ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪ್ಪಿನಿಯ*

By Staff
|
Google Oneindia Kannada News

ಸೀಲಕಾಂತ-ಸೀಲಕಾಂತಿ

(ಸೀಲಕಾನ್ತ್‌ (Coelacanth), ಇದು ಪಶ್ಚಿಮದೇಶದ ವಿಜ್ಞಾನಿಗಳಿಗೆ ಪಳೆಯುಳಿಕೆಯಾಗಿಯೇ ತಿಳಿದಿದ್ದು, 1938ರಲ್ಲಿ ದಕ್ಷಿಣ ಆಫ್ರಿಕದಲ್ಲಿ ಜೀವಂತವಾಗಿ ಸಿಕ್ಕ 40 ಕೋಟಿ ವರ್ಷ ಹಿಂದಿನ ಮೀನು. ಇದನ್ನು ನನ್ನ ಪದ್ಯಪ್ರಾಣಿಸಂಗ್ರಹಾಲಯದಲ್ಲಿ ಸೇರಿಸಿಕೊಳ್ಳಬೇಕೆಂದು ಸಾಕಷ್ಟು ದಿನದಿಂದ ಯೋಚಿಸುತ್ತಿದ್ದೆ. ಈಚೆಗೆ, ಅಮೆರಿಕದ ವೃತ್ತಪತ್ರಿಕೆಗಳಲ್ಲೆಲ್ಲಾ, ಮದುವೆಯ ದಿನದ ಮೊದಲು ಮೆಕ್ಸಿಕೋಗೆ ಓಡಿಹೋದ ಹೆಂಗಸೊಬ್ಬಳದು ದೊಡ್ಡ ಸಮಾಚಾರವಾಗಿತ್ತು. ಇದೇ, ಪದ್ಯದ ಈ ರೂಪಕ್ಕೆ ಪ್ರೇರಣೆ ಆಯಿತು. ಇದನ್ನು ಕನ್ನಡ ಸಾಹಿತ್ಯ ರಂಗ ಲಾಸ್‌ ಏಂಜಲಿಸ್ಸಿನಲ್ಲಿ 2005ರ ಡಿಸೆಂಬರ್ರಿನಲ್ಲಿ ಏರ್ಪಡಿಸಿದ್ದ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ಸಲ ಓದಿದೆ.) H.K.Krishnapriyan
‘‘ಸೀಲಕಾಂತ! ಪ್ರಾಣಕಾಂತ!’’
ಎಂದು ಸೀಲಕಾಂತಿ
ಶಾಂತಮಹಾಸಾಗರದ-
ಲ್ಲೀಜುತಿದ್ದ ಶಾಂತಿ

ಸನಿಹ ಬಂದು ಉಲಿದು ನಲಿದು
ಪ್ರೇಮಗೀತೆ ಹಾಡೆ
ಸೀಲಕಾಂತ ಕೆಂಪಗಾಗಿ
ಮೇಲೆ ಕೆಳಗೆ ನೋಡೆ
ಕತ್ತುಪಟ್ಟಿ ಕೆಳಗೆ ಬೆವತು
ತೊದಲಿ ಮಾತನಾಡೆ

ನೋಡಿ ನಕ್ಕ ಮೀನು ಮೊಸಳೆ
ತಿಮಿಂಗಿಲಗಳೆಲ್ಲ
‘‘ಸೀಲಕಾಂತಿ ಶಾಂತಿ ನಲ್ಲೆ!
ಸೀಲಕಾಂತ ನಲ್ಲ!
ಮೂರು ಲೋಕ ಹುಡುಕಿದರೂ
ಇಂಥ ಜೋಡಿಯಿಲ್ಲ’’
ಎಂದು ಹಾಡಿ ಕೈಯ ತಟ್ಟಿ
ಸುತ್ತ ಕುಣಿದವಲ್ಲ!

ಬಾನಲೋಡುತಿರುವ ಗ್ರಹಗ-
ಳೋಟವೆಲ್ಲ ಗುಣಿಸಿ
ಧಾರೆಯೆರೆವ ‘‘ಮೀನ’’ ಲಗ್ನ
ನಾಳೆಯೆಂದು ಎಣಿಸಿ
ಬಂಧುಮಿತ್ರರೊಡನೆ ಬನ್ನಿ
ಎಂದು ಊರ ಕರೆದು
ತಂದೆತಾಯಿ ಅತ್ತೆಮಾವ-
ನವರೆಕೌಂಟು ಬರಿದು

ವರನ ಪೂಜೆಯಾಗಿ ರಾತ್ರಿ
ಬಿಡದಿ ಮನೆಯ ಸೇರಿ
ಕತ್ತಲಾಗಿ ಸೂರ್ಯ ಮುಳುಗಿ
ಚಂದ್ರ ಬಾನಲೇರಿ
ದಿಂಬನಪ್ಪಿ ಮಲಗಿ ಕಾಂತ
ಕನಸ ಕಾಣುತಿದ್ದ
ಸೀಲಕಾಂತಿಯೊಡನೆ ಬಾಳ್ವ
ಕನಸ ಕಾಣುತೆದ್ದ

ಮಧ್ಯರಾತ್ರಿ ಸೀಲಕಾಂತ
ಏಕೋ ಏನೋ ಎದ್ದ
ಮತ್ತೆ ನಿದ್ದೆ ಬರದೆ ಅವನು
ಬಿಡದಿ ಹೊರಗೆ ಬಿದ್ದ
ಶಾಂತ ಮಹಾಸಾಗರವನು
ಬಿಟ್ಟು ಹೊರಟುಬಿಟ್ಟ
ಆಫ್ರಿಕಾದ ತೆಂಕಲನ್ನು
ಹೋಗಿ ಸೇರಿಬಿಟ್ಟ

ಚಿಕ್ಕ ದ್ವೀಪದಡಿಯಲಿದ್ದ
ಗುಹೆಯಲೊಂದರಲ್ಲಿ
ಸೇರಿ ಹೊರಗೆ ಬರಲೆ ಇಲ್ಲ
‘‘ಸೀಲಕಾಂತನೆಲ್ಲಿ?’’
ಎಂದು ಹುಡುಕಿದವರಿಗೆಲ್ಲ
ಆಯ್ತು ಬಹಳ ತ್ರಾಸ
ಮೀನು ಮೊಸಳೆ ಸೇರಿದಾಗ
ಮಾತಿಗಷ್ಟು ಗ್ರಾಸ

ಈಗ ಕೂಡ ಶಾಂತಿ ಶಾಂತ
ಸಾಗರದಲಿ ನಿಂತು
ಕಾದಿರುವಳು ಬರುವನೇನೊ
ಸೀಲಕಾಂತನೆಂದು
ಕಾಂತ ಬಂದು ಮೊಗವ ತೋರಿ
ತನ್ನ ಕರೆವನೆಂದು
ತನ್ನ ಕರೆವನೆಂದು
ತನ್ನ ಪೊರೆವನೆಂದು

*ಕಪಿನಯ್ಯ ಅಲ್ಲ



ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X