ವಿದ್ಯಾರಣ್ಯದ ವನವಿಹಾರ ಸಂಭ್ರಮ ಹೇಗಿತ್ತು ಗೊತ್ತಾ?


ಈ ಬಾರಿಯ ಪಿಕ್ನಿಕ್ ಎಲ್ಲರಿಗೂ ತುಂಬ ಮಜ ತಂದಿತು. ಜಾಲಿ ಜಾಲಿ ಪಿಕ್ನಿಕ್ ಇದು! ನೀವು ಬಂದಿರಲಿಲ್ವಾ? ಅಯ್ಯೋ, ಒಳ್ಳೆಯದೊಂದು ಕಾರ್ಯಕ್ರಮ ಮಿಸ್ ಮಾಡಿಕೊಂಡುಬಿಟ್ರಿ!


Vidyaranya kannada kuta.s Annual picnicಆಗಸ್ಟ್ 11ರ ಶನಿವಾರ ಶಾಂಬರ್ಗ್ ನ ಬಸಿ ವುಡ್ಸ್ ಸಂರಕ್ಷಿತ ಅರಣ್ಯ ಪ್ರದೇಶದ ತುಂಬೆಲ್ಲಾ ಕನ್ನಡ ಕಲರವ. ಅಂದು ವಿದ್ಯಾರಣ್ಯ ಕನ್ನಡಕೂಟದ ವಾರ್ಷಿಕ ವನವಿಹಾರದ ಮೋಜಿನ ದಿನ!

ಚಳಿಗಾಲ ಕಳೆದು ಬೇಸಿಗೆ ಶುರುವಾದೊಡನೆ ಕೊರೆಯುವ ಶೀತ, ಸುರಿಯುವ ಮಂಜಿನ ಹಾವಳಿಯಿಂದ ಬೇಸತ್ತ ಅಮೆರಿಕ ಜನರಲ್ಲಿ ಹೊಸ ಉತ್ಸಾಹ ಸಂಚಾರವಾಗುತ್ತದೆ. ಬಹಳಷ್ಟು ಕನ್ನಡ ಕೂಟಗಳಿಗೆ ಆಗ ವನಭೋಜನದ ಸಂಭ್ರಮ. ಅದರಂತೆ ವಿದ್ಯಾರಣ್ಯ ಕನ್ನಡಕೂಟವೂ ತಪ್ಪದೆ ವಾರ್ಷಿಕ ವನವಿಹಾರವನ್ನು ನಡೆಸಿಕೊಂಡು ಬಂದಿದೆ.

ಪ್ರತಿವರ್ಷ ಜುಲೈ ತಿಂಗಳಿನಲ್ಲಿ ನಡೆಯುತ್ತಿದ್ದ ಪಿಕ್ನಿಕ್ ಈ ಬಾರಿ ಆಗಸ್ಟ್ ತಿಂಗಳಿಗೆ ಮುಂದೂಡಲ್ಪಟ್ಟಿತ್ತು. ಜುಲೈನಲ್ಲಿ ವಾತಾವರಣದ ಉಷ್ಣಾಂಶ ತಾರಕಕ್ಕೇರುವುದರಿಂದ ಈ ಬಾರಿ ಕಾರ್ಯಕ್ರಮದಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡಿದ್ದು, ಜುಲೈ ಬದಲಾಗಿ ಆಗಸ್ಟ್ ನಲ್ಲಿ ವನವಿಹಾರ ಏರ್ಪಾಡಾಗಿತ್ತು.

