ಸಿಂಗಪುರದಲ್ಲಿ ಪುರಂದರ ದಾಸರಿಗೆ ನಮನ

ಸಿಂಗಪುರ ಕನ್ನಡ ಸಂಘ ಹಾಗೂ ಸೆಂಪಗ ವಿನಾಯಕರ್ ದೇಗುಲದ ಸಭಾಂಗಣದಲ್ಲಿ ಶನಿವಾರ 5ರಂದು ಸಂಜೆ ಸಂಗೀತ ಪಿತಾಮಹ ಪುರಂದರದಾಸರ ಆರಾಧನೆ ನೆರವೇರಿತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನಿತರಾಗಿದ್ದರು ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿಯವರು.
ಕರ್ನಾಟಕ ಸಂಗೀತ ಪರಂಪರೆ ನಾಂದಿ ಹಾಡಿದವರು ಪುರಂದರದಾಸರು. ಸಂಸ್ಕೃತ ಸಾಹಿತ್ಯಕ್ಕೆ ವಾಲ್ಮೀಕಿ ಮಹರ್ಷಿಗಳು ಹೇಗೋ ಕರ್ನಾಟಕ ಸಂಗೀತಕ್ಕೆ ಪುರಂದರದಾಸರು ಹಾಗೆ. ಇಂತಹ ಯುಗಪುರುಷರನ್ನು ಲಕ್ಷ ಲಕ್ಷ ವರ್ಷಗಳಿಗೊಮ್ಮೆ ಪಡೆಯುವುದು ಕಾಲದ ಭಾಗ್ಯ, ರಾಷ್ಟ್ರದ ಭಾಗ್ಯ ಎಂದು ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರು ಪುರಂದರರ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ.
ದಾಸರ ಕೀರ್ತನೆಗಳಲ್ಲಿ ಸರಳ ಭಾಷೆಯಿದೆ, ಸಂಧಿ-ಸಮಾಸಗಳ ಕ್ಲಿಷ್ಟತೆಯಿಲ್ಲ. ಅಂತರಂಗದ ಅನುಭವಗಳನ್ನು, ತುಮುಲಗಳನ್ನು ನೇರವಾಗಿ, ಜನಸಾಮಾನ್ಯರು ಅರಿಯುವಂತೆ ಹೇಳಿದರು. ದಾಸರ ಕೀರ್ತನೆಗಳಲ್ಲಿ ಸಂಗೀತ, ಸಾಹಿತ್ಯ, ಆಧ್ಯಾತ್ಮ, ತತ್ವ, ನೀತಿ, ಧರ್ಮದ ಸಂದೇಶವಿದೆ. ಅವರವರ ಭಾವಕ್ಕೆ ತಕ್ಕಂತೆ ಮನ ತಟ್ಟುತ್ತದೆ.
ಕರ್ನಾಟಕ ಸಂಗೀತ ಪಿತಾಮಹ : ಏಳು ಸ್ವರವು ಸೇರಿ ಸಂಗೀತವಾಯಿತು ಎಂಬುದು ಎಲ್ಲರೂ ಅರಿತ ವಿಷಯ. ಈ ಸಪ್ತ ಸ್ವರಗಳ ಸುಮಧುರತೆಯನ್ನು ಸರಳೆ ವರಸೆ, ಜಂಟಿ ವರಸೆ, ದಾಟು ವರಸೆ, ಮೇಲುಸ್ಥಾಯಿ, ಅಲಂಕಾರಗಳೆಂದು ವಿಂಗಡಿಸಿ ಅದಕ್ಕೆ ವೇಗ, ಲಯ, ತಾಳ, ರಾಗ ಪದ್ಧತಿಗಳ ನಿಯಮಗಳನ್ನು ಅಳವಡಿಸಿ, ಕರ್ನಾಟಕ ಸಂಗೀತ ಕಲಿಕೆಯಲಿ ಪ್ರಥಮ ಪಾಠದ, ಮೊದಲ ಭದ್ರ ಬುನಾದಿ ಹಾಕಿದವರು ಪುರಂದರದಾಸರು. ಪುರಂದರದಾಸರು ದಕ್ಷಿಣಾದಿ ಸಂಗೀತವನ್ನು ಕಲಿಯಲು ಒಂದು ವ್ಯವಸ್ಥಿತ ಪದ್ಧತಿಯನ್ನು ಅಳವಡಿಸಿದರು. ಖರಹರಪ್ರಿಯ ರಾಗದಿಂದ ಸಂಗೀತವನ್ನು ಅಭ್ಯಾಸಮಾಡಲು ಆರಂಭಿಸುತ್ತಿದ್ದ ಹಿಂದಿನ ಕ್ರಮವನ್ನು ಬದಲಾಯಿಸಿ ಸುಲಭ ಕಲಿಕೆಗೆ ಅನುವಾಗುವಂತೆ ಮಾಯಾಮಾಳವ ಗೌಳರಾಗದಲ್ಲಿ ಸರಳೆವರಸೆ, ಜಂಟಿವರಸೆ, ಅಲಂಕಾರಗಳನ್ನು ರಚಿಸಿದರು. ಈ ನಿಯಮಾವಳಿಗಳನ್ನು ಅವರು ಸುಮಾರು 500 ವರುಷಗಳ ಹಿಂದೆ ಕರ್ನಾಟಕ ಸಂಗೀತದಲ್ಲಿ ಅಳವಡಿಸಿ "ಕರ್ನಾಟಕ ಸಂಗೀತ ಪಿತಾಮಹ" ಎಂದೆನಿಸಿಕೊಂಡರು.
