• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿವಾಹ ಒಪ್ಪಂದ ಪತ್ರಕ್ಕೆ ಅನು-ದೀಪಕ್‌ ಅಂಕಿತ

By Staff
|

ಮದುವೆಗೆ ಸರಿಯಾಗಿ ಇನ್ನೊಂದು ವಾರ ಇದೆ ಎನ್ನುವಾಗ ದೀಪಕ್‌ ಅನೂಳಿಗೆ ಕರೆ ಮಾಡಿದ. ''ನಾನು ಇವತ್ತು ಮೈಸೂರಿಗೆ ಬರುತ್ತಿದ್ದೇನೆ.""

''ಅದ್ಭುತ! ನಮ್ಮ ಮನೆಯವರಿಗೆ ಬಹಳ ಖುಷಿಯಾಗುತ್ತದೆ. ದಯವಿಟ್ಟು ಬಾ. ನಿಮ್ಮ ಮನೆಯವರೂ ಬರುತ್ತಿದ್ದಾರ?""

''ಇಲ್ಲ, ನಾನು ನನ್ನ ಕಾರ್‌ ಡ್ರೈವರ್‌ ಜೊತೆ ಬರುತ್ತಿದ್ದೇನೆ.""

ಕಾರಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಕೇವಲ 3 ಗಂಟೆಗಳ ಕಾಲದ ಪ್ರಯಾಣ. ಅವರ ಮನೆ ತಲುಪಿದ ದೀಪಕ್‌, ಊಟ ಮಾಡಿ, ಸ್ವಲ್ಪ ಹೊತ್ತು ನಿದ್ದೆ ಮಾಡಿದ! ಅವನು ಭಾರತದಲ್ಲಿ ರೂಢಿಯಲ್ಲಿರುವ ಆ ಸಹಜ ಅಭ್ಯಾಸಕ್ಕೆ ಹಿಂದಿರುಗುತ್ತಿದ.

ಮಧ್ಯಾಹ್ನದ ನಿದ್ದೆಯಿಂದ ಎದ್ದ ಮೇಲೆ ಅವನು ಅನು ಮತ್ತು ಅವಳ ಮನೆಯವರಿಗೆ, ''ಇಂದು ರಾತ್ರಿ ನಾನು ಅನೂಳನ್ನು ಲಲಿತ್‌ ಮಹಲ್‌ ಅರಮನೆಗೆ ಊಟಕ್ಕೆ ಕರೆದುಕೊಂಡು ಹೋಗುತ್ತೀನಿ,"" ಎಂದು ಹೇಳಿದ.

''ದೀಪಕ್‌, ಏನಿದು? ನಾವೇನು ಡೇಟ್‌ ಮಾಡುತ್ತಿರುವ ಹದಿಹರಯದವರಲ್ಲ, ನಿನಗೆ ಗೊತ್ತಲ್ಲ? ನನಗೆ ನನ್ನ ಮನೆಯವರೆಲ್ಲ ನಮ್ಮ ಜೊತೆ ಬರಬೇಕು.""

ಇದು ಎಲ್ಲರಿಗೂ ಮುಜುಗರ ಉಂಟುಮಾಡಿತು. ಅವರ ತಂದೆ ಮಧ್ಯಪ್ರವೇಶಿಸಿ ಹೇಳಿದರು, ''ಬೇಡ, ಪರವಾಗಿಲ್ಲ. ನೀವಿಬ್ಬರೆ ಹೋಗಿ.""

''ಇಲ್ಲ, ಅಪ್ಪ."" ಅನು ಪ್ರತಿಭಟಿಸಿದಳು. ''ದೀಪಕ್‌ ನಮ್ಮ ಅತಿಥಿ. ಆತ ಮಾಡುತ್ತಿರುವುದು ನನಗೆ ಇಷ್ಟವಾಗುತ್ತಿಲ್ಲ. ಯಾವಾಗಲೂ ಹೀಗೆ ಮಾಡುತ್ತಾನೆ. ನನ್ನನ್ನೊಂದು ಮಾತು ಕೇಳದೆ ಹೀಗೆ ಥಟ್ಟನೆ ಅಚ್ಚರಿ ಮಾಡಿಬಿಡುತ್ತಾನೆ.""

ದೀಪಕನಿಗೆ ನಿಜವಾಗಲೂ ಶಾಕ್‌ ಆಯಿತು. ತಾನು ಏನು ಹೇಳಿದರೂ ಅದಕ್ಕೆ ತಕ್ಕಂತೆ ನಡೆಯುತ್ತಿದ್ದ ಅವಳೊಂದಿಗೆ ಅವನಿಗೆ ಒಂದು ರೀತಿ ಆಭ್ಯಾಸವಾಗಿ ಹೋಗಿತ್ತು. ಈಗ, ಅವಳ ಪೋಷಕರ ಮನೆಯಲ್ಲಿ, ಅವರೆಲ್ಲರ ಮುಂದೆ, ಹೀಗೆ ಇಷ್ಟು ಒರಟಾದ ಅಸಮ್ಮತಿಯನ್ನು ಅವನು ನಿರೀಕ್ಷಿಸಿರಲಿಲ್ಲ.

