ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನು ಮತ್ತು ಡೇನಿಯಲ್‌ ಮಧ್ಯೆ ಪ್ರೇಮರಾಗ?

By Staff
|
Google Oneindia Kannada News

ಅಮೇರಿಕದಲ್ಲಿ ಪದವಿ ಶಿಕ್ಷಣ ಪ್ರಾರಂಭಿಸಿ ಸುಮಾರು 8 ತಿಂಗಳು ಆಗಿತ್ತು. ತಾನು ಇತರ 3 ಜನ ಭಾರತೀಯ ಯುವತಿಯರೊಡನೆ ಹಂಚಿಕೊಂಡಿದ್ದ ಅಪಾರ್ಟ್‌ಮೆಂಟಿನಿಂದ 5 ಮೈಲಿಗಳ ದೂರದಲ್ಲಿ ವಾಸವಿದ್ದ ಭಾರತೀಯರೊಬ್ಬರ ಮನೆಗೆ ಹೋಗಲು ಅನು ಬಸ್ಸಿಗಾಗಿ ಕಾಯುತ್ತಿದ್ದಳು. 45 ನಿಮಿಷಗಳಿಗೊಮ್ಮೆ ಬಸ್ಸು ಬರುತ್ತಿತ್ತು. ಅಂದು ಶನಿವಾರ ಆದ್ದರಿಂದ ಬಸ್ಸುಗಳು ಇನ್ನೂ ನಿಧಾನಿಸಿ ಬರುತ್ತಿದ್ದವು.

ಅದೇ ದಿನ ಅನು ಡೇನಿಯಲ್‌ ಕೂಪರ್‌ನನ್ನು ನೋಡಿದ್ದು. ಆತ ಕನಿಷ್ಠ ಆರು ಅಡಿ ಎತ್ತರವಿದ್ದ. ಆತನ ಸ್ವಲ್ಪ ಮಾಸಿದ್ದ ನೀಲಿಬಣ್ಣದ ಜೀನ್ಸ್‌ನಂತೆಯೇ ಇದ್ದವು ಅವನ ನೀಲಿಕಣ್ಣುಗಳು. ಅಸಾಮಾನ್ಯವೆನಿಸುವಷ್ಟು ಸುಂದರನಾಗಿದ್ದ. ಆತನ ಕಾರಿನಿಂದ ಬಾಕ್ಸುಗಳನ್ನು ಹೊತ್ತುಕೊಂಡು ಅಪಾರ್ಟ್‌ಮೆಂಟಿನ ಒಳಗೆ ಹೊರಗೆ ಅನೇಕ ಸಲ ಓಡಾಡುತ್ತಿದ್ದ. ಹಾಗೆ ಪ್ರತಿ ಸಲ ತೆಗೆದುಕೊಂಡು ಹೋಗುತ್ತಿದ್ದಾಗಲೂ ಅನುಳತ್ತ ಮುಗುಳು ನಗೆ ಬೀರುತ್ತಿದ್ದ. ಆತ ನನ್ನ ಅಪಾರ್ಟ್‌ಮೆಂಟ್‌ ಕಾಂಪ್ಲೆಕ್ಸ್‌ನಲ್ಲಿ ವಾಸಿಸಲು ಬರುತ್ತಿದ್ದಾನೆಯೆ? ಅನು ತಾನೂ ಮುಗುಳ್ನಕ್ಕು, ಆದರೆ ಗಮನಿಸದಿರುವಂತೆ ನಟಿಸುತ್ತ ಭಾರತದ ವಿದ್ಯಾಮಾನಗಳೊಂದಿಗೆ ಸಂಪರ್ಕ ಉಳಿಸಿಕೊಳ್ಳಲು ಕೊಂಡಿದ್ದ ಇಂಡಿಯಾ ಟುಡೆ ಮ್ಯಾಗಜೈನನ್ನು ಓದುತ್ತಿದ್ದಳು. ಭಾರತದಲ್ಲಿ ಯಾರೊಬ್ಬರೂ ಅವಳಿಗೆ ಅವಳ ರೂಪ ಆಕರ್ಷಕ ಎಂದಿರಲಿ, ಪರವಾಗಿಲ್ಲ ಎಂದು ಸಹ ಹೇಳಿರಲಿಲ್ಲ. ಆಕೆ ತನ್ನನ್ನು ತಾನೆ ಸಾಧಾರಣ ರೂಪಿನವಳು ಎಂದು ಭಾವಿಸಿದ್ದಳು. ಹಾಗಾಗಿ ಈ ಯುವಕ ತನ್ನ ಕೈಗೆಟುಕದವ ಎಂದು ಭಾವಿಸಿಕೊಂಡಳು. ಜೊತೆಗೆ, ಆತ ಬಿಳಿಯ.

