• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಧ್ಯಾಯ 12 : ಎದೆಯ ಕೂಗು ಮೀರಿ...

By Staff
|

ಯಾರವನು ಅನು ಮನಸೆಳೆದ ಚೆಲುವ ಚೆನ್ನಿಗ?ಅನೂಗೆ ಅಮೆರಿಕದ ಪೂರ್ವ ಕರಾವಳಿಯಲ್ಲಿ ಆ ಶುಕ್ರವಾರ ಒಂದು ಮೀಟಿಂಗ್‌ ಇದ್ದಿದ್ದರಿಂದ ಆ ವಾರಾಂತ್ಯವನ್ನು ಅಲ್ಲಿಯೇ ಕಳೆದು ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ನಿರ್ಧರಿಸಿದಳು. ಅಲ್ಲಿನ ಸಮುದ್ರ, ಹರಿಯುವ ನದಿ, ಮತ್ತು ಉದ್ಯಾನವನಗಳು; ಬೋಸ್ಟನ್‌ ನಗರ ಅಮೆರಿಕದ ಸುಂದರ ನಗರಗಳಲ್ಲಿ ಒಂದಾಗಿರಬಹುದು. ಅವಳು ಹಾರ್ವರ್ಡ್‌ನ ಹಸಿರು ಎಲೆಗಳ, ಸುಂದರವಾದ ಕೇಂಬ್ರಿಡ್ಜ್‌ ಕ್ಯಾಂಪಸ್‌ನಲ್ಲಿ ಸುತ್ತಾಡಿ, ನಂತರ ಒಂದು ಕಾಫಿ ಶಾಪ್‌ನಲ್ಲಿ ಕುಳಿತಳು. ಗುಂಪುಗಳಲ್ಲಿ ಬರುವ ವಿದ್ಯಾರ್ಥಿಗಳು, ಹೋಗುವಾಗ ಚೀಲಗಳನ್ನು ಬೆನ್ನಿಗೆ ಹಾಕಿಕೊಂಡು, ಕೈಯಲ್ಲಿ ಪಠ್ಯಪುಸ್ತಕಗಳನ್ನು ಹಿಡಿದುಕೊಂಡು ಹೋಗುವ ನೋಟ ಅವಳನ್ನು ತನ್ನದೇ ಕಾಲೇಜು ದಿನಗಳ ಸ್ಮರಣೆಗೆ ದೂಡಿತು. ಈ ದೇಶದಲ್ಲಿ ಸಮಯ ವೇಗವಾಗಿ ಸಾಗುತ್ತದೆ. ಆಕೆ ಇಂಜಿನಿಯರಿಂಗ್‌ನಲ್ಲಿ ಎಂಬಿಎ ಅನ್ನು ಯಾವಾಗಲೊ ಮುಗಿಸಿದ್ದಳು. ಈಗ ಕೆಲಸ ಮಾಡುತ್ತ, ಅರೆಕಾಲಿಕವಾಗಿ ಎಂಎಸ್‌ ವ್ಯಾಸಂಗ ಮಾಡುತ್ತಿದ್ದು ಅದರ ಮುಕ್ತಾಯದ ಹಂತಕ್ಕೆ ಬಂದಿದ್ದಳು.

ಅವಳು ಆಗಲೂ ಭಾರತಕ್ಕೆ ಹಿಂದಿರುಗಲು ಯೋಜಿಸಿದ್ದಳು. ಅವಳ ಎಂಬಿಎ ಪದವಿ ಅಲ್ಲಿ ಅವಳಿಗೆ ಯಾವುದಾದರೂ ಕಂಪನಿಯಲ್ಲಿ ಇಂಜಿನಿಯರಿಂಗ್‌ ಡಿಸೈನರ್‌ ಹುದ್ದೆಗಿಂತ ಮ್ಯಾನೇಜ್‌ಮೆಂಟ್‌ ಹುದ್ದೆ ದೊರಕುವಂತೆ ಮಾಡುತ್ತದೆ. ಈ ಓದು ಮತ್ತು ಕೆಲಸ ಅವಳನ್ನು ಇಲ್ಲಿ ಬ್ಯುಸಿಯಾಗಿ ಇಟ್ಟು ಅವಳು ಜೀವನವನ್ನು ಇನ್ನೂ ಅಷ್ಟೇನೂ ಅನುಭವಿಸಿಲ್ಲ ಎನ್ನುವುದನ್ನು ಮರೆಯಲು ಸಹಾಯ ಮಾಡುತ್ತಿತ್ತು. ಅವಳ ನೌಕರಿ ಅವಳು ಊರಿಂದೂರಿಗೆ ಪ್ರಯಾಣ ಮಾಡಲು ಅನುವು ಮಾಡಿಕೊಡುತ್ತಿತ್ತು. ಹೊಸಬರನ್ನು ಭೇಟಿಯಾಗುವುದು ಅವಳಿಗೆ ಎಂದಿಗೂ ಸಂತೋಷದ ವಿಷಯವೆ. ಆದರೆ ಬೋಸ್ಟನ್‌ ಕಾಮನ್‌ ಉದ್ಯಾನವನದಲ್ಲಿ ಸುತ್ತಾಡುತ್ತಿದ್ದ ಜೋಡಿಗಳನ್ನು ನೋಡುತ್ತಿದ್ದಾಗ, ತಾನೂ ಯಾರ ಜೊತೆಯಲ್ಲಾದರೂ ಇರಬೇಕೆಂಬ ತನ್ನ ಆಸೆ ನೆನಪಾಯಿತು.

