ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ರಾಜ್ಯೋತ್ಸವ ಬೆಳಗಿದ ಕಲಾಪ್ರದರ್ಶನ

By * ಹರಿದಾಸ ಲಹರಿ
|
Google Oneindia Kannada News

Art exhibition
ಕಳೆದ ನವಂಬರ್ ತಿಂಗಳಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯಲ್ಲಿನ ಕಾವೇರಿ ಕನ್ನಡ ಸಂಘದ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬವು ಬಹಳ ಅದ್ಧೂರಿಯಾಗಿ ನಡೆಯಿತು. ಕಾವೇರಿ ಕನ್ನಡಿಗರು ರಚಿಸಿದ ವರ್ಣ ಚಿತ್ರಗಳ ಕಲಾಮೇಳ ಮತ್ತು ಮೈಸೂರು ಅನಂತ ಸ್ವಾಮಿ ಅವರ ಪುತ್ರಿಯರ ಸುಗಮ ಸಂಗೀತ ಈ ಉತ್ಸವದ ವಿಶೇಷವಾಗಿತ್ತು.

ಮತ್ತೊಂದು ವಿಶೇಷವೆಂದರೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ನಡೆದ ಕಾವೇರಿ ಕಲಾ ಮೇಳ. ನಮಗೆ ತಿಳಿದ ಮಟ್ಟಿಗೆ ಇದು ಭಾರತ ದೇಶದಿಂದಾಚೆ ಅತಿ ಹೆಚ್ಚು ಕನ್ನಡಿಗರು ಒಂದಾಗಿ ಅತಿ ಹೆಚ್ಚು ಕಲಾ ಮೌಲ್ಯವುಳ್ಳ ಕೃತಿಗಳನ್ನು ಪ್ರದರ್ಶಿಸಿದ ಪ್ರಥಮ ಚಿತ್ರ ಕಲಾ ಮೇಳ. ಕಲಾ ಪ್ರದರ್ಶನದ ಉದ್ಘಾಟನೆಯನ್ನು ವಾಷಿಂಗ್ಟನ್ ಡಿ.ಸಿಯಲ್ಲಿನ ಭಾರತದ ರಾಯಭಾರಿ ಕಚೇರಿಯಲ್ಲಿನ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡತಿ ಆರತಿ ಕೃಷ್ಣ ಅವರು ನೆರವೇರಿಸಿದರು. ನಂತರ ಅವರು ಎಲ್ಲಾ ಕಲಾವಿದರ ಕೃತಿಗಳನ್ನು ವಿಶೇಷ ಆಸಕ್ತಿಯಿಂದ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಲಾಕೃತಿಗಳ ವಿವರ : ಕಲಾಮೇಳದ ಪ್ರಮುಖ ಆಕರ್ಷಣೆ ಯುವ ಕಲಾವಿದ ಪ್ರಥಮ್ ಕರಣಿಕ್ ಅವರ 20ಕ್ಕೂ ಹೆಚ್ಚಿನ ಜಲವರ್ಣ/ತೈಲವರ್ಣ ಕಲಾಕೃತಿಗಳ ಪ್ರದರ್ಶನ. ಕನ್ನಡ ನಾಡಿನ ಹಂಪೆಯ ಕಲ್ಲಿನ ರಥ, ಜೋಗ ಜಲಪಾತ, ನಮ್ಮೂರ ಹಳ್ಳಿಗಳ ಪ್ರಕೃತಿ ರಮಣೀಯ ಚಿತ್ರಗಳು ಮತ್ತು ಪಾರದರ್ಶಕ ವಿಧಾನದೊಂದಿದಿಗೆ ರಚಿಸಿದ ಜಲವರ್ಣ ಚಿತ್ರವು ಬಹಳ ಜನರ ಮನವನ್ನು ಸೂರೆಗೊಂಡವು. ವಿಜಯ ಬಾಣಾವರ್ ಅವರ ಕಸೂತಿ ರಚನೆಗಳೂ ಸಹ ಜನರಿಂದ ಪ್ರಶಂಸಿಸಲ್ಪಟ್ಟವು. ಅತಿ ಸೂಕ್ಷ್ಮವಾಗಿ ರಚಿಸಿದ ಹೂಗಳ ಕಸೂತಿ ರಚನೆಯು ಅವುಗಳಲ್ಲಿ ಒಂದಾಗಿತ್ತು. ನಂದಿತ ಅವರು ಆಕ್ರಿಲಿಕ್ ನಲ್ಲಿ ರಚಿಸಿದ ಕೃತಿಗಳು ವರ್ಣಗಳ ಸಮತೋಲನೆ ಮತ್ತು ಸಮರ್ಪಕ ಸಂಯೊಜನೆಯಿಂದ ಕೂಡಿದ್ದವು. ಲೀಲ ಕೃಷ್ಣ ಅವರ ಪೋಲಿಮರ್ ಮಣ್ಣಿನಲ್ಲಿ ರಚಿಸಿ, ಕುಲುಮೆಯಲ್ಲಿ ಬೇಯಿಸಿ ಬಣ್ಣ ಬಳಿದ ಶಿಲ್ಪ ಕಲಾಕೃತಿಗಳು ಎಲ್ಲರನ್ನು ಆಕರ್ಷಿಸಿತು.