''ನೋಡಿದರೆ ನಿಮ್ಮ ಬಸ್ಸು ಇವತ್ತು ಬರುವ ಹಾಗೆ ಕಾಣಿಸುತ್ತಿಲ್ಲ,"" ಆತ ಕೊನೆಗೂ ನುಡಿದ. ''ಎಲ್ಲಿಗೆ ಹೋಗುತ್ತಿದ್ದೀರಿ? ಇಲ್ಲಿ ನನ್ನ ಕೆಲಸ ಮುಗಿಯಿತು. ನಿಮ್ಮನ್ನು ಅಲ್ಲಿಗೆ ಬೇಕಾದರೆ ಬಿಡಬಲ್ಲೆ.""

ಅವಳಿಗೆ ಆತ ಒಳ್ಳೆ ಸಿನಿಮಾನಟನಂತೆ ಕಂಡ. ದಿಗ್ಭ್ರಾಂತಿಯಲ್ಲಿದ್ದ ಅವಳು ಆತನ ಉದ್ದೇಶಗಳನ್ನು ಅರಿಯದಷ್ಟು ಮುಗ್ಧಳಾಗಿದ್ದಳು. ಆಕೆಯ ಜೀವನದಲ್ಲಿ ಹಿಂದೆಂದೂ ಒಬ್ಬ ಗಂಡಸು ಅವಳನ್ನು ಡೇಟ್‌ಗಾಗಿ ಕೇಳಿರಲಿಲ್ಲ ಹಾಗು ಅವಳು ಅಷ್ಟು ಸುಂದರ ಯುವಕನ ಜೊತೆ ಎಂದೂ ಮಾತನಾಡಿರಲಿಲ್ಲ. ವಿನಯದಿಂದ ತಿರಸ್ಕರಿಸಿದಳು. ''ಬೇಡ, ಥ್ಯಾಂಕ್ಸ್‌. ನಾನು ಬಸ್ಸಿಗಾಗಿ ಕಾಯುತ್ತೇನೆ.""

''ನಾನು ನೀವು ಹೋಗುವ ಕಾಲೇಜಿಗೇ ಹೋಗುತ್ತೇನೆ. ಅಲ್ಲಿ ಆಗಾಗ ನಿಮ್ಮನ್ನು ನೋಡಿದ್ದೇನೆ. ನಿಮ್ಮವಷ್ಟು ಸುಂದರವಾದ ಕಣ್ಣುಗಳನ್ನು ನಾನು ಎಂದೂ ನೋಡಿಲ್ಲ.""

ಆತನ ಸಹಜವಾದ ಹೊಗಳಿಕೆಗೆ ಮುದುಡಿಕೊಂಡ ಅನು ಸಂಕೋಚದಿಂದ ತಲೆ ಬಗ್ಗಿಸಿದಳು. ನಂತರ ಸ್ವಲ್ಪ ಧೈರ್ಯ ತಂದುಕೊಂಡು, ''ಥ್ಯಾಂಕ್ಸ್‌, ನೀವೇನು ಓದುತ್ತಿದ್ದೀರಿ?"" ಎಂದಳು.

''ಕ್ರಿಮಿನಾಲಜಿ. ನೀವು ಭಾರತದಿಂದ ಬಂದಿರುವ ಇಂಜಿನಿಯರ್‌ ಆಗಿರಬೇಕು?""

ಅದು ಅವಳನ್ನು ನಗುವಂತೆ ಮಾಡಿತು. ''ಹೌದು, ನೀವು ಸರಿಯಾಗಿ ಊಹಿಸಿದಿರಿ. ಕಾಲೇಜಿನಲ್ಲಿ ಓದುತ್ತಿರುವ ನಮ್ಮ ಬಹಳಷ್ಟು ಜನರು ಇಂಜಿನಿಯರ್‌ಗಳೇ ಎಂದು ಭಾವಿಸುತ್ತೇನೆ.""

''ಇಲ್ಲಿಗೆ ವಲಸೆ ಬಂದಿರುವ ಮೊದಲ ಪೀಳಿಗೆಯ ಎಲ್ಲರೂ ಹೌದು. ನನಗೆ ನನ್ನ ಜೊತೆ ಬಿಜಿನೆಸ್‌ ಶಾಲೆಯಲ್ಲಿದ್ದ ಕೆಲವು ಎರಡನೇ ಪೀಳಿಗೆಯ ಭಾರತೀಯ ಸ್ನೇಹಿತರಿದ್ದಾರೆ. ಅವರೆಲ್ಲರೂ ಮಾರ್ಕೆಟಿಂಗ್‌ ಇಲ್ಲವೇ ಫೈನಾನ್ಸ್‌ ಓದುತ್ತಿದ್ದಾರೆ."" ಆತ ತನ್ನ ಕೈಯನ್ನು ಮುಂಚಾಚಿದ. ''ನಾನು ಡೇನಿಯಲ್‌ ಕೂಪರ್‌.""

