ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಕ್‌ ಇಲ್ಲದ ಹೊತ್ತಿನಲ್ಲಿ ಅನು-ರೂಪ ಭೇಟಿ!

By Staff
|
Google Oneindia Kannada News


ಇಂಗ್ಲಿಷ್‌ ಮೂಲ : ಅಸಿತ ಪ್ರಭುಶಂಕರ
ಕನ್ನಡಕ್ಕೆ : ರವಿ ಕೃಷ್ಣಾ ರೆಡ್ಡಿ

[email protected]

ಇನ್ನೂ ಮದುವೆಯಾಗಿಲ್ಲದ ವ್ಯಕ್ತಿಯ ಜೊತೆ ಒಂದೇ ಮನೆಯಲ್ಲಿ ವಾಸಿಸಲು ತನಗೆ ಸಾಧ್ಯವಿಲ್ಲ ಎಂದು ಅನು, ಡ್ಯಾನ್‌ಗೆ ಹೇಳಿದ್ದಳು. ಹಾಗಾಗಿ ಅವರು ಜೊತೆಯಾಗಿ ವಾಸಿಸುತ್ತಿದ್ದಾರೆ ಎಂದು ಹೇಳುವಷ್ಟರ ಮಟ್ಟಿಗೆ ಜೊತೆಯಾಗಿ ವಾಸಿಸುತ್ತಿರಲಿಲ್ಲ. ಆದರೂ ಬಹಳಷ್ಟು ರಾತ್ರಿಗಳನ್ನು ಡ್ಯಾನ್‌ ಅನೂಳ ಜೊತೆಯೆ ಅವಳ ಮನೆಯಲ್ಲಿಯೆ ಕಳೆಯುತ್ತಿದ್ದ. ಅಂದು ಬೆಳಿಗ್ಗೆ 3 ಗಂಟೆಯ ಸುಮಾರಿನಲ್ಲಿ ಬಂದ ಡ್ಯಾನ್‌ ಅನೂಳ ಹಾಸಿಗೆಯಾಳಗೆ ತೂರಿಕೊಂಡ. ‘‘ಇಂದು ರಾತ್ರಿ ನಿನಗೆ ಸ್ಪೆಷಲ್‌ ಆದ ಭಾರತೀಯ ಅಡಿಗೆಯನ್ನು ಮಾಡುತ್ತೇನೆ,’’ ಅನು ಅರೆನಿದ್ರೆಯಲ್ಲಿ ಅಸ್ಪಷ್ಟವಾಗಿ ಹೇಳಿದಳು.

‘‘ನಾನು ಅಷ್ಟು ಅದೃಷ್ಟವಂತನೆ? ಕೊನೆಗೂ ನನಗೆ ಮನೆ ಅಡಿಗೆಯನ್ನು ತಿನ್ನುವ ಅವಕಾಶ ಸಿಗುತ್ತಿದೆ.’’

‘‘ಈಗೀಗ ನಾನೂ ಮನೆಯಲ್ಲಿ ಅಡಿಗೆ ಮಾಡುವುದು ಕಮ್ಮಿಯಾಗಿಬಿಟ್ಟಿದೆ.’’ ಅವಳು ಮಗ್ಗಲು ಹೊರಳಿ, ಮೊಣಕೈ ಊರಿಕೊಂಡು ಸ್ವಲ್ಪವೆ ಎದ್ದು ಹೇಳಿದಳು. ‘‘ನಾನು ಮೊದಲು ಇಲ್ಲಿಗೆ ಬಂದಾಗ ಅಷ್ಟು ದುಡ್ಡು ಕೊಟ್ಟು ಹೊರಗೆ ಊಟ ಮಾಡಲು ಆಗದಿದ್ದಾಗ ಮನೆಯಲ್ಲಿಯೆ ರೊಟ್ಟಿ, ಅನ್ನ ಹಾಗು ಸಾರನ್ನು ಮಾಡುತ್ತಿದ್ದದ್ದು ಈಗಲೂ ನನಗೆ ನೆನಪಿದೆ. ಆಗೆಲ್ಲ ನಾನು ಪ್ರತಿಯಾಂದನ್ನು ರೂಪಾಯಿಗೆ ಪರಿವರ್ತಿಸಿ ಎಷ್ಟು ದುಬಾರಿ ಎಂದು ಯೋಚಿಸುತ್ತಿದ್ದೆ.’’