ನೂತನ್ ದೊಡ್ಬೆಲೆ ಅವರ ಬಾಟಿಕ್ ವಿಧಾನದಲ್ಲಿ ರಚಿಸಿದ ರಚನೆಗಳು ಜನರ ಮನವನ್ನು ಸೂರೆಗೊಂಡವು. ನೂತನ್ ಅವರು ರಚಿಸಿದ ದೊಡ್ಡ ಗಾತ್ರದ ಆಕೃಲಿಕ್ ಕೃತಿಯು ಕಲಾಮೇಳದ ಮೌಲ್ಯವನ್ನು ಹೆಚ್ಚಿಸಿತ್ತು. ಕಟ್ಟಡಗಳು ಮತ್ತು ಇತರ ಹಲವು ವಿನ್ಯಾಸಗಳನ್ನು ರಚಿಸಿದ ಕಾವೇರಿಯ ಹಿಂದಿನ ಅಧ್ಯಕ್ಷರಾದ ಆರ್ಕಿಟೆಕ್ಟ್ ಗೋಪಿನಾಥ್ ಬೋರೆಯವರು ಸಹ ಕಲಾ ಮೇಳದಲ್ಲಿ ಭಾಗವಹಿಸಿದ್ದರು. ಶೋಭ ಕರಣಿಕ್ ಅವರಿಂದ ರಚಿತವಾದ ತಂಜಾವೂರ್ ಶೈಲಿಯ ಚಿತ್ರಗಳೂ ಸಹ ಪ್ರದರ್ಶಿಲ್ಪಟ್ಟವು. ಅತಿ ಸೂಕ್ಷ್ಮವಾಗಿ ರಚಿಸಿದ ಮಹಾಭಾರತದ ಬಾಲ ಕೃಷ್ಣನ ರಚನೆಯು ಅವುಗಳಲ್ಲಿ ಮುಖ್ಯವಾಗಿತ್ತು.

