ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ಯಾನ್‌ ತೆಕ್ಕೆಯಲ್ಲಿ ಕರಗಿದ ಅನುಗೆ ಗಂಡ ನೆನಪಾದ!

By Staff
|
Google Oneindia Kannada News


‘‘ಮನೆ ಒಳಗೆ ಬನ್ನಿ, ಪವನ್‌,’’ ಡ್ಯಾನ್‌ ಹೇಳಿದ. ಅವನನ್ನು ಮನೆಯ ಒಳಗೆ ಕರೆದುಕೊಂಡು ಹೋಗುವ ಮೂಲಕ ಡ್ಯಾನ್‌ ಅವಳಿಗೆ ಟಬ್ಬಿನಿಂದ ಹೊರಗೆ ಬರಲು ಅವಕಾಶ ಕಲ್ಪಿಸುತ್ತಿದ್ದ. ಆದರೆ ಅವಳು ಅದಕ್ಕೆ ಪ್ರತಿಯಾಗಿ, ಸಂಪೂರ್ಣ ಮುಜುಗರದಿಂದ ನಿಶ್ಚಲಳಾಗಿ ಕುಳಿತೇ ಇದ್ದಳು. ಅವನು ಏನು ನೋಡಿರಬಹುದು? ಬಹುಶಃ ಏನೂ ಇಲ್ಲ. ಹೇಳಬೇಕೆಂದರೆ ಅವಳು ತನ್ನ ಗಲ್ಲದವರೆಗೂ ನೀರಿನ ಗುಳ್ಳೆಯಲ್ಲಿ ಮುಳುಗಿ ಕುಳಿತಿದ್ದಳು. ಅಷ್ಟೇ ಆದರೂ ಅವನಿಗೆ ಇದರ ಬಗ್ಗೆ ಅಘಾತವಾಗಿರುತ್ತದೆ. ಇದನ್ನು ಹೇಗೆ ಅವನಿಗೆ ವಿವರಿಸುವುದು? ಏನು ಅನ್ನಿಸುತ್ತದೊ ಅದಲ್ಲ ಇದು. ಉಹ್ಞುಂ, ಹೌದು, ಇದು ಅದೆ. ಇಂದೇ ಮೊದಲ ಸಲ ಅವಳು ಡ್ಯಾನ್‌ನೊಡನೆ ದೈಹಿಕವಾಗಿ ಕೂಡಿದ್ದು. ನಾನು ಯಾವ ಕಾರಣಕ್ಕೂ ತಪ್ಪು ಮಾಡಿಲ್ಲ... ಒಂದು ರೀತಿಯಲ್ಲಿ ಹೌದು... ನಾನು ಈಗಲೂ ಭಾರತೀಯಳೆ... ನಾನು ಇದನ್ನು ಪವನ್‌ಗೆ ಅರ್ಥಮಾಡಿಸಬಲ್ಲೆ...

ಪವನ್‌ ಡ್ಯಾನ್‌ನನ್ನು ಹಿಂದಿನ ಬಾಗಿಲ ಮೂಲಕ ಹಿಂಬಾಲಿಸಿದ. ನಾನು ಯಾಕೆ ಇದನ್ನು ಪವನ್‌ಗೆ ವಿವರಿಸಬೇಕು? ಇದು ನನ್ನ ಜೀವನ. ನನ್ನಿಂದ ಅವನಿಗೆ ಏನು ಬೇಕು?

ಅನು ಟಬ್ಬಿನಿಂದ ಹೊರಗೆ ಬಂದು, ನಿಲುವಂಗಿಯನ್ನು ಸುತ್ತಿಕೊಂಡಳು. ಒಳಗೆ ಬಂದ ಕೂಡಲೆ ವೇಗವಾಗಿ ಅಡಿಗೆ ಕೋಣೆಯನ್ನು ದಾಟಿ ತನ್ನ ಕೋಣೆಗೆ ಹೋದಳು. ಅಡಿಗೆ ಕೋಣೆಯಲ್ಲಿ ಪವನ್‌ ತನ್ನ ಜೀವನದ ಅತಿ ದೊಡ್ಡ ಶಾಕ್‌ ಅನ್ನು ಈಗ ತಾನೆ ಅನುಭವಿಸಿದವನಂತೆ ಕುಳಿತಿದ್ದ. ಬಹುಶಃ ಅವನಿಗೆ ಅಂತಹ ಶಾಕ್‌ ಆಗಿರುವುದು ನಿಜವಿರಬಹುದು. ಅವನು ಪ್ರಾಯಶಃ ಇದರಿಂದ ಎಂದೂ ಹೊರಗೆ ಬರಲು ಸಾಧ್ಯವಿಲ್ಲವೇನೊ.

