ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಿಮಾನ, ದುರಭಿಮಾನದ ನಡುವಿನ ಗೆರೆ

By ಅಲಕಾ ಕೆ., ಉತ್ತರ ಕ್ಯಾಲಿಫೋರ್ನಿಯ
|
Google Oneindia Kannada News

Alaka Joshi, Californiaಹೀಗೆ ಹರಟುತ್ತಿದ್ದ ನಮ್ಮಲ್ಲಿ ಆ ವಿಷಯ ಪ್ರಸ್ತಾಪವಾಗಿದ್ದೇ ಆಕಸ್ಮಿಕವಾಗಿ. ಲೀ ಎಂಬ ವಿದೇಶಿ ವ್ಯಕ್ತಿ ಕನ್ನಡಿಗರ ಬಗ್ಗೆ ಬರೆದಿರುವ ಎನ್ನಲಾದ ಪದ್ಯ ಮತ್ತು ನಂತರದ ಘಟನೆಗಳು ಎಲ್ಲೆಲ್ಲಿಂದಲೋ ಕೊಂಡಿ ಸಿಕ್ಕಿಸಿಕೊಂಡು ಚರ್ಚೆಗೆ ಬಂದುಬಿಟ್ಟವು. ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಅವಮಾನ ಆಗಿದೆಯೆಂದು ಆಸ್ತಿ-ಪಾಸ್ತಿ ಹಾನಿ ಮಾಡುತ್ತಿರುವುದರ ಬಗ್ಗೆ ನನ್ನ ಸ್ನೇಹಿತೆಯದು ದೊಡ್ಡ ಕಂಪ್ಲೇಂಟಿತ್ತು. ನಮ್ಮ ಕನ್ನಡತನದ ಬಗ್ಗೆ 'ಈ ರೀತಿ'ಯ ಅಭಿಮಾನ ಮುಂದುವರಿದರೆ ಅದು ಭಾಷೆ ಕುರಿತ ಮೂಲಭೂತವಾದಕ್ಕೆ ತಿರುಗುತ್ತದಷ್ಟೇ ಎಂಬುದು ಅವಳ ಕಳಕಳಿ.

ಆಗಲೇ ಈ ಪ್ರಶ್ನೆಗಳು ಹುಟ್ಟಿದ್ದು... ಅಭಿಮಾನ/ಸ್ವಾಭಿಮಾನಕ್ಕೂ ದುರಭಿಮಾನಕ್ಕೂ ನಡುವಿನ ಗೆರೆ ಯಾವುದು? ಯಾವುದೇ ಭಾಷೆ ಮತ್ತು ಭಾಷಿಕರಿಗೆ ನೋವಾದಾಗ ಅವರು ತೋರುವ ಪ್ರತಿರೋಧವು, ಪ್ರತಿಭಟನೆಯ ಹಂತವನ್ನು ಮೀರಬೇಕೆ/ಬೇಡವೆ? ನಮ್ಮದಲ್ಲದ ನೆಲದಲ್ಲಿ ನೆಲೆಸಿ, ನಮ್ಮದಲ್ಲದ ಸಂಸ್ಕೃತಿಯಲ್ಲಿ ಬೆರೆಯುವಾಗ ಎಲ್ಲಿಯವರೆಗಿನ ಹೊಂದಾಣಿಕೆ ಬೇಕು? ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು ಎಂಬ ಪರಿಸ್ಥಿತಿ ನಿರ್ಮಾಣ ಆಗಲು ಕಾರಣರಾರು?

ಲೀ ಬರೆದ ಪದ್ಯವನ್ನು ಅಣಕ ಎಂದಷ್ಟೇ ಪರಿಗಣಿಸಬಹುದು; ಅದನ್ನು ತೀರಾ ಗಂಭೀರವಾಗಿ ತೆಗೆದುಕೊಳ್ಳದೆ, ಬೆಂಗಳೂರಿನ ಉದ್ದಗಲಕ್ಕೂ ಓಡಾಡುತ್ತಿರುವ ಬೀದಿ ನಾಯಿಗಳ ಬಗ್ಗೆ (''poodles'' ಎಂದು ಲೀ ಉಲ್ಲೇಖಿಸಿರುವ ಕುರಿತು) ಹೇಳಿರುವನೆಂದು ತಿಳಿದುಕೊಳ್ಳಬಾರದೇಕೆ? ಅದಕ್ಕೆ ಕಿಟಕಿ, ಬಾಗಿಲುಗಳನ್ನು ಏಕೆ ಪುಡಿ ಮಾಡಬೇಕು ಎಂಬುದು ಆಕೆ ಮುಂದಿಟ್ಟ ಪ್ರಶ್ನೆ. ಒಪ್ಪುವಂಥದ್ದೇ! ಕಿಟಕಿ, ಬಾಗಿಲುಗಳು ಮಾಡಿರುವ ತಪ್ಪಾದರೂ ಏನು?

ಹಾಗೆ ನೋಡಿದರೆ, ಘಟನೆಯೊಂದಕ್ಕೆ ಯಾವ ಆಯಾಮವನ್ನು ಬೇಕಿದ್ದರೂ ಸೃಷ್ಟಿಸಬಹುದು, ಆದರೆ ಅದೆಷ್ಟು ಪ್ರಸ್ತುತ ಎಂಬುದು ಮುಖ್ಯವಾಗುತ್ತದೆ. ಮರಾಠಿಗರಿಗೆ ತಮ್ಮ ಭಾಷೆಯ ಮೇಲಿನ ಅಭಿಮಾನವು ಉತ್ತರ ಭಾರತೀಯರಿಗೆ ದುರಭಿಮಾನ ಎನ್ನಿಸಬಹುದು. ಅಭಿಮಾನ ದುರಭಿಮಾನದ ನಡುವಿನ ಈ ಗೆರೆ ವಸ್ತುನಿಷ್ಠವಾಗಿರುವುದಕ್ಕಿಂತ ವ್ಯಕ್ತಿನಿಷ್ಠವಾಗಿರುವುದೇ ಹೆಚ್ಚಾದ್ದರಿಂದ ಈ ಬಗ್ಗೆ ಇದಮಿತ್ಥಂ ಎನ್ನುವುದು ಕಷ್ಟವೇನೊ.

ಇರಲಿ, ಉದ್ದೇಶಪೂರ್ವಕವಾಗಿ ಯಾರನ್ನೂ ನೋಯಿಸುಲು ಲೀ ಪದ್ಯ ಬರೆದಿದ್ದಲ್ಲ ಎಂದೇ ಒಂದು ಕ್ಷಣ ಭ್ರಮಿಸಿಕೊಳ್ಳೋಣ; ಆತ ಹುಟ್ಟಿದ ದೇಶ ಸಂಸ್ಕೃತಿಯ ಸಂದರ್ಭದಲ್ಲಿ ಇಂಥ ಪದ್ಯವೆಂಬ ಕುಚೋದ್ಯಗಳು ಸ್ವೀಕೃತವಾಗುತ್ತವೆ ಎಂದರೆ, ಅವು ಎಲ್ಲೆಡೆಯೂ ಸಲ್ಲುತ್ತವೆ ಎನ್ನಲು ಸಾಧ್ಯವೇ? ತನಗೆ ಹೆಚ್ಚು ತಿಳಿವಳಿಕೆಯಿಲ್ಲದ ದೇಶ ಭಾಷೆ ಸಂಸ್ಕೃತಿಯ ಕುರಿತು ಇಂತಹ ವಿಕೃತ ಪ್ರಯೋಗಗಳನ್ನು ಮಾಡುವ ಅಗತ್ಯವಾದರೂ ಆತನಿಗೆ ಏನಿತ್ತು? (ಭಾರತ ಮತ್ತು ಆಸ್ಟ್ರೇಲಿಯದ ಭಾಷೆ ಸಂಸ್ಕೃತಿಯಲ್ಲಿನ ತಪ್ಪುಒಪ್ಪುಗಳು ಏನು, ಹೇಗೆ ಎಂಬುದರ ಪರಿಚಯ ಇತ್ತೀಚಿನ ಕ್ರಿಕೆಟ್ ಸರಣಿಯಲ್ಲಿ ನಮಗೆ ಚೆನ್ನಾಗಿಯೇ ಆಗಿದೆ).