ರೇಶ್ಮ ಕ್ರಾಫರ್ಡ್ ಅವರು ರಚಿಸಿದ ಕಾರ್ಟೂನ್ ಗಳು ಸಹ ಪ್ರದರ್ಶಿಸಲ್ಪಟ್ಟವು. ಜಪಾನ್ ನಲ್ಲಿ ಅತಿ ಪ್ರಸಿದ್ಧಿಯಾಗಿರುವ 'ಮಂಗ' ಶೈಲಿಯ ಕಾರ್ಟೂನ್ ಚಿತ್ರಗಳು ಬಾಲ ಕಲಾವಿದೆಯ ಕಲಾ ಚಾತುರ್ಯವನ್ನು ಪ್ರತಿಬಿಂಬಿಸುತಿತ್ತು. ಕಲಾಮೇಳದಲ್ಲಿ ಗಮನಿಸಲ್ಪಟ್ಟ ಇನ್ನೊಬ್ಬ ಕಲಾವಿದೆ ರಂಜನಾ ಹಿರೇಸಾವೆ. ಅವರು ಆಕ್ರಿಲಿಕ್ ನಲ್ಲಿ ರಚಿಸಿದ ಮೂರು ವರ್ಣ ಚಿತ್ರಗಳು ಪ್ರದರ್ಶನಕ್ಕಿದ್ದವು. ಇನ್ನೊಬ್ಬ ಕಾವೇರಿಯ ಕಲಾವಿದೆ ಸುಶ್ಮ ಕೌಶಿಕ್ ಅವರು ಗಾಜಿನ ಮೇಲೆ ರಚಿಸಿದ ಚಿತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು.

ಕಲಾ ಪ್ರದರ್ಶನದ ಮಂದಿರದಲ್ಲಿಯೇ ಕಾವೇರಿಯ 'ಕನ್ನಡ ಕಲಿಯೋಣ' ಎಂಬ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಮಕ್ಕಳು ರಚಿಸಿದ ಚಿತ್ರಗಳೂ ಸಹ ಪ್ರದರ್ಶಿಸಲ್ಪಟ್ಟವು. ಕಾವೇರಿ ಕನ್ನಡಿಗರು ಬಹಳ ಉತ್ಸಾಹದಿಂದ ಪುಟ್ಟ ಮಕ್ಕಳ ರಚನೆಗಳನ್ನು ಕುತೂಹಲದಿಂದ ನೋಡುತ್ತಿದ್ದುದು ಕಂಡು ಬಂದಿತು. ಮೇಳದಲ್ಲಿ ಅತ್ಯಧಿಕ ಪ್ರೇಕ್ಷಕರ ಪ್ರಶಂಸೆಗಳಿಸಿದ ಕಲಾವಿದರಾದ ಪ್ರಥಮ್ ಕರಣಿಕ್, ವಿಜಯ ಬಾಣಾವರ್ ಮತ್ತು ನಂದಿತ ಅವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.

Cultural programme by Kaveri children
ಸಾಂಸ್ಕೃತಿಕ ಕಾರ್ಯಕ್ರಮ : ನಿರ್ವಾಹಕರಾದ ಕೃಪೇಶ್ ಮತ್ತು ರೇಖ ಪ್ರಕಾಶ್ ಅವರ ಸ್ವಾಗತದಿಂದ ಸಮಾರಂಭವು ಪ್ರಾರಂಭವಾಯಿತು. ಮೊದಲನೆಯ ಕಾರ್ಯಕ್ರಮ ಪ್ರತಿಭ ದೊಡ್ಡಮನಿ ಅವರ ನಿರ್ದೇಶನದಲ್ಲಿ ಕಾವೇರಿ ಪುಟಾಣಿಗಳಿಂದ ದೀಪ ನೃತ್ಯ ತುಂಬಾ ಚೆನ್ನಾಗಿ ಮೂಡಿಬಂದಿತು. ನಂತರ ಚಿಕ್ಕಮಕ್ಕಳಿಂದ ಪುಟ್ಟರಾಜು ಮತ್ತು ಮಿತ್ರರ ನಿರ್ದೇಶನದಲ್ಲಿ ಮೂಡಿಬಂದ ನಾಟಕ "ಕಿತ್ತೂರ ವೀರ ರಾಣಿ ಚೆನ್ನಮ್ಮ". ಕಿತ್ತೂರು ಚೆನ್ನಮ್ಮನಾಗಿ ನಟಿಸಿದ ಅಮೂಲ್ಯ ಪುಟ್ಟರಾಜು ಅಭಿನಯ ಮತ್ತು ವಾಕ್ ಚಾತುರ್ಯದಿಂದ ಎಲ್ಲರ ಮನ ಸೂರೆಗೊಂಡಳು.

