ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಾಯ 21 : ಎದೆಯ ಕೂಗು ಮೀರಿ...

By Staff
|
Google Oneindia Kannada News

ಅನು ಮತ್ತು ದೀಪಕ್‌ ನಡುವೆ ಮದುವೆಗೆ ಮುನ್ನವೇ ಬಿರುಕು?ಅವರ ನಿಶ್ಚಿತಾರ್ಥ ಆದ ಎರಡು ತಿಂಗಳಾದ ಮೇಲೆ ಒಂದು ದಿನ ದೀಪಕ್‌ ಮತ್ತು ಅನು ಸಾಂತಾ ಕ್ರೂಜ್‌ನ ಬೀಚಿಗೆ ಹೋಗಿದ್ದರು. ಆಗ ಮೂರು ವರ್ಷದ ಹಿಂದೆ ಡ್ಯಾನ್‌ನೊಂದಿಗೆ ಅಲ್ಲಿ ಕಳೆದ ದಿನವನ್ನು ನೆನಪಿಸಿಕೊಳ್ಳಲಾಗದೆ ಇರಲು ಅನೂಳ ಕೈನಲ್ಲಿ ಸಾಧ್ಯವಾಗಲಿಲ್ಲ. ''ದೀಪಕ್‌, ಡೇನಿಯಲ್‌ ಕೂಪರ್‌ ನನ್ನ ಒಬ್ಬ ಸ್ನೇಹಿತ."" ಅವಳು ಪದಗಳನ್ನು ಬಹಳ ಹುಷಾರಿನಿಂದ ಆಯ್ಕೆ ಮಾಡಿ ಬಳಸುತ್ತಿದ್ದಳು.

''ನನಗೆ ಅವನು ಸ್ಯಾನ್‌ ಹೋಸೆ ವಿಶ್ವವಿದ್ಯಾನಿಲಯದಲ್ಲಿ ಪರಿಚಯವಾಗಿದ್ದ. ಒಂದು ದಿನ ಸಾಯಂಕಾಲ ಇಲ್ಲಿನ ರೆಸ್ಟಾರೆಂಟಿನಲ್ಲಿಯೇ ಊಟ ಮಾಡಿ, ನಂತರ ಈ ಬೀಚಿಗೆ ಕರೆದುಕೊಂಡು ಬಂದಿದ್ದ. ಇಲ್ಲಿ ಕ್ಯಾಂಪ್‌ಪೈರ್‌ ಸಹ ಮಾಡಿದ್ದ."" ಅವಳ ಸ್ವರ ಉತ್ಕಟಭರಿತವಾಗಿತ್ತು. ''ನಾವು ಅಂದು ರಗ್ಗಿನ ಮೇಲೆ ಕುಳಿತು, ಬೆಂಕಿ ಕಾಯಿಸುತ್ತ, ಚಂದ್ರೋದಯವನ್ನು ವೀಕ್ಷಿಸಿದೆವು.""

ದೀಪಕ್‌ ನಡೆಯುತ್ತಿದ್ದವನು ನಿಂತು ಅವಳೆಡೆಗೆ ತಿರುಗಿದ. ''ನಿಜವಾಗಲೂ, ಅನು? ಡ್ಯಾನ್‌ ಬಗ್ಗೆ ನನಗೆ ಇನ್ನಷ್ಟು ಹೇಳು..."" ಈ ಮಧ್ಯೆ ಕನ್ನಡದಲ್ಲಿ ಅವರ ಮಾತುಕತೆ ಸಲಿಗೆಯಿಂದ ಏಕವಚನಕ್ಕೆ ಇಳಿದಿತ್ತು.

ಅವಳಿಗೆ ಅವನ ಸ್ವರದಲ್ಲಾದ ಮಾರ್ಪಾಟು ಇಷ್ಟವಾಗಲಿಲ್ಲ. ''ನಿನಗೇನಾದರೂ ಅಸೂಯೆ ಉಂಟಾಯಿತೆ, ದೀಪಕ್‌? ನಿನಗೂ ಒಬ್ಬಳು ಗರ್ಲ್‌ಫ್ರೆಂಡ್‌ ಇದ್ದಳು.""

