ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಕ್‌ ಇಲ್ಲದ ಹೊತ್ತಿನಲ್ಲಿ ಅನು-ರೂಪ ಭೇಟಿ!

By Staff
|
Google Oneindia Kannada News


‘‘ಕೇಳಿಸಿಕೊಳ್ಳುತ್ತಿದ್ದೀಯ, ಅನು?’’

‘‘ಹೌದು, ಕೇಳಿಸಿಕೊಳ್ಳುತ್ತಿದ್ದೇನೆ.’’ ಅವನನ್ನು ಬಿಡುವುದಕ್ಕೆ ರೂಪ ಬಹುಶಃ ಸಿದ್ಧಳಾಗಿರಬಹುದು.

‘‘ನೀನು ಬಂದು ನನ್ನನ್ನು ನೋಡುತ್ತೀಯ? ನಿಜವಾಗಿ ನಾನು ನಿನ್ನನ್ನು ಭೇಟಿಯಾಗಬೇಕು.’’

‘‘ಇಲ್ಲ, ರೂಪ, ನಾನು ಬರುವುದಕ್ಕೆ ಆಗುವುದಿಲ್ಲ. ಅದು ನಮ್ಮಿಬ್ಬರಿಗೂ ಬಹಳ ಅಪಾಯಕಾರಿ. ಒಂದು ಟ್ಯಾಕ್ಸಿ ಕರೆದು ನೀನೆ ಅಲ್ಲಿಂದ ಬಾ. ಅವನ ಮನೆಯಿಂದ ದೂರ ಎಲ್ಲಾದರೂ ನಾನು ನಿನ್ನನ್ನು ಭೇಟಿಯಾಗಬಹುದು... ನಿನ್ನ ಹತ್ತಿರ ಹಣ ಇಲ್ಲದೆ ಇದ್ದರೆ ಟ್ಯಾಕ್ಸೀಗೆ ನಾನೆ ಕೊಡುತ್ತೇನೆ.’’

‘‘ನಾನು ಐದು ತಿಂಗಳ ಗರ್ಭಿಣಿಬಯಕೆ ತೀರಿಸದೆ ಇದ್ದರೆ ಅದರಿಂದ ಗರ್ಭಿಣಿಯರಿಗೆ ಕೆಟ್ಟದು ಎಂದು ನಿನಗೆ ಗೊತ್ತು!’’ ಗರ್ಭಿಣಿಯರ ಎಲ್ಲ ಬಯಕೆಗಳನ್ನು ತೀರಿಸಬೇಕು ಎಂಬ ಭಾರತೀಯ ಮೂಢನಂಬಿಕೆಯನ್ನು ಅವಳು ಅನೂಗೆ ನೆನಪಿಸುತ್ತಿದ್ದಳು. ರೂಪ ಏನಾದರೂ ವಿಕಾರರೂಪದ ಮಗುವನ್ನು ಹೆತ್ತರೆ, ಅಥವ ಅವಳ ಗರ್ಭಧಾರಣೆಯ ಸಮಯದಲ್ಲಿ ಏನಾದರೂ ಕೆಟ್ಟದ್ದು ಅದರೆ, ಅದಕ್ಕೆ ಅವಳು ತನ್ನ ಜೀವ ಇರುವ ತನಕ ಅನೂಳನ್ನು ದೂಷಿಸುತ್ತಾಳೆ. ನನಗೆ ಈಗಾಗಲೆ ಬೇಕಾದಷ್ಟು ಕೆಟ್ಟಕರ್ಮಗಳು ಇವೆ!

‘‘ನನಗೆ ಹೀಗೆ ಮಾಡಬೇಡ, ರೂಪ. ನಾವಿಬ್ಬರು ಭೇಟಿಯಾಗಿದ್ದು ಅವನಿಗೆ ಗೊತ್ತಾದರೆ ನಮ್ಮಿಬ್ಬರನ್ನೂ ಅವನು ಕೊಂದು ಹಾಕುತ್ತಾನೆ ಎಂದು ನಿನಗೆ ಗೊತ್ತು. ನಾವು ಬೆಂಕಿಯ ಜೊತೆ ಆಟವಾಡಬಾರದು.’’

‘‘ಅನು, ನಾನು ಐದು ಜನ ಅಕ್ಕತಂಗಿಯರ ಜೊತೆ ಬೆಳೆದಿದ್ದು. ಅವರನ್ನು ಬಹಳ ಮಿಸ್‌ ಮಾಡಿಕೊಳ್ಳುತ್ತೇನೆ. ಇಡೀ ದಿನ ಅಳುತ್ತಾ ಇರುತ್ತೇನೆ. ಮಾತನಾಡಬಲ್ಲಂತಹ ಸ್ನೇಹಿತೆ ಎಂದರೆ ನನಗೆ ಈಗ ನೀನೊಬ್ಬಳೆ. ದಯವಿಟ್ಟು ಬಂದು ನನ್ನನ್ನು ನೋಡು! ಯಾರಾದರೂ ಒಬ್ಬರು ಹತ್ತಿರ ಇರಬೇಕು ಎನ್ನಿಸುತ್ತಿದೆ ನನಗೆ. ಪ್ಲೀಸ್‌?’’

