ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನು-ದೀಪಕ್‌ ಮದುವೆಗೆ ಮುಹೂರ್ತ

By Staff
|
Google Oneindia Kannada News

ಮತ್ತೆ ಮತ್ತೆ ಅವಳ ಮನೆಯವರು ಮತ್ತು ಸ್ನೇಹವಲಯದಲ್ಲಿದ್ದವರು ಅದೇ ಪ್ರಶ್ನೆಯನ್ನು ಕೇಳುತ್ತಿದ್ದರು: ಇನ್ನು ಏನಕ್ಕಾಗಿ ಕಾಯುತ್ತಿದ್ದೀಯ? ಮದುವೆಯ ಸುದಿನ ಎಂದು? ಒಂದು ರಾತ್ರಿ ದೀಪಕ್‌ನ ಸ್ನೇಹಿತರೊಬ್ಬರ ಮನೆಯ ಪಾರ್ಟಿಯಲ್ಲಿ, ಸುಂದರವಾದ ಭಾರತೀಯ ತರುಣಿಯಾಬ್ಬಳು ಆ ಪರಿಚಿತ ಪ್ರಶ್ನೆಯನ್ನೆ ಕೇಳಿದಳು. ದೀಪಕ್‌ ಅನೂಳತ್ತ ಮುಗುಳ್ನಗುತ್ತ ದೃಷ್ಟಿ ಬೀರಿದ. ''ಮೇಡಮ್‌ಗೆ ಇನ್ನೂ ಖಾತರಿಯಾಗಿಲ್ಲ.""

ಆ ಮಾತಿನ ಹಿಂದಿನ ಗೂಢಾರ್ಥ ಏನಿರಬಹುದು ಎಂದು ಅನು ಯೋಚಿಸಿದಳು. ಆತ ಅವಳನ್ನೇನಾದರೂ ದೂಷಿಸುತ್ತಿದ್ದಾನೆಯೆ? ಅವಳಿಗೆ ದೊಡ್ಡ ಜಾಕ್‌ಪಾಟ್‌ ಲಾಟರಿ ಹೊಡೆದುಬಿಟ್ಟಿದೆ, ಆದರೂ ಅದನ್ನು ತೆಗೆದುಕೊಳ್ಳಲು ನಿಧಾನಿಸುತ್ತಿದ್ದಾಳೆ ಎಂದು ಎಲ್ಲರೂ ಅಂದುಕೊಳ್ಳುತ್ತಿರಬಹುದು.

''ಅವರನ್ನು ಬಹಳ ದಿನ ಕಾಯಿಸಬೇಡಿ. ಹಾಗೆ ಮಾಡಿದರೆ ನೀವು ಅವರನ್ನು ಕಳೆದುಕೊಂಡು ಬಿಡುತ್ತೀರಿ."" ಆ ತರುಣಿ ತಮಾಷೆಯಾಗಿ ಹೇಳುತ್ತ ತನ್ನ ನೋಟವನ್ನು ದೀಪಕ್‌ನೆಡೆಗೆ ತಿರುಗಿಸಿದಳು. ''ಅನೂ ಏನಾದರೂ ನಿಮ್ಮನ್ನು ಬಿಟ್ಟಲ್ಲಿ ಸರದಿಯಲ್ಲಿನ ಮುಂದಿನ ಪಾಳಿ ನನ್ನದೆ.""

ಅದು ತಮಾಷೆಯ ಮಾತಿನಂತೆ ಕಾಣಿಸದಿದ್ದರೂ, ಅನು ಸುಮ್ಮನೆ ಮುಗುಳ್ನಕ್ಕಳು. ದೀಪಕ್‌ನನ್ನು ಅರ್ಥಮಾಡಿಕೊಳ್ಳಲು ಅವಳಿಗೆ ಕಷ್ಟವಾಗುತ್ತಿತ್ತು. ಆತನ ಸ್ನೇಹಿತೆಯರು ಅವನೊಂದಿಗೆ ಬೆರೆಯಲು ಅವನೇ ಅವಕಾಶ ಮಾಡಿಕೊಡುತ್ತಿದ್ದ, ಅದರೆ ಡ್ಯಾನ್‌ನಂತಹ ಒಬ್ಬ ಸ್ನೇಹಿತನ ಬಗ್ಗೆ ಅವನೊಂದಿಗೆ ಮಾತನಾಡಲು ಅವಳಿಗೆ ಸಾಧ್ಯವಿರಲಿಲ್ಲ. ಆತ ಮೇಲ್ದರ್ಜೆಯ ಸಮಾಜದಲ್ಲಿ ಬೆಳೆದವನು. ನಾನು ಸಣ್ಣ ಮನಸ್ಸಿನವಳಾಗಬಾರದು.

