ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯರಾಮ ಕೆ. ಉಡುಪ, ಆಡುಬಾನ್‌, ಪೆನ್ಸಿಲ್ವೇನಿಯಾ

By Staff
|
Google Oneindia Kannada News

ಹೃನ್ಮನೋರುತಿ

ಮನಸ್ಸು ಯೋಚನಾ ಶಕ್ತಿಯನ್ನೂ ಮತ್ತು ಹೃದಯ ಭಾವನಾ ಶಕ್ತಿಯನ್ನೂ ಸಂಕೇತಿಸುತ್ತವೆ. ಮನಸ್ಸು ಮತ್ತು ಹೃದಯಗಳಲ್ಲಿ ಈ ಸಂಕೇತಿಸುವಿಕೆಯಿಂದ ಹೊಮ್ಮುವ ದ್ವಂದ್ವವನ್ನು ಇಲ್ಲಿ ಚಿತ್ರಿಸಲಾಗಿದೆ - ಅವುಗಳ ನಡುವಿನ ಸಂವಾದದ, ವಾಗ್ವಾದದ ರೂಪದಲ್ಲಿ, ಯುಗಲ ಗೀತೆಯ ಶೈಲಿಯಲ್ಲಿ. ಪುರುಷನಾಗಿ ಮನಸ್ಸಿನ ನಿರೂಪಣೆ ಮತ್ತು ಪ್ರಕೃತಿಯಾಗಿ ಹೃದಯದ ಪರಿಗಣನೆ ಇಲ್ಲಿ ಸ್ವಾಭಾವಿಕ ಎಂದೇ ನನ್ನ ಭಾವನೆ. ಇದರಲ್ಲಿ ಲಿಂಗಭೇದಭಾವವನ್ನು ನಾವು ಕಾಣಬಾರದು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಈ ಎರಡೂ ಅಂಶಗಳ ವಿವಿಧ ರೂಪದ ಮಿಶ್ರಣವಿರುತ್ತದೆ ಎಂದು ನಾವು ಪರಿಗಣಿಸಬೇಕು. Jayaram Udupa
  • ಜಯರಾಮ ಕೆ. ಉಡುಪ, ಆಡುಬಾನ್‌, ಪೆನ್ಸಿಲ್ವೇನಿಯಾ
    [email protected]
ಮನಸ್‌:

‘‘ನಾನು ಪುರುಷ ನೀನು ಪ್ರಕೃತಿ, ಬುದ್ಧಿ ಭಾವದಾಕೃತಿ;
ಮನದ ಮಿಡಿತ ಎದೆಯ ಮೊರೆತವೊರೆವ ದ್ವಂದ್ವ ಮೂರುತಿ.

ಬುದ್ಧಿ ಶಕ್ತಿ ಆತ್ಮಸಾಕ್ಷಿ ಜ್ಞಾನ ಮತಿ ವಿವೇಕವು,
ಸೃಷ್ಟಿ ಯುಕ್ತಿ ಧ್ಯಾನ ಮುಕ್ತಿ ನನಗೆ ಸ್ವ ಅಧೀನವು
ನ್ಯಾಯ ನೀತಿ ಯಮ ನಿಯಮ ನೇಮ ನಿಷ್ಠೆ ತರ್ಕವು,
ಯೋಗ ಸ್ಥಿರತೆ ಪ್ರತ್ಯಾಹಾರ ನನ್ನ ಆಧಿಪತ್ಯವು.’’

ಹೃತ್‌:

‘‘ನಲಿವು ನಗುವು ಸೊಗವು ಮುದವು ನಲ್‌ ರಸಗಳ ಚಿಲುಮೆಯು,
ಗೆಲವು ಗಂಧ ಚೆಲುವು ಚೆಂದ ನನ್ನ ಭಾವಲೋಕವು.
ಪ್ರೇಮ ಮೈತ್ರಿ ಪ್ರಣಯ ಹಾಸ್ಯ ವೀರ್ಯಗಳಿಗೆ ಸ್ಪಂದನ,
ಸ್ನೇಹ ಕೀರ್ತಿ ಸಹನೆ ದಯೆಗೆ ನಾನು ಕುಣಿವೆ ತೋಂನನ.’’

ಮನಸ್‌:

‘‘ನಿನ್ನ ಭಾವಲೋಕದಲೆಯ ಭರತವಿಳಿತದೇಟಿಗೆ,
ತನ್ನ ಸದ್ವಿವೇಕವಳಿಯೆ ಮನುಜನಿಳಿವ ಕೇಡಿಗೆ.
ನನ್ನ ಶಾಂತಿಯಳಿಸಿ ತುಳಿವೆ ನರನ ಕಸರು ಕೋಟಿಗೆ,
ನಿನ್ನ ಭ್ರಾಂತಿ ಕಳೆಯೆ ಜಗದಿ ನಿಜದಿ ಒಳಿತಿನೇಳಿಗೆ.’’

ಹೃತ್‌:

‘‘ತತ್ತ್ವ ತರ್ಕ ಶಾಸ್ತ್ರ ಜ್ಞಾನ ಭಾವ ಶೂನ್ಯ ಶೋಧನೆ,
ಸ್ವತ್ವ ಹಮ್ಮು ಸ್ವಪ್ರತಿಷ್ಠೆ ನಿನ್ನ ಶುಷ್ಕ ಸಾಧನೆ.
ನಂದ ಭಾವ ಲಹರಿ ಹರಿಸಿ ನಾನು ಜೀವ ಭರಿಸುವೆ,
ಅಂತರಾಳವನ್ನು ಸವರಿ ಸುಖಶಾಖವ ಸುರಿಸುವೆ.’’

ಮನಸ್‌, ಹೃತ್‌:

‘‘ವೈಮನಸ್ಯ ಕಲಹ ತಾಪ ನಮ್ಮಲೇಕೆ ತಲ್ಲಣ?
ಐಕಮತ್ಯವಿರದ ಶಾಪ ನಮಗೆ ಏಕೆ ಅನುದಿನ?
ಹೊಂದೆ ನಮ್ಮ ಆತ್ಮ ಮಿಲನ ಸಮತೋಲನ ಸದನ,
ಒಂದೆ ನೊಗದ ಜೋಡೆತ್ತಿನ ಸಮಗಮನದ ಚಲನ.’’

ಹೃತ್‌:

‘‘ನಾವು ಪುರುಷ-ಪ್ರಕೃತಿ, ನಮ್ಮ ಬಂಧ ಹೃನ್ಮನೋರುತಿ,
ನಿನ್ನ ಉಲಿತ ನನ್ನ ಮಿಡಿತವೆಂಬ ಗಾನದಾ ಶ್ರುತಿ.’’

(ಶಬ್ದಾರ್ಥ : ರುತಿ=ಮಾತು, ಒರೆ=ಹೇಳು, ದ್ವಂದ್ವ=ಪರಸ್ಪರ ವಿರುದ್ಧ ವಸ್ತುಗಳ ಜೋಡಿ, ಯಮ=ನೈತಿಕ ಅನುಶಾಸನ, ನಿಯಮ=ಸ್ವಶುದ್ಧಿ, ಶಿಸ್ತು, ಪ್ರತ್ಯಾಹಾರ=ಇಂದ್ರಿಯ ನಿಗ್ರಹ, ಕಸರು=ಬೇಗೆ, ಕೋಟಿ=ತುದಿ, ನಂದ=ಸಂತೋಷ.)


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X