ಶನಿವಾರ ಬೆಳಗ್ಗೆ ವಿದ್ಯಾರಣ್ಯ ಕನ್ನಡಕೂಟದ ವಿವಿಧ ಸಮಿತಿಗಳ ಸದಸ್ಯರು ಮುಂಚಿತವಾಗಿಯೇ ಸ್ಥಳದಲ್ಲಿ ಹಾಜರಿದ್ದು ಅಗತ್ಯವಿದ್ದ ಎಲ್ಲಾ ವ್ಯವಸ್ಥೆಗಳನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದರು. ಹನ್ನೊಂದು ಘಂಟೆಯ ನಂತರ ಒಬ್ಬೊಬ್ಬರಾಗಿ ಆಗಮಿಸಿದ ಸದಸ್ಯರ ಉಪಹಾರಕ್ಕೆಂದು ಬ್ರೆಡ್ ಸ್ಯಾಂಡ್‍ವಿಚ್, ಬರ್ಗರ್ ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಮುಸುಕಿನ ಜೋಳ, ಬಿಸಿಬಿಸಿ ಚಿಕನ್ ತುಂಡುಗಳು ಗ್ರಿಲ್‌ನಲ್ಲಿ ತಯಾರಾಗುತ್ತಿದ್ದವು. ಕೋಕ್, ಪೆಪ್ಸಿ ಮುಂತಾದ ಪಾನೀಯಗಳ ಜೊತೆಗೆ ಅಂದವಾಗಿ ಕತ್ತರಿಸಿಟ್ಟಿದ್ದ ಕಲ್ಲಂಗಡಿ, ಕರಬೂಜ ಹಣ್ಣುಗಳು ಮನಸೆಳೆಯುವಂತಿದ್ದವು.

ಇವುಗಳ ಜೊತೆಗೆ ಈ ಬಾರಿಯ ವಿಶೇಷವೆಂದರೆ ತಂಪಾದ ಮಸಾಲ ಮಜ್ಜಿಗೆ! ಉರಿಬಿಸಿಲಿನ ತಾಪಕ್ಕೆ ರಾಮಬಾಣದಂತಿದ್ದ ಈ ನೀರು ಮಜ್ಜಿಗೆಗಂತೂ ಭಾರಿ ಡಿಮ್ಯಾಂಡು ಕಂಡು ಬರುತ್ತಿತ್ತು. ಶುಂಠಿ, ಕರಿಬೇವು, ಕೊತ್ತುಂಬರಿ ಸೊಪ್ಪುಗಳಿಂದ ಸಿಂಗಾರಗೊಂಡಿದ್ದ ಈ ಮಜ್ಜಿಗೆ ಕೆಲವರಿಗೆ ರಾಮನವಮಿ ದಿನವನ್ನು ನೆನಪಿಸಿತು. ಕಡಿಮೆ ಕ್ಯಾಲೊರಿ, ಬಾಯಿಗೆ ರುಚಿ, ದೇಹಕ್ಕೂ ತಂಪು ನೀಡುವ ನಮ್ಮೂರಿನ ನೀರು ಮಜ್ಜಿಗೆಗೆ ಅಂದು ಎಲ್ಲರೂ ಜೈ! ಜೈ! ಎನ್ನುವವರೇ!

ಜೋಳ, ಚಿಕನ್, ಸ್ಯಾಂಡ್‍ವಿಚ್‍ಗಳು ಹೊಟ್ಟೆ ಸೇರಿದೊಡನೆ ಸದಸ್ಯರ ಗಮನ ಆಟದತ್ತ ಹರಿಯಿತು. ಮೂರು ಕಾಲಿನ ಓಟ, ನಿಂಬೆ ಮತ್ತು ಚಮಚ, ವಾಲಿಬಾಲ್, ಬ್ಯಾಡ್ಮಿಂಟನ್ ಆಟಗಳಿದ್ದವು. ಚಿಕ್ಕಮಕ್ಕಳಿಗೆ ಮತ್ತು ದೊಡ್ದವರಿಗೆ ಪ್ರತ್ಯೇಕವಾಗಿದ್ದ ಈ ಆಟಗಳಲ್ಲಿ ಹಲವಾರು ಸದಸ್ಯರು ಉತ್ಸಾಹದಿಂದ ಭಾಗವಹಿಸಿ, ಬಹುಮಾನಗಳನ್ನು ಪಡೆದುಕೊಂಡರು.