ವಾಪಸು ಸ್ಯಾನ್‌ ಹೋಸೆಗೆ ಬರಲು ಸೋಮವಾರ ಬೆಳಿಗ್ಗೆ ವಿಮಾನ ನಿಲ್ದಾಣದಲ್ಲಿ ನಿಂತಿದ್ದಳು. ವಿಮಾನ ಹತ್ತಲು ಸಿದ್ದವಾಗಿ ನಿಂತಿದ್ದಾಗ ಅಲಕ್ಷಿಸಲು ಅಸಾಧ್ಯವೆಂಬಷ್ಟು ಸುಂದರನಾಗಿದ್ದ, ತನ್ನ ಲಗೇಜನ್ನು ಕೈಗೆತ್ತಿಕೊಳ್ಳುತ್ತಿದ್ದ ಎತ್ತರವಾಗಿದ್ದ ಭಾರತೀಯನೊಬ್ಬನನ್ನು ಕಳ್ಳನೋಟದಲ್ಲಿ ಗಮನಿಸಿದಳು.

ಅವಳು ಮತ್ತೊಮ್ಮೆ ಹಿಂದೆ ತಿರುಗಿ ಅವನನ್ನು ನೋಡಿದಳು. ಆತ 6 ಅಡಿ 4 ಇಂಚು ಇರಬಹುದು ಹಾಗೂ 90 ಕೆ.ಜಿ.ಗೂ ಮೀರಿದ ದೃಢಕಾಯನಾಗಿ ಕಾಣಿಸಿದ. ಭಾರತೀಯರಿಗೆ ಅಸಾಮಾನ್ಯವಾದ ದೇಹದಾರ್ಢ್ಯ. ಆತ ಧರಿಸಿದ್ದ ಬಿಳಿಯ ಬಣ್ಣದ ಟೀ-ಶರ್ಟ್‌ ಮತ್ತು ನೀಲಿ ಬಣ್ಣದ ಜೀನ್ಸ್‌ ಅವನ ಕಾಫಿ ಬಣ್ಣದ ಚರ್ಮ ಎದ್ದು ಕಾಣುವಂತೆ ಮಾಡಿತ್ತು.

ಅವಳು ಅವನನ್ನು ನೋಡುತ್ತಿರುವುದನ್ನು ಅವನು ನೋಡದೇ ಇರಲಿ ಎಂದು ಅನು ಶೀಘ್ರವಾಗಿ ಮುಖ ತಿರುಗಿಸಿಕೊಂಡಳು. ಅವರು ಬೆಳೆದ ರೀತಿ ಮತ್ತು ವಾತಾವರಣದಿಂದಾಗಿ ಸಾಮಾನ್ಯವಾಗಿ ಸಂಕೋಚದ ಸ್ವಭಾವದವರಾದ ಭಾರತೀಯ ಪುರುಷರು ತಮಗೆ ಪರಿಚಯವಿಲ್ಲದ ಸ್ತ್ರೀಯರನ್ನು ಮಾತನಾಡಿಸುವುದಾಗಲಿ, ದೃಷ್ಟಿ ಬೆರೆಸುವುದಾಗಲಿ ಮಾಡುವುದಿಲ್ಲ. ಭಾರತೀಯ ಸ್ತ್ರೀಯರು ಸಹ ಗಂಡಸರಂತೆಯೆ. ಆದರೆ ಅನೂಳ ಕೆಲಸದ ರೀತಿ ಮತ್ತು ಪ್ರಯಾಣದಿಂದಾಗಿ ಅವಳು ಹೆಚ್ಚು ಉಲ್ಲಾಸದ, ಜನರ ಜೊತೆ ಬೆರೆಯುವ ಸ್ವಭಾವದವಳಾಗಿ ಬದಲಾಗಿ, ತನಗೆ ಪರಿಚಯ ಮಾಡಿಕೊಳ್ಳಬೇಕು ಎನಿಸಿದ ಯಾರಿಗಾದರೂ ಹಲೋ ಎಂದು ಹೇಳುವ ಧೈರ್ಯ ಬೆಳೆಸಿಕೊಂಡಿದ್ದಳು. ಈ ಮನುಷ್ಯ ಅವಳನ್ನು ಗಮನಿಸುವಂತಾಗಲು ದೃಷ್ಟಿ ಸಂಪರ್ಕ ಮಾಡಬೇಕೆಂದು ತತ್‌ಕ್ಷಣ ತೀರ್ಮಾನಿಸಿದಳು. ಆತನ ಗಮನ ಸೆಳೆಯಲು ಏನಾದರು ಮಾಡುವುದು ಒಳ್ಳೆಯದು.