ಆತನ ಹಸ್ತಲಾಘವ ಬಲಿಷ್ಠವಾಗಿ, ದೃಢವಾಗಿ ಇತ್ತು. ''ನಾನು ಅನು.""

ಅಮೇರಿಕದಲ್ಲಿ ಸಾಮಾನ್ಯವಾಗಿ ಹೇಳುವ ಕೊನೆಯ ಹೆಸರನ್ನು ಹೇಳದ ಆಕೆಯ ಗುಟ್ಟು ಅವನಿಗೆ ತಮಾಷೆ ಉಂಟು ಮಾಡಿತು. ''ಅಂದರೆ ನೀವು ನಿಮ್ಮ ಕೊನೆಯ ಹೆಸರು ಹೇಳುವುದಿಲ್ಲ ಅಂತಾಯಿತು. ನಿಮ್ಮನ್ನು ಬೆಂಬತ್ತಿ ಹುಡುಕಿ ಬಿಡ್ತೀನಿ ಅಂತ ಭಯವೇ?""

ಡೇನಿಯಲ್‌ ಅವಳ ಜೊತೆ ಫ್ಲರ್ಟ್‌ ಮಾಡಲು ಪ್ರಾರಂಭಿಸಿದ್ದಾನೆ ಎಂದು ಅಷ್ಟೊತ್ತಿಗೆ ಅವಳಿಗೆ ಗೊತ್ತಾಗಿತ್ತು. ಆದರೆ ಅವನು ಏನು ಹೇಳಿದ ಎಂದು ಅವಳಿಗೆ ಅರ್ಥವಾಗಲಿಲ್ಲ.

''ಭಯ ಯಾವುದಕ್ಕೆ? ನನ್ನ ಪೂರ್ಣ ಹೆಸರು ತುಂಬಾ ಉದ್ದ -ಅನುರಾಧ ಸತ್ಯನ್‌, ಸ್ವಲ್ಪ ಜಟಿಲ ಅಲ್ಲವೇ? ಭಾರತದಲ್ಲಿ ನಾವು ನಮ್ಮ ಮೊದಲ ಹೆಸರು ಮಾತ್ರ ಹೇಳುತ್ತೇವೆ.""

''ವಾವ್‌! ಅನು ಅನ್ನುವುದೇ ಸುಲಭವಾಗಿದೆ. ನೀವು ನನ್ನನ್ನು ಡ್ಯಾನ್‌ ಎಂದು ಕರೆಯಬಹುದು. ನಾನು ನಿಮಗೆ ಯಾವಾಗಲಾದರು ಪೋನ್‌ ಮಾಡಬಹುದೆ?""

ಈಗ ಅಕೆ ಕುತೂಹಲಗೊಂಡಳು. ''ಹೌದು ಡ್ಯಾನ್‌, ಕ್ರಿಮಿನಾಲಜಿ ಅಂದರೆ ಏನು? ಅದನ್ನು ಯಾವತ್ತೂ ಕೇಳಿರಲಿಲ್ಲ, ಆದರೆ ಅದು ಅಪರಾಧಕ್ಕೆ ಸಂಬಂಧಪಟ್ಟಿರೊ ಹಾಗೆ ಕಾಣಿಸುತ್ತದೆ.""

''ನಾನು ಯಾವಾಗಲೂ CIAಗೆ ಗೂಢಚಾರನಾಗಿ ಇಲ್ಲವೆ FBIಗೆ ಪತ್ತೆದಾರನಾಗಿ ಕೆಲಸ ಮಾಡಲು ಬಯಸಿದ್ದೆ. ಈ ಕೋರ್ಸ್‌ ಅಂತಹ ವೃತ್ತಿಗೆ ಪ್ರವೇಶ ಕೊಡಿಸುತ್ತದೆ.""

''ಇಂಟರೆಸ್ಟಿಂಗ್‌. ನಾವು ಗಂಭೀರವಾಗಿ ತೆಗದುಕೊಳ್ಳುವ ವೃತ್ತಿಗಳು ಅಂದರೆ ಇಂಜಿನಿಯರಿಂಗ್‌ ಮತ್ತು ಮೆಡಿಕಲ್‌ ಮಾತ್ರ. ಅವಾಗಲಿಲ್ಲ ಅಂದಾಗ ಬೇರೆ ವೃತ್ತಿಗೆ ಹೋಗುತ್ತೇವೆ.''ವೃತ್ತಿಪರರು ತನಿಖೆ ಮಾಡುವಂತಹ ಅಪರಾಧಗಳು ಭಾರತದಲ್ಲಿ ಇದ್ದವೇ? ಯಾರನ್ನಾದರು ಕೊಲ್ಲಬೇಕೆಂದರೆ ಬಂದೂಕು ಕೊಳ್ಳಲೂ ಯಾರಿಗೂ ಸಾಧ್ಯವಿಲ್ಲ. ನಗರಗಳಲ್ಲೆಲ್ಲ ಎಷ್ಟು ಜನಸಂದಣಿ ಇದೆ ಅಂದರೆ ಇರುವ ಪೋಲಿಸರೆಲ್ಲ ಕಳ್ಳತನ ಮತ್ತು ರಸ್ತೆ ಮೇಲೆ ಆಗುವ ಅಪಘಾತಗಳಿಗೇ ಬೇಕಾಗುತ್ತೆ.

