ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯರಾಮ ಕೆ. ಉಡುಪ, ಆಡುಬಾನ್‌, ಪೆನ್ಸಿಲ್ವೇನಿಯಾ

By Staff
|
Google Oneindia Kannada News

ದನಿ ಸಿರಿ ನಿವಾಸ

Dr. P.B. Srinivas
Jayaram Udupa
  • ಜಯರಾಮ ಕೆ. ಉಡುಪ, ಆಡುಬಾನ್‌, ಪೆನ್ಸಿಲ್ವೇನಿಯಾ
    [email protected]
ಡಾ। ಪಿ. ಬಿ. ಶ್ರೀನಿವಾಸರ ಗಾಯನದಿಂದ ನನ್ನ ಬಾಲ್ಯದಿಂದ ಇಲ್ಲಿಯ ತನಕ ನಾನು ಪಡೆದ ಸಂತೋಷ ನನ್ನ ಜೀವನದ ಮುಖ್ಯ ಸೌಖ್ಯಗಳಲ್ಲೊಂದು. ಆ ಸಂತೃಪ್ತಿಯ ಸಂಕೇತವಾಗಿ, ಆ ದನಿ ಸಿರಿ ನಿವಾಸನಿಗೆ ನನ್ನ ಹೃನ್ಮನಾತ್ಮಪೂರ್ವಕ ನಮನ ಈ ಕವನ.

ಸಿರಿದನಿ ಸಿಹಿ ಲಯದ ಲಹರಿ ಹಸರಿಸೆ ಹೃನ್ಮನದ ಬನದಿ,
ಹಿರಿಹಿರಿ ಹಿಗ್ಗಿನಲಿ ಹೊನಲು ಮುದವ ಬಿರಿದು ಹರಿಯೆ ಮನದಿ,
ವಿವರಿಸಲಸದಳವದೆನಿಪ ತೃಪ್ತ ಭಾವ ಹರಡಿ ಹದದಿ,
ಸಿರಿನಿವಾಸನೆನುವ ಹೆಸರೆ, ಎನಿಸೆ ದನಿಯ ಸಿರಿಯ ಉದಧಿ.

ಬಾಲದಾಟ ಪಾಟ ಶಾಲೆ ಕೂಟಗಾನದಿಂಚರದಿ,
ಬಯಲಾಟದ, ಮದುವೆ ಮುಜಿ ಕಾರ್ಯಕಜ್ಜದಂತರದಿ,
ಬನಬನದಲಿ ಬಿನದ ನಿಮ್ಮ ಗಾನ ಚಿತ್ರ ಮಂದಿರದಿ,
ದನಿಯನರಗಿಸುತ್ತ ಬೆಳೆದೆ ಜೀವಕೋಶದಂತರದಿ.

ಮೃದು ಮಧುರದ ಶಾರೀರದ ತರಂಗೋಪತರಂಗಗಳು
ಹದಹದದಲಿ ಮೇಳೈಸಿರೆ ದಿವ್ಯ ನರ್ತನವಗೈದು,
ಪದಶಬ್ದದ ಉಚ್ಚಾರಣೆ ಪರಿಪೂರ್ಣತೆ ಪಡೆದಿರಲು,
ಮುದಮುದದಲಿ ಕನ್ನಡ ನುಡಿ ಕಂಪ ಇಮ್ಮಡಿಸಿ ಬಿಡುವುದು.

ಸ್ತೋತ್ರ ಗಾನದಲ್ಲಿ ಸುಪ್ರಶಾಂತತೆಯನು ಹೊಮ್ಮಿಸುವಿರಿ;
ಶ್ರೋತೃ ಮನದಿ ಅಸಮ ಅನುದ್ವಿಗ್ನತೆಯನು ಚಿಮ್ಮಿಸುವಿರಿ;
ಭಕ್ತಿಗೀತೆ ಭಿನ್ನ ರೀತಿ ಹಾಡಲಸದಳವೆನಿಸುವಿರಿ;
ಮುಕ್ತಿ ಮಂಟಪವನು ತೋರಿ ಆತ್ಮ ಪುಳಕಗೊಳಿಸುವಿರಿ.

