‘ಏಯ್ ಮೊಟ್ಟೆ , ನೀ ಮೋಡಿ ಮಾಡಿಬಿಟ್ಟೆ!’
‘ಮನಸಿದ್ದರೇ ಮಾರ್ಗ’ ಎಂಬ ಉಕ್ತಿ ನಿಜ. ಮಾಡುವ ಮನಸ್ಸಿದ್ದರೇ, ಏನನ್ನು ಬೇಕಾದರೂ ಸಾಧಿಸಬಹುದು. ಕಲ್ಲಲ್ಲೂ ಕಲ್ಲುಹೂವು ಅರಳುತ್ತದೆ. ಈ ಮಾತಿಗೊಂದು ನಿದರ್ಶನ ನಿಮ್ಮ ಮುಂದಿದೆ!
- ಬರಹ : ಶ್ರುತಿ
- ಚಿತ್ರ : ಸತೀಶ್ ಕಬ್ಬಿನಾಡ
ಈಸ್ಟರ್ ಹಬ್ಬದ ಸಂದರ್ಭದಲ್ಲಿ ಅಮೆರಿಕಾ ಕುಣಿದು ಕುಪ್ಪಳಿಸುತ್ತದೆ. ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಕಂಡುಬರುವ ಊರಮ್ಮನ ಜಾತ್ರೆ ನೆನಪಿಸಿಕೊಳ್ಳಿ. ಚಾಕಲೇಟು, ಸಿಹಿತಿನಿಸು, ಮೊಟ್ಟೆ , ಕೇಕ್ -ಹೀಗೆ ನಾನಾ ವೈವಿಧ್ಯಗಳು ಇದ್ದೇ ಇರುತ್ತವೆ. ಈ ವರ್ಷ ನನ್ನ ಗಮನ ಸೆಳೆದದ್ದು ಈಸ್ಟರ್ ಮೊಟ್ಟೆಗಳು!
ಅಂದು ನನ್ನ ಮಕ್ಕಳಿಬ್ಬರಿಗೆ ಪುಸ್ತಕಗಳನ್ನು ತರಲು, ನ್ಯೂಜೆರ್ಸಿಯ ಪಬ್ಲಿಕ್ ಲೈಬ್ರೆರಿಗೆ ಹೋಗಿದ್ದೆವು. ಆಗ ಈಸ್ಟರ್‌ಗೆ ಎರಡು ದಿನ ಬಾಕಿ ಉಳಿದಿತ್ತು. ಲೈಬ್ರೆರಿಯ ಶೋಕೇಸ್‌ನಲ್ಲಿ ಮೊಟ್ಟೆಯಿಂದ ಮಾಡಿದ ನಾನಾ ಕಲಾಕೃತಿಗಳು ಎಲ್ಲರ ಗಮನ ಸೆಳೆಯುತ್ತಿದ್ದವು! ಅಲ್ಲಿದ್ದವರೆಲ್ಲರ ಬಾಯಲ್ಲೂ ‘ಓಹೋ!!! ’ಎಂಬ ಉದ್ಗಾರ. ‘ಮೊಟ್ಟೆ ನೀ ಮೋಡಿಯ ಮಾಡಿಬಿಟ್ಟೆ!’ ಎಂಬ ಉದ್ಗಾರ ನನ್ನ ಬಾಯಿಂದಲೂ ಹೊರಬಿತ್ತು.
ಇಂತಹ ಮನ ಸೆಳೆವ, ವಿಸ್ಮಯ ಮೂಡಿಸುವ ಕಲಾಕೃತಿಗಳ ಒಡತಿಯನ್ನು ನಾನು ಮಾತನಾಡಿಸಿದೆ. ‘ವಿವಿಧ ಜಾತಿಯ ಪಕ್ಷಿಗಳ ಮೊಟ್ಟೆಗಳನ್ನು ಸಂಗ್ರಹಿಸಿ, ಹೀಗೆ ಕಲಾಕೃತಿ ಮಾಡುವುದು ನನ್ನ ಹವ್ಯಾಸ’ ಎಂದು ಆಕೆ ನುಡಿದಳು. ಇನ್ನಷ್ಟು ಮಾಹಿತಿ ಸಂಗ್ರಹಿಸಲು ಅಲ್ಲಿ ಅವಕಾಶ ಇರಲಿಲ್ಲ. ‘ಸೈಲೆನ್ಸ್ ಪ್ಲೀಸ್’ ಎಂಬ ಫಲಕ ನನ್ನನ್ನೇ ನೋಡುತ್ತಿತ್ತು!
ಅಂದೇ ಆ ಮೊಟ್ಟೆ ಕಲಾಕೃತಿಗಳ ಫೋಟೋ ತೆಗೆಯೋ ನಿರ್ಧಾರ ಮಾಡಿ ಮನೆಗೆ ಬಂದೆ. ಆದರೆ ಆ ಅವಕಾಶ ಸಿಗಲೇ ಇಲ್ಲ. ಬೇಡಬೇಡವೆಂದರೂ ಮಳೆರಾಯ ಕಾಟ ಕೊಟ್ಟ! ಬೆನ್ನಿಗೆ ಪ್ರವಾಹ ಬೇರೆ.. 15ದಿನದ ನಂತರ ಪರಿಸ್ಥಿತಿ ಸ್ವಲ್ಪ ತಿಳಿಯಾಯಿತು. ಪತಿದೇವರಿಗೆ ಹೇಳಿ, ಮನಸೆಳೆವ ಆ ಮೊಟ್ಟೆ ಕಲಾಕೃತಿಗಳ ಪೋಟೋ ತೆಗೆಸಿದ್ದಾಯಿತು. ಈ ಕಲೆಯನ್ನು ನೀವೆಲ್ಲ ನೋಡಲೆಂದು ದಟ್ಸ್‌ಕನ್ನಡಕ್ಕೆ ಕಳಿಸಿದೆ.ನೋಡಿ ಎಂಜಾಯ್ ಮಾಡಲು ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications