ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಕ್‌ ಹೆಂಡತಿ ರೂಪಳಿಂದ ಅನುಗೆ ಫೋನ್‌!

By Staff
|
Google Oneindia Kannada News


ಇಂಗ್ಲಿಷ್‌ ಮೂಲ : ಅಸಿತ ಪ್ರಭುಶಂಕರ
ಕನ್ನಡಕ್ಕೆ : ರವಿ ಕೃಷ್ಣಾ ರೆಡ್ಡಿ

[email protected]

ಒಂದು ವಾರದ ನಂತರ ಎಂದಿನಂತೆ ತಡವಾಗಿ ಬೆಳಿಗ್ಗೆ ಸುಮಾರು 9 ಗಂಟೆ ಸುಮಾರಿನಲ್ಲಿ ಅನು ಕಾರಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಆಗ ಒಂದು ಸೆಲ್‌ ಪೋನ್‌ ಕರೆ ಬಂತು. ಯಾಂತ್ರಿಕವಾಗಿ ಅವಳು ಮಾತನಾಡುವ ಗುಂಡಿ ಒತ್ತಿ, ‘‘ನಾನು ಅನು’’ ಎಂದಳು. ಆದರೆ ತಕ್ಷಣ ಪೋನ್‌ ಕರೆ ತುಂಡಾಯಿತು. ಸ್ವಲ್ಪ ಹೊತ್ತಿನ ನಂತರ ಮತ್ತೆ ಪೋನ್‌ ಬಂತು. ಆದರೆ ಆಗಲೂ ಸಹ ಇನ್ನೊಂದು ಬದಿಯಿಂದ ಯಾರೂ ಮಾತನಾಡಲಿಲ್ಲ. ಎರಡೂ ಸಲ ಪೋನಿನ ತೆರೆ ‘ಅನ್‌ಐಡೆಂಟಿಫೈಡ್‌ ಕಾಲರ್‌’ ಎಂದು ತೋರಿಸಿತ್ತು.

ಅವಳಿಗೆ ಅದು ದೀಪಕ್‌ನೇ ಆಗಿರಬೇಕು ಎಂಬ ಭಯದ ಭಾವನೆ ಹುಟ್ಟಿತು. ಬೇರೆ ಯಾರು ತಾನೆ ಹಾಗೆ ಕರೆ ಮಾಡಿ ಮಾತನಾಡದೆ ತುಂಡು ಮಾಡುತ್ತಾರೆ?

ಅಂದಿನ ಉಳಿಕೆ ದಿನವನ್ನು ಅನು ತನ್ನ ಕಂಪನಿಯ ಗ್ರಾಹಕರನ್ನು ಭೇಟಿಯಾಗುವುದರಲ್ಲಿ ಕಳೆದಳು. ವ್ಯವಹಾರದ ಮಾತುಕತೆ ನಡೆಯುತ್ತಿರುವಾಗ ಪೋನ್‌ ಸಂಭಾಷಣೆಯಲ್ಲಿ ನಿರತವಾಗುವುದಿರಲಿ, ಪೋನ್‌ ಕರೆಗೆ ಉತ್ತರಿಸುವುದು ಸಹ ಎಲ್ಲರ ಸಮಯವನ್ನು ಹಾಳು ಮಾಡುತ್ತದೆ ಎಂದು ಅವಳು ಯೋಚಿಸಿದಳು! ಹಾಗಾಗಿ ತನ್ನ ಪೋನನ್ನು ಕಾರಿನಲ್ಲೆ ಬಿಟ್ಟು ಹೋಗಿದ್ದಳು.

ಅವಳು ಕಾರಿಗೆ ಹಿಂದಿರುಗಿದಾಗ ತನ್ನ ಸೆಲ್‌ಪೋನಿನ ತೆರೆಯನ್ನು ಗಮನಿಸಿದಳು. ಒಂಬತ್ತು ಮಿಸ್ಸ್‌ಡ್‌ ಕರೆಗಳು, ಹಾಗೂ ಅವೆಲ್ಲವೂ ನಿಗೂಢವಾದ ‘ಅನ್‌ಐಡೆಂಟಿಫೈಡ್‌ ಕಾಲರ್‌’ನಿಂದ ಬಂದಿದ್ದವಾಗಿದ್ದವು.

