ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗಳ ಮನಸ್ಸಿನಲ್ಲಿ ಮೂಡಿದ ಗೊಂದಲಗಳಿಗೆ ಅಪ್ಪನ ಸಮಾಧಾನಮೇ

By Staff
|
Google Oneindia Kannada News

19 -ಸ್ಯಾನ್‌ ಹೋಸೆ, ಕ್ಯಾಲಿಫೋರ್ನಿಯ.

ಪ್ರೀತಿಯ ಅಪ್ಪ,

ನೀವೆಲ್ಲರೂ ಕ್ಷೇಮ ಮತ್ತು ಆರೋಗ್ಯದಿಂದ ಇರುವಿರೆಂದು ಭಾವಿಸುತ್ತೇನೆ. ನಾನು ಅಮೆರಿಕಾಗೆ ಬಂದು 6 ತಿಂಗಳ ದೀರ್ಘ ಕಾಲವಾಯ್ತು, ಆದರೆ ನಾನು ಕ್ಷೇಮವಾಗಿದ್ದೇನೆ. ಭಾರತದಲ್ಲಿ ನಾವು ಒಳಪಡುವ ದಂಡನಾತ್ಮಕ ವಿದ್ಯಾಕ್ರಮಕ್ಕೆ ಹೋಲಿಸಿದರೆ ಈ ಪದವಿ ವಿದ್ಯಾಭ್ಯಾಸ ಸುಲಭವಾಗಿದೆ, ಮತ್ತು ಇಲ್ಲಿನ ಸ್ಪರ್ಧೆ ಅಷ್ಟೇನೂ ತೀಕ್ಷ್ಣವಾಗಿಲ್ಲ.

ನೀವು ನನ್ನನ್ನು ಸಾಕಷ್ಟು ಧೈರ್ಯ ಮತ್ತು ಕೆಚ್ಚನ್ನು ಹೊಂದಿರುವ ಹಾಗೆ ಬೆಳೆಸಿದಿರಿ ಎಂದು ನನಗೆ ಗೊತ್ತು. ನೀವು ನನಗೆ ಸ್ವಾತಂತ್ರ್ಯ ಮತ್ತು ಅತ್ಯುತ್ತಮ ಶಿಕ್ಷಣ ಕೊಡಿಸಲು ಪ್ರಯತ್ನಿಸಿದಿರಿ. ಆದರೆ ಇಲ್ಲಿಗೆ ಬಂದ ಮೇಲೆ, ಭಾರತ ನನ್ನನ್ನು ಎಂದಿಗೂ ಪಶ್ಚಿಮಕ್ಕೆ ಹೊಂದಿಕೊಳ್ಳಲಾಗದ ರೀತಿ ಸೀಮಿತಗೊಳಿಸಿತೇ ಎಂದು ಯೋಚಿಸಲು ಪ್ರಾರಂಭಿಸಿದ್ದೇನೆ.

ನಾನು ಇಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನೋಡುವ ಪಶ್ಚಿಮದ ಮಹಿಳೆಯರು ಯಾವಾಗಲೂ ತಮ್ಮ ಮುಖವೆತ್ತಿಕೊಂಡು, ಆತ್ಮವಿಶ್ವಾಸದಿಂದ ನಡೆಯುತ್ತಾರೆ. ಅವರು ತಮಗಿಷ್ಟವಾದ ರೀತಿಯಲ್ಲಿ ಬಟ್ಟೆ ಧರಿಸುತ್ತಾರೆ, ತಮಗೆ ಬೇಕೆನಿಸಿದವರ ಜೊತೆ ಮಾತನಾಡುತ್ತಾರೆ. ಕುಡಿಯುವುದಕ್ಕಾಗಿ ಮತ್ತು ನೃತ್ಯ ಮಾಡುವುದಕ್ಕಾಗಿ ಹೊರಗೆ ಹೋಗುತ್ತಾರೆ ಮತ್ತು ಕೇವಲ ಖುಷಿಗಾಗಿ ಫ್ಲರ್ಟ್‌ ಮಾಡುತ್ತಾರೆ! ಇದು ಒಂದು ರೀತಿ ಅವರು ಗಂಡಸರಿಗೆ ಸಮಾನರಾಗಿರುವ ತರಹ.