Vidyaranya kannada kuta.s Annual picnicಆಟ ಆಡುತ್ತಾ ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಆಗಲೇ ಊಟದ ಹೊತ್ತಾಗಿಹೋಗಿತ್ತು. ಮಧ್ಯಾಹ್ನದ ಊಟಕ್ಕೆ ವಿದ್ಯಾರಣ್ಯದ ಸದಸ್ಯರು ತಯಾರಿಸಿ ತಂದಿದ್ದ ನಿಂಬೆ ಚಿತ್ರಾನ್ನ, ಮೊಸರನ್ನಗಳಿದ್ದವು. ಚಿಪ್ಸ್, ಉಪ್ಪಿನಕಾಯಿಗಳೂ ಜೊತೆಗೂಡಿದ ಸೊಗಸಾದ ಭೋಜನ. ಆಡಿ ದಣಿದಾಗ ಊಟ. ಊಟ ಸಾಕಾದಾಗ ಅದನ್ನು ಅರಗಿಸಲು ಮತ್ತೆ ಆಟ. ಪಿಕ್‌ನಿಕ್‍ ಮಜಾ ಅಂದರೆ ಇದೇ. ಏಕೆಂದರೆ ಬರುವ ಸದಸ್ಯರೆಲ್ಲರೂ ಅಂದು ಅರಾಮದ ಮೂಡಿನಲ್ಲಿರುತ್ತಾರೆ. ಕೆಲವರಿಗೆ ಹರಟೆ ಹೊಡೆಯಲು ಒಳ್ಳೆಯ ಅವಕಾಶ ಸಿಗುತ್ತದೆ. ಕೆಲವರು ಆಟ ಆಡುತ್ತಾರೆ, ಕೆಲವರು ಬರೀ ನೋಡುತ್ತಾರೆ, ಕೆಲವರು ಊಟ ಮಾಡಿಕೊಂಡು ಹಾಯಾಗಿ ಮರದ ನೆರಳಿನಲ್ಲಿ ಕುಳಿತುಕೊಳ್ಳಲು ಬಯಸುತ್ತಾರೆ.

ಊಟ ಆದ ಮೇಲೆ ಇನ್ನೆಂತ ಆಟ ಎಂದು ಸುಮ್ಮನೆ ಕೂತಿದ್ದವರನೆಲ್ಲ ಎಬ್ಬಿಸಿ ಸಂಗೀತ ಕುರ್ಚಿ ಆಟ ಪ್ರಾರಂಭಿಸಿದರು. ಸಂಗೀತ ಕುರ್ಚಿ ಆಟದ ವಿಶೇಷವೇನೆಂದರೆ, ಅಲ್ಲಿ ಕುರ್ಚಿಗಳೇ ಇರಲಿಲ್ಲ, ಬದಲಿಗೆ ಕಂಬಗಳಿದ್ದವು! ಅಂದರೆ ವಿದ್ಯಾರಣ್ಯದ ಸದಸ್ಯರನ್ನೇ ಕಂಬಗಳಂತೆ ನಿಲ್ಲಿಸಿ ಸೊಗಸಾಗಿ ಆಟವನ್ನು ನಿರ್ವಹಿಸಲಾಯಿತು. ಈ ಬಾರಿ ಮಕ್ಕಳಿಗೆಂದು ಇಂಗ್ಲಿಷ್ ಪದಗಳಿಗೆ ಕನ್ನಡದ ಪರ್ಯಾಯ ಪದಗಳನ್ನು ಹೇಳಿಸುವ "ರಸಪ್ರಶ್ನೆ" ಕಾರ್ಯಕ್ರಮವೂ ಇತ್ತು. ವಿದ್ಯಾರಣ್ಯದ ಅಧ್ಯಕ್ಷರಾದ ದತ್ತಮೂರ್ತಿಯವರು ಈ ರಸಪ್ರಶ್ನೆಯನ್ನು ನಡೆಸಿದರು. ಆದರೆ ಮಕ್ಕಳಿಗೆ ಮುಂಚಿತವಾಗಿ ಈ ಬಗ್ಗೆ ಸೂಚನೆ ನೀಡಿರಲಿಲ್ಲವಾದ್ದರಿಂದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಹೆಚ್ಚು ಮಕ್ಕಳು ಭಾಗವಹಿಸಲಾಗಲಿಲ್ಲ. ಮುಂದಿನ ದಿನಗಳಲ್ಲಿ ಈ ಆಟವನ್ನು ಮತ್ತಷ್ಟು ಜನಪ್ರಿಯಗೊಳಿಸಿದಲ್ಲಿ, ನಮ್ಮ ಎಳೆಯರ ಕನ್ನಡ ಪದ ಭಂಡಾರ ಮತ್ತಷ್ಟು ತುಂಬಿತುಳುಕೋದರಲ್ಲಿ ಸಂದೇಹವೇ ಇಲ್ಲ!