ಈಗ ಅವು ಖಂಡಿತ ದೀಪಕ್‌ನದೆ ಎಂದು ಅವಳಿಗೆ ಖಚಿತವಾಯಿತು. ಅದರೊಂದಿಗೆ ಮನಸ್ಸಿನಲ್ಲಿ ಪ್ರಶ್ನೆಗಳ ಅಲೆಗಳೆದ್ದವು. ನನ್ನನ್ನು ಕಳೆದುಕೊಂಡಿದ್ದಕ್ಕೆ ಅವನಿಗೆ ವಿಷಾದವಾಗುತ್ತಿದೆಯೆ? ನಾನು ಇನ್ನೆಂದೂ ಮಕ್ಕಳನ್ನು ಹೆರಲು ಸಾಧ್ಯವಿಲ್ಲ ಎಂದು ಅವನಿಗೆ ಪಶ್ಚಾತ್ತಾಪವಾಗುತ್ತಿದೆಯೆ? ಅವನು ಕ್ಷಮೆ ಬೇಡಲು ಕರೆ ಮಾಡುತ್ತಿದ್ದಾನಾ? ನಾನು ಅವನನ್ನು ಕ್ಷಮಿಸಬಲ್ಲೆನೆ?

ಇದೇ ರೀತಿಯ ಕರೆ ಮಾಡಿ ತುಂಡು ಮಾಡುವ ಆಗಂತುಕನ ಕೆಲಸ ಮುಂದಿನ ಒಂದು ತಾಸಿನವರೆಗೂ ನಡೆದು, ಕೊನೆಗೂ ಇನ್ನೊಂದು ಬದಿಯಲ್ಲಿನ ಸ್ವರ ಮಾತನಾಡಿತು. ‘‘ನಾನು ರೂಪ, ದೀಪಕ್‌ನ ಹೆಂಡತಿ.’’

ಅನೂಗೆ ಅದು ಬಹಳ ಅನಿರೀಕ್ಷಿತವಾಗಿತ್ತು. ‘‘ನೀನು ದೀಪಕ್‌ ರಂಜನ್‌ನ ಹೆಂಡತಿ ಎಂದು ಹೇಳಿದೆಯ?’’

‘‘ಹೌದು.’’ ಅವಳ ಧ್ವನಿ ನಡುಗುತ್ತಿತ್ತು. ಅವಳ ಸ್ವರದಿಂದ ಅವಳು ಇನ್ನೂ ಚಿಕ್ಕವಳು ಎನ್ನುವ ರೀತಿ ತೋರಿತು. ‘‘ಅನು, ನನಗೆ ನಿನ್ನ ಸಹಾಯ ಬೇಕು. ನಾವು ಯಾವಾಗ ಮಾತನಾಡಬಹುದು? ನಾನೀಗ ಕೇವಲ ಎರಡು ಅಥವ ಮೂರು ನಿಮಿಷ ಮಾತ್ರ ಮಾತನಾಡಬಹುದು. ಅವನೇನಾದರೂ ಮನೆಗೆ ಪೋನ್‌ ಮಾಡಿದಾಗ ಅದೇನಾದರೂ ಎಂಗೇಜ್‌ ಆಗಿದ್ದರೆ ಆಮೇಲೆ ನಾನು ಯಾರ ಜೊತೆ ಮಾತನಾಡುತ್ತಿದ್ದೆ ಎಂದು ಕೇಳುತ್ತಾನೆ.’’

ಅಮೇರಿಕದಲ್ಲಿ ಪೋನು ಬ್ಯುಸಿಯಾಗಿದೆ ಎಂದು ಹೇಳಿದರೆ, ಅದನ್ನೆ ಭಾರತದಲ್ಲಿ ‘ಎಂಗೇಜ್‌ ಆಗಿದೆ’ ಎಂದು ಹೇಳುತ್ತಾರೆ ಎನ್ನುವುದನ್ನು ಅನು ಮರೆತೇ ಹೋಗಿದ್ದಳು. ದೀಪಕ್‌ ಭಾರತದಲ್ಲಿ ಅರೇಂಜ್‌ಡ್‌ ಮದುವೆ ಮಾಡಿಕೊಂಡು ಬಂದಿದ್ದಾನೆ ಎಂದು ಅವಳಿಗೀಗ ಮನವರಿಕೆಯಾಯಿತು.