''ಅಂದರೆ ಡ್ಯಾನ್‌ ನಿನ್ನ ಬಾಯ್‌ಫ್ರೆಂಡ್‌ ಆಗಿದ್ದ ಎಂದೇನು ನೀನು ಹೇಳುತ್ತಿರುವುದರ ಅರ್ಥ? ನೀನು ಅವನ ಜೊತೆ ಮಲಗಿದ್ದೆಯೇನು?"" ಅನು ಅವನ ಸಂಪೂರ್ಣ ಬದಲಾದ ವರ್ತನೆಯನ್ನು ಗಮನಿಸಿದಳು. ಗಂಡಸಾದವನು ಡೇಟ್‌ ಮಾಡಿದರೆ ಪರವಾಗಿಲ್ಲ, ಆದರೆ ಭಾರತೀಯ ಹುಡುಗಿ ಡೇಟ್‌ ಮಾಡಿದರೆ ಅದು ಸರಿ ಅಲ್ಲ.

ಅನು ದೀಪಕ್‌ಗೆ ಹೇಳಿದಳು. ''ನಾನು ಡೇಟ್‌ ಮೇಲೆ ಹೋಗಿದ್ದೆ ಎಂದ ತಕ್ಷಣ ನೀನು ಶಾಕ್‌ ಆದಂತೆ ಕಾಣಿಸಿತು, ಏಕೆ?""

''ಓಹ್‌, ಇಲ್ಲ. ನನಗೆ ಶಾಕ್‌ ಆಗಲಿಲ್ಲ. ಮುಂದುವರಿಸು!""

''ಅದು ಪರಿಪೂರ್ಣವಾದ, ರೊಮ್ಯಾಂಟಿಕ್‌ ಸಂಜೆಯಾಗಿತ್ತು; ಎಲ್ಲಿಯವರೆಗೆ ಅಂದರೆ ಆತ ಅಸ್ಪೃಶ್ಯರು - ಅದೇ ಹರಿಜನರ ಬಗ್ಗೆ ಕೇಳುವ ತನಕ. ಭಾರತೀಯರೊಬ್ಬರಿಂದ ಅದರ ಬಗ್ಗೆ ಕೇಳಲು ಅವನು ಬಯಸಿದ್ದ. ನಾನು ಅದನ್ನು ವಿವರಿಸಲು ಪ್ರಾರಂಭಿಸಿದರೂ, ಕೊನೆ ಕೊನೆಗೆ ನನ್ನ ಕೈಯಲ್ಲಿ ಆಗಲಿಲ್ಲ. ಜಾತಿಯ ಹೆಸರಿನಲ್ಲಿ ನಮ್ಮದೇ ಜನರ ಮೇಲೆ ನಾವು ಎಸಗಿದ ದೌರ್ಜನ್ಯಗಳು! ಅದನ್ನು ಸಮಚಿತ್ತದಿಂದ ವಿವರಿಸುವ ಅವಕಾಶವನ್ನು ಕಳೆದುಕೊಂಡೆ, ಹಾಗೆಯೇ ಅವನನ್ನೂ ಕಳೆದುಕೊಂಡು ಬಿಟ್ಟೆ. ಅಥವ ಅವನೇ ನನ್ನನ್ನು ಕಳೆದುಕೊಂಡನಾ ಎನ್ನಿಸುತ್ತದೆ.""