ಈ ಸಂಬಂಧದಲ್ಲಿ ಏನು ಸಮಸ್ಯೆ ಇರಬಹುದು ಎಂದು ಎಷ್ಟು ಯೋಚಿಸಿದರೂ ಅವಳಿಗೆ ಹೊಳೆಯಲಿಲ್ಲ. ಆತನ ಯಾವುದೇ ಭೌತಿಕ ವಸ್ತುಗಳು ತನಗೆ ಬೇಕಿಲ್ಲ ಎಂದು ಅವಳ ಅಂತರಂಗಕ್ಕೆ ಭಾಸವಾಗುತ್ತಿತ್ತು. ಅವನು ತೋರಿಸುತ್ತಿದ್ದ ಅತಿಯಾದ ಪ್ರೀತಿ ಅವಳಿಗೆ ಉಸಿರುಕಟ್ಟುವಂತೆ ಭಾಸವಾಗುತ್ತಿತ್ತು. ಅವಳಿಗೆ ತನ್ನ ಸ್ವಾತಂತ್ರ್ಯಬೇಕಾಗಿತ್ತು. ಆತ ತನ್ನನ್ನು ಬಿಟ್ಟುಹೋಗಿಬಿಡಬೇಕೆಂದೂ, ತನ್ನಷ್ಟಕ್ಕೆ ತನ್ನನ್ನು ಬಿಡಬೇಕೆಂದೂ ಅನ್ನಿಸುತ್ತಿತ್ತು.

ಹೀಗೆ ತನ್ನ ಮೇಲೆ ತನಗೇ ಹತಾಶೆಯಾಗಿ, ಅವಳು ಅಪ್ಪನಿಗೆ ಕರೆ ಮಾಡಿದಳು. ''ಅಪ್ಪ, ನಾನು ತುಂಬಾ ಸಂತೋಷವಾಗಿರಬೇಕಿತ್ತು. ನನ್ನನ್ನು ನಾನೆ ಅದೃಷ್ಟವಂತಳೆಂದು ಪರಿಗಣಿಸಿಕೊಳ್ಳಬೇಕಿತ್ತು. ಆದರೆ ಯಾಕೋ ನನಗೆ ಹಾಗೆ ಅನ್ನಿಸುತ್ತಿಲ್ಲ. ನಾನು ಯಾವುದೇ ತಪ್ಪು ಮಾಡುವುದು ನನಗೆ ಬೇಕಿಲ್ಲ.""

ಅನೂಳ ತಾಯಿ ಸಹ ಈ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಿದ್ದಳು. ಆಕೆ ಬಹಳ ಕಠಿಣವಾಗಿ, ''ನಿನಗೆ ವಯಸ್ಸಾಗುತ್ತಿದೆ. ಜೀವನಪೂರ್ತಿ ಒಂಟಿಯಾಗಿರುವುದು ಬೇಕೇನು ನಿನಗೆ? ಏನಾಗಿದೆ ನಿನಗೆ?"" ಎನ್ನುತ್ತ ಪೋನನ್ನು ಕೋಪದಿಂದ ಕುಕ್ಕಿದರು. ಆದರೆ ಅವಳಪ್ಪ ಇನ್ನೊಂದು ಪೋನಿನಲ್ಲಿ ಲೈನ್‌ ಮೇಲೆಯೇ ಇದ್ದರು. ಅವರು ಎಂದಿನಂತೆ ಮಮಕಾರದಿಂದ, ತೀರ್ಪು ನೀಡದವರಂತೆ ನುಡಿದರು.

''ಜೀವನದಲ್ಲಿ ಒಬ್ಬ ಬಾಳಸಂಗಾತಿಯನ್ನು ಪಡೆಯುವುದು ಬಹಳ ಮುಖ್ಯ, ಅನು. ಆದರೆ ಮದುವೆ ಎನ್ನುವುದು ಒಂದು ಗಂಭೀರವಾದ ವಿಷಯ. ಅದು ಜೀವನವನ್ನು ಅನೇಕ ರೀತಿಯಲ್ಲಿ ಬದಲಾಯಿಸಿ ಬಿಡುತ್ತದೆ. ನಮಗೆ ದೀಪಕ್‌ ಇನ್ನೂ ಗೊತ್ತಿಲ್ಲ. ಆದರೆ ನೀನು ಆತನ ಬಗ್ಗೆ ಹೇಳುವುದನ್ನು ಗಮನಿಸಿದರೆ, ಆತ ನಿನ್ನನ್ನು ಪ್ರೀತಿಸುತ್ತಾನೆ ಎಂದು ಗೊತ್ತಾಗುತ್ತದೆ. ಆತ ಒಳ್ಳೆಯ ಕುಟುಂಬಕ್ಕೆ ಸೇರಿದವನು. ಅವನ ಪೋಷಕರು ಸಹ ಬಹಳ ಸುಸಂಸ್ಕೃತರಂತೆ ಕಾಣಿಸುತ್ತಾರೆ. ನಮಗೇನೋ ನೀನು ಸಂತೋಷವಾಗಿರುವುದು ಬೇಕು. ಆದರೆ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕಾದವಳು ನೀನೇ. ನೀನು ಏನೇ ನಿರ್ಧಾರ ತೆಗೆದುಕೊಂಡರೂ ನಾವು ನಿನ್ನ ಜೊತೆಗೆ ಇರುತ್ತೇವೆ.""