ಭಾವಗೀತೆ ಗಾಯನವೋ ಮೃದುಗನ್ನಡ ಜೀವದನದಿ;
ಈವ ನವಿರು ಸ್ಫುರಣಗಳೋ ಎಸೆದ ಮೃದುಲ ಸುಮದ ದಳದಿ
ಭಾವಕೊಳಕೆ ಚುಂಬನವೋ ಎನಿಸಿ ಚೇತನವನು ತಡವಿ,
ಏಳ್ವ ತೆರೆತರಂಗಗಳೋ ಉಣಿಸೆ ರಸದ ರಸಾಲ ಸವಿ.

ಯುಗಳ ರಾಗ ಪ್ರೇಮ ಪ್ರಣಯ ಸಂಗೀತಗಳೆಲ್ಲದರಲು
ಬಕುಳ ಮೊಲ್ಲೆ ಮಲರ ಕಂಪ ಸ್ನೇಹ ಭಾವ ಹೊನ್ನ ಹೊನಲು;
ಅತುಲ ಪ್ರೇಮಿ ಜೋಡಿ ಒಲವ ಮುಗಿಲೆತ್ತರಕೆತ್ತಿಸಿರಲು,
ವಿಪುಲ ಭಕ್ತಿ ಹೊಮ್ಮಿಸುವಿರಿ ಪ್ರೇಮ ಪೂಜೆ ಗಾಯನದೊಳು.

ಅಂತರಂತರಾಳದಲ್ಲಿ ಆತ್ಮ ತಂತುವನ್ನು ಮಿಡಿದು,
ಶಾ0ತ ಶೋಕಗೀತೆಗಳಲಿ ಕರುಣ ರಸವ ದ್ರವಿಸಿ ತುಡಿದು,
ಮ0ತ್ರಮುಗ್ಧತೆಯಲಿ ಹಿಡಿದು ಬಾಳ ನೀತಿ ಮಂತ್ರಿಸುವಿರಿ;
ಸಂತ ತತ್ತ್ವಗೀತೆಗಳಲಿ ಪರಶಕ್ತಿಯ ಬಿ0ಬಿಸುವಿರಿ.

ಅಂದಿನಿಂದ ಈವರೆಗೂ ಹೊಂದಿದೆ ನಾ ನಂದವ ಹೊರೆ,
ಒಂದೊಂದೂ ಅಧ್ಯಾತ್ಮಿಕ ಅನುಭಾವದ ಅನುಭವವಿರೆ;
ಎಂದೆಂದೂ ನಿಮ್ಮ ಗೇಯ ಮಾಧುರ್ಯಕೆ ಕುಣಿವೆ ತಣಿದು,
ಇಂದು ವಂದಿಸುವೆನು ನಿಮಗೆ ಸಾಷ್ಟಾಂಗದಿ ಮಣಿದು ನೆನೆದು.

(ಶಬ್ದಾರ್ಥ: ಉದಧಿ=ಸಾಗರ, ಇಂಚರ=ಇಂಪಾದ ಧ್ವನಿ, ಅಂತರದಿ=ಮಧ್ಯೆ, ಬಿನದ=ವಿನೋದ, ಜೀವಕೋಶ=ಸೆಲ್‌, ಶಾರೀರ=ಕಂಠದ ನಾದ ಲಕ್ಷಣ, ಅನುದ್ವಿಗ್ನತೆ=ನಿರಾಕುಲತೆ (ಸಿರಿನಿಟಿ), ಈವ=ಕೊಡುವ, ನವಿರು=ಸೂಕ್ಷ್ಮ, ಸ್ಫುರಣ=ಕಂಪನ (ವಿವಿಧ ಗಮಕಗಳು), ರಸಾಲ=ರಸಭರಿತ ಮಾವು, ರಸದಾಳಿ ಕಬ್ಬು, ಬಕುಳ=ನಾಗಕೇಸರ ಹೂವು, ಮಲರ್‌=ಹೂವು, ಅತುಲ=ಹೋಲಿಕೆಯಿಲ್ಲದ, ಸಂತ=ಗೌರವಾರ್ಹವಾದ, ಪರ=ಶ್ರೇಷ್ಠ, ಅನುಭಾವ=ಸಾಕ್ಷಾತ್ಕಾರ, ಗೇಯ=ಗಾಯನಕ್ಕೆ ಸಂಬಂಧಿಸಿದ, ನಂದ=ಸಂತೋಷ.)



ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X