ದೀಪಕ್‌ ಇನ್ನು ಹೆಚ್ಚಿಗೆ ಕೇಳಲು ಕುತೂಹಲದಿಂದಿರುವವನಂತೆ ಕಾಣಿಸಿದ. ಹರಿಜನರು ಅನುಭವಿಸಿದ ಅನ್ಯಾಯ, ದೌರ್ಜನ್ಯಗಳ ಬಗ್ಗೆ ಆತ ಕಳಕಳಿಹೊಂದಿದವನಂತೆ ಕಾಣಿಸಲಿಲ್ಲ. ಬದಲಿಗೆ ಅವಳೆಂದಾದರೂ ಡ್ಯಾನ್‌ನ ಜೊತೆ ದೈಹಿಕ ಸಂಬಂಧ ಹೊಂದಿದ್ದಳೆ ಎನ್ನುವುದನ್ನು ಮಾತ್ರ ತಿಳಿಯಲು ಕುತೂಹಲದಿಂದಿರುವವನಂತೆ ಕಂಡ. ಅವಳಿಗೆ ದುಃಖವಾಯಿತು.

''ಮುಂದಕ್ಕೆ ಹೇಳು, ಅನು. ನಂತರ ಏನಾಯಿತು?""

''ನಿನಗೆ ಗೊತ್ತಲ್ಲ, ಹರಿಜನರಿಗೆ ಏನೇನು ಆಗಿತ್ತು ಎಂದು. ನಾವು ಇನ್ನೂ ಅವರನ್ನು ಹೊಲೆಯರನ್ನಾಗಿಯೆ ಕಾಣುತ್ತೇವೆ. ನನ್ನನ್ನು ಕ್ಷಮಿಸು; ನಾನು ಉಪಯೋಗಿಸಿದ ಭಾಷೆಯನ್ನು ಕ್ಷಮಿಸು..."" ತನಗೆ ನೋವಾಗಿದೆಯೆಂದು ಅವಳಿಗೆ ಗೊತ್ತಾಯಿತು.

ಅಲ್ಲಿ ಮತ್ತೊಂದು ದೀರ್ಘ ಮೌನ ನೆಲಸಿತು. ''ಮತ್ತೆ, ಡ್ಯಾನ್‌ ವಿಷಯ ಏನಾಯಿತು?""

''ಆತ ಈಗಲೂ ಸ್ನೇಹಿತನೆ, ಈಗ ಆತ ಸ್ಯಾನ್‌ ಹೋಸೆೆ ಪೊಲೀಸ್‌ ಇಲಾಖೆಯಲ್ಲಿ ತನಿಖೆದಾರನಾಗಿ ಕೆಲಸ ಮಾಡುತ್ತಿದ್ದಾನೆ.""

ಇದಾದ ನಂತರ, ಉಳಿದ ಸಂಜೆಯೆಲ್ಲ ದೀಪಕ್‌ ಹೆಚ್ಚಿಗೆ ಮಾತನಾಡಲಿಲ್ಲ. ಅಂದಿನ ಸುಂದರವಾದ ಸಂಜೆಯನ್ನು ಈ ರೀತಿ ಹಾಳು ಮಾಡಿದ್ದಕ್ಕೆ ಅನು ಒಂದು ರೀತಿ ಅಪರಾಧಿ ಪ್ರಜ್ಞೆಯಿಂದ ನರಳಿದಳು. ಒಂದು ಗಳಿಗೆಯ ನಂತರ ಮೌನವಾಗಿಯೇ ಅವರು ವಾಪಸು ಮರಳಿದರು. ಅವಳ ಮನೆಯ ಮುಂದೆ ಅವಳನ್ನು ಇಳಿಸಿ, ಶುಭರಾತ್ರಿಯ ಚುಂಬನವಿತ್ತು, ಅವನು ಹೊರಟುಹೋದ.