ರಾಜ್ಯೋತ್ಸವದ ಹಬ್ಬಕ್ಕೆ ಕಿರೀಟವಿಟ್ಟಂತೆ ಕನ್ನಡ ನಾಡಗೀತೆ ಕುವೆಂಪು ಅವರ "ಜೈ ಭಾರತ ಜನನಿಯ ತನುಜಾತೆ" ಶರ್ಮಿಳ ಮೂರ್ತಿ ಮತ್ತು ಶಶಿಕಲಾ ಕುಲಕರ್ಣಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿತು. ಕಾವೇರಿಯಲ್ಲಿ ಕನ್ನಡ ಕಲಿಯೋಣ ಎಂಬ ಯೋಜನೆಯಲ್ಲಿ ಕನ್ನಡವನ್ನು ಕಲಿಯುತ್ತಿರುವ 40ಕ್ಕೂ ಹೆಚ್ಚು ಮಕ್ಕಳು ಮನೋಹರವಾಗಿ ಈ ಹಾಡನ್ನು ಪ್ರಸ್ತುತಪಡಿಸಿದರು. ಡಿ.ಸಿ ಪ್ರದೇಶದ ನೃತ್ಯಗಾರ್ತಿಯಾದ ತಾರಾ ಭಟ್ ಅವರು ನೃತ್ಯವನ್ನು ಪ್ರಸ್ತುತಪಡಿಸಿದರು. ನೃತ್ಯಕ್ಕೆ ಬಳಸಿದ ಕನ್ನಡ ಹಾಡುಗಳ ಧ್ವನಿಮುದ್ರಣದ ಗುಣಮಟ್ಟವು ಹೆಚ್ಚಿದ್ದರೆ ನೃತ್ಯವು ಇನ್ನೂ ಪರಿಪೂರ್ಣವಾಗುತ್ತಿತ್ತು.

ಈ ಸಮಯದಲ್ಲಿ ಕಾವೇರಿಯ ಪುಟಾಣಿಯೊಂದು ಅಕಸ್ಮಾತಾಗಿ ಫೈರ್ ಅಲರಂ ಎಳೆದು ಕಾವೇರಿ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿತು! ಕ್ಷಣ ದಲ್ಲಿಯೇ ಎಲ್ಲರೂ ಸಭಾ ಮಂದಿರವನ್ನು ಖಾಲಿ ಮಾಡಿದರು. ಸ್ವಲ್ಪ ಸಮಯದ ನಂತರ ಬಂದ ಅಗ್ನಿಶಾಮಕ ದಳವು ಬೆಂಕಿಯ ಯಾವುದೇ ಅನಾಹುತವಿಲ್ಲ ಎಂದು ಖಚಿತಪಡಿಸಿ ಮುಂದಿನ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಿತು. ಈ ಅನಾಹುತದಿಂದಾಗಿ 40 ನಿಮಿಷಗಳು ವ್ಯರ್ಥವಾದವು.