''ಹಾಗಾದರೆ, ನೀವು ತುಂಬಾ ಚಾಲೂಕು ಎಂದುಕೊಳ್ಳುತ್ತೇನೆ.""

ಅವನು ಏನು ಹೇಳುತ್ತಿದ್ದಾನೆ ಎಂಬುದರತ್ತ ಸರಿಯಾಗಿ ಗಮನ ಕೊಡದೆ, ''ಹಾಗೇನು ಇಲ್ಲ,"" ಎಂದಳು ಮೆಲ್ಲಗೆ. ಆತನ ರೂಪಕ್ಕೆ ಮತ್ತು ಮುಖಸ್ತುತಿಗೆ ಮರುಳಾಗಿದ್ದಳು ಅವಳು. ಯಾರೊಬ್ಬರೂ ಅವಳನ್ನು ಚಾಲೂಕು ಎಂದಿರಲಿಲ್ಲ. ಅಷ್ಟೊಂದು ಬುದ್ಧಿವಂತರ ಮಧ್ಯೆ ಸ್ಪರ್ಧೆಯಿದ್ದ ಭಾರತದಲ್ಲಿ ಆಕೆ ಸಾಧಾರಣ ಎಂದು ಪರಿಗಣಿಸಲ್ಪಟ್ಟಿದ್ದಳು. ಆತನ ಮುಖಸ್ತುತಿಯಿಂದ ಆಕೆ ಸಂಕೋಚಗೊಂಡಳು. ಆ ದಿನವೂ ಬಂದಿತೇ? ಆಕೆ ಓದಿದ್ದ ಪಶ್ಚಿಮದ ಪ್ರೇಮಕಥೆಗಳೆಲ್ಲವೂ ನಿಜವಾಗಲಿದ್ದವು.

''ಬಹುಶಃ ನಾವು ಕಾಫಿ ಅಥವ ಇನ್ಯಾವುದಕ್ಕಾದರೂ ಆಚೆ ಹೋಗಬಹುದೆ? ಭಾರತದ ಬಗ್ಗೆ ತಿಳಿದುಕೊಳ್ಳಲು ಇಚ್ಚಿಸುತ್ತೇನೆ.""

ಭಾರತೀಯರು ಡೇಟ್‌ ಅಂತಹುದನ್ನು ಮಾಡುವುದಿಲ್ಲ ಎಂದು ಬಹುಶಃ ಆತನ ಸಹಪಾಠಿಗಳಿಂದ ತಿಳಿದುಕೊಂಡಿರಬಹುದು. ಆದರೆ ಅವಳ ದೇಶದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕೇಳಿದ್ದು ಅವಳ ಜೊತೆ ಹೋಗಲು ಅವನಿಗೆ ಒಂದು ಒಳ್ಳೆಯ ಅವಕಾಶ ಕೊಟ್ಟಿತು. ಹುಡುಗಿಯರನ್ನು ಪಟಾಯಿಸುವುದರಲ್ಲಿ ಆತ ಚೆನ್ನಾಗಿ ಪಳಗಿರಬೇಕು.

ಒಂದು ಹುಡುಗಿಯ ಪ್ರೇಮದಲ್ಲಿ ಸಂಪೂರ್ಣವಾಗಿ ಮುಳುಗಿದ್ದರೂ ಸಹ ಭಾರತದಲ್ಲಿ ಗಂಡಸರು ಇಷ್ಟೊಂದು ಮುಂದೆ ಬರುವುದಿಲ್ಲ. ಜಾತಿ ವ್ಯವಸ್ಥೆ ಸ್ವಲ್ಪವೂ ಬದಲಾಗಿಲ್ಲ ಮತ್ತು ಯಾವ ಕುಟುಂಬವೂ ಪ್ರೇಮವಿವಾಹಕ್ಕೆ ಒಪ್ಪಿಗೆ ಕೊಡುವುದಿಲ್ಲ. ರೂಪ ಮತ್ತು ಬಣ್ಣ ಭಾರತದಲ್ಲಿ ಬಹಳವೇ ಮುಖ್ಯ. ಅರೇಂಜ್‌ಡ್‌ ಮದುವೆಗಳಲ್ಲಿ ದುಡ್ಡಿನ ನಂತರ ಬಣ್ಣವೇ ತುಂಬ ಮುಖ್ಯವಾದ ಅಂಶ.

