ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಕನ್ನಡ ಸಮ್ಮೇಳನ ಮತ್ತು ಕನ್ನಡದ ಅನ್ನ ಸಾರು!

By ಅಂಜಲಿ ರಾಮಣ್ಣ
|
Google Oneindia Kannada News

ಆಗೊಮ್ಮೆ ಈಗೊಮ್ಮೆ ನಮ್ಮೂರಿನ ದಿನಪತ್ರಿಕೆಯಲ್ಲಿ 'ಅಕ್ಕ' ಇಣುಕುತ್ತಿದ್ದಳು. ಆದರೆ ನನಗವಳ ಚಾಳಿ ಬಂದದ್ದು 'ದಟ್ಸ್‌ಕನ್ನಡ'ದಿಂದ. ದಿನವೂ ಅವಳ ವಿವರ ಒಮೊಮ್ಮೆ monotonous ಆಗಿ ಮತ್ತೊಮ್ಮೆ ರೋಚಕವಾಗಿ!! ಅಗಾಧವಾಗಿ ಹರಿಯುವ 'ಕಾವೇರಿ' (ಹಿರಿ)ಅಕ್ಕಳಿಗೆ ಆಶ್ರಯವಾದ ಕಥೆಯನ್ನು 'ಬೆಲ್ಲದ ಸವಿ ಬಲ್ಲವನೇ ಬಲ್ಲ' ಎನ್ನುವ ರೀತಿಯಲ್ಲಿ ವಿವರಿಸಿದ್ದ ಸಂಪಾದಕರ ಲೇಖನ ಮತ್ತು ನಂತರದ ಬಾಲಂಗೋಚಿ ಬರಹಗಳಿಂದ ಅಕ್ಕಳ ಬಗ್ಗೆ ನನ್ನ ಆಸಕ್ತಿ ಹೆಚ್ಚಾಯಿತು.

ಅಂತರ್ಪಟ ಸರಿಯುವ ಸಮಯ ಹತ್ತಿರ ಬಂದಂತೆ ಉತ್ತಮರಿಬ್ಬರು ನೀಡುತ್ತಿರುವ ಕೌಂಟ್‌ಡೌನ್‌ ವಿವರ ನವವಧುವಿನ ಎಲ್ಲ ನಿರೀಕ್ಷೆಗಳ ಕುತೂಹಲ, ತಳಮಳಗಳೊಂದಿಗೆ ಅಪರಿಚಿತಕ್ಕಾಗಿ ನನ್ನಲ್ಲಿ ಕಾವು ಏರಿಸಿದ್ದು ಒಂದು ಸಲಿಯಾದರೆ, ಸಿಇಟಿ ಪರೀಕ್ಷೆ ಬರೆಯುವವರ ಜ್ವರದ ಶಾಖ ಹತ್ತಿಸುತ್ತಿದೆ ಮತ್ತೊಂದು ಸಲ!

Indeed, Kannada is more in US than in Bangalore!

ನನ್ನ ಊರಿಗೇ ಬರುತ್ತಿರುವಾಗ ದಾರಿಗಡ್ಡವಾಗಿದ್ದ ಮೈದಾನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಂತ ಬ್ಯಾನರ್‌ ಕಾಣುತ್ತಿತ್ತು. ಜಾನಪದ ಗೀತೆ ಹಾಡುತ್ತಿದ್ದರು (ಹಾಗಂತ ನಾನು ಅಂದುಕೊಂಡೆ)! 'ಅಯ್ಯೋ ಮಾಮೂಲು’ ಇದು ನನ್ನ ಮನಸ್ಸಿನ ಪ್ರಾಮಾಣಿಕ ಪ್ರತಿಕ್ರಿಯೆ ಆಗಿತ್ತು. ಹೆಚ್ಚಿನ ಸೆಳೆತ ಏನೂ ಇರಲಿಲ್ಲ, ಆದರೆ 'ಅಕ್ಕ'ಳ ವಿವರಕ್ಕಾಗಿ ದಟ್ಸ್‌ಕನ್ನಡ ಸೈಟ್‌ ಮೇಲೆ ಮೌಸ್‌ನ ಪ್ರಹಾರ ಅದೆಷ್ಟು ಬಾರಿ ಮಾಡಿದ್ದೇನೋ!