ರವಿ ಹರಪನಹಳ್ಳಿ ಮತ್ತು ತಂಡದವರಿಂದ ವಾಷಿಂಗ್ಟನ್ ಡಿ.ಸಿ ಮೆಟ್ರೋ ಮತ್ತು ಬೋಸ್ಟನ್ ನಗರದ ರೈಲು ಪ್ರಯಾಣ, ಕಾರು ಪ್ರಯಾಣ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ 'ಬುಶ್' ಮಾಡಿರುವ ಅನಾಹುತದ ಮೇಲೆ ಬೆಳಕು ಚೆಲ್ಲುವ ನಗೆ ನಾಟಕ "ಬೋಸ್ಟನ್ ಬವಣೆ"ಯನ್ನು ಪ್ರದರ್ಶಿಸಿದರು. ಕಲ್ಲರಳಿ ಹೂವಾಗಿ ಚಿತ್ರದಿಂದ ಆಯ್ದ "ಭೂಮಿ, ಈ ಭೂಮಿ ಮೆಲೆ ನಾಡು" ಎಂಬ ಹಾಡಿಗೆ ಶಿಲ್ಪ ಜಗದೀಶ್ ಮತ್ತು ತಂಡದವರು ತಾಳಕ್ಕೆ ತಕ್ಕಂತೆ ಬಹಳ ಚೆನ್ನಾಗಿ ನರ್ತಿಸಿದರು. ಸ್ಮಿತಾ ಗಿರೀಶ್ ನಿರ್ದೇಶನದಲ್ಲಿ ಕನ್ನಡ ಚಲನಚಿತ್ರದ ಮೆಡ್ಲೆ ಹಾಡಿಗೆ ಬಹಳ ಚೆನ್ನಾಗಿ ನರ್ತಿಸಿ ಎಲ್ಲರ ಮನ ಸೂರೆಗೊಂಡರು. ನಿಖಿಲ ಗುರುದತ್ ಮತ್ತು ಮೀನಾ ರಾವ್ ಅವರು ನಿರ್ದೇಶಿಸಿ ಪ್ರಸ್ತುತಪಡಿಸಿದ ಮಹಿಳೆಯರು ಮತ್ತು ಪುರುಷರ ಫ್ಯಾಷನ್ ಶೋ ಭಾರತೀಯರ ವಿವಿಧ ಧರ್ಮಗಳು, ಪ್ರಾಂತ್ಯಗಳ ಉಡುಪುಗಳ ಪರಿಚಯವನ್ನು ಮಾಡಿಕೊಟ್ಟವು. ಕಾವೇರಿ ಸದಸ್ಯರು ವಿವಿಧ ರೀತಿಯ ಉಡುಪುಗಳನ್ನು ಧರಿಸಿ ರಂಗದ ಮೇಲೆ ಮನೋಹರವಾಗಿ ನಡೆದು ಸಭಿಕರ ಪ್ರಶಂಸೆಯನ್ನು ಪಡೆದರು.

ನಂತರ 2007ನೇ ಸಾಲಿನ ಕಾವೇರಿ ಕಾರ್ಯಕಾರಿ ಸಮಿತಿಯ ಸದಸ್ಯರು ತಮ್ಮ ಬಾಳ ಸಂಗಾತಿಗಳೊಂದಿದಿಗೆ ವಿವಿಧ ವೇಷ ಭೂಷಣಗಳಲ್ಲಿ ಆಗಮಿಸಿ ಎಲ್ಲರ ಪರಿಚಯವನ್ನು ಮಾಡಿದರು ಮತ್ತು ಕಾವೇರಿಯ 2008ನೇ ಸಾಲಿನಲ್ಲಿ ನಡೆದ ಎಲ್ಲ ಕಾರ್ಯಕ್ರಮಗಳಿಗೆ ನೀಡಿದ ಸಹಕಾರಕ್ಕೆ ಎಲ್ಲ ಕಾವೇರಿ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಕಾವೇರಿ ಪುಟಾಣಿಗಳಿಗಾಗಿ ಮ್ಯಾಜಿಕ್ ಪ್ರದರ್ಶನ ಮತ್ತು ಬಲೂನ್ ಆಟಿಕೆಗಳನ್ನು ಸ್ಥಳದಲ್ಲಿಯೇ ಸಿದ್ಧಪಡಿಸಿಕೊಡಲಾಯಿತು. ಅತಿ ರುಚಿಯಾದ ಹಬ್ಬದೂಟವನ್ನು ಸವಿದ ಎಲ್ಲರೂ 2008ನೇ ಸಾಲಿನ ಅಂತಿಮ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿದಾಯ ಹೇಳಿ ಒಬ್ಬರನ್ನೊಬ್ಬರು ಬೀಳ್ಕೊಟ್ಟರು. ಕಾರ್ಯಕ್ರಮದ ಛಾಯಚಿತ್ರಗಳನ್ನು ಕಾವೇರಿಯ ಅಂತರ್ಜಾಲ ತಾಣದಲ್ಲಿ ನೋಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X