ಸೌಂದರ್ಯ ಎನ್ನುವುದು ಬೆಳ್ಳಗಿನ ಮೈಬಣ್ಣದೊಂದಿಗೆ ಪ್ರಾರಂಭವಾಗಿ ಅಲ್ಲಿಯೇ ಕೊನೆಯಾಗುತ್ತದೆ. ಆದರೆ ಇಲ್ಲಿ, ಕಪ್ಪಗಿರುವ, ಐದಡಿಗಿಂತ ಸ್ವಲ್ಪವೇ ಎತ್ತರವಿರುವ ಕುಳ್ಳಗಿನವಳನ್ನು, ನಂಬಲೂ ಅಸಾಧ್ಯವೆನಿಸುವಷ್ಟು ಆಕರ್ಷಕ, ಎತ್ತರದ, ನೀಲಿಗಣ್ಣಿನ ಬಿಳಿಯನೊಬ್ಬ ಫೋನ್‌ ನಂಬರ್‌ ಕೇಳುತ್ತಿದ್ದಾನೆ. ಇದು ಆಕೆ ಓದಿ ತಿಳಿದುಕೊಂಡಿದ್ದ, ಫ್ಲರ್ಟಿಂಗ್‌ ಮತ್ತು ಡೇಟಿಂಗ್‌ನ, ಮುಕ್ತವಾದ ಪ್ರೀತಿ ಮತ್ತು ಸಂಬಂಧಗಳ, ರೋಮ್ಯಾನ್ಸ್‌ ಮತ್ತು ಉತ್ಕಟ ಪ್ರಣಯದ, ಅಮೇರಿಕ.

ಆದರೂ ಆಕೆ ತನ್ನ ಭಾರತೀಯ ಮೌಲ್ಯಗಳಿಗೆ ಜೋತುಬಿದ್ದಳು. ಡೇಟ್‌ ಮಾಡುವುದು, ಅದರಲ್ಲೂ ಅಮೇರಿಕನ್‌ನನ್ನು ಡೇಟ್‌ ಮಾಡುವುದು ಆಕೆಗೆ ಬೇಕಿರಲಿಲ್ಲ. ಅಮೇರಿಕಾದಲ್ಲಿರುವ ಆಕೆಯ ಉದ್ದೇಶ, ವಿದ್ಯಾಭ್ಯಾಸ. ಡೇಟಿಂಗ್‌ ಆ ಉದ್ದೇಶಗಳಲ್ಲಿ ಒಂದಾಗಿರಲಿಲ್ಲ. ಭಾರತದಲ್ಲಾದರೆ ಯಾರಿಗೂ ಗೊತ್ತಾಗದಂತೆ ಗುಟ್ಟಾಗಿ ಡೇಟ್‌ ಮಾಡಬೇಕು. ಪ್ರೀತಿಯಲ್ಲಿ ಸಿಲುಕುವುದಾಗಲೀ, ಮತ್ತು ಅದರಿಂದ ಸ್ಥಳೀಯ ಭಾರತೀಯ ಸಮುದಾಯದಲ್ಲಿ ದೊಡ್ಡ ಹಗರಣ ಎಬ್ಬಿಸುವುದಾಗಲಿ ಬೇಕಿಲ್ಲ ಎಂದು ಆಕೆ ತನಗೆ ತಾನೆ ಅಂದುಕೊಂಡಳು.

ಆದರೆ ಅವಳ ಹೃದಯ ಬೇರೊಂದು ನುಡಿಯಿತು. ''ಡ್ಯಾನ್‌, ನೀನು ನಿನ್ನ ಫೋನ್‌ ನಂಬರ್‌ ಯಾಕೆ ಕೊಡಬಾರದು? ಆದರೆ ನಾನೇ ಕಾಲ್‌ ಮಾಡಬಹುದು.""

ಆತ ಒಂದು ಪೇಪರ್‌ನ ತುಂಡು ಹೊರತೆಗೆದ.

''ನಾನು ಈಗ ತಾನೆ ನನ್ನ ಗರ್ಲ್‌ಫ್ರೆಂಡ್‌ಳಿಂದ ಬೇರೆಯಾದೆ. ನೀವು ನೋಡಿದಿರಲ್ಲ ಅವಳನ್ನು, ಸೂಸಿ ಎಂದು ಅವಳ ಹೆಸರು. ಆಕೆ ನನ್ನ ಜೊತೆ ವಾಸಿಸುತ್ತಿದ್ದಳು. ಅವಳಿಗೆ ಬೇರೆ ಕಡೆ ಹೋಗಲು ಸಹಾಯ ಮಾಡುತ್ತಿದ್ದೆ.""

ಅದನ್ನು ಯಾಕೆ ನನಗೆ ಹೇಳುತ್ತಿದ್ದಾನೆ? ಅವನು ಈಗ ಲಭ್ಯ ಎಂದು ನನಗೆ ಅರ್ಥವಾಗಲಿ ಎಂತಲೇ?

