ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪವನ್‌ ಮನದಲ್ಲಿ ಅನು? ಅನು ಮನದಲ್ಲಿ ಡ್ಯಾನ್‌?

By Staff
|
Google Oneindia Kannada News


ಆತ್ಮೀಯ ಪವನ್‌,

ಮತ್ತೊಮ್ಮೆ, ನಿನ್ನ ತಾಯಿಯ ವಿಚಾರವಾಗಿ ನಾನು ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ನೀನು ಹಿಂದಿರುಗಿ ಬರುತ್ತಿರುವುದು ಸಂತಸದ ವಿಷಯ. ನನ್ನ ಜೀವನದಲ್ಲಿ ಈಗಾಗಲೆ ಬೇರೆಯವರು ಇದ್ದಾರೆಂದು ನಿನಗೆ ಹೇಳಬೇಕನ್ನಿಸಿತು... ಟೈಪ್‌ ಮಾಡುವುದನ್ನು ನಿಲ್ಲಿಸಿದಳು. ಇದನ್ನು ಇಮೇಯ್ಲ್‌ ಮೂಲಕ ತಿಳಿಸಲು ಅವಳ ಕೈಯ್ಯಲ್ಲಿ ಆಗಲಿಲ್ಲ. ಹಾಗೆ ಮಾಡುವುದು ಸರಿಯಲ್ಲ. ಅವನು ಇಲ್ಲಿಗೆ ಬಂದ ಮೇಲೆ ನಾನೆ ಅವನಿಗೆ ಮುಖತಃ ಹೇಳುತ್ತೇನೆ.

ಅವಳು ತಲೆ ಎತ್ತಿದಾಗ ಸಂಸ್ಥೆಯ ಸೇಲ್ಸ್‌ ವಿಭಾಗದ ಉಪಾಧ್ಯಕ್ಷರು ಅಲ್ಲಿ ನಿಂತಿದ್ದರು. ‘‘ಮಿಸ್‌ ಸತ್ಯನ್‌, ನಾನು ನಿಮ್ಮನ್ನು ನನ್ನ ಕಚೇರಿಯಲ್ಲಿ ಕಾಣಬಹುದೆ, ದಯವಿಟ್ಟು? ನನ್ನ ಆಫೀಸ್‌ ಕೋಣೆ ಇಲ್ಲೆ ಹತ್ತಿರ ಇದೆ.’’

‘‘ಖಂಡಿತ.’’ ಅವಳು ಎದ್ದು ನಿಂತಳು. ಏನಿರಬಹುದು? ನಾನೇನಾದರೂ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೀನ? ಇಡೀ ಮ್ಯಾನ್‌ಹ್ಯಾಟನ್‌ ಅದ್ಭುತವಾಗಿ ಕಾಣಿಸುವಂತಹ ನೋಟವಿದ್ದ, ವಿಶಾಲವಾದ ಕಾರ್ನರ್‌ ಕೋಣೆಗೆ ಅನು ಅವರನ್ನು ಹಿಂಬಾಲಿಸಿದಳು. ವಿಶಾಲವಾದ ತನ್ನ ಟೇಬಲ್‌ನ ಇನ್ನೊಂದು ಬದಿಯಲ್ಲಿದ್ದ ಲೆದರ್‌ ಕುರ್ಚಿಯ ಮೇಲೆ ಕುಳಿತುಕೊಳ್ಳುವಂತೆ ಅವರು ಕೈತೋರಿದರು.

‘‘ನೀವು ಮಾಡುತ್ತಿರುವ ಎಲ್ಲಾ ಕೆಲಸವನ್ನೂ ನಾವು ನಿಜವಾಗಿಯೂ ಪ್ರಶಂಸಿಸುತ್ತೇವೆ. ನಿಮ್ಮನ್ನು ನಮ್ಮ ಕಂಪನಿಯ ಬ್ಯುಸಿನೆಸ್‌ ಡೆವಲಪ್‌ಮೆಂಟ್‌ ಡೈರೆಕ್ಟರ್‌ ಆಗಿ ಪ್ರಮೋಟ್‌ ಮಾಡಲು ನಾವು ನಿರ್ಧರಿಸಿದ್ದೇವೆ.’’