ಇದೆಲ್ಲದರಿಂದ ಒಂದು ರೀತಿಯಲ್ಲಿ ಗಾಬರಿಯಾಗಿ, ಫ್ರೀವೇಯಿಂದ ಎಕ್ಸಿಟ್‌ ತೆಗೆದುಕೊಂಡ ಅನು ಕಾರನ್ನು ಪೆಟ್ರೋಲ್‌ ಬಂಕೊಂದರಲ್ಲಿ ನಿಲ್ಲಿಸಿದಳು. ತಕ್ಷಣಕ್ಕೆ ಆದ ಆಘಾತದಿಂದಾಗಿ ಅವಳು ಬೆವರಲಾರಂಭಿಸಿದ್ದಳು. ತಾಜಾ ಗಾಳಿಗಾಗಿ ಕಿಟಕಿ ಗಾಜನ್ನು ಕೆಳಗಿಳಿಸಿದಳು.

‘‘ರೂಪ? ನಿನಗೆ ಯಾವಾಗ ಮಾತನಾಡಲು ಸಾಧ್ಯವೊ ಆಗ ನನಗೆ ಕರೆ ಮಾಡು.’’

‘‘ನಿನ್ನ ಪೋನ್‌ ಸಂಖ್ಯೆಯನ್ನು ನಾನು ದೀಪಕ್‌ನ ವಿಳಾಸ ಪುಸ್ತಕದಿಂದ ಪಡೆದುಕೊಂಡೆ. ಆದರೆ ನನ್ನ ಹತ್ತಿರ ಪೋನ್‌ ಇರಲಿಲ್ಲ. ನಾನು ನನ್ನ ಮನೆಯವರೊಂದಿಗಾಗಲಿ ಅಥವ ಬೇರೆ ಯಾರೊಂದಿಗೇ ಆಗಲಿ ಮಾತನಾಡಲು ಆಗದೇ ಇರಲೆಂದು ದೀಪಕ್‌ ಪ್ರತಿದಿನ ಪೋನ್‌ ಅನ್ನು ತೆಗೆದುಕೊಂಡು ಹೋಗಿಬಿಡುತ್ತಾನೆ.’’

‘‘ಅವನು ಪೋನನ್ನು ತೆಗೆದುಕೊಂಡು ಹೋಗುತ್ತಾನೆ ಎಂದೆಯ ನೀನು?’’

‘‘ಹೌದು, ಅವನಿಗೆ ನಾನು ಯಾರ ಜೊತೆಯೂ ಮಾತನಾಡುವುದು ಬೇಡ.’’

‘‘ನಾನು ನಿನ್ನನ್ನು ನಂಬುತ್ತೇನೆ, ರೂಪ.’’ ಇಷ್ಟೊತ್ತಿಗೆ ದೀಪಕ್‌ ನಿಜವಾಗಲೂ ಒಬ್ಬ ರಾಕ್ಷಸನಾಗಿ ಬದಲಾಗಿಬಿಟ್ಟಿದ್ದಾನೆ. ‘‘ಅವನ ಬಗ್ಗೆ ನೀನು ಏನು ಹೇಳಿದರೂ ನಾನು ನಂಬುತ್ತೇನೆ. ನೀನು ಯಾವಾಗ ಮದುವೆಯಾದದ್ದು?’’

ಆದರೆ ಅಷ್ಟೊತ್ತಿಗೆ ಪೋನ್‌ ಕರೆ ಮುಗಿಯಿತು. ರೂಪ ಕರೆ ತುಂಡು ಮಾಡಿದ್ದಳು. ಅವಳಿಗೆ ಬಹಳ ಹೊತ್ತು ಮಾತನಾಡಲು ನಿಜವಾಗಲೂ ಬಹಳ ಭಯವಾಗಿರಬೇಕು.