ಅನು ಆತನ ನಂಬರ್‌ ಅನ್ನು ಗೀಚಿಕೊಂಡಳು. ಆದರೆ ಅವನನ್ನು ಮತ್ತೆ ಕರೆಯುವುದಿಲ್ಲ ಎಂದು ಅವಳಿಗೆ ಗೊತ್ತಿತ್ತು. ಈಗ ತಾನೆ ಒಬ್ಬ ಹುಡುಗಿಯನ್ನು ಆತನ ಅಪಾರ್ಟ್‌ಮೆಂಟಿನ ಹೊರಗೆ ಕಳಿಸಿ ಇನ್ನೊಬ್ಬ ಹುಡುಗಿಯ ಡೇಟ್‌ ಕೇಳುವುದು ಅನೈತಿಕ ಅನ್ನಿಸಿತು. ಆತನ ತಲೆ ಸರಿ ಇದೆಯಾ ಎಂದು ಅವಳಿಗೆ ಸಂಶಯವಾಯಿತು.

''ನಾನು ಈಗ ಹೋಗಬೇಕು. ನನ್ನ ತಾಯಿಯನ್ನು ಚರ್ಚಿಗೆ ಕರೆದೊಯ್ಯಬೇಕು. ನಿಮಗೆ ರೈಡ್‌ ಬೇಡ ಎನ್ನುವುದು ನಿಶ್ಚಿತವೇ?""

ಏನು ಮಾಡಬೇಕೆಂದು ತಿಳಿಯದೆ ತಲೆ ಆಡಿಸಿದಳು. ಅದನ್ನು ಅವನು ಬೇಡ ಎಂದು ಅರ್ಥ ಮಾಡಿಕೊಂಡ. ಹಾಗಾಗಿ, ಮತ್ತೆ ಇನ್ನೊಂದು ಗಂಟೆ ಬಸ್ಸಿಗಾಗಿ ಕಾದಳು.

ಅಮೇರಿಕನ್ನರು ಇಷ್ಟೊಂದು ವಿಭಿನ್ನವೇ? ತಾಯಿಯ ಜೊತೆ ಚರ್ಚಿಗೆ ಹೋಗುವುದು ಭಾರತೀಯರು ಅವರ ಮನೆಯವರೊಂದಿಗೆ ದೇವಸ್ಥಾನಗಳಿಗೆ ಹೋಗುವ ತರಹವೇ. ಅಮೇರಿಕದಲ್ಲಿ ವಯಸ್ಸಿಗೆ ಬಂದ ಹುಡುಗ ಹುಡುಗಿಯರು ಮನೆ ಬಿಟ್ಟು ಹೋದರೆ ಮತ್ತೆ ಬರುವುದಿಲ್ಲ, ಮನೆಯವರ ಬಗ್ಗೆ ಚಿಂತಿಸುವುದಿಲ್ಲ ಎಂದು ಭಾವಿಸಿಕೊಳ್ಳುತ್ತ ಅನು ಬೆಳೆದಿದ್ದಳು.

ಡೇನಿಯಲ್‌ನ ಕುರಿತು ಯೋಚಿಸಿದಷ್ಟೂ ಅವಳಿಗೆ ಆತನಿಗೆ ಪೋನ್‌ ಮಾಡಬೇಕು, ಕನಿಷ್ಟ ಒಬ್ಬ ಅಮೇರಿಕನ್ನನ ಸ್ನೇಹ ಬೆಳೆಸುವುದಕ್ಕಾಗಿ ಮತ್ತು ಅವರ ಸಂಸ್ಕೃತಿಯ ಬಗ್ಗೆ ಸ್ವಲ್ಪವಾದರೂ ಕಲಿಯುವುದಕ್ಕಾಗಿ ಅನ್ನಿಸುತ್ತಿತ್ತು. ಆತ ಚರ್ಚಿಗೆ ಹೊಗುತ್ತಾನಾದರೆ, ಅಷ್ಟೇನೂ ಕೆಟ್ಟವನಾಗಿರಲಿಕ್ಕಿಲ್ಲ!

ಹತ್ತು ಸಾವಿರ ಮೈಲುಗಳ ಅಂತರ ಕೇವಲ ಕಲ್ಲೆಸೆತದಷ್ಟು ದೂರ ಅನ್ನಿಸುತ್ತಿತ್ತು. ಉಸಿರುಕಟ್ಟಿಸುವ ಭಾರತೀಯ ಸಂಪ್ರದಾಯಗಳ ಗೋಡೆಗಳಿಂದ ಸುತ್ತುವರಿದು, ಈಗಲೂ ಚಿಕ್ಕ ಪಟ್ಟಣವಾದ ಮೈಸೂರಿನಲ್ಲಿ ವಾಸಿಸುತ್ತಿರುವಂತೆ ಅನ್ನಿಸಿ ಅಮೇರಿಕಾದಲ್ಲಿ ಅವಳಿಗೆ ಸ್ವಾತಂತ್ರ್ಯವೇ ಇರಲಿಲ್ಲ.