ಅನೂಳಿಗೆ ತನ್ನ ಗಂಟಲಲ್ಲಿ ಉಸಿರುಕಟ್ಟಿದಂತಾಯಿತು. ‘‘ಸರಿ, ಆಯ್ತು.’’ ನಿಟ್ಟುಸಿರು ಬಿಡುತ್ತ ಹೇಳಿದಳು, ‘‘ನಾನು ಏನು ಮಾಡಬಹುದು ಎಂದು ನೋಡುತ್ತೇನೆ.’’

‘‘ನೀನು ಬಂದು ನನ್ನನ್ನು ನೋಡುತ್ತೀಯ ಎಂದು ನನಗೆ ಭಾಷೆ ಕೊಡು.’’

ಮಾತು ಮುಗಿಸಿ ಅನು ತನ್ನ ಬೆಡ್‌ರೂಮಿಗೆ ಹಿಂದಿರುಗಿದಳು. ಡ್ಯಾನ್‌ ಇನ್ನು ಗಾಢವಾದ ನಿದ್ರೆಯಲ್ಲಿದ್ದ.

‘‘ಹನೀ?’’ ಅವನನ್ನು ಮೊಣಕೈಯಿಂದ ಮೆತ್ತಗೆ ತಿವಿದು ಎಬ್ಬಿಸಿದಳು.

ಅವನ ಪತ್ತೆದಾರಿ ಪ್ರವೃತ್ತಿ ಅವನನ್ನು ಗಡಿಬಿಡಿಯಿಂದ ಎದ್ದು ತನ್ನ ಪೇಜರ್‌ಗಾಗಿ ಹುಡುಕಾಡುವಂತೆ ಮಾಡಿತು.

‘‘ಡ್ಯಾನ್‌, ನಿನ್ನನ್ನು ಎಬ್ಬಿಸಿದ್ದು ನಾನೆ, ನಿನ್ನ ಪೇಜರ್‌ ಅಲ್ಲ.’’

ಅವನು ಮತ್ತೆ ನೇರವಾಗಿ ಹೊದಿಕೆಯ ಒಳಗೆ ಜಾರಿ, ‘‘ಬಾ, ನನಗೆ ಮುತ್ತು ಕೊಡು,’’ ಎಂದು ಗುಸುಗುಟ್ಟಿದ.

ಅನೂಗೆ ಈಗ ಪ್ರೇಮಿಸುವುದಕ್ಕಿಂತ ಹಿರಿದಾದ ಬೇರೆ ಚಿಂತೆಗಳು ಇದ್ದವು. ‘‘ಸ್ವೀಟಿ, ನಿನ್ನ ಹತ್ತಿರ ನಾನೀಗ ಒಂದು ಸಹಾಯ ಕೇಳಬೇಕು.’’

ಅರೆತೆರೆದ ಕಣ್ಣುಗಳಿಂದ ಡ್ಯಾನ್‌ ಅವಳನ್ನು ನೋಡಿದ. ಬೆಳಗಿನ ಹೊತ್ತು ಕೆಲಸಕ್ಕೆ ಹೋಗುವುದಕ್ಕೆ ಸಿದ್ಧವಾಗುತ್ತಿರುವ ಸಮಯದಲ್ಲಿ ಅವಳು ಸಾಮಾನ್ಯವಾಗಿ ಹೆಚ್ಚು ಮಾತನಾಡುವುದಿಲ್ಲ ಎಂದು ಅವನಿಗೆ ಗೊತ್ತಿತ್ತು. ‘‘ನಾನು ಹೋಗಿ ಅವಳನ್ನು ಕಾಣಬೇಕೆಂದು ರೂಪ ನಿಜವಾಗಿ ಬಯಸುತ್ತಿದ್ದಾಳೆ. ಅವಳು ಬಹಳ ಮಂಕಾಗಿದ್ದಾಳೆ. ಆ ರಾಕ್ಷಸ ಅವಳನ್ನು ಆ ಮನೆಯಲ್ಲಿ ಕೂಡಿ ಹಾಕಿ ಇಟ್ಟಿರುವುದಕ್ಕೆ ನನಗೆ ನಿಜವಾಗಲೂ ಬೇಜಾರಾಗುತ್ತಿದ್ದೆ.’’

ಅವಳು ಹೇಳುವುದು ಇನ್ನೂ ಇದೆ ಎಂದು ಅರ್ಥಮಾಡಿಕೊಂಡ ಡ್ಯಾನ್‌, ಎದ್ದು ಕುಳಿತ. ‘‘ಮತ್ತೆ?’’

‘‘ದೀಪಕ್‌ ಯಾವುದೊ ಕಾನ್ಫರೆನ್ಸ್‌ಗೆ ಇಡೀ ದಿನ ಡಬಲ್‌ ಟ್ರೀ ಹೋಟೆಲಿನಲ್ಲಿ ಇರುತ್ತಾನೆ. ನಾನು ರೂಪಾಳನ್ನು ನೋಡುವುದಕ್ಕೆ ಹೋಗುವ ಆ ಒಂದು ಗಂಟೆಯಷ್ಟು ಕಾಲ ನೀನು ಅವನ ಕಾರನ್ನು ಗಮನಿಸುತ್ತ ಇರಲು ಸಾಧ್ಯವೆ? ನಾವಿಬ್ಬರು ಮಾತನಾಡುತ್ತ ಇರುವಾಗ ಅವನು ಒಳಗೆ ಬರುವುದು ನನಗೆ ಬೇಡ.’’