ಅನು ಎಷ್ಟು ಸ್ಪಷ್ಟವಾಗಿ ಕಾಣುವ ಹಾಗೆ ಕೆರಳಿದ್ದಳು ಅಂದರೆ ಅವಳ ಮನೆಯವರು ಅವಳು ಮದುವೆಯನ್ನು ನಿರಾಕರಿಸಿಬಿಡುತ್ತಾಳೆ ಎಂದುಕೊಂಡರು. ಆ ಮುಜುಗರದ ಮೌನದಲ್ಲಿ ಆ ಪರಿಸ್ಥಿತಿಗೆ ಸರಿಯಾದುದನ್ನೇನಾದರೂ ಹೇಳಲು ಎಲ್ಲರೂ ಕಷ್ಟಪಡುತ್ತಿದ್ದರು.

''ಅನು,"" ದೀಪಕ್‌ ಸ್ವಲ್ಪ ಅಸಹಜವಾಗಿ ಮಾತನಾಡಲಾರಂಭಿಸಿದ. ''ನನ್ನನ್ನು ಕ್ಷಮಿಸು. ನಾನು ನಿನಗೆ ಮುಂಚೆಯೇ ಹೇಳಬೇಕಾಗಿತ್ತು. ನನಗೆ ನಿನ್ನ ಜೊತೆ ಖಾಸಗಿಯಾಗಿ ಮಾತನಾಡುವ ವಿಷಯವಿದೆ."" ಕ್ಷಮೆಯಾಚಿಸುವುದು ಅಷ್ಟು ಸುಲಭವಾಗಿರಲಿಲ್ಲ ಅವನಿಗೆ.

''ನಾವು ಮಹಡಿಯ ಮೇಲಿನ ಕೋಣೆಯಲ್ಲಿಯೆ ಮಾತಾಡಬಹುದು. ನಿನ್ನ ಜೊತೆ ಮಾತನಾಡುವುದಕ್ಕೆ ನನಗೆ ಪಂಚತಾರಾ ಹೋಟೆಲ್ಲೆ ಬೇಕಾಗಿಲ್ಲ.""

ಒಬ್ಬ ಸೇಲ್ಸ್‌ಮನ್‌ ಆಗಿ ಕಷ್ಟಕರ ಸಂದರ್ಭಗಳನ್ನು ನಿಭಾಯಿಸುವುದು ಅವನಿಗೆ ರೂಢಿಯಾಗಿತ್ತು. ಅವನ ಕಂಠ ಈಗ ಸ್ವಲ್ಪ ಮೆತ್ತಗಾಯಿತು. ''ನಾವು ಒಂದು ಲೋಟ ಕಾಫಿ ಕುಡಿಯಲು ಹೋಗೋಣವೇ, ಅನು? ನಾನು ನಿನ್ನ ಜೊತೆ ಒಂಟಿಯಾಗಿ ಮಾತನಾಡಬೇಕು.""

''ಸರಿ, ಹೋಗೋಣ. ನಾನು ಬಟ್ಟೆ ಬದಲಾಯಿಸಿಕೊಂಡು ಬರುತ್ತೇನೆ. ಒಂದು ನಿಮಿಷ ಕೊಡು.""