ಆತನ ಮಿರುಗುವ ಮರ್ಸಿಡೆಸ್‌ ಬೆಂಜ್‌ ಕಾರನ್ನು ತಾನು ಇಷ್ಟಪಡುತ್ತಿಲ್ಲ ಎಂದು ಅನು ಅಂದು ನಿರ್ಧರಿಸಿದಳು. ಆತನ ಮನೆಯೂ ಅವಳಿಗೆ ಇಷ್ಟವಾಗಲಿಲ್ಲ. ಹಾಗೂ ಅವನು ಡ್ಯಾನ್‌ ಬಗ್ಗೆ ವಿಚಾರಿಸುತ್ತಿದ್ದಾಗ ಬಳಸಿದ ಸ್ವರ ಸಹ ಅವಳಿಗೆ ಇಷ್ಟವಾಗಲಿಲ್ಲ. ತಾನು ಇನ್ನೂ ದೀಪಕ್‌ನ ಹೆಂಡತಿಯಾಗದೇ ಇದ್ದದ್ದಕ್ಕೆ ಅವಳಿಗೆ ಸಂತೋಷವಾಯಿತು. ನಿಶ್ಚಿತಾರ್ಥವನ್ನು ತುಂಡರಿಸಿಕೊಳ್ಳುವುದಕ್ಕೆ ಈಗಲೂ ಕಾಲ ಮಿಂಚಿರಲಿಲ್ಲ. ಯಾರಿಗೇ ಆಗಲಿ ತನ್ನ ಸ್ವಾತಂತ್ರ್ಯವನ್ನು ಬಿಟ್ಟುಕೊಡಲು ಅವಳು ಸಿದ್ದಳಿರಲಿಲ್ಲ. ಹಾಗೇನಾದರೂ ಆದಲ್ಲಿ ಅವಳ ಪೋಷಕರು ಇದನ್ನೆಲ್ಲ ಅರ್ಥಮಾಡಿಕೊಳ್ಳುತ್ತಾರೆ.

ಅವಳು ಮನೆಯ ಬೀಗ ತೆಗೆಯುತ್ತಿದ್ದಂತೆ, ಒಳಗೆ ದೂರವಾಣಿ ರಿಂಗುಣಿಸುತ್ತಿರುವುದು ಕೇಳಿಸಿತು. ಅದಕ್ಕೆ ಉತ್ತರಿಸಲು ಅವಳೇನೂ ಆತುರ ಪಡಲಿಲ್ಲ. ಪೋನಿನ ಆನ್ಸರಿಂಗ್‌ ಯಂತ್ರ ಪ್ರಾರಂಭವಾಗಿದ್ದು ಕೇಳಿಸಿತು.

''ಅನು, ನಾನು ದೀಪಕ್‌ ಮಾತಾಡುತ್ತಿದ್ದೇನೆ."" ಆತ ತನ್ನ ಸೆಲ್‌ ಪೋನಿನಿಂದ ಕರೆ ಮಾಡುತ್ತಿದ್ದ. ''ನಾನು ಒರಟಾಗಿ ವರ್ತಿಸಿದ್ದರೆ ಕ್ಷಮಿಸಿಬಿಡು. ಹಾಗೆ ಮಾಡಬೇಕೆಂದು ನಾನು ಬಯಸಿರಲಿಲ್ಲ. ದಯವಿಟ್ಟು ಪೋನ್‌ ತೆಗೆದುಕೊ."" ಅವಳ ದೂರವಾಣಿ ಮತ್ತೊಮ್ಮೆ, ಮಗದೊಮ್ಮೆ ರಿಂಗುಣಿಸಿತು. ಆಗಲೂ ಅವಳು ಅದಕ್ಕೆ ಉತ್ತರಿಸಲಿಲ್ಲ.

