ಅಕ್ಕ ನಿರ್ದೇಶಕ ಮಂಡಳಿಗೆ ಹತ್ತೂ ಸಮಸ್ತರ ಅವಿರೋಧ ಆಯ್ಕೆ
ಬೆಂಗಳೂರು, ಆಗಸ್ಟ್ 6 : ಅಮೆರಿಕ ನೆಲದ ಲಾಭರಹಿತ ಕನ್ನಡ ಸಂಸ್ಥೆಗಳಲ್ಲೊಂದಾದ "ಉತ್ತರ ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ)" ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ.
204-15ನೇ ಸಾಲಿನ ಆಡಳಿತ ಮಂಡಳಿಯ ಹತ್ತು ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಿತು. ಹತ್ತೂ ಮಂದಿ ಅವಿರೋಧವಾಗಿ ಆಯ್ಕೆಯಾದರು. ನಾಮಪತ್ರಗಳನ್ನು ಹಿಂಪಡೆಯಲು ಜುಲೈ 30 ಕಡೆಯ ದಿನಾಂಕವಾಗಿತ್ತು. ಚುನಾಯಿತ ನಿರ್ದೇಶಕರ ಆಡಳಿತಾವಧಿ 4 ವರ್ಷದ್ದಾಗಿರುತ್ತದೆ. 2015ರಿಂದ 2018 ರವರೆಗೆ.

ಚುನಾಯಿತ ನಿರ್ದೇಶಕರ ಹೆಸರು ಮತ್ತು ಅವರು ನೆಲೆಸಿರುವ ರಾಜ್ಯಗಳ ಹೆಸರು ಕೆಳಕಂಡಂತಿವೆ :
* ಕುಮಾರಿ ಅನಿತಾ ದಾಸಪ್ಪ (ಇಲಿನಾಯ್)
* ಚಂದ್ರಶೇಖರ ಆರಾಧ್ಯ (ನ್ಯೂಜರ್ಸಿ)
* ಧನಂಜಯ ಕೆಂಗಯ್ಯ (ಕ್ಯಾಲಿಫೋರ್ನಿಯ)
* ಕುಮಾರಿ ಜಯಂತಿ ಶಿವಕುಮಾರ್ (ನ್ಯೂಯಾರ್ಕ್)
* ಡಾ. ಜ್ಯೋತಿ ಸ್ವರೂಪ್ (ಟೆಕ್ಸಾಸ್)
* ಕುಮಾರಿ ಲತಾ ನಟರಾಜ್ (ಪೆನ್ಸಿಲ್ ವೇನಿಯ)
* ಡಾ. ನವೀನ್ ಕೃಷ್ಣ (ಮಿಸ್ಸೌರಿ)
* ರೇಣುಕಾ ಪ್ರಸಾದ್, ಒಟ್ಟಾವ (ಕೆನಡ)
* ಶರತ್ ಭಂಡಾರಿ (ನ್ಯೂಯಾರ್ಕ್)
* ಡಾ ಶಶಿಧರ್ (ಟೆನೆಸ್ಸಿ)
ನೂತನ 10 ನಿರ್ದೇಶಕರು ಮತ್ತು ಹಾಲಿ ಇರುವ 10 ಸದಸ್ಯರ ತಂಡ (ಒಟ್ಟು 20 ನಿರ್ದೇಶಕರು) ಅಕ್ಕದ ಪದಾಧಿಕಾರಿಗಳನ್ನು ಚುನಾಯಿಸುತ್ತದೆ, ಅಥವಾ ಆರಿಸುತ್ತದೆ. ಹಾಲಿ ನಿರ್ದೇಶಕ ಮತ್ತು ನ್ಯೂಜೆರ್ಸಿ ಪ್ರಜೆ ರಾಜ್ ಪಾಟೀಲ್ ಅವರು ಅಧ್ಯಕ್ಷ ಸ್ಥಾನಕ್ಕೆ ಮಂಚೂಣಿಯಲ್ಲಿರುವ ಸ್ಪರ್ಧಿ ಎಂದು ವಿಶ್ವಸನೀಯವಾಗಿ ಗೊತ್ತಾಗಿದೆ.
ಪ್ರಸಕ್ತ ಸಾಲಿನ (2013-14) ಪದಾಧಿಕಾರಿಗಳ ಹಿನ್ನೋಟ, ಕಿರುಪರಿಚಯ ಇಲ್ಲಿದೆ. ಈ ತಂಡ ಮತ್ತು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಜಂಟಿಯಾಗಿ 8ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ಪಶ್ಚಿಮ ಕರಾವಳಿಯ ಸ್ಯಾನ್ ಹೋಸೆಯಲ್ಲಿ ಆಯೋಜಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದೇ ವೇಳೆ, ಅಕ್ಕ ವಿಶ್ವಸ್ಥ ಮಂಡಳಿಯಲ್ಲಿ ಖಾಲಿ ಇರುವ ಟ್ರಸ್ಟಿಗಳ ಸ್ಥಾನಗಳನ್ನು ತುಂಬುವುದು ಬಾಕಿ ಇದೆ. ಶಿಕಾಗೋ ಕನ್ನಡಿಗ, ಹಿರಿಯ ನಾಗರಿಕ, ಬಿಎಂಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ನ 1965ನೇ ಬ್ಯಾಚಿನ ವಿದ್ಯಾರ್ಥಿ ಮೋಕ್ಷಗುಂಡಂ ಜಯರಾಮ್ ಅವರು ಅಕ್ಕ ಟ್ರಸ್ಟಿನ ದತ್ತಿ ವಿಭಾಗದ ಚೇರ್ ಮನ್ ಆಗುತ್ತಾರೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಕರ್ನಾಟಕದ ಗ್ರಾಮೀಣ ಶಾಲೆಗಳಲ್ಲಿ ಶೌಚಾಲಯಗಳನ್ನು ಉಚಿತವಾಗಿ ನಿರ್ಮಿಸುವ ಕಾರ್ಯಕ್ರಮ ಸೇರಿದಂತೆ ಹಲವಾರು ಸಹಾಯಾರ್ಥ ಕಾರ್ಯಕ್ರಮಗಳನ್ನು ಮೋಕ್ಷಗುಂಡಂ ಜಯರಾಮ್ ಅವರು ಹಾಕಿಕೊಂಡಿದ್ದಾರೆ.












Click it and Unblock the Notifications