ನಮ್ಮ ಯಾವುದೇ ಧರ್ಮಗ್ರಂಥಗಳಾಗಲಿ, ಪುರಾಣಗಳಾಗಲಿ ಹೆಣ್ಣನ್ನು ಅವಳ ಸಹಜೀವಿಯ ಜೊತೆಗೆ ಸಮಾನವೆಂದು ಇಟ್ಟಿಲ್ಲ. ಗಾಂಭೀರ್ಯ ಮತ್ತು ಸ್ತ್ರೀಸಹಜ ಗುಣಗಳನ್ನು ಹೊಂದಿರುವುದು ಶರಣಾಗತಿಯಿಂದ ಕೂಡಿರುವುದಕ್ಕೆ ಸಮಾನಾರ್ಥಕ. ಆದರೆ ಈ ಸಮಾಜಕ್ಕೆ ಹೊಂದಿಕೊಳ್ಳುವುದು ನನ್ನನ್ನು ಭ್ರಷ್ಟಗೊಳಿಸುತ್ತದೆ ಮತ್ತು ಆ ಪ್ರಕ್ರಿಯೆಯಲ್ಲಿ ನಾನು ನನ್ನ ಭಾರತೀಯ ಮೌಲ್ಯಗಳನ್ನು ಕಳೆದುಕೊಳ್ಳುವ ಭಯವಾಗುತ್ತದೆ.

ಯಾವ ಮೌಲ್ಯಗಳನ್ನು ನಾನು ಇಷ್ಟು ಉತ್ಕಟವಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ? ನನಗೇ ಸರಿಯಾಗಿ ತಿಳಿದಿಲ್ಲ! ಹಿಂದೂ ಜೀವನ ಕ್ರಮವನ್ನು ನಿಜವಾಗಿ ಯಾವುದು ಸಮಗ್ರಿಸುತ್ತದೆ? ನನ್ನನ್ನು ಒಬ್ಬ ಒಳ್ಳೆಯ ಮಾನವ ಜೀವಿಯನ್ನಾಗಿ ಯಾವುದು ಮಾಡುತ್ತದೆ? ಈ ಹುಡುಗಿಯರು ತಾವು ಮದುವೆಯೇ ಆಗದಿರಬಹುದಾದ ಗಂಡಸರ ಜೊತೆ ಹೋಗುವುದು ಅವರನ್ನು ಕೆಟ್ಟವರನ್ನಾಗಿ ಮಾಡುತ್ತದೆಯೆ? ಅದು ಲೆಕ್ಕಕ್ಕಿದೆಯೆ? ಅಪ್ಪ, ಇಲ್ಲಿನ ಜೀವನದ ಒಂದು ಭಾಗವಾಗುವುದಕ್ಕೆ ನಾನು ಎಷ್ಟು ಹಂಬಲಿಸುತ್ತೇನಾದರೂ, ನಾನು ಇಲ್ಲಿನವರು ಹೇಳುವಂತೆ ಕೇವಲ ' fit in" ಆಗಲು, ನಾನು ನಾನಲ್ಲದ ಬೇರೆಯವಳಾಗಲು ಬಯಸುವುದಿಲ್ಲ. ನನ್ನ ಐಡೆಂಟಿಟಿಯನ್ನು ಕಳೆದುಕೊಳ್ಳದ ಹಾಗಿರಲು ಯಾವುದಕ್ಕೆ ನಾನು ನೇತಾಡಬೇಕು? ನನ್ನನ್ನು ಭಾರತೀಯಳನ್ನಾಗಿ ಮಾಡಿರುವ ಎಲ್ಲದಕ್ಕೂ ಬೆನ್ನು ತಿರುಗಿಸದ ಹಾಗೆ ಇದ್ದು ಹೇಗೆ ಇಲ್ಲಿ ನಾನು ಜೀವನ ಮಾಡಲಿ?