ಅವನು ತನ್ನ ಯೋಚನೆಗೆ ಹಿಂಜರಿಕೆ ತೋರಿಸುತ್ತಾನೆ ಎಂದು ಅವಳು ನಿರೀಕ್ಷಿಸಿದ್ದಳು. ಆದರೆ ಅದಕ್ಕೆ ಪ್ರತಿಯಾಗಿ ಅವನು ನಾಟಕೀಯವಾಗಿ ಹಲ್ಲುಕಿಸಿದ. ‘‘ಹ್ಞುಮ್‌... ಅವನ ಲೈಸೆನ್ಸ್‌ ಪ್ಲೇಟ್‌ ನಂಬರ್‌ ಏನು?’’

‘‘ಇನ್ನೇನು ಇರಬಹುದು?’’

‘‘ದೀಪಕ್‌?’’

ಡ್ಯಾನ್‌ ತಮಾಷೆ ಮಾಡುತ್ತಿದ್ದ, ಆದರೆ ಅವಳು ಹೌದೆಂದು ತಲೆದೂಗಿದಳು. ‘‘ನಿನ್ನ ಗುರಿ ಸರಿಯಾಗಿದೆ.’’

‘‘ಮರ್ಸೀಡಿಸ್‌ ಅಥವ ಬಿಎಮ್‌ಡಬ್ಲ್ಯು?’’

‘‘ಪೋರ್ಷ. ಕೆಂಪು ಬಣ್ಣದ್ದು. ಅವನು ಮರ್ಸೀಡಿಸ್‌ ಅನ್ನು ಎಲ್ಲಾ ಸಮಯದಲ್ಲು ಓಡಿಸುತ್ತಾನೆ ಎಂದು ಹೇಳುವುದಕ್ಕಾಗುವುದಿಲ್ಲ.’’

‘‘ಛೇ, ನಾನು ಅದನ್ನೂ ಊಹಿಸಬೇಕಿತ್ತು! ಸರಿ, ಆದರೆ 1 ರಿಂದ ರಾತ್ರಿ 8 ರವರೆಗೆ ನನಗೆ ಕೆಲಸ ಇದೆ.’’

‘‘ಸರಿ. ಹಾಗಿದ್ದರೆ ನಾವು ಇದನ್ನು 11 ಕ್ಕೆ ಇಟ್ಟುಕೊಳ್ಳೋಣ. ನಾನು ಅಲ್ಲಿ ಬಹಳ ಹೊತ್ತು ಇರುವುದಿಲ್ಲ. ಅಲ್ಲಿಂದ ಬಿಟ್ಟ ತಕ್ಷಣ ನಿನಗೆ ಕರೆ ಮಾಡುತ್ತೇನೆ.’’

ಡ್ಯಾನ್‌ ಮತ್ತೆ ಹೊದಿಕೆಗಳ ಒಳಗೆ ಜಾರಿದ. ‘‘ಈಗಲಾದರೂ ನೀನು ನನಗೆ ಮುತ್ತು ಕೊಡುತ್ತೀಯ?’’

ಅನು ಅವನ ಕೆನ್ನೆಯ ಮೇಲೆ ಒಂದು ಕುಟುಕುಮುತ್ತನ್ನಿಟ್ಟು ತನ್ನ ವಾರ್ಡ್‌ರೋಬಿನ ಕಡೆ ನಡೆದಳು. ಮೊದಲ ಸಲ ರೂಪಾಳನ್ನು ಭೇಟಿಯಾಗುತ್ತಿದ್ದೇನೆ! ಯಾವ ಬಟ್ಟೆ ಧರಿಸಲಿ?

ಅಂದು ಬೆಳಿಗ್ಗೆ ಬೇಗ, 7:31 ಕ್ಕೆಲ್ಲ ಕೆಲಸಕ್ಕೆ ಹೋದಳು! ತನ್ನ ಇಮೇಯ್ಲ್‌ ಮತ್ತು ಧ್ವನಿ ಸಂದೇಶಗಳಿಗೆಲ್ಲ ಉತ್ತರಿಸಿ, 10:30 ಕ್ಕೆ ಕಛೇರಿಯಿಂದ ಹೊರಟಳು.

ಹೊರಗೆ ಹೋಗುತ್ತ, ‘‘ನಾನು ಇನ್ನೊಂದು ಗಂಟೆಯಾಳಗೆ ಹಿಂದಿರುಗುತ್ತೇನೆ,’’ ಎಂದು ತನ್ನ ಕಾರ್ಯದರ್ಶಿಗೆ ಹೇಳಿದಳು. ’’ನನಗೊಂದು ಅಪಾಯಿಂಟ್‌ಮೆಂಟ್‌ ಇದೆ.’’ ಅನು ಪ್ರತಿದಿನವೂ ಕಸ್ಟಮರ್ಸ್‌ ಅನ್ನು ಭೇಟಿಯಾಗುತ್ತಿದ್ದಿದ್ದರಿಂದ ಎಲ್ಲಿಗೆ ಹೋಗುತ್ತಿದ್ದಾಳೆ ಎಂದು ಸೂಸನ್‌ ಅವಳನ್ನು ಕೇಳಲಿಲ್ಲ.