ಅವಳ ಪೋಷಕರ ಮನೆಯಿಂದ 30 ನಿಮಿಷಗಳ ದೂರವಿದ್ದ ಲಲಿತ್‌ ಮಹಲ್‌ ಅರಮನೆಗೆ ದೀಪಕ್‌ನ ಡ್ರೈವರ್‌ ಅವರನ್ನು ಕರೆದುಕೊಂಡು ಹೋದ. ಅನು ಕೋಪದಿಂದ, ಮೌನವಾಗಿಯೇ ಇದ್ದಳು. ಅವನ ಜೊತೆ ದೃಷ್ಟಿಯನ್ನು ತಪ್ಪಿಸಿಕೊಳುತ್ತ, ಕಾರಿನ ಹೊರಗಡೆಯ ದೃಶ್ಯಗಳಲ್ಲಿ ಮಗ್ನಳಾದಂತೆ ಇದ್ದಳು. ದೀಪಕ್‌ನನ್ನು ಮದುವೆಯಾಗುತ್ತಿರುವುದು ಸರಿಯಾದುದೆ? ಮೈಸೂರಿನ ಪ್ರತಿಯೊಂದು ರಸ್ತೆಯನ್ನು ಅವಳು ಗುರುತಿಸಿದಳು. ಎಲ್ಲ ಹುಡುಗಿಯರ ಹಾಗೆ ಅವಳು ಕೂಡ ದೊಡ್ಡವಳಾದ ನಂತರ ಒಬ್ಬ ಸುಂದರ ಹುಡುಗನನ್ನು ಮದುವೆಯಾಗುವ ಕನಸು ಕಂಡಿದ್ದಳು. ಈಗ, ಇಲ್ಲಿ, ಆ ಸುಂದರವಾದ ವ್ಯಕ್ತಿ ಅವಳ ಪಕ್ಕದಲ್ಲಿಯೇ ಇದ್ದಾನೆ. ಆದರೂ, ಅವನು ತನ್ನಿಂದ ತುಂಬಾ ದೂರವಿದ್ದ ಹಾಗೆ ಅನ್ನಿಸಿತು ಅವಳಿಗೆ. ನನಗೆ ಎಷ್ಟೋ ವಿಷಯಗಳಲ್ಲಿ ಹೊಂದಿಕೆಯಾಗದ, ನನಗೆ ಮೀರಿದ ವ್ಯಕ್ತಿಯೊಂದಿಗೆ ವ್ಯವಹರಿಸುತ್ತಿರುವ ಸಣ್ಣ-ಪಟ್ಟಣದ ಹುಡುಗಿ ನಾನು.

ಅನು ತನ್ನ ಕನಸುಗಳನ್ನು ಸಾಕಾರ ಮಾಡಿಕೊಳ್ಳಲು ಕಷ್ಟಪಟ್ಟಿದ್ದಳು. ಬಹಳ ಜನ ಅವಳನ್ನು ಯಶಸ್ವಿ ಎಂದು ಪರಿಗಣಿಸಿದ್ದರು. ಆದರೆ ಅವಳು ನಿಜವಾಗಲೂ ಯಶಸ್ಸು ಸಾಧಿಸಿದವಳೆ? ಮದುವೆಯನ್ನು ನಿಲ್ಲಿಸಿಬಿಡಲು ಈಗ ಕಾಲ ಮೀರಿಬಿಟ್ಟಿದೆಯೆ? ಅವಳು ವ್ಯವಹರಿಸುತ್ತಿರುವ ಈ ಸಮಾಜ ಅಮೇರಿಕ ಅಲ್ಲ. ಅದಕ್ಕಿಂತ ಬಹಳ ಭಿನ್ನವಾದದ್ದು. ಈಗಾಗಲೆ 3000 ಜನರನ್ನು ಮದುವೆಗೆ ಆಮಂತ್ರಿಸಿರುವ ಸಂದರ್ಭದಲ್ಲಿ, ಅವಳು ಕೂಡಲೆ ಮದುವೆಯನ್ನು ನಿಲ್ಲಿಸಿ ಅಮೇರಿಕಕ್ಕೆ ಹೋಗಿಬಿಡಲಾಗುವುದಿಲ್ಲ. ಅದು ದೀಪಕ್‌ನ ಮನೆಯವರಿಗೆ ಮಾತ್ರ ಮುಜುಗರ ಉಂಟುಮಾಡುವುದಿಲ್ಲ, ಅವಳ ಮನೆಯವರನ್ನು ಸಹ ಅಪಮಾನಕ್ಕೀಡು ಮಾಡುತ್ತದೆ.

ಅನೂಳ ಕಣ್ಣಿನಲ್ಲಿ ನೀರು ತುಂಬಿಕೊಂಡಿತು. ಆಗ ದೀಪಕ್‌ ಅವನ ಕೈಯನ್ನು ಅವಳ ಮಂಡಿಯ ಮೇಲೆ ಇಟ್ಟು ಅವಳ ಕಿವಿಯಲ್ಲಿ ಏನನ್ನೋ ಉಸುರಲು ಬಾಗಿದ್ದು ಅವಳಿಗೆ ಗೊತ್ತಾಯಿತು. ''ನಾನು ನಿನ್ನನ್ನು ಪ್ರೀತಿಸುತ್ತೇನೆ. ಅದು ನಿನಗೆ ಗೊತ್ತು, ಅಲ್ಲವೆ?""