ಪ್ರೀತಿಯಿಂದ,

ಅನು

***

ಜೂನ್‌ 5 -ಮೈಸೂರು, ಭಾರತ

ನನ್ನ ಪ್ರೀತಿಯ ಅನು,

ಮೇ 19ರ ನಿನ್ನ ಕಾಗದ ತಲುಪಿದ್ದಕ್ಕೆ ತುಂಬಾ ಸಂತೋಷವಾಯಿತು. ನೀನು ಚೆನ್ನಾಗಿರುವುದು ಮತ್ತು ನಿನ್ನ ಓದಿನಲ್ಲಿ ಚೆನ್ನಾಗಿ ತೊಡಗಿಸಿಕೊಂಡಿರುವುದು ನಮ್ಮೆಲ್ಲರನ್ನು ಯಾವಾಗಲೂ ಸಂತೋಷಪಡಿಸುತ್ತದೆ.

ಯೂರೋಪ್‌ ಮತ್ತು ಅಮೆರಿಕಾ ಎರಡನ್ನೂ ನಾನು ಸ್ವಲ್ಪ ನೋಡಿರುವುದರಿಂದ, ನೀನು 'ನಮ್ಮೂರಿನಲ್ಲಿ" ಇರುವ ಹಾಗೆ ಆಗುತ್ತಿಲ್ಲ ಎಂದುದನ್ನು ಕೇಳಿ ಆಶ್ಚರ್ಯವಾಗಲಿಲ್ಲ. ಸಾಂಸ್ಕೃತಿಕವಾಗಿ ಹೇಳುವುದಾದರೆ, ನೀನು ಹುಟ್ಟಿ ಬೆಳೆದ ದೇಶಕ್ಕೂ ಮತ್ತು ಈಗ ಜೀವನ ನಡೆಸುತ್ತಿರುವ ದೇಶಕ್ಕೂ ಅಗಾಧವೆನಿಸುವಷ್ಟು ವ್ಯತ್ಯಾಸಗಳಿವೆ. ನಾನು ಎಂದಿಗೂ ಭಾರತ ಗೌರವಿಸುವ ಮೌಲ್ಯಗಳು ಪಶ್ಚಿಮ ಹೊಂದಿರುವ ಮೌಲ್ಯಗಳಿಗಿಂತ ಶ್ರೇಷ್ಠ, ಅಥವ ಪಶ್ಚಿಮದ ಮೌಲ್ಯಗಳು ಭಾರತದಕ್ಕಿಂತ ಶ್ರೇಷ್ಠ ಎಂದು ಹೇಳಲು ಮುಂದಾಗುವುದಿಲ್ಲ. ಯಾವುದೇ ಒಂದು ದೇಶದ ಮೌಲ್ಯಗಳು ಶತಮಾನಗಳ ಕಾಲ ವಿಕಾಸಗೊಂಡಿರುತ್ತವೆ ಮತ್ತು ಅಲ್ಲಿನ ಜನಕ್ಕೆ ಅವನ್ನು ಪ್ರೀತಿಸಲು ಮತ್ತು ತದನಂತರದಲ್ಲಿ ತಾವು ಹೀರಿಕೊಂಡ ಆ ಮೌಲ್ಯಗಳನ್ನು ಆದರ್ಶೀಕರಿಸಲು ಕಲಿಸಲಾಗಿರುತ್ತದೆ. ನಿಧಾನವಾಗಿ ಅವರು ಪ್ರಪಂಚದ ಬೇರೆಲ್ಲ ಮೌಲ್ಯಗಳು ಅವರವುದಕ್ಕಿಂತ ಕೀಳುಮಟ್ಟದವು ಎಂದು ನಂಬಲು ಪ್ರಾರಂಭಿಸುತ್ತಾರೆ.