ಹೊರಗೆ ಬಂದ ತಕ್ಷಣ ಡ್ಯಾನ್‌ನ ಸೆಲ್‌ಫೋನಿಗೆ ಕರೆ ಮಾಡಿದಳು. ‘‘ಡ್ಯಾನ್‌, ನಾನೀಗ ಆಫೀಸು ಬಿಡುತ್ತಿದ್ದೇನೆ.’’

‘‘ಸರಿ, ನಾನೀಗ ಹೋಟೆಲ್‌ ಕಡೆಗೆ ಹೋಗುತ್ತಿದ್ದೇನೆ,’’ ಅವನು ಉತ್ತರಿಸಿದನು. ‘‘ಇನ್ನೊಂದು 10 ನಿಮಿಷದಲ್ಲೆಲ್ಲ ಅಲ್ಲಿರುತ್ತೇನೆ.’’ ಅವನು ಯಾಕೆ ಅವಳ ಬಗ್ಗೆ ಅಷ್ಟೊಂದು ಕಾಳಜಿ ವಹಿಸುತ್ತಾನೆ? ನಾನು ಕೇಳಿದ್ದನ್ನೆಲ್ಲ ಮಾಡುತ್ತಾನೆ. ಅವನು ದೊಡ್ಡ ಆಕಾರದ ಬಲಿಷ್ಠ ಮನುಷ್ಯ. ಆದರೆ ನನ್ನ ವಿಷಯಕ್ಕೆ ಬಂದರೆ ಅವನು ಒಂದು ಮುದ್ದಾದ ಟೆಡ್ಡಿ ಬೇರ್‌. ನನ್ನನ್ನು ಅಪ್ಪಿಕೊಂಡು, ತನ್ನ ತೊಡೆ ಮೇಲೆ ಕೂರಿಸಿಕೊಂಡು, ನಾನು ಭಾರತದ ಬಗ್ಗೆ ಹೇಳುವ ಸಿಲ್ಲಿ ಕತೆಗಳನ್ನು ಕೇಳುವುದಷ್ಟೆ ಅವನಿಗೆ ಬೇಕಾಗಿರುವುದು.

ತನ್ನ ಈ ಸಾಹಸದ ಬಗೆಗಿನ ಪ್ರತಿಯಾಂದು ಮಿಶ್ರ ಭಾವನೆಗಳನ್ನು ಪರಿಶೀಲಿಸುತ್ತ ಅನು 280 ನಾರ್ತ್‌ ಫ್ರೀವೇಯಲ್ಲಿ ಹೋಗುತ್ತಿದ್ದಳು. ರೇರ್‌ವ್ಯೂ ಕನ್ನಡಿಯಲ್ಲಿ ತನ್ನನ್ನು ಒಂದು ಕ್ಷಣ ನೋಡಿಕೊಂಡು, ಸ್ವಲ್ಪ ಲಿಪ್‌ಸ್ಟಿಕ್‌ ಅನ್ನು ಹಚ್ಚಿಕೊಂಡಳು. ಚಡಪಡಿಸುತ್ತ, ಕುಳಿತಿರುವಂತೆಯೆ ತನ್ನ ಕಪ್ಪು ಬಟ್ಟದ ಲಿನೆನ್‌ ಜಾಕೆಟ್‌ ಅನ್ನು ಸರಿಪಡಿಸಿಕೊಂಡಳು. ಕಪ್ಪು ಬಿಳುಪಿನ ತನ್ನ ಉಡುಪನ್ನು ಮತ್ತೆ ನೋಡಿಕೊಂಡಾಗ ಅವಳಿಗೆ ಅದರಲ್ಲಿ ಸುಕ್ಕುಗಳು ಎದ್ದು ಕಾಣಿಸಿದವು. ಲಿನೆನ್‌ ಬಹಳ ನಯವಾದ, ಸೊಗಸಾದ ಬಟ್ಟೆ, ಆದರೆ ಬಹಳ ಬೇಗ ಸುಕ್ಕಾಗಿಬಿಡುತ್ತದೆ. ತನ್ನ ಮಾಜಿ ಗಂಡನಿಂದ ದಂಡಿಸಿಕೊಳ್ಳುತ್ತಿರುವ ಅವನ ಹೊಸ ಹೆಂಡತಿಯನ್ನು ನೋಡಲು ಹೋಗುತ್ತಿರುವಾಗ ತಾನು ಧರಿಸಿರುವ ದಿರಿಸಿನ ಆಯ್ಕೆಯ ಬಗ್ಗೆ ಅವಳು ಮತ್ತೊಮ್ಮೆ ಯೋಚಿಸಿದಳು. ಆದರೆ ಒಂದಂತೂ ನಿಜ; ಕೊನೆಗೂ ರೂಪಾಳನ್ನು ನೋಡಲು ಇವಳೂ ಕಾತರಳಾಗಿದ್ದಳು. ಅವಳು ಯಾಕೆ ದೀಪಕ್‌ನನ್ನು ಬಿಡುತ್ತಿಲ್ಲ? ಎಷ್ಟು ಸಲ ನಾನು ಅವಳಿಗಿರುವ ಬೇರೆ ಆಯ್ಕೆಗಳ ಬಗ್ಗೆ ತಿಳಿಸಿಲ್ಲ?