ಅವಳ ಎದೆ ಅಭಿಮಾನದಿಂದ ಹಿಗ್ಗಿ ಹೀರೆಕಾಯಿ ಆಗುತ್ತಿದ್ದರೂ, ಅವರಿಗೆ ಅದು ತೋರಿಸಿಕೊಳ್ಳದಂತೆ ಶಾಂತತೆಯಿಂದ ಧನ್ಯವಾದಗಳನ್ನು ತಿಳಿಸಿದಳು. ಕನಿಷ್ಠ ಒಂದಾದರೂ ನನ್ನ ಜೀವನದಲ್ಲಿ ಸರಿಯಾಗಿ ನಡೆಯುತ್ತಿದೆ. ಅದೇನೆಂದರೆ ನನ್ನ ವೃತ್ತಿಜೀವನ. ದೀಪಕ್‌ನ ವಿರೋಧದ ಮಧ್ಯೆಯೂ ತನ್ನ ಕೆಲಸವನ್ನು ಉಳಿಸಿಕೊಂಡ ತೀರ್ಮಾನ ಸರಿಯಾದುದಾಗಿತ್ತು.

ತನ್ನ ವೈಯಕ್ತಿಕ ಜೀವನ ಮತ್ತು ವೃತ್ತಿಜೀವನ ಒಂದಕ್ಕೊಂದು ಅಡ್ಡಿ ಉಂಟು ಮಾಡದಂತೆ ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದಳು. ಯಾರೇ ಆಗಲಿ, ಇದನ್ನು ಕೇವಲ ಅಮೇರಿಕದಲ್ಲಿ ಮಾತ್ರ ಮಾಡಲು ಸಾಧ್ಯ. ಅವಳು ತನ್ನ ಜೀವನದಲ್ಲಿ ಲೆಕ್ಕವಿಲ್ಲದಷ್ಟು ಹೊಸ ವಿಧಾನಗಳನ್ನು ಅಳವಡಿಸಿಕೊಂಡಿದ್ದಳು. ನಾನೀಗ ಒಬ್ಬ ಅಮೇರಿಕನ್‌ ಪೋಲಿಸ್‌ ತನಿಖಾಧಿಕಾರಿಯನ್ನೂ ಡೇಟ್‌ ಮಾಡುತ್ತಿದ್ದೇನೆ! ಇಂಜಿನಿಯರನ್ನಾಗಲಿ ಡಾಕ್ಟರನ್ನಾಗಲಿ ಅಲ್ಲ!

ಅವಳನ್ನು ಅಭಿನಂದಿಸಲು ಬಂದ ಎಲ್ಲರಿಗೂ ಮುಗುಳ್ನಗೆ ಬೀರುತ್ತ, ಅನು ಉಪಾಧ್ಯಕ್ಷರ ಕಛೇರಿಯಿಂದ ಸಂತೋಷದಲ್ಲಿ ತೇಲುತ್ತ ಹೊರಬಂದಳು. ಡ್ಯಾನ್‌ಗೆ ಕರೆ ಮಾಡಿ ಈ ಸಂತೋಷದ ಸುದ್ಧಿಯನ್ನು ಹಂಚಿಕೊಳ್ಳಲು ಅವಳಿಗೆ ಕಾಯಲಾಗಲಿಲ್ಲ. ಅಂದಿನ ಸಾಯಂಕಾಲಕ್ಕೆ ಬೇರೆ ಅವನನ್ನು ಭೇಟಿಯಾಗುತ್ತಿರುವುದರಿಂದ ಉತ್ಸಾಹ ಇನ್ನೂ ಹೆಚ್ಚಾಗಿತ್ತು. ಸೆಲ್‌ಫೋನನ್ನು ತೆಗೆದುಕೊಂಡು ಕಟ್ಟಡದಿಂದ ಹೊರಗೆ ಬಂದಳು.

