ಸಿಡ್ನಿ ಕನ್ನಡಿಗರಿಗೆ ಸಂಗೀತದೌತಣ ಬಡಿಸಿದ ಅಶ್ವಥ್

ಕನ್ನಡ ಕವಿತೆಗಳಲ್ಲಿ, ಹಾಡುಗಳಲ್ಲಿ ಹರಿದಿರುವ ಭಾವಧಾರೆ ಸೋಜಿಗ ತರುವಂತದ್ದು. ಈ ಧಾರೆಯನ್ನು ಸಂಗೀತವಾಗಿ ಎರಕಹೊಯ್ಯುವುದು ಕನ್ನಡಕ್ಕೆ ಅನನ್ಯವಾದ ಪದ್ಧತಿ. ಇದಕ್ಕೆಂದೇ ಟೊಂಕ ಕಟ್ಟಿ ನಿಂತಿದ್ದಾರೆ ಸಿ ಅಶ್ವಥ್. ಇದೇ ಮಾರ್ಚ್ ಹದಿನಾಲ್ಕರಂದು ಸಿಡ್ನಿಯಲ್ಲಿ ಜರುಗಿದ ಅವರ ಕಾರ್ಯಕ್ರಮದಲ್ಲಿ ಕುಳಿತವರಿಗೆ ಕುಳಿತಲ್ಲೆ ಹತ್ತಾರು ಭಾವನೆಗಳು ಕೈಬೀಸಿ, ಮೈಮುಟ್ಟಿ, ಅಲುಗಿಸಿದ ಅನುಭವ. ಅವರ ಜತೆ ಹಾಡಲು ಮಂಗಳ ಮತ್ತು ಕಿಕ್ಕೇರಿ ಕೃಷ್ಣಮೂರ್ತಿ ಅಕ್ಕ ಪಕ್ಕದಲ್ಲಿ. ಜತೆಗಿದ್ದ ವಾದ್ಯವೃಂದದಲ್ಲಿ ಜಗದೀಶ್ (ತಬಲಾ), ಕೃಷ್ಣ ಉಡುಪ (ಕೀ ಬೋರ್ಡ್), ಶ್ರೀನಿವಾಸ್ ಅಯ್ಯಂಗಾರ್ ಪ್ರಸಾದ್ (ಮ್ಯಾಂಡೊಲಿನ್), ಸೆಲೆಸ್ಟಿನ್ ಜೆರಾಲ್ಡ್ (ರಿದಮ್ ಪ್ಯಾಡ್) ಮತ್ತು ಸುದರ್ಶನ್ ಬಂಟಪಲ್ಲಿ (ಗಿಟಾರ್) ಬೆಂಗಳೂರಿನಿಂದ ಆಗಮಿಸಿದ್ದರು.
ಹಿಂದೆ ಬಂದ ಗಾಯಕಿಯರು ತಂತಮ್ಮ ಟ್ರ್ಯಾಕುಗಳನ್ನು ಹಾಕಿಕೊಂಡು ಹಾಡುವುದನ್ನೇ ಕೇಳುತ್ತಿದ್ದ ಸಿಡ್ನಿ ಕನ್ನಡಿಗರಿಗೆ ಇದೊಂದು ಅಪೂರ್ವ ಅವಕಾಶವಾಗಿತ್ತು. ಇದು ಆಸ್ಟ್ರೇಲಿಯಾದಲ್ಲಿ ಕನ್ನಡಿಗರೇ ಮುಂದಾಗಿ ನಡೆಸುತ್ತಿರುವ Indian Australian Arts and Film Association ಸಂಸ್ಥೆಯ ಕೊಡುಗೆ. ಸುಮಾರು ಎರಡೂವರೆ ಗಂಟೆಗಳ ಕಾರ್ಯಕ್ರಮ; ನ್ಯೂಸೌತ್ ವೇಲ್ಸಿನ ಪ್ರೀಮಿಯರ್, ಅರ್ಥಾತ್ ಮುಖ್ಯಮಂತ್ರಿ, Nathan Rees ಆಗಮಿಸಿದ್ದರು.