ದೀರ್ಘ ಪ್ರಯಾಣದ ವಿಮಾನ ಯಾನದಲ್ಲಿ ಅನು ಕಿಟಕಿ ಬದಿಯ ಸೀಟನ್ನು ಬಯಸದೆ, ತನಗೆ ಬೇಕೆಂದಾಗ ಶೌಚಾಲಯ ಸಂದರ್ಶಿಸುವಂತಾಗಲು ದಾರಿ ಬದಿಯ ಸೀಟನ್ನು ಅನಿವಾರ್ಯವಾಗಿ ಕೇಳುತ್ತಿದ್ದಳು. ಮಧ್ಯದ ಸೀಟುಗಳನ್ನು ಪಡೆದ ಯಾರೇ ಆಗಲಿ ಅನೂಳ ಕುಳ್ಳಗಿನ ಕಾಲುಗಳನ್ನು ಮತ್ತು ಕಾಲುಗಳ ಮುಂದೆ ಬೇಕಾದಷ್ಟು ಇರುತ್ತಿದ್ದ ಜಾಗವನ್ನು ನೋಡಿ, ತಮ್ಮ ಸೀಟನ್ನು ಬದಲಾಯಿಸಿಕೊಳ್ಳಲು ಕೋರುತ್ತಿದ್ದರು. ಆಗೆಲ್ಲ ಅವರ ಕೋರಿಕೆಗಳನ್ನು ತಿರಸ್ಕರಿಸುತ್ತಿದ್ದ ಅನೂ, ಎಷ್ಟೋ ಸಲ ಮುಖ ಊದಿಸಿಕೊಂಡ ಪಕ್ಕದ ಸೀಟಿನ ಪ್ರಯಾಣಿಕರೊಂದಿಗೆ ಪ್ರಯಾಣ ಮಾಡುತ್ತಿದ್ದಳು. ಆದರೆ ವಿಮಾನ ಯಾನದಲ್ಲಿ, ಸ್ಯಾಂಡ್‌ವಿಚ್‌ನ ನಡುವೆ ಇರುಕಿಸಿದ ಮಾಂಸದ ತುಣುಕಿನಂತೆ, ಸೀಟುಗಳ ಮಧ್ಯೆ ಅತೃಪ್ತವಾಗಿ ಕುಳಿತಿರುತ್ತಿದ್ದ ಸಹಪ್ರಯಾಣಿಕರೊಂದಿಗೆ ಮಾತಿನಲ್ಲಿ ತೊಡಗುವುದಕ್ಕಿಂತ ತನ್ನ ಲ್ಯಾಪ್‌ಟಾಪ್‌ ಕಂಪ್ಯೂಟರ್‌ ತೆಗೆದು ಇ-ಮೇಯ್ಲ್‌ು ನೋಡಲೊ ಇಲ್ಲ ಯಾವುದಾದರೂ ಪುಸ್ತಕ ಓದಲೋ ಅವಳಿಗೆ ಸಮಯ ಸಿಗುತ್ತಿದ್ದುದ್ದರಿಂದಾಗಿ ಅವಳು ಅದರ ಬಗ್ಗೆಯೆಲ್ಲ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.

ತನ್ನ ದಾರಿಬದಿಯ ಸೀಟಿನಲ್ಲಿ ಆರಾಮವಾಗಿ ಕುಳಿತ ಅನು ತನ್ನ ಮುಂದಿನ ಸೀಟ್‌ ಪಾಕೆಟ್‌ನಿಂದ ಒಂದು ಮ್ಯಾಗಜೈನ್‌ ಅನ್ನು ತೆಗೆದುಕೊಂಡಳು. 'ಪ್ಲೀಸ್‌ ಎಕ್ಸ್‌ಕ್ಯೂಸ್‌ ಮಿ," ಒಂದು ಗಂಭೀರ ಸ್ವರ ಕೇಳಿಸಿತು.

ಆ ಮನುಷ್ಯನನ್ನು ಒಳಗಿನ ಸೀಟಿನಲ್ಲಿ ಕುಳಿತುಕೊಳ್ಳಲು ಬಿಡಲು ಎದ್ದುನಿಲ್ಲುತ್ತ ಮೇಲೆ ನೋಡಲು, ಅವಳಿಗೆ ತನ್ನ ಅದೃಷ್ಟವನ್ನು ತನಗೆ ನಂಬಲಾಗಲಿಲ್ಲ. ಆತ ಆ ಎತ್ತರದ ನಿಲುವಿನ ಭಾರತೀಯನಾಗಿದ್ದ!

ತನ್ನ ಕಾಲುಗಳನ್ನು ಸ್ವಲ್ಪ ತಡಬಡಾಯಿಸಿಕೊಂಡು ನಿಂತ ಆಕೆ ನಗವನ್ನು ಹೊರಸೂಸುತ್ತ 'ಹಾಯ್‌ು," ಎಂದಳು.

ಅವಳಿಗಿಂತ ಒಂದಡಿಗೂ ಹೆಚ್ಚು ಎತ್ತರವಿದ್ದ ಆತ ಅವಳನ್ನು ತಲೆತಗ್ಗಿಸಿ ನೋಡುತ್ತ ತಾನೂ ನಸುನಕ್ಕ. 'ನಿಮಗೇನೂ ಅಭ್ಯಂತರವಿಲ್ಲದಿದ್ದರೆ, ನಾನು ಈ ಬದಿಯ ಸೀಟಿನಲ್ಲಿ ಕುಳಿತುಕೊಳ್ಳಲು ಬಯಸುತ್ತೇನೆ. ಮಧ್ಯದ ಸೀಟುಗಳಲ್ಲಿ ನಾನು ಅಷ್ಟೇನೂ ಸರಿಯಾಗಿ ಕೂರಲಾಗುವುದಿಲ್ಲ. ಯಾವಾಗಲೂ ಬದಿಯ ಸೀಟನ್ನೇ ಕಾದಿರಿಸುತ್ತೇನೆ, ಆದರೆ ಈ ವಿಮಾನದಲ್ಲಿ ಎಲ್ಲಾ ಭರ್ತಿಯಾಗಿಬಿಟ್ಟಿದ್ದವು."