280 ನೇ ರಸ್ತೆ ಕಠಿಣ ತಿರುವುಗಳ ಬೆಟ್ಟವನ್ನು ಹತ್ತಲು ಪ್ರಾರಂಭಿಸಿತು. ಆ ತಿರುವುಗಳು ಪರಿಚಿತವಿದ್ದರೂ, ಕಾರನ್ನು ಓಡಿಸಲು ಅನು ತನ್ನ ಎಲ್ಲಾ ಗಮನವನ್ನೂ ಕೇಂದ್ರೀಕರಿಸಬೇಕಿತ್ತು. ಆಗ ಅವಳ ಸೆಲ್‌ಫೋನ್‌ ಶಬ್ದ ಮಾಡಿತು. ಅದರ ಪರದೆಯ ಮೇಲೆ ಡ್ಯಾನ್‌ ಎಂದು ಬಂತು.

‘‘ಓಕೆ, ಬೇಬಿ, ಕ್ರೀಮ್‌ ಚೀಸ್‌ ಹಚ್ಚಿಕೊಂಡ ಬೇಗಲ್‌ ತಿನ್ನುತ್ತ, ಈಗಾಗಲೆ ಲಕ್ಷ ಮೈಲಿ ಓಡಿರುವ ನನ್ನ ಅಗ್ಗದ ಕಾರಿನಲ್ಲಿ ಕುಳಿತು, ಬೋಳಿಮಗನ ದುಬಾರಿ ಪೋರ್ಷ ಕಾರನ್ನು ಕಾಯುತ್ತ, ಈಗ ನಾನು ಇರಬೇಕಾದ ಜಾಗದಲ್ಲಿ ಇದ್ದೇನೆ.’’

‘‘ಧನ್ಯವಾದ, ಡ್ಯಾನ್‌. ನಾನು ನಿನ್ನನ್ನು ನಿಜವಾಗಲೂ ಪ್ರಶಂಸಿಸುತ್ತೇನೆ.’’ ಅವನು ಇದನ್ನು ಖುಷಿಯಿಂದ ಮಾಡುತ್ತಿದ್ದಾನೆ. ಇದು ಅವನಿಗೆ ಒಂದು ರೀತಿ ಪತ್ತೇದಾರಿ ಕೆಲಸ. ‘‘ನಾನು ಈಗ 280 ಫ್ರೀವೇಯಿಂದ ಎಕ್ಸಿಟ್‌ ತೆಗೆದುಕೊಂಡು ಸಮ್ಮಿಟ್‌ ರಸ್ತೆಗೆ ಹೋಗುತ್ತಿದ್ದೇನೆ.’’

‘‘ಕೂಲ್‌! ಮರೀಬೇಡ, ನಾನು 1 ಗಂಟೆಗೆಲ್ಲ ಕೆಲಸದಲ್ಲಿರಬೇಕು. ಕರೆ ಮಾಡು.’’

‘‘ಥ್ಯಾಂಕ್ಸ್‌, ನಾನು ಖಂಡಿತ ಕರೆ ಮಾಡುತ್ತೇನೆ. ಈ ರಸ್ತೆ ಕಠಿಣವಾಗುತ್ತಿದೆ, ಡ್ಯಾನ್‌. ನಾನು ಈ ಕರೆ ಕಟ್‌ ಮಾಡಬೇಕು ಈಗ.’’

ಬೆಟ್ಟದ ಮೇಲಿನ ಆ ಮನೆಗೆ ಹಿಂದಿರುಗುವ ಯೋಚನೆಯೆ ಅವಳಿಗೆ ವಾಕರಿಕೆ ತರುತ್ತಿತ್ತು. ಈ ಬೆಟ್ಟದಲ್ಲಿ ಗಾಡಿ ಓಡಿಸುವಾಗ ನನಗೆ ಹೊಟ್ಟೆತೊಳೆಸುತ್ತದೆ. ಅಥವ ನಾನು ರೂಪಾಳನ್ನು ಕಾಣುವ ಸಂಭವನೀಯತೆ ನನ್ನನ್ನು ಈ ರೀತಿ ತಳಮಳಕ್ಕೀಡು ಮಾಡುತ್ತಿದೆಯೆ? ಈ ರಸ್ತೆ ಬಹಳ ಇಳಿಜಾರಿನದ್ದು ಹಾಗು ಬದಿಯಲ್ಲಿ ನಡೆಯಲು ಫುಟ್‌ಪಾತ್‌ ಸಹ ಇಲ್ಲ. ಇಲ್ಲದಿದ್ದರೆ ಅವಳಿಗೆ ಕೆಳಕ್ಕೆ ಬರುವಂತೆ ಹೇಳಿ ಅವಳನ್ನು ಅಲ್ಲಿಂದಲೆ ಪಿಕ್‌ಅಪ್‌ ಮಾಡಬಹುದಿತ್ತು.

