‘ಅಮೆರಿಕನ್ನಡಿಗರೇ, ಬನ್ನಿ ಪಿಕ್ಚರ್‌ಗೆ ಹೋಗೋಣ...’
ಕನ್ನಡ ಸಿನಿಮಾ ನೋಡುವ ರಸಿಕತೆ ಬೆಳೆಯಲಿ...
ಮತ್ತೆ ಅಮೆರಿಕನ್ನಡಿಗರಿಗೆ ಸಿನಿಮಾ ನೋಡುವ ಅದೃಷ್ಟವೇ ಇಲ್ಲವೇ? ಅದಕ್ಕೆ ಕಾರಣರಾರು? ನನ್ನ ಪ್ರಕಾರ ಅವರವರೇ ಕಾರಣ. ರಾತ್ರಿ ಹತ್ತು ಘಂಟೆಯ ಶೋ ಆದರು ಹೋಗುವ ಅಮೆರಿಕದಲ್ಲಿ ನೆಲೆಸಿರುವ ತಮಿಳರಿಗಿರುವ ಅಭಿಮಾನ ನಮ್ಮಲ್ಲೆಲ್ಲಿದೆ ಹೇಳಿ? ಮುಂಗಡ ಬುಕ್ಕಿಂಗನಲ್ಲೇ ಚಿತ್ರಮಂದಿರ ತುಂಬಿಸುವ ಅಮೆರಿ-ತೆಲಗು ವೀಕ್ಷಕರರಿಗಿರುವಷ್ಟು ಚಿತ್ರಪ್ರೇಮಿಗಳೆಲ್ಲಿದ್ದಾರೆ ಹೇಳಿ?
ಕನ್ನಡ ಸಂಘಗಳ ಉದ್ಧೇಶದಲ್ಲಿ ಕನ್ನಡ ಚಿತ್ರಪ್ರೇಮಿಗಳನ್ನು ಬೆಳೆಸುವ ಉದ್ದೇಶವೂ ಇರಬೇಕು. ಅಮೆರಿಕನ್ನಡಿಗರಲ್ಲಿ ಒಮ್ಮೆ ಕನ್ನಡ ಚಿತ್ರಗಳು ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶಿತವಾಗುವ ರೀತಿ ಆಗಲಿ, ಆಗ ಕನ್ನಡ ಸಂಘಗಳಿಗೇ ಒಳಿತಾಗುತ್ತದೆ. ಅಂತಹ ಚಿತ್ರಪ್ರೇಮಿಗಳನ್ನು ಬೆಳೆಸಿದ ಹೆಮ್ಮೆಯೂ ಕನ್ನಡ ಸಂಘದ್ದಾಗುತ್ತದೆ. ಅಮೆರಿಕನ್ನಡಿಗರೇ ಕನ್ನಡ ಚಿತ್ರ ಪ್ರೇಮವನ್ನು ಬೆಳಸಿಕೊಳ್ಳಲಿಲ್ಲವೆಂದರೆ ಅಮೆರಿಕೆಯಲ್ಲಿ ನಮಗೆ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾ ನೋಡುವ ಅದೃಷ್ಟವೂ ಇರುವುದಿಲ್ಲ.
ಬೋರೊಡೆಸುವ ಚಿತ್ರಗಳು...