''ದೀಪಕ್‌, ನಾನು ನಿನ್ನನ್ನು ಪ್ರೀತಿಸುತ್ತೇನೋ ಇಲ್ಲವೋ ಎನ್ನುವುದು ನಿನಗೆ ನಿಜವಾಗಲೂ ಬೇಕಾಗಿದೆಯ? ನೀನು ನನಗೆ ಗೊತ್ತೇ ಇಲ್ಲ ಎಂದು ನನಗೆ ಎಷ್ಟೋ ಸಲ ಅನ್ನಿಸುತ್ತೆ. ನೀನು ಒಬ್ಬ ಅಪರಿಚಿತ ಎನ್ನಿಸುತ್ತದೆ. ಕೆಲವೊಮ್ಮೆ ನಿನ್ನನ್ನು ನಾನು ಪ್ರೀತಿಸುತ್ತೇನೆ, ಆದರೆ, ಬಹಳಷ್ಟು ಸಲ ನಾನು ಸರಿಯಾದುದನ್ನು ಮಾಡುತ್ತಿದ್ದೇನೆಯೆ ಎಂದು ಸಂಶಯವಾಗುತ್ತದೆ. ನೀನು ಯಾವಾಗಲೂ ನನ್ನನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸುವ, ಯಜಮಾನಿಕೆ ತೋರುವವನಂತೆ ಕಾಣುತ್ತದೆ.""

ತನ್ನನ್ನು ಪ್ರತಿಪಾದಿಸಿಕೊಳ್ಳಲು ಏನನ್ನೂ ಅವನು ಹೇಳಲಿಲ್ಲ. ಅವರ ಕಾರು ಹೋಟೆಲ್‌ ಮುಂದೆ ಬಂದು ನಿಂತಿತು. ಅವರು ಒಳಗೆ ಅಡಿಯಿಡುತ್ತಿದ್ದಂತೆ ಅಲ್ಲಿನ ರಿಸೆಪ್ಷನಿಸ್ಟ್‌ ಮತ್ತು ಅಲ್ಲಿನ ಮೇಲ್ವಿಚಾರಕ ಅವರನ್ನು ಸ್ವಾಗತಿಸಿದರು. ಆಗಿನ್ನೂ ಸಂಜೆ 5.30 ಆಗಿತ್ತು. ಹೆಚ್ಚಿನ ರೆಸ್ಟಾರಂಟ್‌ಗಳಲ್ಲಿ 8.00 ಗಂಟೆ ಆದ ಮೇಲೆಯೆ ಊಟದ ವ್ಯವಸ್ಥೆ ಆಗುವುದು. ಕೇವಲ ಕಾಫಿಗೋಸ್ಕರ ಅಲ್ಲಿಗೆ ಬಂದಿದ್ದಕ್ಕೆ ಅವಳಿಗೆ ಒಂದು ರೀತಿಯ ಮುಜುಗರವಾದಂತಾಯಿತು.

ಅವರು ಕೂರುತ್ತಿದ್ದಂತೆ ವೈಟರ್‌ ಪ್ರತ್ಯಕ್ಷನಾದ. ದೀಪಕ್‌ ಎರಡು ಗ್ಲಾಸ್‌ ಕಾಫಿ ಹೇಳಿದ. ಅವನು ಕಾರಿನಿಂದ ಬರುತ್ತ ತನ್ನ ಜೊತೆ ಒಂದು ಫೈಲ್‌ ತಂದಿದ್ದ. ಈಗ ಅದನ್ನು ಅವಳ ಮುಂದೆ ಟೇಬಲ್‌ ಮೇಲೆ ಇಟ್ಟು, ಅವಳನ್ನು ದಿಟ್ಟಿಸಲಾಗದೆ ಆ ಫೈಲನ್ನೆ ನೋಡುತ್ತ ಕುಳಿತ. ''ನಿನಗೆ ಇದನ್ನು ಮುಂಚೆಯೇ ಹೇಳಬೇಕಿತ್ತು ಎಂದು ನನಗೆ ಗೊತ್ತು, ಅನು. ನಾನು ನನ್ನ ಆಸ್ತಿಯನ್ನು ರಕ್ಷಿಸಿಕೊಳ್ಳಬೇಕು. ಅದಕ್ಕೆ ನೀನು ಈ ಕಾಗದಪತ್ರಗಳಿಗೆ ಸಹಿ ಹಾಕಬೇಕು.""

ಹೇಗೋ ಏನೋ, ಅದರಿಂದ ಅವಳಿಗೆ ಸ್ವಲ್ಪವೂ ಆಶ್ಚರ್ಯವಾಗಲಿಲ್ಲ. ಅವನು ಇನ್ನೂ ಯಾಕೆ ವಿವಾಹಪೂರ್ವ ಓಡಂಬಡಿಕೆಯ ವಿಷಯ ಎತ್ತುತ್ತಿಲ್ಲ ಅಂದು ಅವಳು ಆಗಾಗ ಯೋಚಿಸುತ್ತಿದ್ದಳು. ವಿಚ್ಛೇದನದ ಪರಿಸ್ಥಿತಿಯೇನಾದರೂ ಬಂದರೆ, ಅಂತಹ ಒಡಂಬಡಿಕೆಯಿಲ್ಲದಿದ್ದಲ್ಲಿ ಕಾನೂನಿನ ಪ್ರಕಾರ ಅವನು ತುಂಬ ಕಳೆದುಕೊಳ್ಳಬೇಕಾಗುತ್ತದೆ. ಕ್ಯಾಲಿಫೋರ್ನಿಯಾದ ಕಾನೂನು ಅವನು ತನ್ನ ಅರ್ಧ ಅಸ್ತಿಯನ್ನು ತನ್ನ ಹೆಂಡತಿಗೆ ಕೊಡಬೇಕೆಂದು ಹೇಳುತ್ತದೆ.