ಶನಿವಾರ ಸಂಜೆ ಸಿಂಗಪುರದಲ್ಲಿ ನಡೆದ ಪುರಂದರ ನಮನದಲ್ಲಿ ಸಿಂಗಪುರದ ಸಂಗೀತವಲಯದಲ್ಲಿ ಪ್ರಸಿದ್ಧರಾದ ವಿದುಷಿ ಭಾಗ್ಯಮೂರ್ತಿ ಅವರ ನೇತೃತ್ವದಲ್ಲಿ ಕನ್ನಡಿಗರಿಂದ ಹಾಗೂ ಕನ್ನಡೇತರರಿಂದ ಸ್ವರಾವಳಿ, ಪಿಳ್ಳಾರಿ ಗೀತೆಗಳು, ಊರದೇವರ ಮಾಡಬೇಕಣ್ಣ, ಕಾಗದ ಬಂದಿದೆ, ರಾಗಿ ತಂದೀರಾ, ಮನವ ಶೋಧಿಸಬೇಕು ನಿತ್ಯಾ, ಎಲ್ಲಾನು ಬಲ್ಲೆನೆಂಬುವಿರಲ್ಲ ಹಾಗೂ ತಂಬೂರಿ ಮೀಟಿದವ ಸುಶ್ರಾವ್ಯವಾಗಿ ಮೂಡಿ ಬಂದಿತು. ಅಂದು ಹಾಡಿದ ಈ ತತ್ವಭರಿತ ದಾಸರ ಪದಗಳಿಗೆ ಕನ್ನಡ ಹಾಗೂ ಆಂಗ್ಲಭಾಷೆಯಲ್ಲಿ ಅರ್ಥವಿವರಣೆ ನೀಡಿದರು ಅರಳುಮಲ್ಲಿಗೆ ಪಾರ್ಥಸಾರಥಿಯವರು.
ಗಾನಂ, ನೃತ್ಯಂ, ಪದಂ ಪುರಂದರನಿಗೆ ನಮಿಪ ಈ ಕಾರ್ಯಕ್ರಮದಲ್ಲಿ ಗಾನವೇ ಅಲ್ಲದೆ ನೃತ್ಯವೂ ಇತ್ತು. ಶ್ರೀಲಕ್ಷ್ಮೀ ತಂಡದವರಿಂದ ಪುರಂದರ ನಗಧರ, ಚಿತ್ರಾಶಂಕರ್ ತಂಡದವರಿಂದ ಕೃಷ್ಣಮೂರ್ತಿ ಕಣ್ಣಮುಂದೆ, ಮಾಲಿಕಾ ಗಿರೀಶ್ ಪಣಿಕ್ಕರ್ ತಂಡದಿಂದ ಕಂಡೆನಾ ಗೋವಿಂದನಾ, ಗೋವಿಂದ ನಿನ್ನಾನಂದ ಹಾಗೂ ಡಾ.ಸಿರಿರಾಮ ತಂಡದವರು ಕರವಮುಗಿದ ಕೀರ್ತನೆಗಳು ನೃತ್ಯರೂಪದಲ್ಲಿ ಮೂಡಿಬಂದಿತು. ತಕ್ಕ ಸಾರಥ್ಯ ನೀಡಿದರು ಪಕ್ಕವಾದ್ಯ ನುಡಿಸಿದ ಆದಿತ್ಯ-ವಯಲಿನ್, ಅಖಿಲೇಶ್-ವಿಘ್ನೇಶ್-ಮೃದಂಗ, ಮಾಸ್ಟರ್ ಆನಂದ್-ಕೀಬೋರ್ಡ್, ಸರವಣನ್-ಕೊಳಲು. ಈ ಕಾರ್ಯಕ್ರಮ www.carnaticradio.comನಲ್ಲಿ ನೇರಪ್ರಸಾರ ಮಾಡಲಾಯಿತು.