ಹಲವಾರು ಕಾರಣಗಳಿಂದ ನಮಗೆ ಪರಿಚಯವಿಲ್ಲದ ನೆಲದಲ್ಲಿ ಬೇರು ಬಿಡುವ ಸಂದರ್ಭಗಳು ಎದುರಾಗುತ್ತವೆ. ಆಗ ನಾವು ನೆಲೆಸಿದ ನೆಲದ ಬಗ್ಗೆ ಪ್ರೀತಿ, ಅಭಿಮಾನ ಹುಟ್ಟಲೇ ಬೇಕೆಂದರೆ ಕಷ್ಟ. ಆದರೆ ನಮ್ಮ ನೆಲೆಯ ಬಗ್ಗೆ ಕನಿಷ್ಠ ಗೌರವವಾದರೂ ಇರಬೇಕಲ್ಲವೆ? ಹೋಗಲಿ, ತಮ್ಮನ್ನು ಸ್ವೀಕರಿಸಿದ ಆ ಸಂಸ್ಕೃತಿ ಸಮಾಜದ ಋಣಕ್ಕಾದರೂ ಬೆಲೆ ಕೊಡದಿದ್ದರೆ ಹೇಗೆ? ಸ್ಥಳೀಯರೊಂದಿಗೆ ಬೆರೆತರಷ್ಟೇ ನಮ್ಮತನಕ್ಕೆ ಬೆಲೆ ಎಂಬ ಸಾಮಾನ್ಯ ವಿವೇಕವಾದರೂ ಬೇಡವೆ?

ನಮ್ಮ ಮನೆಗೆ ಬಂದವರು ನೆಂಟರಂತೆಯೇ ಇರಬೇಕೆಂಬ ತತ್ವವನ್ನು ಸಡಿಲಿಸಿದ್ದಕ್ಕೆ ಕನ್ನಡಿಗರಿಗೆ ಸಿಕ್ಕ ಫಲವಾದರೂ ಏನು? ಗಡಿಯಲ್ಲಿರುವ ಪ್ರತಿಯೊಂದು ರಾಜ್ಯದಿಂದಲೂ ಕಿರಿಕಿರಿ. ಹಳೆಯದು ಮರೆಯಿತು ಎನ್ನುವಷ್ಟರಲ್ಲಿ (ಇತ್ಯರ್ಥವಂತೂ ಆಗುವುದಿಲ್ಲ ಬಿಡಿ, ಹಾಗಾಗಿ ಮರೆಯುವುದೇ ದಾರಿ!) ಹೊಸದೊಂದು ಕರಕರೆ ಶುರುವಾಗುತ್ತದೆ. ನಮ್ಮ ರಾಜ್ಯದ ಉದ್ಯೋಗ/ಅವಕಾಶ ಅನ್ಯರ ಪಾಲಾಗುತ್ತದೆ. ನಮ್ಮ ನೆಲದ ಉದ್ಧಾರಕ್ಕೆ ನೆರೆಯವರು ಯೋಜನೆ ಹಾಕುತ್ತಾರೆ; ಮುಂದೊಂದು ಆ ನೆಲ ತಮ್ಮದೇ ಎಂದು ಬೊಬ್ಬೆ ಹಾಕುತ್ತಾರೆ. ಕನ್ನಡ ನಾಡಿನಲ್ಲಿ ಕನ್ನಡಿಗರೇ ಮೇಯರ್ ಹುದ್ದೆಗೇರುವುದೂ ಸುದ್ದಿಯಾಗುವ/ಸಂಭ್ರಮಿಸುವ ಪರಿಸ್ಥಿತಿ ಬರುತ್ತದೆ. ನಮ್ಮ ಕರ್ಮ! ಕಾವೇರಿಯಂಥ ಕಾವೇರಿಯೇ ಬತ್ತುವುದಾದರೆ ನಮ್ಮ ಸಹನೆಯೇನು ಒರತೆಯೇ?

ಮೊನ್ನೆ 'ಬೇರು' ಚಲನಚಿತ್ರ ವೀಕ್ಷಿಸುತ್ತಿದ್ದೆ. ಅದರಲ್ಲಿ ವ್ಯವಸ್ಥೆಯ ಜಡತೆಗೆ ಬೇಸತ್ತ ಗೊರವಯ್ಯ ಕೂಗಾಡುತ್ತಾನೆ... 'ಮೆಲ್ಲಗ್ ಮಾತಾಡುದ್ರೆ ಹೊಟ್ಟೆಗ್ ತಿಂದಿಲ್ವಾ ಅಂತೀರಾ, ಗಟ್ಟಿಗ್ ಮಾತಾಡುದ್ರೆ ಕುಡ್ದಿದ್ಯಾ ಅಂತೀರಾ' !

ಪೂರಕ ಓದಿಗೆ

ಕನ್ನಡ ವಿರೋಧಿ ಕವನದ ವಿರುದ್ಧ ಕಿಚ್ಚೆದ್ದ ಕರವೇ
ನಿಪ್ಪಾಣಿ: ಕರವೇ ಆಕ್ರೋಶಕ್ಕೆ ಪೀಠೋಪಕರಣ ಧ್ವಂಸ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X