ಬೆಡ್‌ರೂಮಿನಲ್ಲಿ ಅವಳು ತನ್ನ ಮೈ ಒರೆಸಿಕೊಂಡು, ಜೀನ್ಸ್‌ ಪ್ಯಾಂಟು ಮತ್ತು ತೋಳಿಲ್ಲದ ಕಪ್ಪು ಮೇಲಂಗಿಯನ್ನು ಹಾಕಿಕೊಂಡಳು. ಕೂದಲನ್ನು ಗಂಟುಕಟ್ಟಿ ಸುತ್ತಿಕೊಂಡು, ಅಡಿಗೆ ಕೋಣೆಗೆ ಅವಸರದಲ್ಲಿ ಹಿಂದಿರುಗಿದಳು.

ಡ್ಯಾನ್‌ ಹವಾಮಾನದ ಬಗ್ಗೆಯೊ ಇನ್ನೆಂತಹುದರ ಬಗ್ಗೆಯೊ ಮಾತಿನಲ್ಲಿ ತೊಡಗಿದ್ದ. ಅವಳು ಅವನ ಮಾತನ್ನು ಮಧ್ಯದಲ್ಲಿಯೆ ತುಂಡರಿಸಿ, ‘‘ಪವನ್‌, ನೀನು ಯಾವಾಗ ಬಂದೆ?’’ ಎಂದು ಕೇಳಿದಳು.

‘‘ಇವತ್ತು ಬೆಳಿಗ್ಗೆ.’’

‘‘ನೀನು ಯಾಕೆ ಫೋನ್‌ ಮಾಡುವುದಿಲ್ಲ?’’ ಅವಳ ಧ್ವನಿ ಜೋರಾದದ್ದು ಅವಳ ಕಿವಿಗೂ ಕೇಳಿಸಿತು.

‘‘ನಾನು ಫೋನ್‌ ಮಾಡಿದ್ದೆ. ನನಗೆ ಸಿಕ್ಕಿದ್ದೆಲ್ಲ ನಿನ್ನ ಧ್ವನಿಮುದ್ರಿತ ಸಂದೇಶ ಮಾತ್ರ.’’

‘‘ನಾನು ನ್ಯೂಯಾರ್ಕ್‌ನಲ್ಲಿ ಇದ್ದೆ. ಸ್ವಲ್ಪ ಹೊತ್ತಿಗೆ ಮುಂಚೆಯೆ ವಾಪಸು ಬಂದಿದ್ದು.’’

ಡ್ಯಾನ್‌ ಎದ್ದು ಒಂದು ಲೋಟದಲ್ಲಿ ನೀರು ತುಂಬಿಸಿಕೊಳ್ಳುತ್ತಿದ್ದ. ಅದಕ್ಕೆ ಒಂದು ಚಹಾದ ಪೊಟ್ಟಣವನ್ನು ಹಾಕಿ ಮೈಕ್ರೊವೇವ್‌ನಲ್ಲಿ ಇಟ್ಟ. ಪವನ್‌ ಎದ್ದು ನಿಂತ.

‘‘ನಾನು ಹೋಗಬೇಕು.’’

ಅನೂಗೆ ತಪ್ಪಿತಸ್ಥೆ ಭಾವವುಂಟಾಯಿತು. ಇದು ಈ ರೀತಿಯಲ್ಲಿ ಆಗಬಾರದಿತ್ತು. ಪವನ್‌ ತನ್ನ ತಾಯಿಯ ಬಗ್ಗೆ, ಅವರ ಶವಸಂಸ್ಕಾರದ ಬಗ್ಗೆ ಮಾತನಾಡಲು ಬಂದಿರಬೇಕು. ಅವಳು ಅವನನ್ನು ಇನ್ನೂ ಒಳ್ಳೆಯ ಸಂದರ್ಭದಲ್ಲಿ ಡ್ಯಾನ್‌ಗೆ ಪರಿಚಯಿಸಬೇಕಿತ್ತು.