ಮಾರನೆಯ ದಿನ, ಆಲೋಚನೆಗಳಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಾ, ದೀರ್ಘವಾಗಿ ಉಸಿರಾಡುತ್ತಾ ಒಂದು ನಿರ್ಧಾರಕ್ಕೆ ಬಂದಳು. ಡ್ಯಾನ್‌ ಅವಳಿಗೆ ಕೊಟ್ಟಿದ್ದ ಫೋನ್‌ ಸಂಖ್ಯೆಯನ್ನು ಒತ್ತಿದಳು.

''ಹೆಲ್ಲೋ..."" ಒಬ್ಬ ಮುದುಕಿ ಆ ಕಡೆಯಿಂದ ಉತ್ತರಿಸಿದಳು.

ರಾಂಗ್‌ ನಂಬರ್‌? ಫೋನ್‌ ಇಟ್ಟುಬಿಡಬೇಕೋ ಬೇಡವೋ ಎಂದು ಅನುಳಿಗೆ ಗೊತ್ತಾಗಲಿಲ್ಲ. ಓಹ್‌, ಇದು ಡ್ಯಾನ್‌ನ ಅಮ್ಮ ಎಂದು ಹೊಳೆಯಿತು ಅಷ್ಟರಲ್ಲಿ. ಅವನ ಅಮ್ಮನ ಮನೆಯ ನಂಬರ್‌ ಕೊಟ್ಟಿದ್ದಾನೆಯೇ? ಇಲ್ಲಾ, ಈಗ ಆತನ ಗರ್ಲ್‌ಫ್ರೆಂಡ್‌ ಹೋದ ಮೇಲೆ ಅಮ್ಮನೊಂದಿಗೆ ವಾಸ ಮಾಡಲು ವಾಪಸ್ಸು ಬಂದಿದ್ದಾನೆಯೇ?

''ನಾನು ಡ್ಯಾನ್‌ರೊಂದಿಗೆ ಮಾತನಾಡಬಹುದೆ? ನನ್ನ ಹೆಸರು ಅನು.""

''ಹಲೋ... ಶ್ರೀಮತಿ ಕೂಪರ್‌ ಇಲ್ಲಿ. ನಾನು ಇಲ್ಲಿಗೆ ಸ್ವಲ್ಪ ದಿನಕ್ಕಾಗಿ ಬಂದಿರುವೆ. ಡ್ಯಾನ್‌ ಈಗ ತಾನೆ ಒಂದು ನಿಮಿಷ ಎಂದು ಆಚೆ ಹೋದ. ನಿಮ್ಮ ನಂಬರ್‌ ಕೊಟ್ಟರೆ ಅವನಿಗೆ ನಿಮ್ಮನ್ನು ವಾಪಸ್‌ ಕರೆಯಲು ಹೇಳುತ್ತೇನೆ, ಆಗಬಹುದೇ?""

ಪರವಾಗಿಲ್ಲ, ಆತನಿಗೆ ಇನ್ನೂ ಆತನ ಸ್ವಂತ ಸ್ಥಳ ಇದೆ ಎಂದುಕೊಂಡಳು ಅನು. ಆದರೆ ತಬ್ಬಿಬ್ಬಾಗಿ ಏನು ಉತ್ತರಿಸಬೇಕು ಎಂದು ಅವಳಿಗೆ ಗೊತ್ತಾಗಲಿಲ್ಲ. ಇನ್ನೇನು ಫೋನ್‌ ನಂಬರ್‌ ಹೇಳಿಬಿಡುವ ಸ್ಥಿತಿಯಲ್ಲಿದ್ದವಳು, ''ಛೇ, ಬೇಡ!"" ಎಂದುಕೊಂಡಳು. ಅವಳ ಜೊತೆ ಮೂರು ಜನ ಭಾರತೀಯ ಯುವತಿಯರು ವಾಸಿಸುತ್ತಿದ್ದರು.

ಅವರಿಗೆ ಇದು ಗೊತ್ತಾಗುವುದು ಬೇಡವೇ ಬೇಡ. ವಿನಯವಾಗಿ ನಂಬರ್‌ ಕೊಡಲಾಗದೆಂದು ಹೇಳಿಬಿಡುವುದು ಎಂದು ನಿರ್ಧರಿಸಿದಳು. ಆದರೆ ಅವಳು ಡ್ಯಾನ್‌ನ ತಾಯಿಯನ್ನು ಏನೆಂದು ಸಂಭೋಧಿಸುವುದು? ಅನುಳಿಗೆ ವಯಸ್ಸಾದ ಹೆಂಗಸರನ್ನು ಆಂಟಿ ಅನ್ನದೆ ಅವರ ಹೆಸರು ಹಿಡಿದು ಕರೆಯಲು ಕಷ್ಟವಾಗುತ್ತಿತ್ತು.