ಅವಳಿಗೆ ಪಕ್ಕದ ಸೀಟಿನ ಪ್ರಯಾಣಿಕ ವ್ಯಗ್ರನಾಗುವುದು, ಅದರಲ್ಲೂ ಈ ಸಲ, ಖಂಡಿತ ಬೇಕಿರಲಿಲ್ಲ! 'ಖಂಡಿತ," ಒಪ್ಪಿಕೊಂಡ ಆಕೆ ಒಳಗಿನ ಸೀಟಿಗೆ ಸರಿದುಕೊಂಡಳು.

'ಧನ್ಯವಾದಗಳು. ನಿಜವಾಗಲೂ ನಿಮ್ಮ ಸಹಾಯವನ್ನು ಮೆಚ್ಚುತ್ತೇನೆ."

ಅಬ್ಬಾ, ಎಂತಹ ಪ್ರಚಂಡ ನಸುನಗು! ಹಿಂದಿ ಸಿನೆಮಾಗಳ ಹೀರೋಗಳನ್ನು ಬಿಟ್ಟರೆ ಆತ ಅವಳು ಕಂಡ ಎತ್ತರದ ನಿಲುವಿನ, ಅತಿ ಸುಂದರನಾದ ಭಾರತೀಯ ಯುವಕನಾಗಿದ್ದ.

ಎದೆ ಇನ್ನೂ ನಗಾರಿ ಬಾರಿಸುತ್ತಿರುವಾಗ ಸಹಜವಾಗೆಂಬಂತೆ ಕುಳಿತ ಅನು, ವಿಮಾನದ ಮ್ಯಾಗಜೈನ್‌ ಅನ್ನು ತಿರುವಿ ಹಾಕಲು ಪ್ರಾರಂಭಿಸಿದಳು. ಆದರೆ ಅವಳ ತಲೆಯಲ್ಲಿ ಏನೇನೂ ಇಳಿಯುತ್ತಿರಲಿಲ್ಲ.

ತನ್ನ ಕಣ್ಣಂಚಿನಲ್ಲಿ ಆತ ಅವಳತ್ತ ತಿರುಗುತ್ತಿರುವುದನ್ನು ಗಮನಿಸಿದಳು. 'ನೀವು ಬ್ಯುಸಿನೆಸ್‌ ಟ್ರಿಪ್‌ ಮೇಲೆ ಬಂದಿದ್ದೀರ?"

'ಸರಿಯಾದ ಊಹೆ! ಹೌದು. ಆದರೆ ನನಗೆ ಬೋಸ್ಟನ್‌ ಇಷ್ಟವಾಯಿತು."

ಆತ ಅಸಾಮಾನ್ಯವೆನ್ನುವಷ್ಟು ಆಕರ್ಷಕವಾಗಿದ್ದ. ಯಾವುದೇ ಘನವಾದ ಕಾರಣವಿಲ್ಲದೆ ಕೆಲವೇ ಕೆಲವು ಭಾರತೀಯರು ಮಾತ್ರ ಅವಳೊಡನೆ ಈ ಮುಂಚೆ ಸಂಭಾಷಣೆ ಮಾಡಿದ್ದರು. ಆತ ಈಗ ತನ್ನ ಹಸ್ತವನ್ನು ಮುಂಚಾಚಿದ. 'ನನ್ನ ಹೆಸರು ದೀಪಕ್‌. ದೀಪಕ್‌ ರಂಜನ್‌."

'ಅನುರಾಧ."

ಆತ ಬಿಗಿಯಾದ ಹಸ್ತಲಾಘವವನ್ನು ಹಿಂದಿರುಗಿಸುತ್ತಿದ್ದಂತೆ, ಕ್ಷಣಮಾತ್ರದಲ್ಲಿ ಅನು ಮತ್ತೆ ನಾಚಿಕೆಯ, ಸಂಕೋಚದ ಮುದ್ದೆಯಾದಳು. ಆತ ಮುಂದೇನು ಹೇಳಬಹುದು ಎಂದು ಯೋಚಿಸುತ್ತ ಮತ್ತೆ ಮ್ಯಾಗಜೈನನ್ನು ದಿಟ್ಟಿಸಲಾರಂಭಿಸಿದಳು. ನಾನೇನು ಈಗಲೂ ಸಂಕೋಚದ ಸಣ್ಣ ಹುಡುಗಿಯಲ್ಲ. ಯಾರ ಜೊತೆಗಾದರೂ ಮಾತನಾಡಬಲ್ಲೆ! ಆದರೆ ಆತ ಭಾರತದವನಾಗಿದ್ದ ಕಾರಣ, ಅವಳೇನಾದರೂ ಸಲುಗೆಯಿಂದ ವರ್ತಿಸಿದರೆ ಅದು ಅವನಿಗೆ ವಿಚಿತ್ರ ಎನ್ನಿಸಬಹುದು.