''ದೀಪಕ್‌, ನೀನು ಇಷ್ಟು ದೂರ ನನ್ನನ್ನು ಕರೆದುಕೊಂಡು ಬರುವ ಅವಶ್ಯಕತೆ ಇರಲಿಲ್ಲ. ನಾನು ಇವಕ್ಕೆ ಮನೆಯಲ್ಲೆ ಸಹಿ ಹಾಕುತ್ತಿದೆ. ನಾನು ಈ ಮದುವೆಯನ್ನು ಹಣಕ್ಕೋಸ್ಕರ ಆಗುತ್ತಿಲ್ಲ ಎಂದು ನೀನು ಇಷ್ಟು ಹೊತ್ತಿಗೆ ಅರ್ಥ ಮಾಡಿಕೊಳ್ಳಬೇಕಿತ್ತು. ಬದಲಿಗೆ ನಿನ್ನ ಶ್ರೀಮಂತಿಕೆ ನನಗೆ ಮುಜುಗರ ಉಂಟುಮಾಡುತ್ತದೆ. ನಿನ್ನ ಹತ್ತಿರ ಚಿಕ್ಕ ಮನೆ ಮತ್ತು ಸಾಮಾನ್ಯವಾದ ಕಾರು ಇದ್ದಿದ್ದರೆ ನನಗೆ ಇನ್ನೂ ಸಂತೋಷವಾಗುತಿತ್ತು ಎಂದು ನನಗೆ ಆಗಾಗ ಅನ್ನಿಸುತ್ತದೆ.""

ಅವನ ಕಣ್ಣು ತೇವವಾದವು. ಅವಳ ಮಾತು ಅವನ ಮನಸ್ಸನ್ನು ತಟ್ಟಿದಂತೆ ಅನಿಸಿತು. ತನ್ನ ಆಸ್ತಿಯ ಮೇಲೆ ಯಾವ ಆಸಕ್ತಿಯೂ ಇಲ್ಲದೆ, ಪ್ರಾಮಾಣಿಕವಾಗಿ ತನ್ನನ್ನು ಪ್ರೀತಿಸುವ ಹೆಣ್ಣು ದೊರಕುವುದು ಎಷ್ಟು ಕಷ್ಟ ಎಂದು ಅವನಿಗೆ ಈಗಾಗಲೆ ಗೊತ್ತಾಗಿತ್ತು. ಅವನಿಗೆ ಈಗ ಯಾರಾದರು ಅವನನ್ನು ಪ್ರೀತಿಸಬೇಕು. ಅವನು ಪ್ರೀತಿಸಲ್ಪಡಲೋಸುಗ ಹತಾಶನಾಗಿದ್ದಾನೆ. ಅವನು ಭೇಟಿಯಾದ ಹೆಣ್ಣುಗಳಲ್ಲೆಲ್ಲ ಪ್ರಾಮಾಣಿಕಳಾದವಳು ನಾನೇ ಇರಬೇಕು.

''ಅನು, ಇದನ್ನು ಮಾಡಲೇಬೇಕಾಗಿ ಬಂದದ್ದಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ನೀನು ನಿನ್ನ ಆಸ್ತಿಯನ್ನು ಸಹ ರಕ್ಷಿಸಿಕೊಳ್ಳಲು ಅನುಕೂಲವಾಗುವಂತೆ ಈ ಕಾಗದಪತ್ರಗಳನ್ನು ಸಿದ್ದಪಡಿಸಲು ನನ್ನ ಲಾಯರ್‌ಗೆ ಸ್ಪಷ್ಟವಾಗಿ ಹೇಳಿದ್ದೇನೆ.""

''ನಾನು ಅದನ್ನು ಪ್ರಶಂಸಿಸುತ್ತೇನೆ. ಸಹಿ ಹಾಕುವ ಮುಂಚೆ ನಾನು ಇದನ್ನು ಸ್ವಲ್ಪ ಬೇಗ ಓದಿಬಿಡಲೆ?""

