ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡವೆಂಬುದೇ ಅವರೆಲ್ಲರ ಒಗ್ಗೂಡಿಸಿದ ಶಕ್ತಿ

By Staff
|
Google Oneindia Kannada News

ಅದೆಂಥ ಆಕರ್ಷಣೆಯೋ ಏನೋ, ಎದುರು ಬದುರು ಸಿಕ್ಕವರೆಲ್ಲ ಕನ್ನಡದಲ್ಲೇ ಮಾತುಕತೆಗೆ, ಪರಿಚಯಕ್ಕೆ ತೆರೆದುಕೊಳ್ಳುತ್ತಿರುವುದು ಎಲ್ಲೆಡೆ ಸಾಮಾನ್ಯ. ಮೈಬಣ್ಣ, ನಡಿಗೆ, ಹಾವಭಾವದಿಂದಲೇ ಕನ್ನಡತನ ಪ್ರಕಟಿಸುವ, ಕನ್ನಡಿಗರೆಂದು ಸಾಬೀತುಪಡಿಸುವ ಸಮ್ಮೇಳನದ ಪ್ರತಿನಿಧಿಗಳಿಗೆ ಯಾವುದೇ ಬಿಗುಮಾನವಾಗಲಿ, ಸೆಡವಾಗಲಿ, ಅಂತಸ್ತಾಗಲಿ, ಶ್ರೀಮಂತಿಕೆಯಾಗಲಿ, ಸ್ಥಾನಮಾನವಾಗಲಿ ಕೈ ಹಿಡಿದು ಹಿಂದಕ್ಕೆ ಎಳೆಯುತ್ತಿಲ್ಲ.

ಮದುವೆ ಮನೆಗೆ ಬಂದವರೆಲ್ಲ ನಮಗೆ ಪರಿಚಿತರಲ್ಲದಿದ್ದರೂ, ಮೇಲೆ ಬಿದ್ದು ಪರಿಚಯಿಸಿಕೊಳ್ಳುವಂತೆ, ಅದೂ ಸಾಧ್ಯವಾಗದಿದ್ದಾಗ ಮುಗುಳ್ನಗೆ ಬೀರಿ, ಕತ್ತು ಬಗ್ಗಿಸಿ ಕಣ್ಣರಳಿಸಿ ಕಣ್ಣಲ್ಲೇ ಮಾತಾಡುವಂತೆ; ಸಮಾವೇಶದಲ್ಲೆಲ್ಲ ಇಂಥ ಉಭಯ ಕುಶಲೋಪರಿ ಸದಾ ಜಾರಿಯಲ್ಲಿರುವುದು ಗಮನಾರ್ಹ.

ಅನೇಕ ವರ್ಷಗಳ ನಂತರ ಭೇಟಿಯಾದವರು, ಕರ್ನಾಟಕ ಬಿಟ್ಟ ನಂತರ ಅಮೆರಿಕ ಸೇರಿ ಪುನಃ ಸಂಧಿಸದವರು, ಯಾರದೋ ಮೂಲಕ ಕೇಳಿ ಬಲ್ಲವರು, ಪತ್ರಿಕೆ, ಇ-ಮೇಲ್‌, ಇಂಟರ್‌ನೆಟ್‌ನಲ್ಲಿ ಕಂಡವರು, ದೂರದ ಸಂಬಂಧಿಕರು, ಸಂಬಂಧದಿಂದ ದೂರವಾದವರು, ಕನ್ನಡದ ನೆಪದಲ್ಲಿ ಹತ್ತಿರವಾಗುತ್ತಿರುವುದು ಸಮ್ಮೇಳನದ ಸಾರ್ಥಕ್ಯಕ್ಕೆ ಉತ್ತಮ ಷರಾ ಬರೆದಂತಾಗಿದೆ.

ಯಾರು ಎಲ್ಲಿಯೇ ಪರಿಚಯವಾಗಲಿ, ಆ ಪರಿಚಯ ಅವರನ್ನೆಲ್ಲ ಕನ್ನಡದ ಮೂಲಕ ಕರ್ನಾಟಕದ ಹೆಬ್ಬಾಗಿಲ ಮುಂದೆ ತಂದು ನಿಲ್ಲಿಸುತ್ತಿರುವುದು ವಿಶೇಷ. ಎಲ್ಲ ಮಾತುಕತೆಯ ಆರಂಭ-ಅಂತ್ಯ ಕರ್ನಾಟಕದ ಯಾವುದೋ ಊರು, ಯಾವುದೋ ಮನೆತನ.