ಆತ ತನ್ನ ಬ್ಯಾಗಿನಿಂದ ಮ್ಯಾಗಜೈನ್‌ಗಳ ಕಂತೆಯನ್ನೇ ಹೊರತೆಗೆದು ಅವರ ಆರು ಗಂಟೆಗಳ ಅವಧಿಯ ಪ್ರಯಾಣಕ್ಕೆ ಆತ ಯಾವ ರೀತಿ ಸಿದ್ದವೆಂದು ತೋರಿಸಿದ. ಇಂಡಿಯಾ ಟುಡೆ, ನ್ಯೂಸ್‌ವೀಕ್‌, ಬ್ಯುಸಿನೆಸ್‌ ವೀಕ್‌, ಮತ್ತು ದಿ ಎಕನಾಮಿಸ್ಟ್‌. 'ಅನು, ನಿಮಗೆ ಇವುಗಳಲ್ಲಿ ಯಾವುದಾದರೂ ಬೇಕಾದರೆ ತೆಗೆದುಕೊಳ್ಳಲು ಹಿಂಜರಿಯಬೇಡಿ." ಭಾರತದಲ್ಲಿ ಅನುರಾಧ ಹೆಸರಿನವರಿಗೆ ಅನು ಎನ್ನುವುದು ಹೊಂದಿಕೊಳ್ಳುತ್ತದೆ ಎಂದು ಆತನಿಗೆ ಗೊತ್ತಿತ್ತು.

'ಖಂಡಿತ, ಆದರೆ ಆಮೇಲೆ, ವಿಮಾನ ಹಾರಲು ಪ್ರಾರಂಭಿಸಿದ ನಂತರ. ನನಗೆ ಕೆಲವೊಂದು ಗಂಟೆಗಳ ಕೆಲಸ ಇದೆ. ಕೊಡಲು ಮುಂದೆ ಬಂದಿದ್ದಕ್ಕೆ ಧನ್ಯವಾದಗಳು."

ಆತ ಸ್ನೇಹಮಯಿಯಾಗಿ ಕಂಡ ಮತ್ತು ಅವಳಿಗೆ ಅವನ ಸಾನಿಧ್ಯ ಹಿತವಾಗಿ ಇತ್ತು. ಆದರೆ ಆತ ತನಗೆ ಎಟುಕದವನು ಎಂದು ಆಕೆ ಯೋಚಿಸಿದಳು. ಯಾವುದಾದರೂ ಹೆಣ್ಣು ಆತನ ಜೊತೆ ಬಯಸದೆ ಇರಲು ಅವಳು ಸತ್ತವಳಾಗಿರಬೇಕು. ಆತನಿಗೆ ಮದುವೆ ಆಗಿರಲೇಬೇಕು. ಆತ ಇನ್ನೂ ಅವಿವಾಹಿತನಾಗಿರಲು ಏನು ಕಾರಣ ತಾನೆ ಇರಲು ಸಾಧ್ಯ?

ಸಾಮಾನ್ಯವಾಗಿ ವಾಚಾಳಿಯಾದ ಅನು ಈಗ ಮಾತುಗಳಿಗಾಗಿ ತಡಕಾಡಿದಳು. ಆತ ದಿ ಎಕನಾಮಿಸ್ಟ್‌ ಪತ್ರಿಕೆ ತೆರೆಯುವುದನ್ನು ಕಳ್ಳತನದಲ್ಲಿ ನೋಡಿದಳು. ಆತ ಖಂಡಿತವಾಗಿ ಇಂಜಿನಿಯರ್‌ ಅಲ್ಲ. ಬ್ಯುಸಿನೆಸ್‌ ಪ್ರಪಂಚದವನಾಗಿರಲೇಬೇಕು,

ಆಕೆಗೆ ಯೋಚಿಸಲು ಸಾಧ್ಯವಾದ ಮೊದಲ ವಾಕ್ಯವನ್ನೇ ತಡಮಾಡದೆ ಉಸುರಿದಳು. 'ನಾನು ಆ ಮ್ಯಾಗಜೈನಿನ ಚಂದಾದಾರಳಾಗಿದ್ದೇನೆ. ಅವರು ಯಾವುದೇ ವಿಶ್ವ ಸಂಗತಿಯನ್ನು ಡಾಲರ್‌ ಚಿಹ್ನೆಗೆ ತಿರುಗಿಸಿಬಿಡುತ್ತಾರೆ."