ನಿನಗೆ ಪರಂಪರಾಗತವಾದ ಈ ಸಾಂಸ್ಕೃತಿಕ ಮೌಲ್ಯಗಳು, ನಿನ್ನನ್ನು, ಕನಿಷ್ಟ ಸದ್ಯಕ್ಕಾದರೂ, ಅಮೆರಿಕದ ಸಮಾಜಕ್ಕೆ ಎಂದಿಗೂ ನೀನು ಹೊಂದಿಕೊಳ್ಳಲಾರೆ ಎಂದು ಭಾವಿಸುವಂತೆ ಮಾಡುತ್ತದೆ.

ಹೌದು. ಪಶ್ಚಿಮದ, ಅದರಲ್ಲಿಯೂ ಮುಖ್ಯವಾಗಿ ಕ್ಯಾಲಿಫೋರ್ನಿಯದ ಸ್ತ್ರೀಯರು ತಮಗೆ ಈಗ ತಾನೆ ದೊರಕಿದ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದಾರೆ. ನಮ್ಮ ದೆಹಲಿ, ಮುಂಬಯಿ, ಮತ್ತು ಬೆಂಗಳೂರಿನಂತಹ ಮಹಾನಗರಗಳನ್ನು ಸಂದರ್ಶಿಸು, ನಮ್ಮ ಯುವತಿಯರು ಅವರ ಪಶ್ಚಿಮದ ಸೋದರಿಯರನ್ನು ಮೀರಿಸುತ್ತಿರುವುದನ್ನು ಕಾಣುವೆ. ಮತ್ತು ಈ ಪ್ರಕ್ರಿಯೆಯಲ್ಲಿ ಕೆಲವರು ಸ್ತ್ರೀಗಾಂಭೀರ್ಯದ ಕೆಲವು ಕನಿಷ್ಟ ಮಿತಿಗಳನ್ನು ದಾಟಿ ಹೋಗಿದ್ದಾರೆ.

ನೀನು ಸುತ್ತ ನೋಡುವ ಯುವತಿಯರ ಮೇಲ್ಪದರದ ಒಳಗೂ ನೋಡಲು ಪ್ರಯತ್ನಿಸು. ಸಂತೋಷವಾಗಿ ಇರಲು ಪ್ರಯತ್ನಿಸುವುದರಲ್ಲಿ ಏನೂ ತಪ್ಪಿಲ್ಲ. ಪ್ರತಿಯೊಬ್ಬ ಮನುಷ್ಯನೂ, ಪೂರ್ವದವನಾಗಲಿ ಪಶ್ಚಿಮದವನಾಗಲಿ, ಬಹಳಷ್ಟು ಸಲ ಅಪ್ರಜ್ಞಾಪೂರ್ವಕವಾಗಿಯಾದರೂ ಸಂತೋಷವನ್ನು ಕಾಣಲು ಯಾವಾಗಲೂ ಪ್ರಯತ್ನಿಸುತ್ತಿರುತ್ತಾನೆ. ಇಂತಹ ಸಮಯದಲ್ಲಿ ಧರ್ಮ ಪ್ರವೇಶಿಸುತ್ತದೆ. ಭಾರತದ ಧರ್ಮಸೂಕ್ತಿಗಳು 'ಚೆನ್ನಾದದ್ದು ಮತ್ತು ಒಳ್ಳೆಯದು" ಈ ಎರಡರ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಹೇಳುತ್ತವೆ. ಯಾವುದು ನಮ್ಮನ್ನು ಇಂದ್ರಿಯ ಸುಖಕ್ಕೆ ಎಳೆದು ಆ ಸಮಯಕ್ಕೆ ಕ್ಷಣಿಕ ಸುಖ ನೀಡಿ ಕೊನೆಯಲ್ಲಿ ಅಂತ್ಯವಿಲ್ಲದ ದುಃಖ ತರುತ್ತದೆಯೋ ಅಂತಹುದೆಲ್ಲವನ್ನೂ ವರ್ಜಿಸಬೇಕು. ಆದರೆ, ಯಾವುದು ಶಾಶ್ವತವಾದ ಸಂತೋಷವನ್ನು ಕೊಡುತ್ತದೆಯೋ ಅಂತಹುದರ ಬೆಂಬತ್ತಬೇಕು. ಅದನ್ನೇ ಅದು ಆಧ್ಯಾತ್ಮಿಕ ಸುಖ ಎಂದದ್ದು.