''ಅವಸರವೇನಿಲ್ಲ, ಬೇಕಾದಷ್ಟು ಸಮಯ ತೆಗೆದುಕೊ. ಇದನ್ನು ಇಷ್ಟು ತಡವಾಗಿ ನಿನ್ನ ಗಮನಕ್ಕೆ ತಂದಿದ್ದು ನನ್ನ ತಪ್ಪು. ಆದರೆ ಅಲ್ಲಿ ಇರುವಾಗ ಇದರ ಬಗ್ಗೆ ಗಮನ ಕೊಡುವುದಕ್ಕೆ ಆಗಿರಲಿಲ್ಲ. ನನ್ನ ಲಾಯರ್‌ ನಿನ್ನೆ ತಾನೆ ಕಾಗದಗಳನ್ನು ಕಳುಹಿಸಿದ. ನಾನು ಇದನ್ನು ಮಾಡಬೇಕೆ ಬೇಡವೆ ಎನ್ನುವುದರ ಬಗ್ಗೆ ನನಗೇ ದೃಢವಾಗಿರಲಿಲ್ಲ, ಆದರೆ ನನ್ನ ಲಾಯರ್‌ ಒತ್ತಾಯ ಮಾಡಿದ.""

ಇಂತಹ ಒಪ್ಪಂದ ಪತ್ರಗಳನ್ನು ಓದುವುದರಲ್ಲಿ ಅನು ಎಂದೂ ಪರಿಣಿತಳಾಗಿರಲಿಲ್ಲ. ಹಾಗಾಗಿ ಅವಳು ಆ ದುಬಾರಿ ವೇತನ ಪಡೆಯುವ ಲಾಯರ್‌ಗಳನ್ನು ನಂಬುತ್ತಿದ್ದಳು. ''ನೀನು ಮಾಡಿರುವುದನ್ನು ಸಮರ್ಥಿಸಿಕೊಳ್ಳುವ ಅಗತ್ಯ ಇಲ್ಲ, ದೀಪಕ್‌. ಇದನ್ನು ಮಾಡುವುದು ನಮ್ಮಿಬ್ಬರಿಗೂ ಒಳ್ಳೆಯದು.""

ಅವಳು ಬೇಗನೆ ಆ ದಾಖಲೆಪತ್ರಗಳ ಮೇಲೆ ಕಣ್ಣಾಡಿಸಿದಳು. ಆದರಲ್ಲಿ ಮೂಲಭೂತವಾಗಿ, ಕಾನೂನುಬದ್ಧವಾಗಿ ಅವರ ವಿವಾಹ ವಿಚ್ಛೇದನವಾದಲ್ಲಿ ದೀಪಕ್‌ ಮತ್ತು ಆನು ತಮ್ಮ ಆಸ್ತಿಯನ್ನು ತಾವೇ ಇಟ್ಟುಕೊಳ್ಳುವ ಹಾಗೆ ಮತ್ತು ಬೇರೆಯವರ ಆಸ್ತಿಯ ಮೇಲೆ ಹಕ್ಕು ಸಾಧಿಸುವ ಹಾಗೆ ಇಲ್ಲ ಎಂದು ಬರೆದಿತ್ತು. ಜೊತೆಗೆ ಇಬ್ಬರೂ ಬೇರೆ ಬೇರೆ ಬ್ಯಾಂಕ್‌ ಆಕೌಂಟ್‌ಗಳನ್ನು ಇಟ್ಟುಕೊಳ್ಳಬೇಕೆಂದು ಸಹ ಬರೆದಿತ್ತು. ಭಾರತದಲ್ಲಿ ಈ ತರಹದ ವಿವಾಹಪೂರ್ವ ಒಪ್ಪಂದಗಳ ಬಗ್ಗೆ ಯಾರಿಗೂ ಹೆಚ್ಚಿಗೆ ಗೊತ್ತಿಲ್ಲದಿದ್ದರೂ, ಅಮೇರಿಕದಲ್ಲಿನ ದೂರದರ್ಶನ ಕಾರ್ಯಕ್ರಮಗಳು ಅಂತಹ ವಿಷಯಗಳ ಬಗ್ಗೆ ಅವಳಿಗೆ ತಿಳುವಳಿಕೆ ಉಂಟುಮಾಡಿದ್ದವು. ಆದರೆ ಆ ತರಹದ ಒಪ್ಪಂದ ಪತ್ರವೊಂದನ್ನು ಅವಳು ಸ್ವತಃ ನೋಡಿರಲಿಲ್ಲ.

''ಇದು ಸರಿಯಾಗಿದೆ ಎಂದು ಅನಿಸುತ್ತದೆ ನನಗೆ. ಇದಕ್ಕೆ ನಾನು ಸಹಿ ಹಾಕುತ್ತೇನೆ."" ಅನೂಗೆ ಅದರ ಬಗ್ಗೆ ಆಸಕ್ತಿಯೆ ಹೊರಟುಹೋಗಿ, ಆ ಕೆಲಸವನ್ನು ಮುಗಿಸಿಬಿಡಲು ಹಾತೊರೆದಳು. ತಾನು ಸಹಿ ಹಾಕಲು ಗುರುತು ಹಾಕಿದ್ದ ಜಾಗಗಳನ್ನು ಹುಡುಕಲಾರಂಭಿಸಿದಳು. ಆಗಲೂ ಅವನು ಅವಳನ್ನು ಒತ್ತಾಯ ಮಾಡಿದ, ""ಈಗ ಮಾಡುತ್ತಿರುವುದು ಸರಿಯಾದ ಕೆಲಸ ಎಂದು ನಿನಗೆ ಖಚಿತವಾಗಿ ಅನಿಸುತ್ತದೆಯೆ?""

