿ ಎನ್ನುತ್ತ ಶಿಕ್ಷಣವನ್ನು ಯಾವತ್ತೂ ಮಗುವಿಗೆ ಗೊತ್ತಿರುವ ಭಾಷೆಯಲ್ಲಿ ಕೊಡಬೇಕು ಎಂದು ಅಭಿಪ್ರಾಯಪಟ್ಟರು. ಜಾಗತೀಕರಣದ ಪರ ವಾದ ಮಾಡುವುದು ಸುಶಿಕ್ಷಿತರ ಮೂಢನಂಬಿಕೆ ಎಂದ ಚಂಪಾರವರು ಕಂಪ್ಯೂಟರ್ ಕಲಿಯಲಿಕ್ಕೆ ಇಂಗ್ಲೀಷ್ ಏಕೆ ಬೇಕು ಎಂದು ಪ್ರಶ್ನಿಸಿದರು.
ಮತಿಘಟ್ಟ ಕೃಷ್ಣಮೂರ್ತಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ವಿಮಲಾ ರಾಜಗೋಪಾಲ್ ರವರು, 50000ಕ್ಕೂ ಹೆಚ್ಚು ಜನಪದಗೀತೆಗಳನ್ನು ಕಲೆಹಾಕಿದ್ದ ಕೃಷ್ಣಮೂರ್ತಿಯವರ ವ್ಯಕ್ತಿತ್ವವನ್ನು ಪರಿಚಯಿಸಿದರು.
ಶಿಕಾರಿಪುರ ಹರಿಹರೇಶವರರು ಸಮ್ಮೇಳನಕ್ಕೆ ಬರಲಿಕ್ಕಾಗದ ಕಾರಣ, ಕರೀಂಖಾನರ ಬಗ್ಗೆ ಬರೆದ ಅವರ ಲೇಖನವನ್ನು ಮೈ.ಶ್ರೀ.ನಟರಾಜ್ ರವರು ಓದಿದರು. ಕರೀಂಖಾನರನ್ನು ನಡೆದಾಡುತ್ತಿದ್ದ ಜಾನಪದ ಕೋಶ ಎಂದು ಹರಿಯವರು ಕರೆದಿದ್ದಾರೆ. ಕರೀಂಖಾನರ ತಂದೆ ಆಫ್ಘಾನಿಸ್ತಾನದ ಸೈನಿಕರಾಗಿದ್ದರೆ, ಅವರ ತಾಯಿ ಸೌದಿಯಿಂದ ಬಂದವರು. ಖಾನರ ಕನ್ನಡ ಸೇವೆಯನ್ನು ಹರಿಯವರು ಅತ್ಯುತ್ತಮವಾಗಿ ಚಿತ್ರಿಸಿದರು.
ಅಧ್ಯಕ್ಷ ಭಾಷಣ ಮಾಡಿದ ಡಾ!! ವಿವೇಕ್ ರೈರವರು ಕನ್ನಡ ವಿಶ್ವವಿದ್ಯಾನಿಲಯದ ಅಂತರ್ಜಾಲ ತಾಣವಾದ www.kannadauniversity.orgಗೆ ಎಲ್ಲರು ಭೇಟಿ ನೀಡಬೇಕೆಂದು ವಿನಂತಿಸಿಕೊಂಡರು. ಕನ್ನಡ ವಿಶ್ವವಿದ್ಯಾನಿಲಯವು ಮಾಡುತ್ತಿರುವ ಹತ್ತಾರು ಪ್ರಯೋಗಗಳ ಒಂದು ಇಣುಕುನೋಟವನ್ನೂ ನೀಡಿದರು. ವಿದೇಶೀ ಕನ್ನಡಿಗರು ಕನ್ನಡ ವಿಶ್ವವಿದ್ಯಾನಿಲಯದೊಡನೆ ಹೆಚ್ಚು ಸಂಬಂಧ ಬೆಳೆಸಿಕೊಳ್ಳಬೇಕೆಂದು ಅಧ್ಯಕ್ಷರು ಅಭಿಪ್ರಾಯಪಟ್ಟರು.
ಅಮೇರಿಕೆಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸೇವೆ ಶ್ಲಾಘನೀಯ. ಇಂತಹ ಸಾಹಿತ್ಯ ಚಟುವಟಿಕೆಗಳು ಇನ್ನೂ ಹೆಚ್ಚು ಹೆಚ್ಚು ನಡೆಯಬೇಕು, ಹೆಚ್ಚು ಜನರಿಗೆ ಅವಕಾಶ ದೊರಕಬೇಕು.
ನುಡಿ ಹಬ್ಬದ ಚಿತ್ರಪಟಗಳು :
ಮೆರವಣಿಗೆಯ ನೋಟ- 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ
ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
| ಪೂರ್ವ ಸಿದ್ಧತೆ | Be a patronate! Use .in e-mail | Post Your Views |











Click it and Unblock the Notifications