ಕೆಎಸ್ ನರಸಿಂಹಸ್ವಾಮಿಗಳು ಜನದ ಕವಿ ಎಂಬುದು ಮತ್ತೆ ರುಜುವಾತಾಯಿತು --ಜೀವನದ ಸರಸ ಸಮಯಗಳನ್ನು ಕುರಿತು ಹಾಡುವ, "ರಾಯರು ಬಂದರು", "ನಮ್ಮೂರು ಚೆಂದವೋ ನಿಮ್ಮೂರು ಚಂದವೋ", "ಸಿರಿಗೆರೆಯ ನೀರಲ್ಲಿ", ಮೊದಲ ರಾಜನನ್ನು ಕುರಿತ "ದೀಪವೂ ನಿನ್ನದೇ ಗಾಳಿಯೂ ನಿನ್ನದೇ", ಮೊದಲಾದ ಕೃತಿಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿದವು. ಜೀವನದ ಕಠೋರತೆಯನ್ನು ಬಿಂಬಿಸುವ ಅಂಬಿಕಾತನಯದತ್ತರ (ದ ರಾ ಬೇಂದ್ರೆ) "ಕುರುಡು ಕಾಂಚಾಣ", "ನೀ ಹೀಂಗ ನೋಡಬೇಡ ನನ್ನ" ಮನಸ್ಸಿಗೆ ತಟ್ಟಿದವು.
ಅಶ್ವಥ್ ಅವರ ಪ್ರಿಯವಾದ ಶಿಶುನಾಳ ಷರೀಫರ ಗೀತೆಗಳ ಬಗ್ಗೆ ಹೇಳಬೇಕಾಗಿಲ್ಲ. ಎಂದಿನಂತೆ ಅಶ್ವತ್ "ಕೋಡಗನ ಕೋಳಿ ನುಂಗಿತ್ತ" ಹಾಡಿಕೊಂಡು ಅವರು ವೇದಿಕೆಯಮೇಲೆ ಕುಣಿಯಲಾರಂಭಿಸಿದಂತೆ ಸಭೆಯ ಎಲ್ಲೆಡೆಯಿಂದ ತರುಣ, ತರುಣಿಯರು, ಚಿಕ್ಕಹುಡುಗ ಹುಡುಗಿಯರು ವೇದಿಯತ್ತ ಧಾವಿಸಿ ತಾವೂ ಕುಣಿಯಲಾರಂಭಿಸಿದರು. ನಂತರ "ತರವಲ್ಲ ತಾಗಿ ನಿನ್ನ ತಂಬೂರಿ" ಹಾಡಿದಾಗ ಕಾರ್ಯಕರ್ತರನ್ನೂ ವೇದಿಕೆಯ ಮೇಲೆ ನಿಲ್ಲಿಸಿ ಹಾಡುವಂತೆ ಮಾಡಿದ್ದು ವಿಶೇಷವಾಯಿತು. ಅವರ ಉರ್ದು ಕೃತಿಯೊಂದನ್ನೂ ಅಶ್ವಥ್ ಹಾಡಿದರು.
ಒಂದೆರಡು ಹಾಡುಗಳು ಸಿನೆಮಾಗಳಿಂದ ಬಂದರೆ, "ಮುಕ್ತ", "ಮನ್ವಂತರ"ಗಳ ಶೀರ್ಷಿಕೆ ಹಾಡುಗಳೂ ಮೂಡಿಬಂದವು. ಒಟ್ಟಿನಲ್ಲಿ ಇವರ "ಕನ್ನಡವೇ ಸತ್ಯ" ಸಿಡ್ನಿಯಲ್ಲಿ ಪ್ರತ್ಯಕ್ಷವಾಗಿತ್ತು. ಸಂಗೀತಾನುಭವಕ್ಕೆ ಮಾರಕವಾದ ಉದ್ದುದ್ದ ಭಾಷಣಗಳು, ಅತಿಯಾದ ಹಾರ ತುರಾಯಿಗಳ ಸಂಭ್ರಮಗಳಿಲ್ಲದೆ ಹೋದದ್ದು ಕಾರ್ಯಕ್ರಮದ ಒಂದು ಗಣನೀಯ ಅಂಶವಾಗಿತ್ತು.
ಪೂರಕ ಓದಿಗೆ












Click it and Unblock the Notifications