ಸ್ವಾತಂತ್ರ್ಯ ದಿನದಂದು ಕನ್ನಡ ಶೈಲಿಯ ನೃತ್ಯ ಮಾಡಿದ ಮಕ್ಕಳನ್ನು 'ನನ್ನೊಂದಿಗೆ ಅಮೆರಿಕಾ ಕನ್ನಡ ಸಮ್ಮೇಳನಕ್ಕೆ ಕರೆದುಕೊಂಡು ಹೋಗುತ್ತೇನೆ' ಎಂದು ಮುಖ್ಯ ಮಂತ್ರಿಗಳು ಮಾತು ಕೊಟ್ಟಿದ್ದನ್ನು, ಹೌದು, ಪತ್ರಿಕೆಯಲ್ಲಿ ಓದಿದ್ದೇನೆ. ಹತ್ತು ದಿನಗಳ ಹಿಂದೆ ಬೆಳಿಗ್ಗೆ ಪಾರ್ಕ್‌ನಲ್ಲಿ ನನ್ನ ಮುಂದೆಯೇ ವಾಕ್‌ ಮಾಡುತ್ತಿದ್ದ ನಮ್ಮೇರಿಯಾ ಕಾರ್ಪೊರೇಟರ್‌ ಪಕ್ಕದಲ್ಲಿದ್ದವರಿಗೆ ' ಅಳಿಯಂದಿರ ಮನೆಗೆ ಓಗಬೇಕು, ಅಕ್ಕಾ ಹೆಸರಿನಲ್ಲಿ ವೀಸಾಗೆ ಹಾಕ್ಕೊಂಡ್ರೆ ಜಲ್ದಿ ಆಯ್ತದೆ' ಎಂದದ್ದು ನನ್ನ ಕಿವಿಗಳನ್ನು ಮಾತ್ರವಲ್ಲ, ರಕ್ತವನ್ನೂ ತೊಳೆದುಕೊಳ್ಳೋಣ ಎನ್ನಿಸುವಂತೆ ಮಾಡಿದೆ.

ನನ್ನ ತೀರ ಪರಿಚಯಸ್ಥರೊಬ್ಬರು ಅಕ್ಕ ಸಮ್ಮೇಳನದಲ್ಲಿ business opportunity ಪಡೆಯುವ ಪೀಠಿಕೆಯಾಗಿ ಕರ್ನಾಟದಲ್ಲಿ ತಕ್ಕ ಮಟ್ಟಿಗೆ ಪ್ರಸಿದ್ದರು ಎನಿಸಿರುವ ಒಂದಿಬ್ಬರನ್ನು ಸಮ್ಮೇಳನಕ್ಕೆ ಕರೆತರುವ ಆಕರ್ಷಣೆ ಒಡ್ಡಿದ್ದು ನನ್ನ ವೈಯಕ್ತಿಕ ಅನುಭವ! ಹೀಗೆ ಅಮೇರಿಕನ್ನಡ ಹಬ್ಬದ ಬಗ್ಗೆ ಇಲ್ಲಿ ನೂರಾರು ಮನದಲ್ಲಿ ನೂರು ನೂರು ತರಹ.

