Get Updates
Get notified of breaking news, exclusive insights, and must-see stories!

ಅಮ್ಮನಿಗೊಂದು ಒಲವಿನ ಓಲೆ

ಚಿತ್ರಾ ಆನೇಕಾರ್‌

I love you Momಅಮ್ಮಾ ,
ಹೇಗಿದ್ದಿ?

ನನಗೆ ಗೊತ್ತು ಇದು ತುಂಬ ಕ್ಲೀಷೆಯ ಪ್ರಶ್ನೆ ಅಂತ.. ನಿನ್ನೊಳಗೆ ಆಗುವ ಎಲ್ಲ ತಳಮಳಗಳು ನನಗೆ ಯಾವ ಎಸ್‌ ಎಂ ಎಸ್‌ ಸಂದೇಶವಿಲ್ಲದಿದ್ದರೂ ತಿಳಿಯುತ್ತದೆ. ಆದ್ರು, ಪತ್ರಕ್ಕೊಂದು ಆರಂಭ ಬೇಕಲ್ಲ ?

ಇದು ನನ್ನ ಎಷ್ಟನೇ ಪತ್ರ ನೆನಪಿದೆಯಾ? ನಾನು ಮದುವೆಯಾಗಿ ಊರುಬಿಟ್ಟು ಹಾರಿ ಇನ್ನು ಒಂದು ವರ್ಷವೂ ಆಗಿಲ್ಲ . ಅಂದರೆ ಆರು ತಿಂಗಳೊಳಗೆ ಇದು ನನ್ನ ಎಂಟನೇ ಪತ್ರ! ಅಬ್ಬಬ್ಬಾ.. ನನಗೆ ನಂಬಲಿಕ್ಕೇ ಆಗಲ್ಲ. ಹೌದಮ್ಮ... ನನ್ನ ಇಲ್ಲಿನ ಜೀವನವೇ ಹಾಗೆ. ಎಲ್ಲಾ ಇದೆ, ಆದರೆ ಏನೂ ಇಲ್ಲ ಅನ್ನುವ ಭಾವನೆ. ಇಲ್ಲಿನ ಯಾಂತ್ರಿಕ ಬದುಕಿನಲ್ಲಿ ದೇಹದೊಂದಿಗೆ ಮನಸ್ಸು ಕೂಡ ಜಡವಾಗಿದೆ. ಇರುವುದೆಲ್ಲವ ಬಿಟ್ಟು ಇಲ್ಲದಿರುವುದರೆಡೆಗೆ...ಅಂತಾಗಿದೆ!!

ದಿನಕಳೆದಂತೆ ಇಲ್ಲಿನ ಪರಿಸರಕ್ಕೆ ಹೊಂದಿಕೊಂಡೇನು ಎಂದುಕೊಂಡಿದ್ದೆ, ಆದ್ರೆ ಇನ್ನೂ ನನ್ನ 'ಹೋಂ ಸಿಕ್‌" ಕಡಿಮೆಯಾಗ್ಲೇ ಇಲ್ಲ . ಅಂದು... ದೂರದ ಊರಿನ ಕಾಲೇಜಿಗೆ ಸೇರಿ, ಹಾಸ್ಟೆಲ್ನಲ್ಲಿ ಒಂದು ತಿಂಗಳಿರಲೂ ಆಗದೆ, ಅತ್ತು ರಂಪಮಾಡಿ, ಮತ್ತೆ ನಮ್ಮ ಊರಿನ ಕಾಲೇಜಿಗೆ ಸೇರಿದ್ದು... ಹಾಗೇ ಈಗ ಕೂಡ ಮಾಡಲೇ ಅಂತ ಅನ್ನಿಸಿ ನಗ್ತಾ ಇರ್ತೇನೆ... ಮದುವೆಗೆ ಮೊದಲು, ಅಮೆರಿಕಾದಲ್ಲಿರುವ ಹುಡುಗ ಬೇಡ ಅಂತ ನಿಮ್ಮೆಲ್ಲರಲ್ಲಿ ಎಷ್ಟು ಬಾರಿ ಹೇಳಿದ್ದೆ. ಏನೋ ಒಂದೆರಡು ವರ್ಷ ಅಂತ ಹೇಳಿ ಒಪ್ಪಿಕೊಳ್ಳಬಾರದಿತ್ತೇನೋ ಅಂತ ಈಗ ಅನ್ನಿಸ್ತಾ ಇದೆ. ದಿನಾ ಫೋನಿನಲ್ಲಿ ಮಾತಾಡಿದ್ರೂ ನನಗೆ ತೃಪ್ತಿಯೇ ಆಗಲ್ಲ . ಈ ಫೋನೋ... ಥೂ... ಸರಿಯಾಗಿ ಮಾತನಾಡಲೂ ಆಗಲ್ಲ . ಹೇ, ಅಮ್ಮ... ಮೊನ್ನೆ ಮಾತಾಡುವಾಗ ನಿನ್ನ ಸ್ವರ ನಡುಗ್ತಾಯಿತ್ತಲ್ಲ . ನಿನ್ನ ಗಂಟಲುಬ್ಬಿ ಬಂದಿತ್ತಲ್ಲ... ನಿಜಾ ಹೇಳ್ಲಾ... ನನಗೂ ಹಾಗೇ ಆಗಿತ್ತು !