ಅವಳು ಕೆಳಗೆ ಕಣಿವೆಯತ್ತ ದೃಷ್ಟಿ ಹಾಯಿಸಿದಳು. ಇಷ್ಟು ಎತ್ತರದಿಂದ ಅದು ಬಂಜರು ಭೂಮಿಯಂತೆ ಕಾಣಿಸಿತು. ರಾತ್ರಿಯ ಹೊತ್ತು ಕಾಣಿಸುವಷ್ಟು ಸುಂದರವಾಗಿ ಈಗ ಕಾಣಿಸುತ್ತಿಲ್ಲ. ದೀಪಕ್‌ನ ಮನೆ ಹತ್ತಿರವಾಗುತ್ತಿದ್ದಂತೆ ಅವಳ ಹೊಟ್ಟೆತೊಳಸುವಿಕೆ ಹೆಚ್ಚಾಯಿತು. ಅವನ ಮನೆಯಾಗಲಿ, ಅವನ ಜೀವನ ವಿಧಾನವಾಗಲಿ ಎಂದೂ ಅವಳ ಮೇಲೆ ಪ್ರಭಾವ ಬೀರಿರಲಿಲ್ಲ. ರೂಪಾಳನ್ನು ಕೊನೆಗೂ ಭೇಟಿಯಾಗುವ ವಾಸ್ತವ ಅವನ ಬಗೆಗಿನ ಕೆಟ್ಟ ನೆನಪುಗಳು ಮತ್ತೆ ನೆನಪಾಗದೆ ಇರಲು ಸಹಾಯ ಮಾಡಿತ್ತು. ಆದರೂ, ಆ ಮನೆಯಲ್ಲಿ ತಾವಿಬ್ಬರೂ ಜೊತೆಯಾಗಿ ಇರುವುದನ್ನು ದೀಪಕ್‌ ಹೇಗೋ ಕಂಡುಹಿಡಿದು ಬಿಡುತ್ತಾನೆ ಎನ್ನುವ ಭಯ ಅವಳಿಗೆ ಬಹಳ ಇತ್ತು. ರೂಪ ಅವನ ದೌರ್ಜನ್ಯದ ಮತ್ತೊಂದು ಬಲಿಪಶು. ದೀಪಕ್‌ ನನಗೆ ಏನೋ ಮಾಡಿರುವುದರಿಂದ ನಾನು ಅವಳನ್ನು ಶಿಕ್ಷಿಸಬಾರದು.

ಆದರೆ ದೀಪಕ್‌ ಇನ್ನೂ ಹೋಟೆಲ್‌ನಲ್ಲೆ ಇದ್ದಾನ? ಅವನ ಮನೆಯಿಂದ ಒಂದು ಮೈಲಿಯಷ್ಟು ದೂರದಲ್ಲಿ ಇರುವಾಗ, ಡ್ಯಾನ್‌ಗೆ ಕರೆ ಮಾಡಿ ಅದನ್ನು ಖಾತ್ರಿ ಮಾಡಿಕೊಳ್ಳಲು ಸೆಲ್‌ಫೋನನ್ನು ಕೈಗೆತ್ತಿಕೊಂಡಳು. ಆದರೆ ಸೆಲ್‌ಫೊನಿನ ತೆರೆ ‘ನೊ ಸರ್ವಿಸ್‌’ ಎಂದು ತೋರಿಸಿತು. ಈಗ ಏನು ಮಾಡಬೇಕು ಎಂದು ಅವಳು ಯೋಚಿಸಲು ಪ್ರಾರಂಭಿಸುತ್ತಿದ್ದಂತೆ ಅವಳ ಎದೆ ಗಟ್ಟಿಯಾಗಿ ಬಡಿದುಕೊಳ್ಳಲು ಶುರುವಾಯಿತು. ಇತ್ತೀಚೆಗೆ ಅವಳು ತನ್ನ ಸೆಲ್‌ಫೋನ್‌ ಸೇವಾ ಕಂಪನಿಯನ್ನು ಬದಲಾಯಿಸಿದ್ದಳು. ಹಾಗಾಗಿ, ಈ ಪ್ರದೇಶದಲ್ಲಿ ತನ್ನ ಹೊಸ ಸೆಲ್‌ಫೋನ್‌ ಕೆಲಸ ಮಾಡುವುದಿಲ್ಲ ಎಂದು ಅವಳಿಗೆ ಗೊತ್ತಿರಲಿಲ್ಲ. ಡ್ಯಾನ್‌ ಏನಾದರೂ ಈಗ ನನಗೆ ಕರೆಮಾಡಲು ಯತ್ನಿಸಿ, ಅದು ನನಗೆ ಸಿಗದೆ ಇದ್ದರೆ ಹೇಗೀಗ? ಬೆಟ್ಟದಿಂದ ಕೆಳಗೆ ಇಳಿದ ಮೇಲೆ, ತನ್ನ ಸೆಲ್‌ಫೋನ್‌ ಕೆಲಸ ಮಾಡದೆ ಇದ್ದಿದ್ದರಿಂದ ನನಗೆ ಅಲ್ಲಿ ಬರಲು ಭಯವಾಯಿತು ಎಂದು ಅವಳು ರೂಪಾಗೆ ಕರೆ ಮಾಡಿ ಹೇಳುವ ಹಾಗೂ ಇರಲಿಲ್ಲ. ಯಾಕೆಂದರೆ, ದೀಪಕ್‌ನ ಮನೆಯ ಫೋನಿನ ಕಾಲರ್‌ ಐಡಿ ಇವಳ ನಂಬರ್‌ ಅನ್ನು ತೋರಿಸುತ್ತದೆ, ಹಾಗಾಗಿ ಅದು ದೀಪಕ್‌ಗೂ ಗೊತ್ತಾಗುತ್ತದೆ. ಯಾಕೆ ಈ ಜನ ಸೆಲ್‌ಫೋನ್‌ ಸರ್ವಿಸ್‌ ಇಲ್ಲದ ಬೆಟ್ಟಗಳ ಮೇಲೆ ಮನೆ ಮಾಡಿಕೊಳ್ಳುತ್ತಾರೆ? ನಾನು ಈಗ ಯಾವುದೆ ಚಾನ್ಸ್‌ ತೆಗೆದುಕೊಳ್ಳುವ ಹಾಗಿಲ್ಲ.