ಕನ್ನಡ ಸಮ್ಮೇಳನ ದೂರದ ಅಮೆರಿಕೆಯಲ್ಲಿ, ಆದರೆ ಇಲ್ಲಿ ಬಾಟಾ(ಚಪ್ಪಲಿ ಅಂಗಡಿ)ಗೆ ಹೋದೆ 'ಈ ಚಪ್ಪಲಿ ತೋರಿಸಿ' ನಿಜವಾದ ಕನ್ನಡದಲ್ಲಿ ಕೇಳಿದೆ. ಉಹುಂ, ಒಂದಲ್ಲ, ಎರಡಲ್ಲ ಮೂರನೆಯ ಬಾರಿಗೆ ಆಸಕ್ತಿ ಇಲ್ಲದೆ ಕೈಯಿಂದ ಆ ಸೇಲ್ಸ್‌ ಯುವಕ ಒಂದು ಚಪ್ಪಲಿ ತೋರಿಸುತ್ತಿದ್ದ... ಆಗಲೇ ಅಲ್ಲಿಗೆ ಇಂಗ್ಲಿಷ್‌ ಮಾತನಾಡುತ್ತ ಇಬ್ಬರ ಪ್ರವೇಶ... ಆ ಯವಕನ ಕೈಯಲ್ಲೇ ಇದ್ದ ಮತ್ತೊಂದು ಚಪ್ಪಲಿ ನನ್ನ ಕಾಲ ಮೇಲೆ ಧೊಪ್ಪೆಂದು ಬಿತ್ತು... ಮರುಕ್ಷಣ ಅವನು ಅವರಿಬ್ಬರ ಬಳಿ ಇದ್ದ! ಒಂದೇ ಜೊತೆ ಚಪ್ಪಲಿ ಖರೀದಿಗೆ ನನ್ನ ಒಂದು ಘಂಟೆ ಸಮಯವನ್ನು ಸಾಯಿಸಿತ್ತು ಕನ್ನಡ!

ಬೆಂಗಳೂರಿನ ರಸ್ತೆಗಳಲ್ಲಿ ಐದು ದಿನಗಳು ಆ ಚಪ್ಪಲಿಯನ್ನು ಹಾಕಿಕೊಂಡು ಓಡಾದಿದೆ, ಯಾಕೋ ಹಿತವಾಗಿದೆ ಎನ್ನಿಸಲಿಲ್ಲ. ಅಟ್ಟದ ಮೇಲೆ ಡಬ್ಬ ಇನ್ನೂ ಇತ್ತು. ಧೂಳು ಹೊಡೆದು ಚಪ್ಪಲಿಯನ್ನು ಡಬ್ಬಕ್ಕೆ ಸೇರಿಸಿ, 'ಟ್ರಿಮ್‌' ಆಗಿ ಡ್ರೆಸ್‌ ಮಾಡಿಕೊಂಡು ಮತ್ತದೇ ಬಾಟಾ ಬಾಗಿಲು ಬಡಿದೆ ಆದರೆ ಈ ಬಾರಿ ಇಂಗ್ಲಿಷ್‌ನಲ್ಲಿ!! ರೆಪ್ಪೆ ಮುಚ್ಚಿ ಬಿಡುವುದರೊಳಗೆ ಮೇಲಿನವರ ಭಯವನ್ನು ಮೀರಿಸಿ ಸಂಬಳಕ್ಕೆ ಬೀಳಬಹುದಾದ ಕತ್ತರಿಯ ಆತಂಕವನ್ನು ಕತ್ತರಿಸಿ ನನ್ನ ಹಳೆ ಚಪ್ಪಲಿಯನ್ನು ಹೊಸದಕ್ಕೆ EXCHANGE ಮಾಡಿಸಿತ್ತು ಇಂಗ್ಲಿಷ್‌!!