'ಧರ್ಮ" ಅಥವಾ 'ಆಧ್ಯಾತ್ಮ " ಎಂದು ಕರೆಸಿಕೊಂಡ ಪ್ರತಿಯೊಂದರ ಮೇಲೂ ತಕ್ಷಣವೇ ನಮ್ಮಲ್ಲಿ ಬಹಳ ಜನ ಅಲರ್ಜಿ ಬೆಳೆಸಿಕೊಂಡು ಬಿಡುತ್ತಾರೆ. ಆದ್ದರಿಂದ ಸಮಸ್ಯೆಯನ್ನು ಜಾತ್ಯತೀತ ದೃಷ್ಟಿಕೋನದಿಂದ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸು. ಯಾರು ಕೇವಲ ಇಂದ್ರಿಯ ಸುಖವನ್ನು ಮಾತ್ರ ಸಾಧಿಸಬೇಕಿದೆ ಎಂದು ಪರಿಗಣಿಸುತ್ತಾರೆ, ಅವರು ಅತಿ ಕೀಳು ಮಟ್ಟದ, ಮೃಗಗಳಿಗೆ ಸಮೀಪವಾದ ಜೀವನವನ್ನು ನಡೆಸುತ್ತಾರೆ. ಆದ್ದರಿಂದ ನಾವು ಯಾವುದು ಇಂದ್ರಿಯಗಳ ಆಮಿಷಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆಯೊ ಅಂತಹ ಮೇಲು ಮಟ್ಟದ ಜೀವನವನ್ನು ಅನ್ವೇಷಿಸಬೇಕು.

ನಿನ್ನನ್ನು ಕ್ಲಿಷ್ಟ ಪದಗಳಲ್ಲಿ ಮುಳುಗಿಸಿ ತ್ರಾಸ ಕೊಡಬೇಕು ಅಂತಿಲ್ಲವಾದಾರೂ, ಇಂದ್ರಿಯ ಪದಾರ್ಥಗಳೊಂದಿಗೆ ಯಾವುದೇ ಸಾಹಚರ್ಯವಿಲ್ಲದ ಹಾಗೂ ಇಂದ್ರಿಯ ಸುಖ ಮುಗಿದ ಕ್ಷಣದಲ್ಲಿಯೇ ಅಸುಖದಲ್ಲಿ ಬೀಳಿಸದ ಸುಖದ ಸ್ಥಿತಿ ಒಂದಿದೆ. ಪೂರ್ವದ ಮತ್ತು ಪಶ್ಚಿಮದ ಧರ್ಮಗಳೆರಡೂ, ಇಂದ್ರಿಯ ಪದಾರ್ಥಗಳ ಉಪಲಬ್ಧತೆಯ ಮೇಲೆ ಅವಲಂಬಿಸಿರದ ಒಂದು ಮನಸ್ಥಿತಿ ತರುವ ಸುಖದತ್ತ ಕೈಮಾಡುತ್ತವೆ. ಆದ್ದರಿಂದ, ಅಂತಹ ಸ್ಥಿತಿಯನ್ನು ಹೊಂದಲು ನಿರಂತರ ಶ್ರಮಿಸಬೇಕು.

ಅಸಹಜವಾದದ್ದೇನೂ ನೀನು ಮಾಡುತ್ತಿಲ್ಲ ಎಂದು ಇದು ನಿನ್ನನ್ನು ನಂಬಿಸುತ್ತದೆ ಎಂದು ಬಯಸುತ್ತೇನೆ.

ಪ್ರೀತಿ ಮತ್ತು ಶುಭ ಹಾರೈಕೆಗಳೊಂದಿಗೆ

ಅಪ್ಪ.

(ಸಶೇಷ)

ಅಧ್ಯಾಯ - 2 ಅಧ್ಯಾಯ - 4

(c) ಹಕ್ಕುಗಳು : ಲೇಖಕರದು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X