ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನುಗೆ ಕಿರಿಕಿರಿ ಮಾಡಿದ ಪವನ್‌ನ ಪ್ರೇಮ ಯಾಚನೆ

By Staff
|
Google Oneindia Kannada News

ಅನು ಬಾಗಿಲನ್ನು ತಟ್ಟಿ, ''ಪವನ್‌? ನಾನು,"" ಎಂದಳು.

ಬಾಗಿಲು ತೆರೆಯಿತು. ಅವನು ಅಲ್ಲಿ ನಿಂತಿದ್ದ. ಗಾಬರಿಗೊಂಡಿದ್ದ. ಬಹಳ ಅತ್ತಿದ್ದರಿಂದಾಗಿ ಅವನ ಕಣ್ಣುಗಳು ಕೆಂಪಗೆ ಊದಿಕೊಂಡಿದ್ದವು.

''ಇಲ್ಲಿ ಬಾ."" ಅನು ಅವನನ್ನು ಹತ್ತಿರಕ್ಕೆ ಎಳೆದುಕೊಂಡು ಗಟ್ಟಿಯಾಗಿ ತಬ್ಬಿಕೊಂಡಳು. ನಿಧಾನವಾಗಿ ಅವನು ತನ್ನ ತೋಳುಗಳನ್ನು ಅವಳ ಸುತ್ತ ಹಾಕಿ ಬಿಕ್ಕುತ್ತ ಅಳಲು ಪ್ರಾರಂಭಿಸಿದ.

''ಅವರನ್ನು ನಾನು ರಕ್ಷಿಸಬೇಕು ಎಂದುಕೊಂಡಿದ್ದೆ. ನನಗೆ ಅವರು ಅವನನ್ನು ಬಿಟ್ಟುಬಿಡುವುದು ಬೇಕಿತ್ತು. ಆದರೆ ಅವರು ಹಾಗೆ ಮಾಡುತ್ತಿರಲಿಲ್ಲ!""

ಅವಳು ಏನು ಹೇಳಿದರೂ ಅದು ಅವನನ್ನು ಸಾಂತ್ವನಗೊಳಿಸುವಂತಿರಲಿಲ್ಲ. ಆದರೆ ಅವನ ತಾಯಿ ವೈದ್ಯೆಯಾಗಿದ್ದರು. ಮತ್ಯಾಕೆ ಅವರು ತಮ್ಮ ಮೇಲೆ ದೌರ್ಜನ್ಯದಿಂದ ನಡೆದುಕೊಳ್ಳುತ್ತಿದ್ದ ಗಂಡನನ್ನು ಬಿಡಲಿಲ್ಲ? ಬಹುಶಃ ಅವರಿಗೆ ನೈತಿಕ ಬೆಂಬಲ ನೀಡಲು ಅವರ ಕುಟುಂಬದವರ್ಯಾರೂ ಇರಲಿಲ್ಲವೇನೊ?

''ಅವರು ಅತ್ಮಹತ್ಯೆ ಮಾಡಿಕೊಂಡರು, ಅನು. ಅದಕ್ಕೆ ಅವರು ಇಷ್ಟು ವರುಷಗಳ ಕಾಲ, ನಾವು ಬೆಳೆದು ದೊಡ್ಡವರಾಗಿ ಮನೆ ಬಿಡುವ ತನಕ ಕಾದಿದ್ದರು."" ಅವನು ಮಂಚದ ಹಾಸಿಗೆಯ ಅಡಿಯಲ್ಲಿ ಕುಳಿತ. ಅನು ಮುಂದಿದ್ದ ಕುರ್ಚಿಯ ಮೇಲೆ ಕುಳಿತಳು.