ಈ ಸಂಗೀತ ಪಿತಾಮಹನಿಗೆ ಸಲ್ಲಿದ ನಮನಕ್ಕೆ ಸಿಂಗಪುರದ ಸಂಗೀತ ಪ್ರೇಮಿಗಳು ಬಹು ಸಂಖ್ಯೆಯಲ್ಲಿ ನೆರೆದಿದ್ದರು. ಸಿಂಗಪುರ ಕನ್ನಡಸಂಘದ ಅಧ್ಯಕ್ಷರಾದ ಡಾ.ವಿಜಯಕುಮಾರ್ ಅವರು ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಅವರನ್ನು ಹಾಗೂ ವಿದುಷಿ ಭ್ಯಾಗ್ಯಮೂರ್ತಿ ಅವರನ್ನು ಗೌರವಿಸಿದರು.
ದಾಸಶ್ರೇಷ್ಠ ಪುರಂದರದಾಸರು ಹುಟ್ಟಿದ ದಿನವೇ ಆಗಲಿ, ಹರಿದಾಸ ದೀಕ್ಷೆ ಪಡೆದ ದಿನವೇ ಆಗಲೀ ತಿಳಿಯದು. ಅವರ ಶರೀರವನ್ನು ಅಗಲಿದ ದಿನ ಮಾತ್ರ ರಕ್ತಾಕ್ಷಿ ಸಂವತ್ಸರ, ಪುಷ್ಯ ಮಾಸದ ಅಮಾವಾಸ್ಯೆ ಕ್ರಿ.ಶ. 1564 ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಈ ದಿನವನ್ನು ವಿಶ್ವದ ಬಹುತೇಕ ಕಡೆಗಳಲ್ಲಿ ಕರ್ನಾಟಕ ಸಂಗೀತ ಆರಾಧಕರು ಪುರಂದರರ ಪುಣ್ಯದಿನವೆಂದು ದಾಸವರೇಣ್ಯನಿಗೆ ಪುಷ್ಪಾಂಜಲಿ ಸಲ್ಲಿಸುತ್ತಾರೆ.
ಭಾಗ್ಯಮೂರ್ತಿ ಅವರು ಸಿಂಗಪುರದಲ್ಲಿ ಬಹಳ ವರುಷಗಳಿಂದ ಕನ್ನಡಿಗರಿಂದ-ಕನ್ನಡೇತರರಿಂದ ಪುರಂದರ ನಮನ ಕಾರ್ಯಕ್ರಮದ ಮುಂದಾಳತ್ವ ವಹಿಸಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಪರಭಾಷಿಗರ ನಾಲಿಗೆಯಲ್ಲಿ ಭಾಗ್ಯ-ಪಾಗ್ಯವಾಗಿಸದೆ ಯೋಗ್ಯ-ಯೋಕ್ಯವಾಗಿಸದೆ ಉಚ್ಚಾರಣೆಗೆ ಒತ್ತುಕೊಟ್ಟು ಸಂಗೀತ ಕಲಿಸುವ ಭಾಗ್ಯ ಅವರ ಶ್ರಮ ಶ್ಲಾಘನೀಯವೇ ಸೈ.
ಬರೀ ಪುರಂದರರಿಗೇ ಅಲ್ಲದೆ ಕರ್ನಾಟಕ ಸಂಗೀತಕ್ಕೆ ಪುರಂದರದಾಸರಾದಿಯಾಗಿ ಇನ್ನೂ ಅನೇಕ ಹರಿದಾಸರು ಕೊಟ್ಟಿರುವ ಕೊಡುಗೆಯನ್ನು ಹೆಮ್ಮೆಯಿಂದ ಸ್ಮರಿಸೋಣ, ಎಲ್ಲರೂ ಅರಿಯುವಂತೆ ಬೆಳೆಸೋಣ. ಕರ್ನಾಟಕ ಸಂಗೀತವನ್ನು ನಿಜಕ್ಕೂ ಕರ್ನಾಟಕದ ಸಂಗೀತವನ್ನಾಗಿ ಮಾಡಲು ಒಂದಾಗೋಣ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications