ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನು ಮನಸ್ಸಿನಲ್ಲಿ ನೆಲೆಸಿದ್ದು ಯಾರು?

By Staff
|
Google Oneindia Kannada News

ಆರು ತಿಂಗಳ ನಂತರವೂ ಅನೂಗೆ ಡ್ಯಾನ್‌ ಮತ್ತು ಪವನ್‌ ಇಬ್ಬರಿಂದಲೂ ಯಾವುದೇ ಸುದ್ದಿ ಬರಲಿಲ್ಲ. ಇದರಿಂದ ಅವಳಿಗೆ ಆಶ್ಚರ್ಯವಾಗದಿದ್ದರೂ ನಿರಾಶೆಯಾಗಿದ್ದಂತೂ ನಿಜ. ಡ್ಯಾನ್‌ ಲಾಸ್‌ ಏಂಜಲೀಸ್‌ನಲ್ಲಿ ಬಹುಶಃ ಒಬ್ಬಳು ಉದ್ದನೆಯ ಕಾಲಿನ, ಎಲ್ಲಾ ಕಡೆಯೂ ಬಿಕಿನಿ ಧರಿಸಿಯೇ ಓಡಾಡುವ ಹೊಂಗೂದಲ ಚೆಲುವೆಯನ್ನು ಭೇಟಿಯಾಗಿರಬಹುದು ಎಂದು ಕೊಂಡಳು. ಏನೇ ಇರಲಿ, ತನ್ನ ಪದವಿಯನ್ನು ಇನ್ನೊಂದು ವರ್ಷದಲ್ಲಿ ಭಾರತಕ್ಕೆ ಹಿಂದಿರುಗವ ಸಮಯಕ್ಕೆ ಸರಿಯಾಗಿ ಮುಗಿಸಿರುತ್ತಾಳೆ. ಈ ದೇಶ ನನಗಾಗಿ ಅಲ್ಲ.

ಆದಾಗ್ಯೂ ಅವಳ ಮನಸ್ಸಿನ ಹಿನ್ನೆಲೆಯಲ್ಲಿ ಡ್ಯಾನ್‌ ಇದ್ದ. ಆತ ಲಾಸ್‌ ಏಂಜಲೀಸ್‌ನಿಂದ ಬಂದ ಮೇಲೆ ಏನಾದರು ಅವಳಿಗೆ ಫೋನ್‌ ಮಾಡಬಹುದೆ?

ಪವನ್‌ ಬಹಳ ವರ್ಷಗಳಿಂದಲೂ ಅವಳಿಗೆ ಕಾಗದ ಬರೆಯುತ್ತಿದ್ದ. ಅವನೇನು ಬರೆದಿದ್ದಾನೆ ಎಂದು ಊಹಿಸಬಹುದಾದ ರೀತಿಯಲ್ಲಿ ಅವನ ಕಾಗದಗಳು ಇರುತ್ತಿದ್ದವು. ಆದರೂ ಅವನ ಪತ್ರ ವ್ಯವಹಾರಕ್ಕೆ ನಿಯಮಿತ ಕ್ರಮವಿರಲಿಲ್ಲ. ಅವನ ಕಾಗದವನ್ನು ನಿರೀಕ್ಷಿಸದೇ ಇದ್ದ ಸಮಯದಲ್ಲಿ ಅವನಿಂದ ಕಾಗದಗಳು ಬರುತ್ತಿದ್ದವು ಮತ್ತು ಅವಕ್ಕೆ ಅನು ತನ್ನದೇ ಆದ ಸಮಯ ತೆಗೆದುಕೊಂಡು ಎಂದೋ ಒಂದು ದಿನ ಉತ್ತರಿಸುತ್ತಿದ್ದಳು.

ಈ ದೇಶದಲ್ಲಿ ಸ್ನೇಹಿತರನ್ನು ಮಾಡಿಕೊಳ್ಳುವುದು ತುಂಬ ಕಷ್ಟ. ಜನ ಹೇಗೆ ಬೇರೆಯವರನ್ನು ಸಂಧಿಸುತ್ತಾರೆ ಇಲ್ಲಿ ?ಆಕೆ ತನ್ನ ಭಾರತೀಯ ರೂಮ್‌ಮೇಟ್‌ಗಳೊಂದಿಗೆ ಇಷ್ಟೊತ್ತಿಗೆ ಒಳ್ಳೆಯ ಸ್ನೇಹ ಬೆಳೆಸಿಕೊಂಡಿದ್ದಳು. ಆದರೆ ಅವರು ತಮ್ಮ ಬಹುಪಾಲು ಬಿಡುವಿನ ಸಮಯವನ್ನು ಫೋನಿನಲ್ಲಿ ತಮ್ಮ ಗಂಡಂದಿರೊಂದಿಗೋ ಇಲ್ಲವೆ ಭಾವಿಪತಿಯರೊಂದಿಗೋ ಮಾತನಾಡುತ್ತ ಕಳೆಯುತ್ತಿದ್ದರು. ಇಬ್ಬರಿಗೆ ಮದುವೆಯಾಗಿತ್ತು. ಆದರೆ ಅವರ ಗಂಡಂದಿರು ದೂರದ ಊರುಗಳಲ್ಲಿ ಕೆಲಸ ಮಾಡುತ್ತಿದ್ದರು. ಇವರು ತಮ್ಮ ವೀಸಾ ಉಳಿಸಿಕೊಳ್ಳಲು ವಿದ್ಯಾರ್ಥಿಗಳಾಗಿ ಕಾಲೇಜಿಗೆ ಹೋಗಬೇಕಿತ್ತು. ಮೂರನೆಯವಳಿಗೆ ಅಮೇರಿಕದಲ್ಲಿ ಜನಿಸಿದ ಭಾರತೀಯನೊಬ್ಬನೊಂದಿಗೆ ನಿಶ್ಚಿತಾರ್ಥವಾಗಿತ್ತು.

ಆ ಹುಡುಗ ಅಮೇರಿಕದ ಪೂರ್ವ ಭಾಗದಲ್ಲಿ ಇದ್ದ. ಈ ನಾಲ್ವರು ಸರದಿಯ ಪ್ರಕಾರ ಭಾರತದ ಅಡಿಗೆ ಮಾಡುತ್ತಿದ್ದರು. ಉಳಿದವರಿಗೆ ಅನೂಳ ಪೋಷಕರು ಅವಳಿಗೆ ಮೊದಲು ಗಂಡು ಹುಡುಕದೆ ಅದು ಹೇಗೆ ಅಮೇರಿಕಕ್ಕೆ ಕಳುಹಿಸಿದರು ಎನ್ನುವುದನ್ನು ಅರಗಿಸಿಕೊಳ್ಳಲು ಇನ್ನೂ ಆಗಿರಲಿಲ್ಲ. ಅಮೇರಿಕದಲ್ಲಿ ಸ್ವತಂತ್ರವಾಗಿ ಒಬ್ಬಳೇ ಎರಡು ವರ್ಷ ವಾಸ ಮಾಡಿದ ಮೇಲೆ ಭಾರತದಲ್ಲಿ ಅವಳನ್ನು ಯಾರು ಮದುವೆಯಾಗುತ್ತಾರೆ? ಅವಳಿಗೆ ಅಮೇರಿಕದಲ್ಲಿ ಯಾವುದೇ ಬಾಯ್‌ಫ್ರೆಂಡ್‌ ಇರಲಿಲ್ಲ, ಅವಳು ಮದ್ಯಪಾನ ಮಾಡಿಲ್ಲ, ಅಥವಾ ಗೋಮಾಂಸ ತಿಂದಿಲ್ಲ ಎಂದರೆ ಯಾರೂ ನಂಬುವುದಿಲ್ಲ. ಆಕೆಯ ಅಯ್ಕೆಗಳು ಪವನ್‌ನತ್ತಲೇ ಇಳಿಯುತ್ತಿದ್ದವು. ಆದರೆ ಅವನನ್ನು ಮದುವೆಯಾಗುವುದು ಅವಳಿಗೆ ಇಷ್ಟವೇ?

ಮಾರನೆಯ ದಿನ ಅವನ ಕಾಗದ ಬಂದಿತು.

ಸೆಪ್ಟೆಂಬರ್‌ 15

ಬೆಂಗಳೂರು

ಆತ್ಮೀಯ ಅನು,

ನನಗೆ ನಿನ್ನ ಕಾಗದ ಕೆಲವು ತಿಂಗಳುಗಳ ಹಿಂದೆ ತಲುಪಿತು. ಅಮೇರಿಕದ ಬಗ್ಗೆ ನಿನ್ನ ಅಭಿಪ್ರಾಯಗಳು ಮತ್ತು ನೀನು ಅಲ್ಲಿಗೆ ಏತಕ್ಕೆ ಹೋದೆ ಎನ್ನುವುದನ್ನು ಕೇಳುವುದು ಆಸಕ್ತಿದಾಯಕವಾಗಿತ್ತು. ಕೆಲವೊಂದು ವಿಷಯಗಳನ್ನು ನೀನು ನಿರ್ಭಿತಿಯಿಂದ ಚರ್ಚಿಸಿದ್ದೀಯಾ. ಈ ದೇಶದಲ್ಲಿನ ಸ್ತ್ರೀಯರನ್ನು ನಾವು ಶಕ್ತರನ್ನಾಗಿ ಮಾಡಿಲ್ಲ ಎನ್ನುವುದು ದುಃಖದ ವಿಷಯವಾದರೂ ಅದು ನಿಜ. ಅವರು ನಮ್ಮ ಮನೆಗಳನ್ನು ಸ್ವಚ್ಛ ಮಾಡಲು ಪ್ರತಿದಿನ ಬರುವ ಮನೆಗೆಲಸದವರಿಗಿಂತ ಒಂದಿಂಚು ಮೇಲೆ ಅಷ್ಟೆ, ಮತ್ತೇನಿಲ್ಲ. ಹೆಂಗಸರು ಯಾವಾಗಲೂ ಅಡಿಗೆ ಮನೆಯಲ್ಲಿರುತ್ತಾರೆ, ಇಲ್ಲಾ ತಮ್ಮ ಗಂಡ ಮತ್ತವನ ಮುಗಿಯದ ಬಳಗದ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿರುತ್ತಾರೆ. ಅವರಿಗೆ ತಮ್ಮದೇ ಆದ ಬಾಳು ಇರುವುದು ಕಡಿಮೆ.

ಇಲ್ಲಿನ ಕೆಲವು ಸ್ತ್ರೀಯರು ತಮಗೆ ತಾವೇ ಶಿಕ್ಷಣ ಪಡೆಯುವ, ವರದಕ್ಷಿಣೆಯನ್ನು ತಿರಸ್ಕರಿಸುವ, ಮತ್ತಿತರ ಸಮಾಜದ ಆಚಾರಗಳ ವಿರುದ್ಧ ತಮ್ಮದೇ ಆದ ಧೋರಣೆಗಳನ್ನು ಬೆಳೆಸಿಕೊಂಡಿರುವುದನ್ನು ಕಾಣುವುದು ಹೊಸತು. ನನ್ನ ಬೆಸ್ಟ್‌ ಫ್ರೆಂಡ್‌ ಆದ ಅನು ಆ ರೀತಿಯ ಒಬ್ಬ ಸ್ವತಂತ್ರ ಹೆಣ್ಣಾಗಿ ಬೆಳೆದಿರುವುದು ನನಗೆ ಹೆಮ್ಮೆಯ ವಿಷಯ.

ಆದರೆ ನೀನು ಭಾರತಕ್ಕೆ ಎಂದು ಹಿಂದಿರುಗುತ್ತಿರುವೆ? ನಾವು ಭೇಟಿಯಾಗಬೇಕು. ನಮ್ಮ ಕಂಪನಿ ಪ್ರಾಜೆಕ್ಟಿನ್‌ ಮೇಲೆ ನನ್ನನ್ನು ಅಮೇರಿಕಕ್ಕೆ ಕಳುಹಿಸುತ್ತದೆ ಎನ್ನುವುದು ನನ್ನ ನಿರೀಕ್ಷೆ. ಆದರೆ ನಾನು ಕಲಿಯುವುದು ಇನ್ನೂ ಬಹಳಷ್ಟಿದೆ. ನಾನು ಸ್ವತಂತ್ರವಾಗಿ ಪ್ರಾಜೆಕ್ಟುಗಳನ್ನು ಸಂಬಾಳಿಸಬಹುದು ಎಂದು ಇನ್ನೂ ನನಗನ್ನಿಸಿಲ್ಲ.

ನಾನು ನಮ್ಮ ಸ್ನೇಹವನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ನಾನು ಬಹಳ ದಿನ ಕಾದು ಬಿಟ್ಟೆ.

- ಪವನ್‌

ಅವಳು ಉನ್ನತ ಪದವಿ ಓದಲು ಹೋಗಿದ್ದು ಮೆಚ್ಚತಕ್ಕದ್ದು ಅಂದು ಆತ ಭಾವಿಸಿದ್ದ. ಈ ತರಹದ, ಸ್ತ್ರೀಯರ ಹಕ್ಕುಗಳನ್ನು ಗೌರವಿಸುವಂತಹ ಮನುಷ್ಯನನ್ನೆ ಅಲ್ಲವೆ ಅವಳು ಮದುವೆಯಾಗಬೇಕಿರುವುದು?

(ಸಶೇಷ)

ಅಧ್ಯಾಯ - 8 ಅಧ್ಯಾಯ - 10

(c) ಹಕ್ಕುಗಳು : ಲೇಖಕರದು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X