ಇಂಟರ್ನೆಟ್ ಲೋಕದಲ್ಲಿ ಇ-ಕಾಮಣ್ಣರು
‘ಚಪಲ ಚಪಲ ಚಂಚಲ... ’ ಅನ್ನುವಂತೆ ಅಪ್ರಾಪ್ತ ಯುವತಿಯರೊಂದಿಗೆ, ಇಂಟರ್‌ನೆಟ್‌ನಲ್ಲಿ ಪೋಲಿಪೋಲಿಯಾಗಿ ಚಾಟ್ ಮಾಡುವ ಚಪಲ ಚನ್ನಿಗರಾಯರು, ಇನ್ಮುಂದೆ ತಮ್ಮ ಚಾಳಿ ನಿಲ್ಲಿಸಿದರೆ ಒಳ್ಳೆಯದು! ಯಾಕೆ ಅನ್ನುವಿರಾದರೆ, ಈ ಲೇಖನ ಓದಿ...
- ಮಲ್ಲಿ ಸಣ್ಣಪ್ಪನವರ್, ಅಮೆರಿಕ ಸಂಯುಕ್ತ ಸಂಸ್ಥಾನ
‘ನನ್ನ ಹೆಂಡತಿಯನ್ನು ನಾನು ತುಂಬಾ ಪ್ರೀತಿಸುತ್ತೇನೆ, ದಯವಿಟ್ಟು ನನ್ನನ್ನು ಬಿಟ್ಟು ಬಿಡಿ...’ ಅಂತಾ ಒಬ್ಬ ; ‘ನನಗೆ ಮೂರು ತಿಂಗಳ ಹಿಂದೆಯಷ್ಟೇ ಮುದುವೆಯಾಗಿದೆ, ಪ್ಲೀಸ್ ನನ್ನನ್ನು ಬಿಟ್ಟು ಬಿಡಿ’ ಅಂತಾ ಇನ್ನೊಬ್ಬ ; ‘ನಾನು ಪ್ರತಿಷ್ಠಿತ ಕುಟುಂಬದಿಂದ ಬಂದವನು, ನಾನು ಕೆಟ್ಟವನಲ್ಲಾ ಸ್ವಾಮಿ ದಯವಿಟ್ಟು ನನ್ನನ್ನು ರಿಲೀಸ್ ಮಾಡಿ’ ಅಂತಾ ಮತ್ತೊಬ್ಬ.
ಹೌದು. ‘ಒಂಬತ್ತು.. ಒಂಬತ್ತು... ಒಂಬತ್ತು.. ತೋಳ ಹಳ್ಳಕ್ಕೆ ಬಿತ್ತು !!’ ಎಂಬ ರೀತಿಯಲ್ಲಿ ಅಂಕಲ್ ಸ್ಯಾಮ್‌ನ ನಾಡಿನ ಪ್ರತಿಷ್ಠಿತ ಟಿ.ವಿ ಚಾನೆಲ್‌ಗಳಲ್ಲಿ ಒಂದಾದ ಎನ್.ಬಿ.ಸಿ ಚ್ಯಾನಲ್‌ನ ಕ್ರಿಸ್ ಹ್ಯಾನಸೆನ್ ಎಂಬ ವರದಿಗಾರ ಅಮೆರಿಕಾದ ಉದ್ದಗಲಕ್ಕೂ ತೋಡಿದ ಹಳ್ಳದಲ್ಲಿ ಸಿಕ್ಕು ಬಿದ್ದ ಭಾರತದ ಇಂಟರ್ನೆಟ್ ಕಾಮಣ್ಣರು ಪೋಲಿಸರನ್ನು ಪರಿ ಪರಿಯಾಗಿ ಬೇಡಿಕೊಂಡ ರೀತಿ ಇದು.
ಇ-ಕಾಮಣ್ಣರನ್ನು ಹಿಡಿಯಲು ಎನ್.ಬಿ.ಸಿ ಚಾನೆಲ್‌ನವರು ಬೀಸಿದ ಜಾಲ ನೋಡಿದರೆ ಆನೆಗಳನ್ನು ಹಿಡಿಯಲು ಖೆಡ್ಡಾ ತೋಡುವ ತಂತ್ರ ನೆನಪಾಗುತ್ತದೆ. ಆ ಮನೆಯಲ್ಲಿ 12-13 ವರ್ಷದ ಅಪ್ರಾಪ್ತ ವಯಸ್ಸಿನ ಒಂಟಿಯಾಗಿರುವ ಹುಡುಗಿ, ಆ ಮನೆಗೊಂದು ಇಂಟರ್ನೆಟ್ ಮತ್ತು ಪೋನು, ಆ ಹುಡುಗಿ ಅಮಾಯಕ ರೀತಿಯಲ್ಲಿ ಇಂಟರ್ನೆಟ್‌ನ ಚಾಟಿಂಗ್ ರೂಮುಗಳಿಗೆ ಬರುತ್ತಾಳೆ, ತನ್ನ ನಿಜವಾದ ವಯಸ್ಸನ್ನು 12-13 ಎಂದು ಹೇಳಿಕೊಂಡು ಇಂಟರ್ನೆಟ್‌ನಲ್ಲಿ ಅಪರಿಚಿತರೊಂದಿಗೆ ಚಾಟಿಂಗ್ ಶುರುಮಾಡಿಕೊಳ್ಳುತ್ತಾಳೆ, ಅವಳು ಮುಗ್ಧತೆಯಿಂದ ಮಾತನಾಡುತ್ತಾ ಹೋಗುತ್ತಾಳೆ, ಆ ಕಡೆಯಿಂದ ಅಪರಿಚಿತ ಚಾಟಿಂಗ್ ಚೋರ ಚಪಲ ಚೆನ್ನಿಗರಾಯನಾಗಿದ್ದರೆ, ಒಂಟಿ ಹುಡುಗಿಯ ಕಂಡು ಎಲ್ಲೆ ಮೀರಿ ಮಾತನಾಡುತ್ತಾ ಲಘುಹರಟೆಯಲ್ಲೇ ಅವಳಿಗೆ ತುಂಬಾ ಪರಿಚಿತನಾಗುತ್ತಾನೆ.