ಅವಳ ಅಪ್ಪ ಹೇಗೆ ಅವಳ ತಾಯಿಯನ್ನೂ ಅದರಲ್ಲಿ ಭಾಗಿಮಾಡಲು ಮತ್ತು ಆಕೆಗೂ ಗೌರವ ಕೊಡಲು ಹೇಗೆ 'ನಾವು" ಎಂದು ಹೇಳಿದರೆಂದು ಅವಳು ಗಮನಿಸಿದಳು. ದೀಪಕ್‌ ಅವಳನ್ನು ಇಲ್ಲಿಯತನಕ ಯಾವ ನಿರ್ಧಾರದಲ್ಲಿಯೂ ಭಾಗಿ ಮಾಡಿರಲಿಲ್ಲ. ಎಲ್ಲವನ್ನೂ ಅವನೇ ನಿರ್ಧರಿಸಿ ಬಿಡುತ್ತಿದ್ದ. ಅವಳ ತಂದೆ 'ನಾವು" ಎಂದು ಹೇಳಿದಂತೆ ಅವನೆಂದಾದರೂ ಹೇಳುತ್ತಾನೆಯೆ?

ಆ ಮಾತಿನ ನಂತರ ಅಪ್ಪನಿಗೆ ವಿದಾಯ ಹೇಳಿ, ಪೋನ್‌ ಕರೆ ತುಂಡರಿಸಿ, ತಕ್ಷಣ ದೀಪಕ್‌ಗೆ ಕರೆ ಮಾಡಿದಳು. ''ದೀಪಕ್‌, ಮದುವೆಯ ದಿನ ನಿರ್ಧರಿಸಿ ಬಿಡೋಣ."" ಆಗಲೂ, ನಮ್ಮಮ್ಮನಿಗೆ ನಿರಾಶೆಯಾಗದಿರಲಿ ಎಂದು ನಾನು ಇದನ್ನು ಮಾಡುತ್ತಿದ್ದೇನೆಯೆ ಎಂದು ತನಗೆ ತಾನೆ ಕೇಳಿಕೊಂಡಳು.

''ಅನು, ನನಗೆ ಎಷ್ಟೊಂದು ಖುಷಿಯಾಗುತ್ತಿದೆ, ಗೊತ್ತೆ? ಇದನ್ನು ಕೇಳಲು ಇಡೀ ಜನ್ಮ ಕಾದೆ. ಆದರೆ ಇದಕ್ಕೆ ನೀನು ಮಾನಸಿಕವಾಗಿ ಸಿದ್ದಳಾಗುವುದು ಬೇಕಿತ್ತು ನನಗೆ. ಮದುವೆ ಯಾವಾಗ ಇಟ್ಟುಕೊಳ್ಳೋಣ?""

''ಆದಷ್ಟು ಬೇಗ.""

ಡಿಸೆಂಬರ್‌ 11ರಂದು ಬೆಂಗಳೂರಿನಲ್ಲಿ ಮದುವೆಯೆಂದೂ, ಹಾಗೂ ಅದಕ್ಕಾಗಿ ಸೂಕ್ತ ತಯಾರಿಗಳನ್ನು ಮಾಡಿಕೊಳ್ಳಬೇಕೆಂದೂ, ಅವರಿಬ್ಬರೂ ತಮ್ಮ ತಮ್ಮ ಮನೆಯವರಿಗೆ ಕರೆ ಮಾಡಿ ತಿಳಿಸಿದರು. ಎರಡೂ ಮನೆಯವರಿಗೆ ಅದನ್ನು ಕೇಳಿ ತುಂಬ ಸಂತೋಷವಾಯಿತು.

(ಸಶೇಷ)

ಅಧ್ಯಾಯ - 21 ಅಧ್ಯಾಯ - 23

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X