‘‘ಇಂದು ಸಂಜೆ 6 ಗಂಟೆಗೆಲ್ಲ ನಾನು ಕಛೇರಿ ಬಿಡುತ್ತೇನೆ.’’

‘‘ಸರಿ,’’ ಅವರು ತಬ್ಬಿಕೊಂಡು ಮತ್ತೆ ನಿದ್ರೆಗೆ ಜಾರಿದರು.

ಅಂದು ಸಂಜೆ ಕೆಲಸದಿಂದ ಬರುತ್ತ ಹಾಗೆಯೆ ದಿನಸಿ ಅಂಗಡಿಗೆ ಹೋಗಿ ಬಂದಳು ಅನು. ಮನೆಗೆ ಬಂದವಳೆ ಸೀದಾ ಅಡಿಗೆ ಕೋಣೆಗೆ ಹೋದಳು. ತರಕಾರಿಯನ್ನು ಕತ್ತರಿಸಿ, ಶುಂಠಿ ಹಾಗು ಬೆಳ್ಳುಳ್ಳಿಯನ್ನು ರುಬ್ಬಿ, ಕುರಿಮಾಂಸವನ್ನು ಮೊಸರಿನಲ್ಲಿ ನೆನೆಸಿದಳು. ಗಡಿಯಾರದ ಕಡೆ ನೋಡಿದಾಗ ಅದು 5 ಗಂಟೆ ತೋರಿಸಿತು. ಭಾರತೀಯ ಅಡಿಗೆ ಮಾಡುವುದು ಬಹಳ ಪರಿಶ್ರಮದ ಕೆಲಸ! ಹಾಗಾಗಿಯೆ ನಾನು ಅಡಿಗೆ ಮಾಡುವುದನ್ನು ನಿಲ್ಲಿಸಿದ್ದರಲ್ಲಿ ಏನೂ ಆಶ್ಚರ್ಯವಿಲ್ಲ. ಇಂದಿನ ದಿನದ ಔತಣ ವಿಶಿಷ್ಟವಾಗಿರಬೇಕೆಂಬ ಆಸೆ ಅವಳಿಗೆ. ಡೈನಿಂಗ್‌ ಟೇಬಲ್‌ ಮೇಲೆ ಕೈ-ಕಸೂತಿ ಮಾಡಿರುವ ಸಣ್ಣ ಮ್ಯಾಟ್‌ಗಳನ್ನು ಹಾಕಿದಳು. ಮನೆಯಲ್ಲಿದ್ದ ದುಬಾರಿ ಚೈನಾವೇರ್‌ ಅನ್ನು ಹೊರಗೆ ತೆಗೆದು ಅಣಿಗೊಳಿಸಿದಳು.

ಡ್ಯಾನ್‌ ಅವಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಪ್ರೀತಿಸುತ್ತಿದ್ದ. ಹಾಗಾಗಿ, ಅವನೊಡನೆಯ ಸಂಬಂಧಕ್ಕೆ ತಾನು ಇಗ ಸಿದ್ದವಾಗಿದ್ದೇನೆ ಎಂದು ಕೊನೆಗೂ ಅವಳಿಗೆ ಅನ್ನಿಸಿತು. ರೂಪ ಕರೆ ಮಾಡುವುದು ಸಹ ಈ ಮಧ್ಯೆ ಅಪರೂಪವಾಗಿತ್ತು. ಪವನ್‌ ಮುನಿಸಿಕೊಂಡು ಹೊರಟು ಹೋಗಿದ್ದ. ಅವನಿಂದ ಯಾವ ಸುದ್ದಿಯೂ ಇರಲಿಲ್ಲ. ತನ್ನ ಸ್ವಂತ ಜೀವನ ಒಂದು ರೀತಿಯಲ್ಲಿ ಮತ್ತೆ ತನ್ನ ಹಿಡಿತಕ್ಕೆ ಸಿಕ್ಕಿದೆ ಎಂದು ಅವಳಿಗೆ ಅನ್ನಿಸಿತ್ತು.