ಸಪ್ತಸಾಗರದಾಚೆ ನಡೆಯುತ್ತಿರುವ 'ಕನ್ನಡ' ಆಚರಣೆಯ ನಾಲ್ಕೂ ವರ್ಷಗಳ ವಿವರಗಳನ್ನು ಓದಿದರೆ, ಪ್ರತೀ ಹೆಜ್ಜೆಯಲ್ಲೂ ಅಚ್ಚುಕಟ್ಟುತನ, ಪರ್‌ಫೆಕ್ಷನ್‌ಗಾಗಿ ಹಪಹಪಿಕೆ ಮತ್ತು ತಹತಹಿಸಿ ಕಾದಿಟ್ಟುಕೊಂಡ ಗುಣಮಟ್ಟ ಮಾತ್ರವಲ್ಲ ಬೆಳೆಯುತ್ತಿರುವ ಅದರ ಯಶಸ್ಸು ಕಣ್ಮನಗಳಿಗೆ ರಾಚುತ್ತದೆ. ಹಾಗಾಗಿ, ಇಲ್ಲಿಯೇ ಆಗ್ಗಾಗ್ಗೆ ನಡೆಯುತ್ತಲೇ ಇರುವ ಕನ್ನಡ ಸಮ್ಮೇಳನಗಳ ಬಗ್ಗೆ ಬಹಳ ಜನ-ಮನಗಳಿಗೆ ಅನ್ನಿಸುವಂತೆ ನಿತ್ಯ ಸಾಯುವವನಿಗೆ ಅಳುವವನ್ಯಾರು ಎನ್ನಿಸುವುದಿಲ್ಲ. ಬದಲಿಗೆ, ನಮ್ಮ ದಟ್ಸ್‌ ಕನ್ನಡ ಶಾಮ್‌ ಬರೆದ ಎರಡು ಸಾಲು ಕಾಡುತ್ತೆ. ಅವರಂತೆ, ನನಗೂ ಕನ್ನಡ ಮತ್ತು ಕನ್ನಡವೇ ಅನ್ನ ಸಾರು. ಆದರೆ ಕನ್ನಡ ನೆಲದಲ್ಲಿ ಒಂದು ಹೊತ್ತಿನ ಕನ್ನಡದ ಅನ್ನ ಸಾರು ತಿನ್ನಲು ನಾನು ಮತ್ತು ಕನ್ನಡ ಇಬ್ಬರೂ ಅನಿವಾಸಿಗಳಾಗಬೇಕೆ? ಎನ್ನಿಸುತ್ತದೆ!

ಬೆಂಗಳೂರಿನಲ್ಲಿ ರಸ್ತೆ- ಅವಸ್ಥೆ-ದುರವಸ್ಥೆ. ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಮಾತ್ರವಲ್ಲ ಕನ್ನಡ ಭಾಷಾ ಮಾಲಿನ್ಯದೊಂದಿಗೆ ಕನ್ನಡ ಭಾವ ಮಾಲಿನ್ಯವೂ ಮನೆ ಮಾಡಿದೆ ಬೀಡು ಬಿಟ್ಟಿದೆ.

ತವರುನೆಲದಲ್ಲಿಲ್ಲದಿದ್ದರೂ ತವರಿನ ಬಂಧ ಬಿಡದು ಎನ್ನುವಂತೆ ಅಮೆರಿಕಾದ ಆಮ್ಲಜನಕಕ್ಕೆ ಕನ್ನಡಜನಕ ಬೆರೆಸಿ ಕನ್ನಡಕ್ಕೆ ಉಸಿರುತುಂಬುತ್ತಿರುವ ಅಕ್ಕದಂತಹ ಸಮ್ಮೇಳನಗಳು ನಿರ್ಮಲ ಯಶಸ್ಸು ಕಾಣಬೇಕು ಎಂಬುದು ನನ್ನ ಹಾರೈಕೆ. ಆದರೆ ಆ ನುಡಿಹಬ್ಬ ಕನ್ನಡ ನೆಲದಲ್ಲೇ ಕನ್ನಡಿಗರ ಮನಸ್ಸಿನಲ್ಲಿ ಕನ್ನಡದ ದೀಪ ಹಚ್ಚುವಂತಹ ಪ್ರೇರೇಪಣೆ ನೀಡಬೇಕು. ಕನ್ನಡಿಗರ ನಾಲಿಗೆಯಲ್ಲಿ ಕನ್ನಡದ ಆತ್ಮ ನುಲಿಯುವಂತೆ ಆಗಬೇಕು. ಕನ್ನಡ ನಿಜವಾದ ಅರ್ಥದಲ್ಲಿ (ಹಿರಿ)ಅಕ್ಕ ಆಗಬೇಕು. ಇದು ನನ್ನ ಆಶಯ.

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ
ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?
ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ
ಹಿನ್ನೋಟ : 'ಅಕ್ಕ’ ವಿಶ್ವ ಕನ್ನಡ ಸಮ್ಮೇಳನ -2004

English summary
Anjali Ramanna, Bangalore wishes World Kannada Conference all the best and shares her bitter experience in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X