''ಪವನ್‌, ಆ ಕಷ್ಟ ಹೇಗಿರುತ್ತದೆ ಎಂದು ನನಗೆ ಗೊತ್ತು. ನಾನೂ ಅಂತಹ ಸ್ಥಿತಿಯಲ್ಲಿ ಇದ್ದೆ. ದೀಪಕ್‌ ನನಗೆ ಕೇವಲ ಮೂರು ಸಲ ಹೊಡೆದ, ನನಗೆ ಅದೇ ಸಾಕಾಗಿ ಹೋಯಿತು. ಆದರೆ ಅವರು 30 ವರುಷಗಳ ಕಾಲ ಹೊಡೆಸಿಕೊಂಡು ಬದುಕಿದ್ದರು. ಅವರ ಬಗ್ಗೆ ನಾನು ಏನು ಹೇಳಲಿ?""

ಪವನ್‌ ಈ ವಿಚಾರವನ್ನೆಲ್ಲ ಎಂದೂ ಮಾತಿನಲ್ಲಿ ಹೇಳಿರಲಿಲ್ಲ. ಆದರೆ ಅವನ ತಂದೆ ಹೊಡೆಯುತ್ತಿದ್ದದ್ದು ಅನೂಗೆ ಸೂಕ್ಷ್ಮವಾಗಿ ಗೊತ್ತಾಗಿತ್ತು.

''ಅವರು ಭಯದಲ್ಲಿ ಬದುಕುತ್ತಿದ್ದರು,"" ಪವನ್‌ ಹೇಳಿದ. ''ಆದರೆ ಅವರು ತಮ್ಮ ಸಂಸಾರದ ಬಗ್ಗೆ ಹಾಗು ಸಮಾಜದ ಬಗ್ಗೆ ಬಹಳ ಯೋಚಿಸುತ್ತಿದ್ದರು; ಯಾರಿಗೂ ಅದರ ಬಗ್ಗೆ ಉಸಿರು ಕೂಡ ಬಿಡುತ್ತಿರಲಿಲ್ಲ. ಅವರು ನನ್ನ ತಂದೆಯನ್ನು ಭಾರತದಲ್ಲಿಯೆ ಉಳಿಯುವ ಹಾಗೆ ತಡೆದಿದ್ದಕ್ಕೆ ನಮ್ಮಪ್ಪ ಜೀವಮಾನ ಅವರನ್ನು ಆಕ್ಷೇಪಿಸುತಿದ್ದರು. ಇದು ಎಷ್ಟೊಂದು ವ್ಯಂಗ್ಯವೆಂದರೆ ನಾನು ಇಲ್ಲಿ ಇರುವಾಗ ಅವರು ತೀರಿಕೊಂಡಿದ್ದಾರೆ! ಇನ್ನು ನನ್ನ ಜೊತೆ ಇದ್ದುಬಿಡಲು ಅವರು ತೀರ್ಮಾನಿಸಿದ್ದಾರೆ ಎಂದು ನಾನು ಅಂದುಕೊಂಡಿದ್ದೆ. ಅವರು ಹಾಗೆ ಹೇಳಿರಲಿಲ್ಲ, ಆದರೆ ಅವರು ಬೆಂಗಳೂರಿಗೆ ಶಾಶ್ವತವಾಗಿ ಬಂದಿದ್ದಾರೆ ಎಂದು ನನಗೆ ಗೊತ್ತಿತ್ತು. ಏನೋ ಒಂದು ನನಗೆ ಹಾಗೆ ಅಂದುಕೊಳ್ಳುವಂತೆ ಮಾಡಿತ್ತು. ಅವರನ್ನು ನಾನು ಎಂದೂ ಮನೆಯಲ್ಲಿ ಒಂಟಿಯಾಗಿರಲು ಬಿಡಬಾರದಿತ್ತು!""