ಅನು ಜಿಗುಪ್ಸೆಯಿಂದ ತಲೆ ತಗ್ಗಿಸಿಕೊಂಡು ಕಾರಿನ ಸ್ಟೀರಿಂಗ್‌ ವ್ಹೀಲ್‌ ಮೇಲೆ ವಾಲಿದಳು. ಬಹುಶಃ ಅವಳು ಅಷ್ಟೊಂದು ಪ್ರಶ್ನೆಗಳನ್ನು ಕೇಳಬಾರದಿತ್ತು. ಅದು ಹೇಗೆ ದೀಪಕ್‌ ಇಷ್ಟು ಬೇಗ ಮದುವೆಯಾದ? ಅವಳನ್ನು ಎಲ್ಲರಿಂದ ದೂರ ಇಡಲು ದೀಪಕ್‌ ತನ್ನ ಜೊತೆ ಪೋನನ್ನು ತೆಗೆದುಕೊಂಡು ಹೋಗುತ್ತಿರಬಹುದು. ಆದರೆ ಈಗ ಯಾಕೆ ರೂಪ ಇವಳಿಗೆ ಕರೆ ಮಾಡುತ್ತಿದ್ದಾಳೆ? ಅವಳು ಹತಾಷಳಾಗಿರಬಹುದು.

ಈಗ ಅನೂಗೆ ಪಾಪಭೀತಿಯ ಚಳಕು ಹೊಡೆಯಿತು. ಅವನು ನನಗೆ ಮಾಡಿದ್ದನ್ನೆಲ್ಲ ಯಾಕೆ ನಾನು ಇನ್ನೊಬ್ಬರಿಗೆ ಹೇಳಲಿಲ್ಲ? ಅನು ತಾನು ಸುಮ್ಮನೆ ಇದ್ದುಬಿಡುವ ನಿರ್ಧಾರ ತೆಗೆದುಕೊಳ್ಳದೆ ಇದ್ದಿದ್ದರೆ ರೂಪ ಅವನನ್ನು ಮದುವೆ ಆಗುತ್ತಿರಲಿಲ್ಲವೇನೊ.

ಈ ಅನಿರೀಕ್ಷಿತ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತ ಅನು ಅಧೀರಳಾದಳು. ಮತ್ತೆ ತನ್ನನ್ನು ಪಡೆಯಲು ದೀಪಕ್‌ ಪ್ರಯತ್ನಿಸುತ್ತಿದ್ದಾನೆ ಎಂದು ಇಲ್ಲಿ ಇವಳು ಆಸೆಯಿಂದ ಹಗಲುಕನಸು ಕಾಣುತ್ತಿರುವಾಗ, ಅಲ್ಲಿ ಅವನ ಬಡಪಾಯಿ ಹೊಸ ಹೆಂಡತಿ ಸಹಾಯ ಕೇಳಿ ಕರೆ ಮಾಡುತ್ತಿದ್ದಾಳೆ! ಈಗ ನೋಡು ನಾನೇನು ಮಾಡಿದ್ದೇನೆ - ಇನ್ನೊಂದು ಬಲಿಪಶುವನ್ನು ಹುಟ್ಟುಹಾಕಿದ್ದೇನೆ; ಸಾಲದೆಂದು ಅದು ಆಜ್ಞಾನಿಯಾದದ್ದು ಕೂಡ ಆಗಿದೆ. ರೂಪಾಳಿಗೆ ಅಮೇರಿಕಾದಲ್ಲಿ ಬೇರೆ ಯಾರೂ ಗೊತ್ತಿರುವ ಹಾಗೆ ಇಲ್ಲ. ಇಲ್ಲದಿದ್ದ ಪಕ್ಷದಲ್ಲಿ ಅವಳು ಕರೆ ಮಾಡುವ ಪಟ್ಟಿಯಲ್ಲಿ ಅನೂಳ ಹೆಸರು ಕೊನೆಯದಾಗಿರುತ್ತಿತ್ತು.

ನಾನು ಏನು ಮಾಡಿಬಿಟ್ಟೆ? ಯಾಕೆ ನಾನು ನನ್ನ ಸ್ನೇಹಿತರಿಗೆ, ಸಂಬಂಧಿಕರಿಗೆ ದೀಪಕ್‌ನ ಬಗ್ಗೆ ಸತ್ಯವನ್ನು ಹೇಳಲಿಲ್ಲ? ನಾನು ಯಾಕೆ ಅವನನ್ನು ಕಾಪಾಡುತ್ತಿದ್ದೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X