ಅವಳು ಆಡಿದ ಆ ಮಾತೇನಾದರೂ ಅವಳು ಜೀವನಕ್ಕೆ ಯಾವ ತರಹದ ನೌಕರಿ ಮಾಡುತ್ತಾಳೆ ಎಂದು ಅವನು ಪ್ರಶ್ನೆ ಮಾಡಿಕೊಳ್ಳಲು ಆಸ್ಪದ ಕೊಡುತ್ತದೆಯೆ ಎಂದು ಯೋಚಿಸಿದಳು. ಬಹುಪಾಲು ಭಾರತೀಯರು, ವಿಶೇಷವಾಗಿ ಅಮೆರಿಕದಲ್ಲಿ, ತಮ್ಮನ್ನು ತಮ್ಮ ವೃತ್ತಿಯಿಂದ ಗುರುತಿಸಿಕೊಳ್ಳುತ್ತಾರೆ. ಪಾರ್ಟಿಗಳಲ್ಲಿ ಅವಳು ಯಾವಾಗಲೂ ನೆಟ್‌ಪಾಯಿಂಟ್‌ಗೆ-ಕೆಲಸ-ಮಾಡುವ-ಅನು ಎಂದೇ ಪರಿಚಯಿಸಲ್ಪಡುತ್ತಿದ್ದಳು. ನಂತರ ಜನರು ಕೇಳುತ್ತಿದ್ದರು, 'ಭಾರತದ ಯಾವ ಊರಿನಿಂದ ಬಂದಿದ್ದೀರಿ ನೀವು?" ಅದು ಈಚಿನ ದಿನಗಳಲ್ಲಿ, ಇಲ್ಲಿ. ಅದಕ್ಕಿಂತ ಮುಂಚೆ ಕೇಳುತ್ತಿದ್ದಿದ್ದು 'ನಿಮ್ಮದು ಯಾವ ಜಾತಿ" ಎಂಬ ಪ್ರಶ್ನೆ, ಭಾರತದಲ್ಲಿ. ಅಲ್ಲಿ ಆ ಪ್ರಶ್ನೆ ಇನ್ನೂ ಸಾಮಾನ್ಯವಾದುದಾಗಿತ್ತು. ಆದರೆ ಅಮೆರಿಕದಲ್ಲಿ, ಎಷ್ಟೇ ಕುತೂಹಲಿಗಳಾಗಿದ್ದರೂ, ಭಾರತದಲ್ಲಿ ಜನಿಸಿದ ಜನರು ಅದನ್ನು ನೇರವಾಗಿ ಕೇಳುವುದಿಲ್ಲ. ಆದರೆ ವ್ಯಕ್ತಿಯ ಹೆಸರಿನಿಂದ ಊಹಿಸಲು ಪ್ರಯತ್ನಿಸುತ್ತಾರೆ.

ಆಕೆ ದೀಪಕ್‌ನೊಂದಿಗೆ ಸಂಭಾಷಿಸಲು ಬಯಸಿದಳು, ಆದರೆ ಹೇಗೆಂದು ಅವಳಿಗೆ ತಿಳಿಯಲಿಲ್ಲ. ವಿಮಾನ ಹಾರಲು ಪ್ರಾರಂಭಿಸಿದ ಮೇಲೆ ಆತ ದಿ ಎಕನಾಮಿಸ್ಟ್‌ನಲ್ಲಿ ಹುದುಗಿಕೊಂಡ ಪರಿಣಾಮವಾಗಿ ಅಲ್ಲಿ ಮೌನ ನೆಲೆಸಿತು. ತನ್ನ ಹೊಸ ಇ-ಮೇಯ್ಲ್‌ುಗಳನ್ನು ಓದಲು ಆವಳು ತನ್ನ ಲ್ಯಾಪ್‌ಟಾಪನ್ನು ಹೊರತೆಗೆದಳು. ಮಾತುಕತೆ ಆಡುವುಂತಹ ವೃತ್ತಿಯ ಮೂಲಕವೇ ಜೀವನ ಸಾಗಿಸಬೇಕಾದ ಅವಳು ಈಗ ಸ್ವತಃ ಮೂಕಿಯಾಗಿರುವುದನ್ನು ಗಮನಿಸಿದಳು.

'ನೀವು ಸಾಫ್ಟ್‌ವೇರ್‌ ಇಂಜಿನಿಯರ್ರೆ?" ಆತ ಕೇಳಿದ.

ಅನು ತಲೆಯೆತ್ತಿದಳು. 'ಇಲ್ಲ. ನೀವು?"

ಅವನ ಸರಿಯಳತೆಯ ದಟ್ಟ ಕಪ್ಪುಗೂದಲಿನಲ್ಲಿ ಕೈಬೆರಳುಗಳನ್ನು ಆಡಿಸುತ್ತ, ಅದೇ ಆಕರ್ಷಕವಾಗಿ ನಗುತ್ತ ಅಲ್ಲವೆಂದು ತಲೆಯಾಡಿಸಿದ. ಆತ ಖಂಡಿತವಾಗಿ ಮಾತನಾಡಲು ಬಯಸಿದ ಹಾಗಿತ್ತು, ಆದರೆ ಅವಳು ತಂತ್ರಗಳನ್ನು ಹೆಣೆಯುವ ಯೋಚನೆಯಲ್ಲಿ ಸಂಪೂರ್ಣವಾಗಿ ಮಗ್ನಳಾಗಿದ್ದಳು. ಆ ಸಂಭಾಷಣೆ ಪ್ರಯಾಣ ಮಾಡುವಾಗಿನ ಮತ್ತೊಂದು ಔಪಚಾರಿಕ ಸಂಭಾಷಣೆಯಾಗಿ ಬದಲಾಗುವುದು ಅವಳಿಗೆ ಬೇಕಿರಲಿಲ್ಲ. ಆತ ಕೈಬೆರಳಿನಲ್ಲಿ ಉಂಗುರ ಧರಿಸಿರಲಿಲ್ಲ. ಬಹಳಷ್ಟು ಭಾರತೀಯರು ವಿವಾಹಬಂಧದ ಉಂಗುರ ಧರಿಸುವುದಿಲ್ಲವೆಂದು ಅವಳಿಗೆ ತಿಳಿದಿದ್ದರೂ, ಆತ ಅವಿವಾಹಿತನಾಗಿರಲಿ ಎಂದು ಬಯಸಿದಳು.