''ಖಂಡಿತ, ದೀಪಕ್‌... ತಗೊ, ಎಲ್ಲಾ ಸಹಿಗಳನ್ನು ಹಾಕಿಬಿಟ್ಟೆ."" ಅವಳು ಎದ್ದು ನಿಂತಳು. ''ನಾವು ಈಗ ಮನೆಗೆ ಹೋಗೋಣವೆ?""

''ನಿನಗೆ ಬೇಜಾರಾಗಿಲ್ಲವೆಂದು ಅಂದುಕೊಳುತ್ತೇನೆ, ಅನು.""

''ಖಂಡಿತ ಇಲ್ಲ. ನಿನ್ನಷ್ಟೆ ದುಡ್ಡು ನನ್ನ ಹತ್ತಿರವೂ ಇದ್ದಿದ್ದರೆ - ಅದು ಎಷ್ಟೇ ಇರಲಿ, ಅದು ಎಷ್ಟು ಎಂದು ನನಗೆ ಗೊತ್ತೇ ಇಲ್ಲ - ನಾನೂ ಖಂಡಿತ ಇದನ್ನೇ ಮಾಡುತ್ತಿದ್ದೆ."" ಅರ್ಧಕಿಂತ ಹೆಚ್ಚು ಅಮೇರಿಕನ್‌ ಮದುವೆಗಳು ವಿಚ್ಛೇದನದಲ್ಲಿ ಕೊನೆಯಾಗುತ್ತವೆ ಎಂಬ ವಿಷಯ ಗೊತ್ತಿದ್ದ ಅವಳು, ದೀಪಕ್‌ ಸರಿಯಾದುದನ್ನು ಮಾಡುತ್ತಿಲ್ಲ ಎಂದೇನೂ ಅಂದುಕೊಳ್ಳಲಿಲ್ಲ.

ಆದರೆ ಇದೆಲ್ಲದರಿಂದಾಗಿ ತಮ್ಮ ಮಧ್ಯೆ ರಹಸ್ಯಗಳು ಉಳಿಯುತ್ತವೆ ಎಂಬ ಅರಿವಾಗಿ ಅವಳಿಗೆ ಸಂಕಟವಾಯಿತು. ಆದರೆ ಏಕೋ ಅದನ್ನು ಅವನಿಗೆ ಹೇಳುವ ಮನಸ್ಸಾಗಲಿಲ್ಲ. ಆದರೆ ಅವನು ಅದನ್ನು ನಿಭಾಯಿಸಿದ ರೀತಿ - ಮೈಸೂರಿಗೆ ಬಂದಿದ್ದು, ಒಬ್ಬಳನ್ನೆ ಸಹಿ ಮಾಡಿಸಿಕೊಳ್ಳಲು ಕರೆದುಕೊಂಡು ಬಂದಿದ್ದು - ಅವಳಿಗೆ ಕೋಪ ತರಿಸಿತು. ಆದರೆ ಅವನ ಕೃತ್ಯಗಳನ್ನು ಪ್ರಶ್ನಿಸುವುದರಲ್ಲಿ ಅವಳು ಪೂರ್ವಾಗ್ರಹಪೀಡಿತಳಾಗಿದ್ದಳೆ? ಮೊದಲಿನಿಂದಲೂ ಅವಳ ಬಗ್ಗೆ ಅವನು ಧಾರಾಳಿಯಾಗಿದ್ದ ಹಾಗೂ ಮುಂದೆಯೂ ಅವನು ಹಾಗೆ ಇರುತ್ತಾನೆ ಎನ್ನುವುದರ ಬಗ್ಗೆ ಅವಳಿಗೆ ಯಾವ ಸಂಶಯವೂ ಇರಲಿಲ್ಲ.

''ಅನು, ನಾನು ನಿನ್ನನ್ನು ಬೆಂಬಲಿಸುತ್ತೇನೆ ಹಾಗೂ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಇನ್ನು ಮುಂದಕ್ಕೆ ನೀನು ಯಾವುದಕ್ಕೂ ದುಡ್ಡು ಕೊಡುವುದು ಬೇಕಾಗಿಲ್ಲ. ಹಾಗೂ ನಿನ್ನ ಹಣಕಾಸಿನ ಬಗ್ಗೆ ನಾನೆಂದೂ ವಿಚಾರಿಸುವುದಿಲ್ಲ. ನಿನಗೆ ಬೇಕಾದುದಕ್ಕೆ ಖರ್ಚು ಮಾಡಲು ನಾನು ನನ್ನ ಕ್ರೆಡಿಟ್‌ ಕಾರ್ಡ್‌ ಕೊಡುತ್ತೇನೆ.""