''ಕೊನೆಯ ಪಕ್ಷ ಅವರು ನಿನ್ನ ಜೊತೆ ಇರಲು ನೀನು ಬಯಸುತ್ತೀಯ ಎಂದು ಅವರಿಗೆ ಗೊತ್ತಿತ್ತು. ಅವರಿಗೆ ನಿನ್ನ ಜೊತೆ ಇರಲು ಸ್ವಾಗತವಿದೆ ಎಂದು ಅವರು ಭಾವಿಸುವ ಹಾಗೆ ನೀನು ಮಾಡಿದೆ. ನಿನ್ನ ತಂದೆಯನ್ನು ಯಾವಾಗ ಬೇಕಾದರೂ ಬಿಡುವುದು ಸಾಧ್ಯ ಎಂದು ಅವರಿಗೆ ತಿಳಿದಿತ್ತು, ಆದರೆ ಅವರಿಗೆ ಅದು ಬೇಕಿರಲಿಲ್ಲ. ಅದು ಸುಲಭವಾದ ನಿರ್ಣಯವಲ್ಲ. ನಾನು ಹೇಗೆ ಮಾಡಿದೆನೆಂದು ನನಗೇ ಇನ್ನೂ ಗೊತ್ತಾಗುತ್ತಿಲ್ಲ. ಅನೇಕ ದಿನ ರಾತ್ರಿಯ ಹೊತ್ತು ನಿದ್ದೆ ಮಾಡದೆ, ನಾನು ದೀಪಕ್‌ಗೆ ಕರೆ ಮಾಡುವುದು ಬೇಡವೊ ಎನ್ನುವ ಯೋಚನೆಯಲ್ಲಿಯೆ ಕಳೆದೆ. ಅವನು ಮಾತ್ರ ನನಗೆ ಬಹಳ ಸಲ ಕ್ಷಮೆ ಕೇಳಿ ಕರೆ ಮಾಡಿದ್ದ. ಆಗೆಲ್ಲ ನನಗೆ ಕೆಲವು ಸಲ ಅವನಲ್ಲಿಗೆ ವಾಪಸು ಹೋಗಬೇಕೆಂದು ಅನಿಸಿದ್ದು ನಿಜ. ಆಮೇಲೆ ನನಗೆ ಗರ್ಭಪಾತವಾುತು. ಅದಾದ ತಕ್ಷಣ ಅವನು ಮದುವೆ ರದ್ದತಿ ಕಾಗದಗಳನ್ನು ಕಳಿಸಿದ. ಅವನಿಗೆ ನಾನು ಬೇಕಿರಲಿಲ್ಲ.""

''ನಿನಗೆ ಗರ್ಭಪಾತವಾಯಿತೆ?""

''ಹೌದು. ಅವನು ನನ್ನ ಹೊಟ್ಟೆಗೆ ಒದ್ದಿದ್ದರಿಂದ.""

''ನೀನು ನಿನಗೆ ಮಕ್ಕಳು ಆಗದೆ ಇರುವುದರ ಬಗ್ಗೆ ಸುಳ್ಳು ಹೇಳಿರುವೆ ಎಂದು ದೀಪಕ್‌ ಭಾರತದಲ್ಲಿ ಎಲ್ಲರಿಗೂ ಹೇಳುತ್ತಿದ್ದ. ಹಾಗೂ ನೀನು ಒಬ್ಬ ಬಿಳಿಯನ ಜೊತೆ ಓಡಿ ಹೋಗಿರುವೆ ಎಂತಲೂ ಹೇಳುತ್ತಿದ್ದ.""

''ಇಲ್ಲ, ಆಗಿದ್ದು ಅದಲ್ಲ!"" ಅನು ನಿಟ್ಟುಸಿರುಬಿಟ್ಟಳು. ಅದನ್ನೆಲ್ಲ ವಿವರಿಸಲು ಇದು ಸರಿಯಾದ ಸಮಯವಲ್ಲ.

ಪವನ್‌ನ ಭುಜ ಇಳಿಬಿದ್ದವು. ''ನನ್ನ ತಾಯಿ ನನ್ನ ತಂದೆಯನ್ನು ಬಹಳ ಹಿಂದೆಯೆ ಬಿಟ್ಟುಬಿಡಬೇಕಿತ್ತು...""