ಬಹುಶಃ ಆತನೂ ಅದೇ ರೀತಿ ಯಾವ ಪ್ರಶ್ನೆಗಳನ್ನೂ ಹೆಚ್ಚಿಗೆ ಕೇಳದೆ, ಮುಂದೇನು ಹೇಳಬೇಕೆಂದು ತಿಳಿದುಕೊಳ್ಳದೆ ಮಾತನಾಡುವುದು ಬೇಡವೆಂದು ಯೋಚಿಸುತ್ತಿರಬಹುದು.

ಸಂಭಾಷಣೆ ಜಾರಿಯಲ್ಲಿರಲು ಅವಳು ಏನಾದರೂ ಮಾಡಬೇಕಿತ್ತು. ಚೆಂಡು ಅವಳ ಅಂಗಳದಲ್ಲಿತ್ತು. 'ಮತ್ತೆ, ನೀವೇನು ಮಾಡುತ್ತೀರಿ, ದೀಪಕ್‌? ನೀವು ಬೋಸ್ಟನ್‌ನಲ್ಲಿ ವಾಸವಿರುತ್ತೀರಾ?"

'ಇಲ್ಲ, ನಾನು ಬೋಸ್ಟನ್‌ನಲ್ಲಿ ನನ್ನ ಕಾಲೇಜು ಸಹಪಾಠಿಯಾಗಿದ್ದ ಸ್ನೇಹಿತನ ಮದುವೆಗೆ ಇಲ್ಲಿಗೆ ಬಂದಿದ್ದೆ. ಈಗ ನಾನು ಸ್ಯಾನ್‌ ಹೋಸೆಯಲ್ಲಿ ಇದ್ದೇನೆ. ಮತ್ತೆ ನೀವು?"

'ನಾನು ಬೋಸ್ಟನ್‌ಗೆ ವ್ಯವಹಾರದ ಮೇಲೆ ಬಂದಿದ್ದೆ. ನಾನೂ ಸಹ ಸ್ಯಾನ್‌ ಹೋಸೆಯಲ್ಲಿಯೇ ವಾಸ ಮಾಡುತ್ತಿದ್ದೇನೆ."

ಮುಂದಿನ ಐದು ಗಂಟೆಗಳು ಅವಳು ಉಹಿಸಿಕೊಳ್ಳಬಹುದಾದಕ್ಕಿಂತ ವೇಗವಾಗಿ ಕರಗಿ ಹೋದವು. ಅವರಿಗೆ ಪ್ರತಿಯೊಂದರ ಬಗ್ಗೆಯೂ - ವ್ಯವಹಾರ, ಭಾರತದಲ್ಲಿನ ಜೀವನ, ಅಮೆರಿಕದ ರಾಜಕಾರಣ, ಕಡೆಗೆ ಸ್ವಂತ ವಿಷಯಗಳನ್ನೂ ಸಹ ಮಾತನಾಡಲು ಸಾಧ್ಯವಾಯಿತು. ದೀಪಕ್‌ ಬೆಂಗಳೂರಿನವನಾಗಿದ್ದ. ಆಗಾಗಲೆ ಬಹಳಷ್ಟನ್ನು ಸಾಧಿಸಿದ್ದ ಹಾಗೆ ಕಂಡರೂ ತನ್ನ ಯಶಸ್ಸಿನ ಬಗ್ಗೆ ಆತ ವಿನಯಶೀಲನಾಗಿದ್ದ.

'ನೀವು ವಿದ್ಯಾಭ್ಶಾಸ ಮಾಡಿದ್ದು ಎಲ್ಲಿ, ದೀಪಕ್‌?"

ಅದು ತೂಕದ ಪ್ರಶ್ನೆಯಾದರೂ, ಆತನ ಉತ್ತರ ಪರಿಣಾಮಶಾಲಿಯಾಗಿತ್ತು. 'ಬನಾರಸ್‌ ಐಐಟಿಯಲ್ಲಿ ಬ್ಯಾಚೆಲರ್‌ ಪದವಿ, ಎಂಐಟಿಯಲ್ಲಿ ಇಂಜಿನಿಯರಿಂಗ್‌ನಲ್ಲಿ ಮಾಸ್ಟರ್ಸ್‌ ಪದವಿ ಪಡೆದೆ. ನಂತರ ಕೆಲವು ಫಾರ್ಚ್ಯೂನ್‌ 500 ಕಂಪನಿಗಳಿಗೆ ಕೆಲಸ ಮಾಡಿದೆ. ಅವುಗಳಲ್ಲಿ ಒಂದು ಕಂಪನಿ ಹಾರ್ವರ್ಡ್‌ನಲ್ಲಿ ಎಂಬಿಎ ಮಾಡಲು ಪ್ರಾಯೋಜಿಸಿತ್ತು."