‘‘ನೀನು ಚೆನ್ನಾಗಿದ್ದೀಯ, ಪವನ್‌? ನಾನು ನಿನ್ನ ಜೊತೆ ಆಂಟಿ ಬಗ್ಗೆ, ಬೇರೆಯದರ ಬಗ್ಗೆ ಎಲ್ಲ ಮಾತನಾಡ ಬಯಸುತ್ತೇನೆ. ನಿನಗೆ ನಾನು ನಾಳೆ ಕರೆ ಮಾಡಲೆ?’’ ಅವನು ತಲೆಯಾಡಿಸಿ, ಅವರಿಬ್ಬರಲ್ಲಿ ಯಾರೊಬ್ಬರಿಗೂ ವಿದಾಯದ ಮಾತನ್ನು ಹೇಳದೆ ಬಾಗಿಲಿನಿಂದ ಹೊರಗೆ ನಡೆದು ಹೋದ. ಅವನಿಗೆ ಎಲ್ಲವನ್ನೂ ವಿವರಿಸಬೇಕೆಂಬ ಹತಾಶ ಬಯಕೆಯಲ್ಲಿ ಅನು ಅವನನ್ನು ಅವನ ಕಾರಿನ ತನಕ ಹಿಂಬಾಲಿಸಿದಳು.

‘‘ಪವನ್‌...’’

‘‘ಪರವಾಗಿಲ್ಲ, ಅನು. ನಾನು ಮೊದಲೆ ತಿಳಿದುಕೊಳ್ಳಬೇಕಿತ್ತು. ನನ್ನಂತಹ ಟೆಕ್ಕಿ-ಕುಡುಮಿಗಳಿಗೆ ನಿನ್ನಂತಹ ಹೆಂಗಸರು ಎಂದೂ ಸಿಗುವುದಿಲ್ಲ.’’

ಅವನು ತನ್ನ ಬಾಡಿಗೆ ಕಾರಿನ ಬಾಗಿಲನ್ನು ಮೃದುವಾಗಿ ಮುಚ್ಚಿಕೊಂಡು, ಕಾರನ್ನು ಸ್ಟಾರ್ಟ್‌ ಮಾಡಿ, ಡ್ರೈವ್‌ವೇಯಿಂದ ಹಿಂದಕ್ಕೆ ತಿರುಗಿಸಿಕೊಂಡು ಹೊರಟುಹೋದ.

‘‘ಪವನ್‌, ನೀನು ನನ್ನ ಬೆಸ್ಟ್‌ ಫ್ರೆಂಡ್‌... ಅದು ಎಂದಿಗೂ ಬದಲಾಗುವುದಿಲ್ಲ.’’ ಪವನ್‌ಗೆ ಅದು ಕೇಳಲಿಲ್ಲ.

‘‘ನಾನು ಶತಮೂರ್ಖಳು ಎನಿಸುತ್ತಿದೆ, ಡ್ಯಾನ್‌.’’

‘‘ಯಾಕೆ? ಆತ ಒಳ್ಳೆಯವನ ತರಹ ಕಾಣಿಸುತ್ತಾನೆ.’’