'' ಮಾಮ್‌"" ಕೊನೆಗೂ ಮಾತನಾಡಿದಳು, ''ನಾನು ಲೈಬ್ರರಿಯಿಂದ ಕಾಲ್‌ ಮಾಡುತ್ತಿದ್ದೇನೆ. ಇಲ್ಲಿಯೇ ಇನ್ನೂ ಬಹಳ ಹೊತ್ತು ಇರುತ್ತೇನೆ. ನಾನೇ ಇನ್ನೊಂದು ಸಲ ಕರೆಯುತ್ತೇನೆ. ಅವರು ಎಷ್ಟೊತ್ತಿಗೆ ಮನೆಗೆ ಬರುತ್ತಾರೆ?""

ಹೆಂಗಸು ಆ ಕಡೆಯಿಂದ ಹೇಳಿದಳು. '' ಆಯಿತು, ಚಿನ್ನ. ನೀನು ನನ್ನನ್ನು ಕ್ಯಾಥಿ ಎಂದು ಕರೆಯಬಹುದು."" ಅನುಗೆ ಸ್ವಲ್ಪ ಮುಜುಗರವಾಯಿತು. ಅಮೇರಿಕದಲ್ಲಿ ಒಬ್ಬ ವಯಸ್ಸಾದ ಹೆಂಗಸನ್ನು ಅವಳ ಮೊದಲ ಹೆಸರು ಹಿಡಿದು ಕರೆದರೆ ಅದು ಅಗೌರವ ತೋರಿಸಿದಂತೆ ಅಲ್ಲ ಎಂಬುದನ್ನು ತದನಂತರದ ದಿನಗಳಲ್ಲಿ ನಿಧಾನವಾಗಿ ತಿಳಿದುಕೊಂಡಳು ಮತ್ತು ಹಾಗೆಯೇ ರೂಢಿಸಿಕೊಂದಳು. ಆದರೆ ಈಗ, ತಾನು ಅಂದುಕೊಂಡ ಲೆಕ್ಕ ಸರಿಯಾಗಿಲ್ಲ ಎಂದು ಅವಳಿಗೆ ಅರಿವಾಯಿತು. ಒಬ್ಬ ಗಂಡಸನ್ನು ಡೇಟ್‌ ಮಾಡಿ, ಅದು ಹೇಗೆ ರೂಮ್‌ಮೇಟ್‌ಗಳಿಗೂ ಗೊತ್ತಾಗದಂತೆ ಗುಟ್ಟಾಗಿಡಬಲ್ಲಳು? ಡೇನಿಯಲ್‌ ಅವಳ ನಂಬರ್‌ ಕೇಳಿದರೆ ಏನು ಹೇಳಬಲ್ಲಳು? ತಪ್ಪು ಯೋಚನೆ!

ಅನುಭವಿ ಡ್ಯಾನ್‌ ಇನ್ನೂ ಅನುಭವವಿಲ್ಲದ ವರ್ಜಿನ್‌ ಕನ್ಯೆಯೊಂದಿಗೆ ಇರುವುದಕ್ಕೆ ಬಯಸುತ್ತಾನೆಯೇ ಎನ್ನುವುದು ಸಹ ಅವಳಿಗೆ ಖಾತರಿ ಇರಲಿಲ್ಲ. ನಾನು ಕನ್ಯೆ ಆಗಿಲ್ಲದಿದ್ದಲ್ಲಿ, ನಾನು ಸುಳ್ಳು ಹೇಳದ ಹೊರತು ಯಾವ ಭಾರತೀಯನೂ ನನ್ನನ್ನು ಮದುವೆಯಾಗುವುದಿಲ್ಲ. ಡೇನಿಯಲ್‌ನ ಬಲಿಷ್ಠ ಬಾಹುಗಳು ಅವಳ ಸಣ್ಣ ನಡುವಿನ ಸುತ್ತ ಇರುವ, ಜೀವನ ಪೂರ್ತಿ ಅವಳಿಗೆ ಸಿಗಬಹುದಾದ ಉತ್ಕಟ ಚುಂಬನಗಳನ್ನು ಸುಮ್ಮನೆ ಕಲ್ಪಿಸಿಕೊಳ್ಳುತ್ತ, ಇದೆಲ್ಲವನ್ನೂ ಇಲ್ಲಿಗೇ ಮರೆತು ಬಿಡುವುದು ಒಳ್ಳೆಯದು.

(ಸಶೇಷ)

ಅಧ್ಯಾಯ - 3 ಅಧ್ಯಾಯ - 5

(c) ಹಕ್ಕುಗಳು : ಲೇಖಕರದು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X