''ಥ್ಯಾಂಕ್ಸ್‌, ಆದರೆ ಅದರ ಅಗತ್ಯವಿಲ್ಲ."" ಅವಳು ಟೇಬಲಿನ ಇನ್ನೊಂದು ಬದಿಗೆ ಕೈಚಾಚಿ ಅವನ ಕೈಯನ್ನು ಹಿಡಿದುಕೊಂಡಳು. ""ನಾನು ಕೇವಲ ಒಂದು ವಿಷಯಕ್ಕೆ ಮಾತ್ರ ಪ್ರಾಮುಖ್ಯತೆ ಕೊಡುತ್ತೇನೆ, ದೀಪಕ್‌. ನನ್ನೊಂದಿಗೆ ನೀನು ಪ್ರಾಮಾಣಿಕವಾಗಿರುವುದಷ್ಟೆ ಬೇಕು ನನಗೆ. ಎಂದಿಗೂ ಯಾವುದರ ಬಗ್ಗೆಯೂ ಸುಳ್ಳು ಹೇಳಬೇಡ. ನಾನು ನಿನ್ನ ಜೊತೆಗಿರುವ ಒಂದೇ ಕಾರಣ ಏನೆಂದರೆ ನಾನು ನಿನ್ನನ್ನು ಇಷ್ಟ ಪಡುತ್ತೇನೆ. ಮತ್ತೇನೂ ನನಗೆ ಮುಖ್ಯವಲ್ಲ.""

''ಅನು, ನಾನು ನಿನ್ನನ್ನು ಪ್ರೀತಿಸುತ್ತೇನೆ. ನಿನ್ನ ಭಾವನೆಗಳನ್ನು ನೋಯಿಸುವ ಏನನ್ನೂ ನಾನು ಮಾಡುವುದಿಲ್ಲ. ಕೆಲವೊಮ್ಮೆ ನಾನು ಬೇರೆ ತರಹ ಮಾತನಾಡುತ್ತೇನೆ, ನೀನು ಅದನ್ನು ಅರ್ಥ ಮಾಡಿಕೊಂಡಿರುವೆ ಎಂದುಕೊಂಡಿದ್ದೇನೆ. ಒಬ್ಬನೆ ಮಗನಾದ್ದರಿಂದ ಕೆಲವು ಸಲ ಅನಿರೀಕ್ಷಿತವಾಗಿ ನಡೆದುಕೊಂಡುಬಿಡುತ್ತೇನೆ.""

''ಈಗ ನಾವು ಹೋಗೋಣ. ನಮ್ಮ ಮನೆಯವರು ಕಾಯುತ್ತಿರುತ್ತಾರೆ.""

ದೀಪಕ್‌ ಜನರನ್ನು ಯಾವಾಗಲೂ ಬಹಳ ಔಚಿತ್ಯಪೂರ್ಣವಾಗಿ ವಿನಯದಿಂದ ಮಾತನಾಡಿಸುತ್ತಿದ್ದ. ಅವಳನ್ನು ಮನೆಗೆ ತಲುಪಿಸಿದ ನಂತರ ಮನೆಯ ಒಳಗೆ ಹೋಗಿ ಅವಳ ಪೋಷಕರ ಹತ್ತಿರ ಸ್ವಲ್ಪ ಹೊತ್ತು ಮಾತನಾಡಿ, ನಂತರ ತನ್ನ ಡೈವರ್‌ ಜೊತೆ ಬೆಂಗಳೂರಿಗೆ ಹಿಂದಿರುಗಿದ.

ಅನು ತನ್ನ ಪೋಷಕರಿಗೆ ತಮ್ಮಿಬ್ಬರ ನಡುವೆ ಆದ ಮಾತುಕತೆಯನ್ನು ವಿವರಿಸಿದಳು.

''ಇದು ಸದ್ಯಕ್ಕೆ ಅಪ್ರಿಯ ಎಂದು ಕಾಣಿಸಿದರೂ, ಮುಂದಕ್ಕೆ ಯೋಚಿಸಿದರೆ ಈಗ ಮಾಡಿದ್ದು ಒಳ್ಳೆಯದೆಂದೆ ಅನ್ನಿಸುತ್ತದೆ"" ಎಂದು ಅವಳ ಅಪ್ಪ ಹೇಳಿದರು. ಅಪ್ಪ ಯಾಕೆ ಯಾವಾಗಲೂ ಸರಿ?

(ಸಶೇಷ)

ಅಧ್ಯಾಯ - 23 ಅಧ್ಯಾಯ - 25

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more