ಒಮ್ಮೆ ನಮ್ಮ ಮಿತ್ರರೊಬ್ಬರು ಒಂದು ಅಂಕಣದಲ್ಲಿ ‘ನೋಡಲಾರೆ ಕನ್ನಡ ಚಿತ್ರ’ ಎಂಬ ಲೇಖನವನ್ನೂ ಓದಿದ್ದು ನಿಮಗೆಲ್ಲ ಜ್ಞಾಪಕವಿರಬಹುದು. ಅದರ ಪರ ವಿರುದ್ಧ ಲೇಖನಗಳೂ ಬಂದಿದ್ದವು. ಆದರೆ ಒಂದು ಹೇಳುತ್ತೇನೆ, ಅಮೆರಿಕೆಗೆ ಕನ್ನಡದ ಎಲ್ಲ ಚಿತ್ರಗಳೂ ಬರುವುದಿಲ್ಲ. ಒಳ್ಳೆಯ ಚಿತ್ರವೆಂದು ವಿಮರ್ಶೆ ಪಡೆದ ಚಿತ್ರಗಳು ಮಾತ್ರ ಬರುತ್ತವೆ. ಎಲ್ಲರಿಗೂ ಹಿಡಿಸುವಂತಹ ಚಿತ್ರಗಳು ಎಲ್ಲ ಸಮಯದಲ್ಲೂ ಬರುವುದಿಲ್ಲ. ಎಲ್ಲಾ ಚಿತ್ರಗಳು ಎಲ್ಲರಿಗೂ ಸಂತೋಷ ತರಬೇಕು ಅನ್ನುವುದೂ ಸತ್ಯಕ್ಕೆ ದೂರ. ಬಂದ ಚಿತ್ರಗಳಲ್ಲಿ ಬಹುತೇಕ ಚಿತ್ರಗಳೆಲ್ಲಾ ಹೊಗಳಿಕೆಗೆ ತಕ್ಕದ್ದು ಅನ್ನುಕ್ಕಿಂತ ಒಮ್ಮೆ ನೋಡಬಹುದು ಅನ್ನುವ ಹಾಗಿರುತ್ತೆ.
ಅಟ್ಲಾಂಟ ಅಂತ ಚಿಕ್ಕ ಊರಿನಲ್ಲಿ ಒಂದು ತಮಿಳು ಅಥವ ತೆಲಗಾಗಲಿ ಚಿತ್ರಬಂದರೆ ವಾರದ ದಿನಗಳಲ್ಲಿ, ವಾರಾಂತ್ಯವೂ ಅಲ್ಲ, ಹೌಸ್ ಫುಲ್. ಸ್ಯಾನ್ ಹೊಸೆ ಅಂತ ಪ್ರದೇಶದಲ್ಲಿ ವಾರಗಟ್ಟಲೆ ಹೌಸ್ ಫುಲ್. ನಮ್ಮ ಸ್ನೇಹಿತರೊಬ್ಬರು ಕನ್ನಡಿಗರು ಬೆಳಿದಿದ್ದೆಲ್ಲಾ ತಮಿಳುನಾಡಿನಲ್ಲಿ ಅವರಿಗೆ ಎರಡು ಕಡೆಯೂ ಪ್ರೇಮ. ಅವರು ಹೇಳೋದು ‘ನಾವು ಕಷ್ಟಪಟ್ಟಕೊಂಡು ರಾತ್ರಿ 10 ಗಂಟೆ ಶೋಗೆ ತಮಿಳು ಚಿತ್ರ ನೋಡೋಕ್ಕೆ ಹೋಗ್ತೀವಿ. ಒಂದೊಂದ್ಸಾರಿ ಟಿಕೇಟ್ಟೇ ಸಿಗೋಲ್ಲಾ. ನೀವು ಕನ್ನಡ ಚಿತ್ರಗಳನ್ನ ಮಧ್ಯಾಹ್ನದ ಒಳ್ಳೆ ಟೈಮ್‌ನಲ್ಲಿ ಇಡ್ತೀರಿ ಆದ್ರೂ ಜನ ಬರೋಲ್ವಲ್ಲರೀ?’.
‘ಬನ್ನಿ ಪಿಕ್ಚರ್‌ಗೆ ಹೋಗೋಣ’ ಎಂದು ಅಮೆರಿಕನ್ನಡಿಗರಿಗೆ ಕರೆ ಕೊಡುತ್ತಾ ನನ್ನ ಈ ಲೇಖನವನ್ನು ಮುಗಿಸುತ್ತೇನೆ. ಅಮೆರಿಕೆಯಲ್ಲಿ ಕನ್ನಡ ಚಿತ್ರಗಳ ಬಗ್ಗೆ ನಿಮ್ಮ ಅನಿಸಿಕೆ ಹೀಗೆ ಇದ್ದರೂ ಸರಿಯೇ ಅಥವಾ ಬೇರೆ ಇದ್ದರೂ ಸರಿಯೇ ಒಂದೆರಡು ವಾಕ್ಯಗಳನ್ನು ಗೀಚಿ.












Click it and Unblock the Notifications