ಅನು ನಿಟ್ಟುಸಿರುಬಿಟ್ಟಳು. ‘‘ಅವನು ಒಳ್ಳೆಯವನೆ, ಡ್ಯಾನ್‌. ನಿಜವಾಗಲೂ ಓಳ್ಳೆಯವನು. ನಾನು ಅವನ ಹೃದಯವನ್ನು ಒಡೆದುಬಿಟ್ಟೆ. ನಾನು ಬೇರೆಯದೆ ಆದ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದವಳು. ಅಲ್ಲಿ ಹೆಂಗಸರು ಗಂಡಸರೊಂದಿಗೆ ವಿನಾಕಾರಣ ದೈಹಿಕ ಸಂಪರ್ಕ ಇಟ್ಟುಕೊಂಡಿರುವುದಿಲ್ಲ. ನಿನಗೆ ಅವೆಲ್ಲ ಎಂದೂ ಅರ್ಥವಾಗುವುದಿಲ್ಲ.’’ ಅವಳು ಸೋಫಾದ ಮೇಲೆ ಕುಸಿದು ಬಿದ್ದಳು. ದಿಂಬೊಂದನ್ನು ಗಟ್ಟಿಯಾಗಿ ಕವುಚಿಕೊಂಡಳು. ಬ್ರಾಕೊಲಿ ಚಿಕನ್‌, ಮ್ಯಾಂಡರಿನ್‌ ಸೀಗಡಿ, ಪುಟ್ಟಪೇಪರ್‌ಡಬ್ಬಿಯಲ್ಲಿದ್ದ ಅನ್ನ ಮೇಜಿನ ಮೇಲೆ ಹಾಗೆಯೆ ಇದ್ದವು, ತೆರೆಯದೆ...

‘‘ನನಗೆ ಹಸಿವಾಗುತ್ತಿದೆ, ತಿನ್ನೊಣ ಬಾ.’’ ಡ್ಯಾನ್‌ ತನ್ನ ತಟ್ಟೆಯಲ್ಲಿ ಊಟವನ್ನು ಹಾಕಿಕೊಳ್ಳಲಾರಂಭಿಸಿದ. ‘‘ಈಗಾಗಲೆ ಹತ್ತು ಗಂಟೆ ಆಯ್ತು. ಊಟಕ್ಕೆ ನಿಜವಾಗಲೂ ಲೇಟ್‌ ಆಗಿದೆ,’’ ಬಾಯ್ತುಂಬ ಚೈನೀಸ್‌ ಹೋಟಿಲಿನವರು ಕೊಡುವ ಭಾಗ್ಯದ ಬಿಸ್ಕತ್ತನ್ನು ತುರುಕಿಕೊಂಡು ಹೇಳಿದನು.

ಅನೂಗೆ ಇದ್ದಕ್ಕಿದ್ದಂತೆ ಬಹಳ ಹಸಿವಾದಂತೆನಿಸಿತು. ಯಾಕೆ ಅಮೇರಿಕಾದಲ್ಲಿ ಎಲ್ಲವೂ ಕ್ರಮಬದ್ದವಾಗಿ ಸಮಯಕ್ಕೇ ಆಗಬೇಕು? ನಾವು ಭಾರತದಲ್ಲಿ ಯಾವಾಗಲು ರಾತ್ರಿ 10ಕ್ಕೆ ಊಟ ಮಾಡುವುದು. ‘‘ಡ್ಯಾನ್‌, ನನಗೆ ಪವನ್‌ನಂತೆಯೆ ಇದ್ದ ಇನ್ನೊಬ್ಬ ಸಹಪಾಠಿ ಇದ್ದ. ಅವನು ಮೊದಲ ರ್ಯಾಂಕ್‌ ಪಡೆಯುತ್ತಿದ್ದ ವಿದ್ಯಾರ್ಥಿ. ನೋಡಲು ಸಾಮಾನ್ಯವಾಗಿ ಇದ್ದ. ಆದರೆ, ಖಂಡಿತವಾಗಿಯೂ ಬಹಳ ಒಳ್ಳೆಯ ಹುಡುಗ. ನಮ್ಮ ತರಗತಿಯಲ್ಲಿ ಕೇವಲ ಆರು ಹುಡುಗಿಯರು ಇದ್ದರು. ಅವರಲ್ಲಿ ಕನಿಷ್ಠ ನಾಲ್ಕು ಹುಡುಗಿಯರನ್ನಾದರೂ ಅವನು ಪ್ರೀತಿಸುತ್ತಿದ್ದಿರಬೇಕು. ಹುಡುಗಿಯರಿಗೆ ಅಸೈನ್‌ಮೆಂಟ್ಸ್‌ ಮುಗಿಸಲು ಸಹಾಯ ಮಾಡುತ್ತಿದ್ದ; ಪರೀಕ್ಷೆಗಳಲ್ಲಿ ಅವರು ತನ್ನದನ್ನು ಕಾಪಿ ಮಾಡಲು ಬಿಡುತ್ತಿದ್ದ. ಅವರು ತನ್ನನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಅವನಿಗೆ ಎಂದೂ ಅರ್ಥವಾಗಲಿಲ್ಲ. ಪ್ರಪಂಚದಲ್ಲೆಲ್ಲ ಹುಡುಗಿಯರು ಬೀಳುವುದು ಗಟ್ಟಿಮುಟ್ಟಾದ ಸುಂದರಾಂಗರಿಗೇನೆ. ಪವನ್‌ನಂತಹ ಒಳ್ಳೆಯ ಹುಡುಗರು ಅದರಲ್ಲಿ ಕೊನೆಯಲ್ಲಿ ಬರುತ್ತಾರೆ. ಅವನ ಬಗ್ಗೆ ಎಕ್ಸೈಟ್‌ ಆಗುವಂತಹುದು ಏನೂ ಇಲ್ಲ. ಆದರೆ ಅವನು ಒಳ್ಳೆಯ ಮನುಷ್ಯ, ಎಲ್ಲಾ ತಾಯಂದಿರೂ ತಮ್ಮ ಮಗಳಿಗೆ ಅವನಂತಹ ವರ ಸಿಗಲಿ ಎಂದು ಬಯಸುವಂತಹವನು. ಅವನಿಗೆ ಒಳ್ಳೆಯದಾಗಲಿ ಎಂದು ನಾನು ಬಯಸುತ್ತೇನೆ.’’