ಬೆಟ್ಟದ ಮೇಲೆ ಅವಳು ಈಗ ಗಾಡಿ ಓಡಿಸುತ್ತಿದ್ದ ಸ್ಥಳದಲ್ಲಿ ಯು ಟರ್ನ್‌ ತೆಗೆದುಕೊಂಡು ವಾಪಸು ಬರಲು ಅವಕಾಶವಿರಲಿಲ್ಲ. ಬೇಗ ತಲೆ ಓಡಿಸಿ, ಗೇಟ್‌ ಇಲ್ಲದೆ ಇದ್ದ ಯಾವುದೊ ಮನೆಯ ಕಾಂಪೌಂಡಿನೊಳಕ್ಕೆ ತನ್ನ ಕಾರನ್ನು ತಿರುಗಿಸಿ, ಅಲ್ಲಿಂದ ಮತ್ತೆ ಹಿಮ್ಮುಖವಾಗಿ ತನ್ನ ಕಾರನ್ನು ತಿರುಗಿಸಿಕೊಂಡು ಮತ್ತೆ ರಸ್ತೆಗೆ ಬಂದು ಕೆಳಗೆ ಇಳಿಯಲು ಪ್ರಾರಂಭಿಸಿದಳು. ರೂಪ ಅರ್ಥ ಮಾಡಿಕೊಳ್ಳುತ್ತಾಳೆಂದು ಆಶಿಸುತ್ತೇನೆ. ಏನೇ ಇರಲಿ, ನಮ್ಮಿಬ್ಬರ ಜೀವವನ್ನು ಅಪಾಯಕ್ಕೆ ಸಿಕ್ಕಿಸುವುದು ನನ್ನ ಕೈಯಲ್ಲಿ ಸಾಧ್ಯವಿಲ್ಲ.

ಅನು ಕಣಿವೆಗೆ ಬಂದಿಳಿದ ತಕ್ಷಣ ಅವಳ ಸೆಲ್‌ಫೋನ್‌ ಬೀಪ್‌ ಮಾಡಿತು. ಸೇವಾವಲಯ ಮತ್ತೆ ಆರಂಭಗೊಂಡಿತ್ತು! ಫೋನನ್ನು ನೋಡಲು, ಅವಳಿಗೆ ಒಂದು ಧ್ವನಿಸಂದೇಶ ಕಾದಿತ್ತು. ಕೇಳಿಸಿಕೊಂಡಾಗ, ನ್ಯೂಯಾರ್ಕಿನಿಂದ ಅತ್ಯವಸರದಲ್ಲಿ ಕರೆ ಮಾಡಿದ್ದ ಗಂಡಸೊಬ್ಬನ ಸಂದೇಶವಾಗಿತ್ತದು. ನನ್ನ ಆದೃಷ್ಟ! ನನ್ನ ಬಾಸ್‌ ಸ್ಕಾಟ್‌ ನನಗಾಗಿ ಹುಡುಕುತ್ತಿದ್ದಾನೆ.