ಮಾತನಾಡುತ್ತಾ ಮಾತನಾಡುತ್ತಾ ಈ ಕಾಮಣ್ಣರು, ನನ್ನ ಬರಹಕ್ಕೆ ನಿಲುಕಲಾರದಷ್ಟು ನಾನು ಬರೆದರೆ ನೀವು ಓದಲಾರದಷ್ಟು ತುಚ್ಛ ಮಟ್ಟಕ್ಕೆ ಮಾತನಾಡಲು ಪ್ರಾರಂಭಿಸುತ್ತಾರೆ. ಅವರು ಮಾತನಾಡುತ್ತಿರುವುದು 12-13 ವರ್ಷದ ಬಾಲಕಿಯಾಂದಿಗೆ ಅಂತ ಗೊತ್ತಿದ್ದರೂ, ಈ ಕಿರಿಕ್ಕು ಕೆಲಸಕ್ಕೆ ಕೈಹಾಕುವ ಕುಖ್ಯಾತ ಮಹಾಶಯರಿವರು. ಇಷ್ಟಕ್ಕೆ ಸುಮ್ಮನಾಗದ ಇವರು ಅವಳಿಂದ ಫೋನ್ ನಂಬರ್ ಪಡೆದು ಅವಳ ಮನೆ ಅಡ್ರೆಸ್ ತಿಳಿದುಕೊಂಡು ಅವಳನ್ನು ಭೇಟಿಮಾಡಿ, ಮನೆಯಲ್ಲಿ ಒಂಟಿಯಾಗಿರುವ ಬಾಲಕಿಯಾಂದಿಗೆ ರಸಮಯ ಕ್ಷಣಗಳ ಅನುಭವಿಸುವ ಹಸಿಗನಸಿನ ನಿರೀಕ್ಷೆಯಲ್ಲಿ ಅವಳ ಮನೆಗೆ ಬರುತ್ತಾರೆ.
ಆ ಬಾಲಕಿ ಸ್ವತಃ ಹೊರಗೆ ಬಂದು ಇವರನ್ನು ಬರಮಾಡಿಕೊಳ್ಳುತ್ತಾಳೆ. ಈ ಹಂತದಲ್ಲಿ ಅಂದು ಕೊಂಡ ಹಾಗೆ ಚಪಲ ತೀರಿಸಿಕೊಳ್ಳಬಹುದು ಎಂದು ಊಹಿಸಿಕೊಂಡಿದ್ದ ಚೆನ್ನಿಗರಾಯನ ಮನದಾಸೆ ಶರವೇಗದಲ್ಲಿ ಮುಗಿಲು ಮುಟ್ಟುವುದೇ ತಡ, ಅಲ್ಲೆ ಅವಿತುಕೊಂಡಿದ್ದ ಎನ್.ಬಿ.ಸಿ ವರದಿಗಾರ ಮಿಂಚಿನಂತೆ ಪ್ರತ್ಯಕ್ಷನಾಗುತ್ತಾನೆ.
ಹೌದು. ಆ ಮನೆ ನಿಜವಾದ ಮನೆಯಲ್ಲ. ಮನೆಯಂತೆ ಸೆಟ್ ಮಾಡಿದ, ಹಿಡನ್ ಕ್ಯಾಮರಾಗಳಿಂದ ಕೂಡಿದ ಅಂಡರ್-ಕವರ್ ಮನೆ. ಆ ಹುಡುಗಿ ನಿಜವಾದ ಅಪ್ರಾಪ್ತ ವಯಸ್ಸಿನ ಹುಡುಗಿಯಲ್ಲ. ಅವಳಂತೆ ನಟಿಸಿದ ಅಂಡರ್-ಕವರ್ ಏಜೆಂಟ್. ಅವಳು ಆ ಮನೆಯಲ್ಲಿ ಒಂಟಿಯಾಗಿಲ್ಲ, ಆ ಮನೆಸುತ್ತ ಅವಿತುಕೊಂಡಿರುವ ಹ್ಯಾಂಡ್-ಗನ್ ಹಿಡಿದ ಫೋಲಿಸರ ದೊಡ್ಡ ಪಡೆ ಇದೆ.












Click it and Unblock the Notifications