‘‘ಅವನು ನಿನ್ನನ್ನು ಪ್ರೀತಿಸುತ್ತಿದ್ದಾನಾ, ಅನು?’’

‘‘ಹೌದು, ಅವನು ನನ್ನನ್ನು ಪ್ರೀತಿಸುತ್ತಿದ್ದಾನೆ ಎಂದು ನನಗೆ ಗೊತ್ತು. ಆದರೆ ಅವನು ಅದನ್ನು ನಂಬುವಂತಹುದೇನನ್ನೂ ನಾನು ಮಾಡಲಿಲ್ಲ ಎಂದೂ ನನಗೆ ಗೊತ್ತು. ಭಾರತೀಯ ಹುಡುಗರು ಬಿಚ್ಚುಮಾತಿನವರಲ್ಲ. ಅವರು ಪ್ರೇಮದಲ್ಲಿ ಬೀಳುತ್ತಾರೆ, ಆದರೆ ಅದನ್ನು ಹೇಳಿಕೊಳ್ಳದೆ ಸುಮ್ಮನೆ ಹಾಗೆಯೆ ಇರುತ್ತಾರೆ. ಆಮೇಲೆ ಹುಡುಗಿಯರ ತಂದೆತಾಯಂದಿರು ಆ ಹುಡುಗಿಗೆ ಬೇರೊಬ್ಬ ಹುಡುಗನ ಜೊತೆ ಮದುವೆ ಏರ್ಪಾಡು ಮಾಡುತ್ತಾರೆ.’’

‘‘ವಿಚಿತ್ರವಾದ ದೇಶ. ವಿಚಿತ್ರವಾದ ಜನ!’’ ಡ್ಯಾನ್‌ ಇದನ್ನೆಲ್ಲ ಅರ್ಥ ಮಾಡಿಕೊಳ್ಳಲು ಸೋತ.

‘‘ಅದನ್ನು ಅಲ್ಲಗಳೆಯಲಾಗುವುದಿಲ್ಲ.’’

ಅಂದು ರಾತ್ರಿ ಮಲಗಲು ಹೋಗುವ ಮೊದಲು ಅನು ಪವನ್‌ಗೆ ಇಮೇಯ್ಲ್‌ ಮಾಡಿದಳು. ‘ದಯವಿಟ್ಟು ನನಗೆ ಕರೆ ಮಾಡು. ನಾವು ಮಾತನಾಡಬೇಕು.’ ಆದರೆ ಅವಳಿಗೆ ಅವನಿಂದ ಮತ್ತೆಂದೂ ಪ್ರತ್ಯುತ್ತರ ಬರಲಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X