''ಅದು ಅಷ್ಟು ಸುಲಭವಲ್ಲ, ಪವನ್‌. ನನ್ನ ಮನೆಯವರು ನನಗೆ ಬಹಳ ಬೆಂಬಲ ಕೊಡುತ್ತಾರೆ. ಅದರ ಜೊತೆಗೆ ನಾನು ಬಹಳ ಸ್ವತಂತ್ರ ಮನೋಭಾವದವಳು, ತಿಳಿದುಕೊ.""

''ನನ್ನ ತಾಯಿ ಎಂದೂ ಸ್ವತಂತ್ರ ಮನೋಭಾವದವಳಾಗಿರಲಿಲ್ಲ. ತನ್ನನ್ನು ಬಿಡದೆ ಇರುವಂತೆ ಅವರು ನನ್ನ ತಂದೆಯನ್ನು ಬೇಡಿಕೊಳ್ಳುತ್ತಿದ್ದರು. ತಪ್ಪು ತನ್ನದೆ ಎಂದು ಅವರು ಯಾವಾಗಲೂ ಅಂದುಕೊಳ್ಳುತ್ತಿದ್ದರು. ಗಂಡನ ವೃತ್ತಿಜೀವನವನ್ನು ಹಾಳುಮಾಡಿದೆ ಎಂದು ಅವರು ಪಾಪಪ್ರಜ್ಞೆ ಅನುಭವಿಸುತ್ತಿದ್ದರು.""

''ನಾನು ನಿನ್ನ ಟಿಕೆಟ್‌ ನೋಡಬಹುದೆ, ಪವನ್‌? ಏರ್‌ಲೈನ್‌ನವರಿಗೆ ಕರೆ ಮಾಡಿ ಅದನ್ನು ಬದಲಾಯಿಸುವಂತೆ ಮಾಡುತ್ತೇನೆ. ನೀನು ತಕ್ಷಣವೆ ಹೋಗಬೇಕು ಎಂದುಕೊಂಡಿದ್ದೀಯ, ಅಲ್ಲವೆ?""

''ಹೌದು. ನಾನು ಹೋಗಬೇಕು. ಆದರೆ ಅವರ ಶವಸಂಸ್ಕಾರದ ಸಮಯಕ್ಕೆ ಸರಿಯಾಗಿ ಹೋಗುತ್ತೇನೆಂದು ನನಗೆ ಅನ್ನಿಸಿಲ್ಲ. ನಮ್ಮ ಜಾತಿಯಲ್ಲಿ ಶವವನ್ನು ಒಂದು ದಿನವೂ ಇಟ್ಟುಕೊಳ್ಳುವುದಿಲ್ಲ.""

''ನಿನ್ನ ಅಣ್ಣ ದಿಲ್ಲಿಯಿಂದ ಬೆಂಗಳೂರಿಗೆ ಹೋಗಬೇಕಲ್ಲವೆ? ಹಾಗು ನಿಮ್ಮ ಅಪ್ಪ ಬನಾರಸ್‌ನಿಂದ?""

''ಹೌದು. ಅದರ ಜೊತೆಗೆ ನಾನು ಹನ್ನೊಂದನೆ ದಿನದ ಅಪರಕರ್ಮಕ್ಕೆ ಹೋಗಬೇಕು. ನನಗೆ ನಮ್ಮಪ್ಪನನ್ನು ಕಂಡರೆ ಆಗುವುದಿಲ್ಲ. ಅವರೆ ನಿಜವಾಗಲು ನನ್ನ ತಾಯಿಯನ್ನು ಕೊಂದಿದ್ದು - ನಿಧಾನವಾಗಿ, 3 ದಶಕಗಳಿಂದ. ಈಗೇನೋ ಎಲ್ಲಾ ಆಗಿ ಹೋಗಿದೆ. ಈ ಜನ್ಮದಲ್ಲಿ ನಾನು ಇನ್ನು ನಮ್ಮಪ್ಪನ ಮುಖ ನೋಡುವುದಿಲ್ಲ.""

ಮುಂದೆ ಓದಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X