ಕರ್ನಾಟಕದ ಚಿಕ್ಕಮಗಳೂರು ಕಾಫಿಗೆ ಪ್ರಸಿದ್ಧಿ ಪಡೆದಿದೆ. ಮತ್ತೆ ಕನ್ನಡಿಗರು ಅಂದ ಮೇಲೆ ಅಲ್ಲಿ ಕಾಫಿ ಇಲ್ಲದಿರುತ್ತದೆಯೇ? ಕಾಫಿ ಘಮಘಮ ಮೂಗಿಗೆ ತಲುಪಿದ್ದೇ ತಡ ಸದಸ್ಯರ ಗಮನ ಅತ್ತ ಹರಿಯಿತು. ಹದವಾಗಿ, ಬಿಸಿಬಿಸಿಯಾಗಿದ್ದ ಕಾಫಿಗೆ ಪೂರ್ಣ ಅಂಕಗಳು ದೊರೆತವು. ಅದೇ ಸಮಯಕ್ಕೆ ಸರಿಯಾಗಿ ಮರದ ಕೆಳಗೆ ಪಿನ್ಯಾಟ ಒಡೆಯುವ ಆಟ ಶುರುವಾಯಿತು. ವಿದ್ಯಾರಣ್ಯದ ಮಕ್ಕಳೆಲ್ಲಾ ಉತ್ಸಾಹದಿಂದ ಪಿನ್ಯಾಟ ಮೂತಿಗೆ ಬಡಿದಿದ್ದೇ ಬಡಿದಿದ್ದು. ಕೊನೆಗೂ ಅದು ಒಡೆದು ಹೊರಚೆಲ್ಲಿದ ಕ್ಯಾಂಡಿ, ಚಾಕಲೇಟ್, ಆಟಿಕೆಗಳಿಗೆ ಮಕ್ಕಳು ಮುಗಿಬಿದ್ದರು. ಇದು ಮಕ್ಕಳಿಗೆಲ್ಲ ಬಹಳ ಮುದ ನೀಡುವ ಆಟ. ಮಕ್ಕಳು ಖುಷಿಯಿಂದ ಕುಣಿದಾಡಿದಾಗ ನಮಗೂ ಸಂತೋಷವಾಯಿತು.

ಪಿಕ್ನಿಕ್‍ನ ಕಟ್ಟಕಡೆಯ ಕಾರ್ಯಕ್ರಮ ಅಂತ್ಯಾಕ್ಷರಿ. ಸಾಮಾನ್ಯವಾಗಿ ಅಂತ್ಯಾಕ್ಷರಿಗಳಲ್ಲಿ ಹಿಂದಿ ಹಾಡುಗಳ ಪ್ರಾಬಲ್ಯವೇ ಹೆಚ್ಚಾಗುವುದರಿಂದ, ಈ ಬಾರಿ ಅದನ್ನು ತಡೆಯಲು ಕೇವಲ ಕನ್ನಡ ಹಾಡುಗಳನ್ನೇ ಹಾಡಬೇಕೆಂಬ ನಿಬಂಧನೆ ವಿಧಿಸಲಾಗಿತ್ತು. ವಿದ್ಯಾರಣ್ಯದ ಸದಸ್ಯರದು ಒಂದು ತಂಡ, ಸದಸ್ಯೆಯರದು ಇನ್ನೊಂದು ತಂಡ.

ಕನ್ನಡದಲ್ಲಿ ಹಾಡಿಗೇನು ಬರ? ಎರಡೂ ತಂಡದ ಸದಸ್ಯರು ಒಬ್ಬರಿಗೊಬ್ಬರು ಪೈಪೋಟಿಯಿಂದ ಹಾಡುಗಳನ್ನು ಹಾಡಿದರು. ಇತ್ತೀಚೆಗಷ್ಟೇ ಕರ್ನಾಟಕದಿಂದ ಬಂದಿರುವ, ವಿದ್ಯಾರಣ್ಯದ ಹೊಸ ಸದಸ್ಯರಲ್ಲೊಬ್ಬರಾದ ಕೆಂಪೇಗೌಡರಿಂದ ಹೊಸ ಕನ್ನಡ ಗೀತೆಗಳ ಸುಗ್ಗಿ. ಕನ್ನಡದ ಸೂಪರ್ ಹಿಟ್ ಚಿತ್ರಗಳಾದ ಮುಂಗಾರು ಮಳೆ, ದುನಿಯಾ ಚಿತ್ರದ ಹಾಡುಗಳನ್ನು ಅವರು ಹಾಡಿದರು. ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ, ತೆರೆದಿದೆ ಮನೆ, ಯಾರೇ ಕೂಗಾಡಲಿ, ಹೆಜ್ಜೆ ಹೆಜ್ಜೆಗೂ, ರಾಣಿ ಜೇನು, ರಾಣಿ ಜೇನು ಬಂತು ನೋಡು, ನೀರ ಬಿಟ್ಟು ನೆಲದ ಮೇಲೆ, ಬಾಜಿ ಕಟ್ಟಿ ನೋಡು ಬಾರೊ ಮೀಸೆ ಮಾವ ಮುಂತಾದ ಕನ್ನಡದ ಅಮರ ಮಧುರ ಚಿತ್ರಗೀತೆಗಳೆಲ್ಲಾ ಅಂದು ಸದಸ್ಯರ ಬಾಯಲ್ಲಿ ನಲಿದಾಡಿದವು.

ಸಂಜೆ ಐದು ಘಂಟೆಯ ಸುಮಾರಿಗೆ ನಮ್ಮ ಅಧ್ಯಕ್ಷರಾದ ದತ್ತಮೂರ್ತಿಯವರು ಎಲ್ಲರಿಗೂ ಧನ್ಯವಾದ ಅರ್ಪಿಸುವುದರೊಂದಿಗೆ ವನವಿಹಾರ ಮುಕ್ತಾಯವಾಯಿತು. ಅಲ್ಲಿ ಇಲ್ಲಿ ಬಿದ್ದಿದ್ದ ಕಸ, ಕಾಗದದ ತಟ್ಟೆ, ಲೋಟಗಳನ್ನೆಲ್ಲ ತೆಗೆದು ಸ್ವಚ್ಛಗೊಳಿಸಿದ್ದಾಯಿತು. ಆಮೇಲೆ ಒಬ್ಬರಿಗೊಬ್ಬರು ವಿದಾಯ ಹೇಳಿ ಎಲ್ಲರೂ ಮನೆಯ ಹಾದಿ ಹಿಡಿದೆವು. ಒಟ್ಟಿನಲ್ಲಿ, ಈ ಬಾರಿಯ ಪಿಕ್ನಿಕ್ ಎಲ್ಲರಿಗೂ ತುಂಬ ಮಜ ತಂದಿತು. ಜಾಲಿ ಜಾಲಿ ಪಿಕ್ನಿಕ್ ಇದು!

ನೀವು ಬಂದಿರಲಿಲ್ವಾ? ಅಯ್ಯೋ, ಒಳ್ಳೆಯದೊಂದು ಕಾರ್ಯಕ್ರಮ ಮಿಸ್ ಮಾಡಿಕೊಂಡುಬಿಟ್ರಿ. ಹೋಗಲಿ ಬಿಡಿ. ನಿಮಗಾಗಿ ಅಲ್ಲಿಯ ರಸನಿಮಿಷಗಳನ್ನು ಚಿತ್ರಗಳಲ್ಲಿ ಸೆರೆಹಿಡಿದು ತಂದಿದ್ದೇವೆ ನೋಡಿ. ಮುಂದಿನ ವನವಿಹಾರಕ್ಕೆ ಮಾತ್ರ ತಪ್ಪದೆ ಬನ್ನಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+