ಮರುದಿನ ತನ್ನ ಕಛೇರಿಯ ಕೋಣೆಗೆ ಅಡಿಯಿಡುತ್ತಿದ್ದಂತೆ ಅಲ್ಲಿ ಮೂರು ಡಜನ್‌ ಕೆಂಪು ಗುಲಾಬಿ ಹೂವುಗಳು ಒಂದು ಕಾರ್ಡಿನ ಜೊತೆ ತನ್ನ ಟೇಬಲ್‌ ಮೇಲಿರುವುದು ಅವಳಿಗೆ ಕಾಣಿಸಿತು. 'ಪ್ರೀತಿಯ ಅನು," ಅದರಲ್ಲಿ ಬರೆದಿತ್ತು, 'ದಯವಿಟ್ಟು ನನ್ನನ್ನು ಕ್ಷಮಿಸು. ನಾನು ನಿನ್ನನ್ನು ಪ್ರೀತಿಸುತ್ತೇನೆ ಮತ್ತು ನಿನಗೆ ನೋವುಂಟು ಮಾಡುವ ಉದ್ದೇಶ ನನಗಿರಲಿಲ್ಲ ಎಂದು ನಿನಗೆ ಗೊತ್ತು. ದಯವಿಟ್ಟು ನನಗೆ ಕರೆ ಮಾಡು. ಪ್ರೀತಿಯಿಂದ, ದೀಪಕ್‌."

ಅಂದು ರಾತ್ರಿ ಯೋಚಿಸುತ್ತ, ಅನೇಕ ವಿಷಯಗಳಲ್ಲಿ ಆತ ಇನ್ನೂ ಭಾರತೀಯನೆ ಎಂದು ಅನೂಳಿಗೆ ಅರ್ಥವಾಯಿತು. ಅವನೆಂದೂ ಅವಳನ್ನು ತನ್ನ ಜೊತೆ ಮಲಗೆಂದಾಗಲಿ ಇಲ್ಲವೆ ಒಂದು ರಾತ್ರಿ ಕಳೆಯಲಾಗಲಿ ಕೇಳಿಕೊಂಡಿರಲಿಲ್ಲ. ಆತ ಭಾರತೀಯ ಮೌಲ್ಯಗಳನ್ನು ಗೌರವಿಸುತ್ತಿದ್ದ ಹಾಗೂ ಅವಳೇನಾದರೂ ಡ್ಯಾನ್‌ನೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದಳೆ ಎನ್ನುವುದನ್ನು ಮಾತ್ರ ತಿಳಿದುಕೊಳ್ಳಲು ಕುತೂಹಲಗೊಂಡಿದ್ದ ಎಂದುಕೊಂಡಳು. ಆತ ನನ್ನನ್ನು ಹಾಗೆ ಕೇಳಿದ್ದಕ್ಕೆ ನಾನೂ ಹೀಗೆ ಒರಟಾಗಬಾರದು. ಆದರೆ ನಾನೇನೂ ಅವನಿಗೆ ಎಲ್ಲವನ್ನೂ ವಿವರಿಸಬೇಕಾಗಿಲ್ಲ. ಆತ ನನ್ನನ್ನು ನಂಬಬೇಕು.

ತಾನು ಸುಮ್ಮನೆ ಟಿ.ವಿ ವೀಕ್ಷಿಸುತ್ತಿರುವುದನ್ನು ಹಾಗೂ ಪ್ರಸಿದ್ಧ ಲಾಸ್‌ ಏಂಜಲೀಸ್‌ ಲೇಕರ್ಸ್‌ ತಂಡ ಆಡುತ್ತಿದ್ದ ಆಟ ಓವರ್‌ಟೈಮ್‌ಗೆ ಹೋಗುತ್ತಿದ್ದುದನ್ನು ಆಗ ಗಮನಿಸಿದಳು. ನಾನು ಏಕೆ ಬ್ಯಾಸ್ಕ್ಕೆಟ್‌ಬಾಲ್‌ ಆಟ ವೀಕ್ಷಿಸುತ್ತಿದ್ದೇನೆ? ನನಗೆ ಈ ಆಟದ ನೀತಿ ನಿಯಮಗಳೇ ಗೊತ್ತಿಲ್ಲ!

(ಸಶೇಷ)

ಅಧ್ಯಾಯ - 20 ಅಧ್ಯಾಯ - 22

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X