ಅವಳು ಸ್ಕಾಟ್‌ಗೆ ಕರೆ ಮಾಡಿದಳು. ಅವಳ ಆ ಉಪಾಧ್ಯಕ್ಷ ಜಪಾನಿನ ಕೆಲವು ಕಸ್ಟಮರ್ಸ್‌ ಬಗ್ಗೆ ಬಹಳ ಹೊತ್ತು ಒದರಾಡಿದ. ಅವನ ಮಾತನ್ನು ಕೇಳಿಸಿಕೊಳ್ಳುತ್ತಲೆ, ಡ್ಯಾನ್‌ ಸಹ ಕೆಲವು ಸಂದೇಶಗಳನ್ನು ಬಿಟ್ಟಿರುವುದನ್ನು ಸೆಲ್‌ಫೋನಿನಲ್ಲಿ ಗಮನಿಸಿದಳು. ಸ್ಕಾಟ್‌ನೊಂದಿಗೆ ಮಾತುಕತೆ ಮುಗಿದ ನಂತರ ಡ್ಯಾನ್‌ಗೆ ಕರೆ ಮಾಡಿದಳು. ಇಷ್ಟೊತ್ತಿಗೆ ಅವನಿಗೆ ಕೆಲಸಕ್ಕೆ ತಡವಾಗಿರುತ್ತದೆ, ಹಾಗಾಗಿ ಅವನು ಬಹಳ ಕೋಪದಿಂದ ಇರುತ್ತಾನೆ ಎಂದು ಭಾವಿಸಿದಳು.

‘‘ಅನು, ಇಷ್ಟೊತ್ತು ನೀನು ಯಾವ ನರಕದಲ್ಲಿ ಇದ್ದೆ? ಏನಾದರು ಆಯ್ತಾ? ಯೋಚನೆ ಮಾಡಿಮಾಡಿ ನನ್ನ ತಲೆಕೆಟ್ಟು ಹೋಗಿತ್ತು.’’

‘‘ಸಾರ್ರಿ, ಸಾರ್ರಿ! ನನ್ನ ಬಾಸ್‌ ನ್ಯೂಯಾರ್ಕ್‌ನಿಂದ ಕರೆ ಮಾಡಿದ್ದ... ಜೊತೆಗೆ ಆ ಬೆಟ್ಟದ ಮೇಲೆ ಸೆಲ್‌ಫೋನ್‌ ಸಿಗ್ನಲ್‌ ಇರಲಿಲ್ಲ.’’ ಅನು ಧೀರ್ಘವಾಗಿ ಉಸಿರಾಡಲು ಪ್ರಯತ್ನಿಸುತ್ತ ಹೇಳಿದಳು. ‘‘ನಿನಗೆ ವಾಪಸು ಕರೆ ಮಾಡಲು ಆಗಲಿಲ್ಲ. ನಿನಗೆ ಆಮೇಲೆ ನಿಧಾನವಾಗಿ ಹೇಳುತ್ತೇನೆ...ಈಗ ನಾನೂ ಕೆಲಸಕ್ಕೆ ಹೋಗಬೇಕು...ಸಾರ್ರಿ, ನನ್ನಿಂದ ನಿಜವಾಗಲೂ ತಪ್ಪಾಯಿತು.’’ ಅವಳು ನಡುಗುತ್ತಿದಳು! ಇದು ನನ್ನ ಕೈಯಲ್ಲಿ ತಡೆದುಕೊಳ್ಳಲಾಗದಷ್ಟು ಒತ್ತಡ, ಸ್ಟ್ರೆಸ್‌ನಿಂದಾಗಿ.

‘‘ಸರಿ, ನಿನಗೆ ಏನೂ ಆಗಿಲ್ಲದೆ ಇರುವುದು ನನಗೆ ಸಂತೋಷ. ಕೆಲಸ ಮುಗಿದ ನಂತರ ನಿನ್ನ ಮನೆಯ ಹತ್ತಿರ ಬಂದು ಹೋಗುತ್ತೇನೆ.’’

‘‘ಧನ್ಯವಾದಗಳು! ಬೈ.’’

ಅವಳ ಯೋಚನೆಗಳು ನ್ಯೂಯಾರ್ಕಿನ ಉಪಾಧ್ಯಕ್ಷನ ಕಡೆಗೆ ತಿರುಗಿದವು. ಜೀವನದ ಪ್ರತಿಕ್ಷಣವೂ ತುರ್ತುಪರಿಸ್ಥಿತಿ ಅಲ್ಲ ಎಂದು ಸ್ಕಾಟ್‌ ಎಂದಾದರೂ ತಿಳಿದುಕೊಂಡಿದ್ದಾನಾ? ಅವಳು ಕಛೇರಿಯಲ್ಲಿ ಇಲ್ಲದೆ ಇರುವ ಪ್ರತಿಸಲವೂ ಅವನು ಯಾಕೆ ಪ್ರತಿ ಬ್ಯುಸಿನೆಸ್‌ ಡೀಲ್‌ ಬಗ್ಗೆಯೂ ಮೇಲೆ ಕೆಳಗೆ ಎಗರಾಡುತ್ತಾ ಇರುತ್ತಾನೆ? ಇವಳು ಇನ್ನೊಂದು ಗಂಟೆ ಬಿಟ್ಟುಕೊಂಡು ಅವನಿಗೆ ಕರೆ ಮಾಡಿದ್ದರೆ ನಿಜವಾಗಲೂ ಏನು ಆಗಿಬಿಡುತ್ತಿತ್ತು? ಹಾಗೂ, ಈಗ ರೂಪ ಏನು ತಿಳಿದುಕೊಳ್ಳಬಹುದು? ಅವಳಿಗೆ ಹೇಳಿ ಕೈಕೊಟ್ಟಳು ಎಂದೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X