‘‘ಡ್ಯಾನ್‌, ಇಂದು ರಾತ್ರಿ ಕೆಲಸ ಮಾಡುತ್ತಿದ್ದೀಯ?’’

‘‘ಇಲ್ಲ, ನಾನು ಬೇಗ ಹೊರಡುತ್ತಿದ್ದೇನೆ. ಹೇ, ನಾನು ನಿನ್ನನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ.’’

‘‘ನನ್ನನ್ನು ವಿಮಾನ ನಿಲ್ದಾಣದಲ್ಲಿ ಪಿಕ್‌ಅಪ್‌ ಮಾಡಿಕೊಳ್ಳಲು ಸಾಧ್ಯವೆ? ನಾನು ಇಲ್ಲಿಂದ ಇಷ್ಟರಲ್ಲೆ ಹೊರಡಲಿದ್ದೇನೆ. ಸ್ಯಾನ್‌ ಹೋಸೆಗೆ ರಾತ್ರಿ 8:30ಕ್ಕೆ ಬರಲಿದ್ದೇನೆ.’’

‘‘ನಿನ್ನನ್ನು ಪಿಕ್‌ಅಪ್‌ ಮಾಡುವುದಕ್ಕೆ ಖುಷಿಯಾಗುತ್ತದೆ. ಹಾಗೆಯೆ ನಾನು ಚೈನೀಸ್‌ ಊಟಕ್ಕೆ ಆರ್ಡರ್‌ ಮಾಡಿರುತ್ತೇನೆ. ಜೊತೆಯಲ್ಲಿ ಊಟ ಮಾಡಬಹುದು.’’

‘‘ಸರಿ. ನಮಗೆ ಆಚರಣೆ ಮಾಡಲು ಒಂದು ಸಂತೋಷದ ವಿಷಯವಿದೆ - ನನಗೆ ಈಗ ತಾನೆ ಡೈರೆಕ್ಟರ್‌ ಆಗಿ ಬಡ್ತಿ ಆಗಿದೆ.’’

‘‘ತಮಾಷೆ ಅಲ್ಲ ತಾನೆ? ನಾನು ನಿನ್ನ ಬಗ್ಗೆ ನಿಜವಾಗಲೂ ಇಂಪ್ರೆಸ್‌ ಆಗಿದ್ದೇನೆ. ಅಭಿನಂದನೆಗಳು!’’

ಅವನ ಸ್ವರದಲ್ಲಿ ಮುಗುಳ್ನಗೆ ಕೇಳಿಸಿತು. ನನಗೆ ಒಳ್ಳೆಯದಾಗಿದ್ದಕ್ಕೆ ಅವನು ಎಷ್ಟೊಂದು ಸಂತೋಷ ಪಡುತ್ತಿದ್ದಾನೆ. ದೀಪಕ್‌ ಆಗಿದ್ದರೆ ಕಿರಿಕಿರಿಗೊಳ್ಳುತ್ತಿದ್ದ. ‘‘ರಾತ್ರಿಗೆ ನೋಡೋಣ.’’

‘‘ಬೈ, ಚಿನ್ನ. ಪ್ರಯಾಣ ಸುರಕ್ಷಿತವಾಗಿ ಅಗಲಿ.’’

ಅವನು ನನಗೆ ಯಾವಾಗ ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳುತ್ತಾನೆ? ಅವಳೇನೊ ಈ ಕ್ಷಣದಲ್ಲಿ ಹೇಳಲು ಸಿದ್ಧಳಿದ್ದಳು. ಆದರೆ ಅದನ್ನು ಅವನೇ ಮೊದಲು ಹೇಳಬೇಕು ಎನ್ನುವುದನ್ನು ಯೋಚಿಸಿದಳು. ಇದು ಪ್ರೀತಿ ಅಲ್ಲದಿದ್ದರೆ ಮತ್ಯಾವುದು ಪ್ರೀತಿ? ಅಮೇರಿಕನ್ನರು ಅದನ್ನು ಅಷ್ಟೊಂದು ಸುಲಭವಾಗಿ ಹೇಳುವುದಿಲ್ಲ ಎಂದು ಭಾವಿಸಿದಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X