ಅಮೆರಿಕದಲ್ಲಿ ಅನೇಕ ವರ್ಷಗಳಿಂದ ನೆಲೆಸಿ ಕರ್ನಾಟಕದಿಂದ ದೂರವಾದವರಿಗೆ ಕಳೆದುಕೊಂಡಿದ್ದನ್ನು ಪುನಃ ಪಡೆದ ಅನನ್ಯ ಅನುಭವ. ಅಷ್ಟರಮಟ್ಟಿಗೆ ಕನ್ನಡಕ್ಕೆ, ತಾಯ್ನಾಡಿಗೆ ಹತ್ತಿರವಾದ ಸಮಾಧಾನ. ರಿವರ್ಸ್‌ ಗಿಯರ್‌ನಲ್ಲಿ ಅಂಗಾಲಿನಲ್ಲಿ ಹೋಗಿ ಮೂಲಬೇರು ಮುಟ್ಟಿ ಬಂದ ತೃಪ್ತಿ.

‘‘ನಾನು ನ್ಯಾಷನಲ್‌ ಕಾಲೇಜಿಗೆ ಹೋಗ್ತಾ ಇದ್ದಾಗ ಗಾಂಧಿ ಬಜಾರ್‌ ಹೀಗಿತ್ತು, ವಿದ್ಯಾರ್ಥಿಭವನ ಹಾಗಿತ್ತು, ಮೈಸೂರಿನ ಮಹಾರಾಜಾ ಕಾಲೇಜು ಹಾಗಿತ್ತು, ಧಾರವಾಡದ ಸಾಧನಕೇರಿ ಕೆರೆಯಲ್ಲಿ ಅಷ್ಟು ನೀರಿತ್ತು’ ಎಂಬ ತರಹೇವಾರಿ ಮಾತುಕತೆಗಳು, ಸಮಾವೇಶಕ್ಕೆ ಬಂದವರ ನೆನಪಿನ ಓಣಿಯಲ್ಲಿ ಎಲ್ಲೆಲ್ಲಿಗೋ ಕರೆದೊಯ್ಯುತ್ತಿವೆಯೇನೋ ಎಂದೆನಿಸುತ್ತಿತ್ತು.

ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಸಮಾವೇಶಕ್ಕಾಗಿಯೇ ಆಗಮಿಸಿದವರಿಗೆ ಅಮೆರಿಕ ಕನ್ನಡಿಗರ ಭಾಷಾ ಪ್ರೇಮ ಅಚ್ಚರಿ ಮೂಡಿಸಿತ್ತು. ‘‘ಅಲ್ಲ ಕಣ್ರೀ ಕನ್ನಡ ನಮ್ಮಲ್ಲಿಗಿಂತ ಇಲ್ಲಿಯೇ ಸುರಕ್ಷಿತವಾಗಿದೆ. ನೋಡಿ ಎಷ್ಟು ಅಚ್ಚುಕಟ್ಟಾಗಿ ಕನ್ನಡದ ಉತ್ಸವ ಸಂಘಟಿಸಿದ್ದಾರೆ. ಅಮೆರಿಕದಲ್ಲಿ ಇಂಥ ಸಮಾವೇಶ ಮಾಡೋದು ತಮಾಷೆಯೇನು’ ಎಂದು ಕರ್ನಾಟಕದಿಂದ ಬಂದ ಪ್ರತಿನಿಧಿಗಳು ಹೇಳುವುದು ಕೇಳಿಬರುತ್ತಿತ್ತು.

ಮುಂದಿನ ದಿನ ಇನ್ನಷ್ಟು ಕುತೂಹಲ ಕೆರಳಿಸಿದ್ದು, ಕನ್ನಡದ ಪವಾಡ ಮುಂದುವರಿಯುವ ಲಕ್ಷಣಗಳಿವೆ. ‘ಅಕ್ಕ’ ಪಕ್ಕ ಎಲ್ಲೆಲ್ಲೂ ಕನ್ನಡಿಗರೇ..

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ
ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?
ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ
ಹಿನ್ನೋಟ : ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನ -2004

ಪೂರ್ವ ಸಿದ್ಧತೆ Be a patronate! Use .in e-mail Post Your Views

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X