ಮೇಜಿನ ಮೇಲೆ ಮೇಣದ ಬತ್ತಿಗಳನ್ನು ಹಚ್ಚಿ ಸಿದ್ಧ ಮಾಡಿದಳು. ಹಾಗೆ ಮಾಡುತ್ತ, ಇಲ್ಲಿನ ಪ್ರತಿಯಾಂದನ್ನೂ ತಾನು ಬೆಳೆದು ಬಂದ ಭಾರತೀಯ ರೀತಿನೀತಿಗಳಿಗೆ ಹೋಲಿಸುವುದನ್ನು ತನ್ನ ಕೈನಲ್ಲಿ ಇನ್ನೂ ನಿಲ್ಲಿಸಲಾಗದ್ದಕ್ಕೆ ತನ್ನಷ್ಟಕ್ಕೆ ತಾನು ನಕ್ಕಳು. ಅಲ್ಲಿ ಎಷ್ಟು ದಿನ ಅವಳು ರಾತ್ರಿ ಹೊತ್ತು ಕರೆಂಟು ಹೋದ ಸಮಯದಲ್ಲಿ ಮೇಣದಬತ್ತಿಯ ಬೆಳಕಿನಲ್ಲಿ ಓದಿಲ್ಲ? ಈಗಲೂ ಸಹ ಅಲ್ಲಿ ಕೂಲಿ ಮಾಡುವ ಆಳುಗಳು, ಕಡುಬಡವರು ಮೇಣದಬತ್ತಿಯ ಬೆಳಕಿನಲ್ಲೆ ಜೀವನ ಮಾಡುತ್ತಾರೆ. ಆದರೆ ಇಲ್ಲಿ, ಈ ಸಮೃದ್ಧವಾದ ನಾಡಿನಲ್ಲಿ, ಮೇಣದಬತ್ತಿಯ ಬೆಳಕಿನಲ್ಲಿ ಊಟ ಮಾಡುವುದನ್ನು ಶ್ರೀಮಂತ ಜನ ರೊಮ್ಯಾಂಟಿಕ್‌ ಎಂದುಕೊಂಡರು.

ಬಾಗಿಲಿನ ಕರೆಗಂಟೆ ಶಬ್ದ ಮಾಡಿತು.

ಡ್ಯಾನ್‌ ಅವಳನ್ನು ಮೃದುವಾಗಿ ಚುಂಬಿಸಿ, ಕೆಂಗುಲಾಬಿಗಳ ಹೂಗುಚ್ಛವನ್ನು ಅವಳ ಕೈಗಿತ್ತ.

‘‘ಧನ್ಯವಾದಗಳು, ಡ್ಯಾನ್‌. ಇವು ಬಹಳ ಸುಂದರವಾಗಿವೆ, ಆದರೆ ನೀನೇನೂ ತರಬೇಕಾಗಿರಲಿಲ್ಲ.’’

‘‘ನಾನು ತರಲೇಬೇಕಿತ್ತು. ಕೊನೆಗೂ ನೀನು ನನಗೆ ಅಡಿಗೆ ಮಾಡುತ್ತಿದ್ದೀಯ. ಮಸಾಲೆಯ ಪರಿಮಳ ಆಚೆಗೆ ಬರುತ್ತಿತ್ತು. ನನಗೆ ಈಗಲೆ ಹಸಿವಾಗಿದೆ.’’ ಅಮೇರಿಕನ್ನರು ಎಷ್ಟು ಭಿನ್ನ! ಭಾರತೀಯ ಹೆಂಗಸರು ಎಷ್ಟೆಲ್ಲ ತರಹದ ಅಡಿಗೆ ಮಾಡುತ್ತಾರೆ, ಆದರೂ ಅವರನ್ನು ಯಾರೂ ಪ್ರಶಂಸಿಸುವುದಿಲ್ಲ. ಆದರೆ ಇವರು ಹಾಗೆ ಅಲ್ಲ. ಡ್ಯಾನ್‌ ಅಡಿಗೆ ಕೊಣೆಯ ಒಳಗೆಲ್ಲ ಓಡಾಡಿ ನೋಡಿದ. ‘‘ನೀನು ಎಷ್ಟೆಲ್ಲ ಅಡಿಗೆ ಮಾಡಿದ್ದೀಯ, ಅನು. ಇದು ನಮ್ಮಿಬ್ಬರಿಗೆ ಮಾತ್ರ ತಾನೆ?’’