'ವಾವ್‌!" ಅನು ನಕ್ಕಳು.

ವಿಮಾನದಲ್ಲಿನ ಪರಿಚಾರಕರು ಎಲ್ಲಾ ಕಂಪ್ಯೂಟರ್‌ಗಳನ್ನು ಆರಿಸಲು ಮತ್ತು ವಿಮಾನ ನೆಲಕ್ಕೆ ಇಳಿಯುವಾಗ ಅನುಸರಿಸಬೇಕಾದ ಸೂಚನೆಗಳನ್ನು ಪಾಲಿಸಲು ಘೋಷಣೆ ಮಾಡಿದರು. ದೀಪಕ್‌ ತನ್ನ ಒಂದು ಬ್ಯುಸಿನೆಸ್‌ ಕಾರ್ಡನ್ನು ಅವಳ ಕೈಗೆ ಕೊಟ್ಟ.

'ಅನು, ನನಗೆ ಫೋನ್‌ ಮಾಡಿ. ಇ-ಮೇಯ್ಲ್‌ು ಮಾಡುವುದು ಇನ್ನೂ ಒಳ್ಳೆಯದು. ನಾನು ಹೊರದೇಶಗಳಲ್ಲೆಲ್ಲಾ ಪ್ರಯಾಣ ಮಾಡುತ್ತಿರುತ್ತೇನೆ, ಹಾಗಾಗಿ ಇ-ಮೇಯ್ಲ್‌ು ಅನ್ನು ಸದಾ ನೆಚ್ಚಿಕೊಳ್ಳಬಹುದು."

'ಧನ್ಯವಾದಗಳು." ಅನು ಆತ ಕೊಟ್ಟ ಕಾರ್ಡಿನ ಮೇಲೆ ಕಣ್ಣಾಡಿಸಿದಳು. ಅವನ ಕಂಪನಿಯ ಪ್ರಪಂಚವ್ಯಾಪಿ ಮಾರಾಟ ವಿಭಾಗದ ಉಪಾಧ್ಯಕ್ಷ. ಅದರೆ ಆ ಕಾಗದ ಅವನು ಅವಿವಾಹಿತ ಎಂದಾಗಲಿ, ಅಥವ ಆತ ಇನ್ನೂ ಯಾವುದೇ ಗರ್ಲ್‌ ಫ್ರೆಂಡ್‌ ಇರದೆ ಲಭ್ಯವಿದ್ದಾನೆ ಎಂದಾಗಲಿ ಹೇಳಲಿಲ್ಲ.

'ನಾನು ನಿಮ್ಮದನ್ನು ಪಡೆಯಬಹುದೆ?" ಆತ ನಸುನಗುತ್ತಿದ್ದ.

'ನೀವು ಮಾರಾಟ ವಿಭಾಗದ ಉಪಾಧ್ಯಕ್ಷರಲ್ಲವೆ? ಏನನ್ನಾದರೂ ಮಾರುವುದಕ್ಕೆ ನನಗೆ ಕರೆ ಮಾಡಲಾರಿರಿ, ಅಲ್ಲವೆ?"

'ಇಲ್ಲ, ಅದಕ್ಕೆ ಮಾಡುವುದಿಲ್ಲ. ನಿಮ್ಮನ್ನು ಹೊರಗೆ ಎಂದಾದರೂ ಊಟಕ್ಕೆ ಕರೆದೊಯ್ಯುವುದಕ್ಕೆ."

ಆತ ಅವಳ ಕಣ್ಣುಗಳಲ್ಲಿ ಉತ್ತರವನ್ನು ಹುಡುಕುತ್ತಿದ್ದಾಗ ಅವನ ಕಣ್ಣುಗಳು ಹೊಳೆಯುತ್ತಿದ್ದವು.

ಅನು ನಾಚಿ ನೀರಾದಳು. ಅದು ವಾಸ್ತವ ಎಂದು ಅವಳಿಗೆ ನಂಬಲಾಗಲಿಲ್ಲ. ಒಂದು ಕಂಪನಿಯ ಉಪಾಧ್ಯಕ್ಷ, ಕಮ್ಮಿಯೇನಲ್ಲ! ಆತ ಎಂದೂ ಫೋನ್‌ ಮಾಡುವುದಿಲ್ಲ. ಯಾಕೆಂದರೆ ಆಕೆ ಕೆಲಸ ಮಾಡುತ್ತಿದ್ದದ್ದೊ ಸಾಧಾರಣವಾದ ಹೈ-ಟೆಕ್‌ ಕಂಪನಿಯಲ್ಲಿ. ಹಾರ್ವರ್ಡ್‌ ಬ್ಯುಸಿನೆಸ್‌ ಕಾಲೇಜು ಆತನಿಗೆ ಪ್ರತಿ ಸಂಭವನೀಯ ಗಿರಾಕಿಗೆ ವಿಸಿಟಿಂಗ್‌ ಕಾರ್ಡ್‌ ಕೊಡುವುದನ್ನು ಕಲಿಸಿರಲೇಬೇಕು, ಅಷ್ಟೆ.

(ಸಶೇಷ)

ಅಧ್ಯಾಯ - 11 ಅಧ್ಯಾಯ - 13
(c) ಹಕ್ಕುಗಳು : ಲೇಖಕರದು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more