‘‘ಭಾರತದಲ್ಲಿ ನಾವು ಹೀಗೆ ಮಾಡುವುದು. ಮನೆಗೆ ಯಾರನ್ನಾದರು ಆಹ್ವಾನಿಸಿದರೆ ನಾವು ಅನೇಕ ತರಹದ ಅಡಿಗೆಗಳನ್ನು ಮಾಡುತ್ತೇವೆ.’’

‘‘ನಾನು ಷವರ್‌ನಲ್ಲಿ ಬೇಗ ಸ್ನಾನ ಮಾಡಿಕೊಂಡು ಬಂದುಬಿಡುತ್ತೇನೆ.’’

‘‘ವ್ಯಾಯಾಮ ಮಾಡಿರದೆ ಇದ್ದರೆ ಸ್ನಾನ ಯಾಕೆ ಈಗ? ನಮ್ಮ ದೇಶದಲ್ಲಿ ಸಂಜೆ ಹೊತ್ತು ಯಾರೂ ಸ್ನಾನ ಮಾಡುವುದಿಲ್ಲ.’’

ಅನು ಎಲ್ಲವನ್ನೂ ಬಿಸಿ ಮಾಡಿದಳು. ಸ್ವಾದ ಹೆಚ್ಚಾಗಲು ಹಾಗು ಅಲಂಕಾರಿಕವಾಗಿ ಕಾಣಲು ಪ್ರತಿ ತಿಂಡಿಯ ಮೇಲೂ ಕೊತ್ತಂಬರಿ ಸೊಪ್ಪನ್ನು ಜಾಗರೂಕತೆಯಿಂದ ಸಿಂಪಡಿಸಿದಳು.

‘‘ವಾವ್‌, ನನಗೆ ಇದು ಬಹಳ ಇಷ್ಟ ಆಯಿತು! ನೀನು ಇಷ್ಟು ಚೆನ್ನಾಗಿ ಅಡಿಗೆ ಮಾಡುತ್ತೀಯ ಎಂದು ನನಗೆ ನಂಬಲಾಗುತ್ತಿಲ್ಲ. ನೀನು ಯಾವತ್ತೂ ಹೇಳಿರಲಿಲ್ಲ.’’

‘‘ನಾನು ಹೇಳಿದ್ದೆ. ಆದರೆ ಅದನ್ನು ನಾನು ನಿರ್ಣಯಿಸುತ್ತೇನೆ ಎಂದು ನೀನೆ ಹೇಳಿದ್ದೆ. ಹಾಗಾಗಿ ನಾನು ನನ್ನ ಮಾತನ್ನು ಸಾಬೀತು ಮಾಡಬೇಕಿತ್ತು.’’

ಆ ರುಚಿಕರವಾದ ಊಟದ ಮೊದಲ ಸುತ್ತನ್ನು ಇಬ್ಬರೂ ಮುಗಿಸುತ್ತ ಬಂದಂತೆ, ಅಂಗವಸ್ತ್ರದಿಂದ ತನ್ನ ಬಾಯಿಯನ್ನು ಒರೆಸಿಕೊಂಡ ಡ್ಯಾನ್‌ ಹುಷಾರಾಗಿ ಅದನ್ನು ಮೇಜಿನ ಮೇಲೆ ಇಟ್ಟ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X