ತಮಾಷೆ ಗೊತ್ತ.... ನನಗೊಬ್ಬಳು ಫ್ರೆಂಡ್‌ ಇದ್ದಾಳೆ ಇಲ್ಲಿ . ಆಕೆ ಬಳಿ ಮಾತಾಡುವಾಗಲೆಲ್ಲಾ ನಾನು ನಿನ್ನ ಬಗ್ಗೆ ಹೇಳ್ತಾನೇ ಇರ್ತೇನೆ. ನಿನ್ನನ್ನು ಪ್ರಸ್ತಾಪಿಸಿದಾಗ್ಲೆಲ್ಲ ಅವಳು ಕಣ್ಣು- ಬಾಯಿ ಬಿಟ್ಟು ನೋಡ್ತಾಳೆ... ಪಾಪ ಅವಳಿಗೆ ಅವಳ ಅಮ್ಮ ಯಾರೆಂದೇ ಗೊತ್ತಿಲ್ಲ.... ಅವಳು ಸಣ್ಣವಳಿದ್ದಾಗಲೇ ಅಮ್ಮ- ಅಪ್ಪ ಬೇರೆಯಾಗಿದ್ದಾರೆ... ಇವಳು ಒಬ್ಬಳೇ ಬೆಳೆದಿದ್ದಾಳೆ.... ಭಾರಿ ದಿಟ್ಟ ಹುಡುಗಿ. ಆದ್ರೆ ಏನು... ಭಾವನೆ ಎಂದರೆ ಏನೆಂದೇ ಗೊತ್ತಿಲ್ಲಾ... ಅಪ್ಪ, ಅಮ್ಮ, ಒಡಹುಟ್ಟಿದವರ ಪ್ರೀತಿಯ ಗಂಧಗಾಳಿಯೂ ಅವಳಿಗಿಲ್ಲ ! ಒಂಥರಾ ಅನಾಥೆ ಅಂತೀಯ.... ಹುಂ, ಇಲ್ಲಿ ಇಂಥ ಫೋರ್ಸ್ಡ್‌ ಅನಾಥೆಯರು ತುಂಬ ಇದ್ದಾರೆ.....

ಮೊನ್ನೆ ಏನಾಯ್ತು ಗೊತ್ತ ? ನಾನಿರುವ ಜಾಗದಲ್ಲಿ ಭಾರಿ ಮಳೆ. ಮಣ್ಣಿನ ವಾಸನೆ ಸವಿಯೋಣ ಅಂತ ಹೊರಗೆ ಹೋದೆ.... ಹಾಳು ಮಣ್ಣು... ಇಲ್ಲಿ ಎಲ್ಲಿದೆ ಮಣ್ಣು ? ಎಲ್ಲ ಕಾಂಕ್ರಿಟ್‌ ಮಯ... ಒಳ ಹೋದೆ.. ಹಪ್ಪಳ ತಿನ್ನುವ ಮನಸ್ಸಾಯಿತು.... ನೀನು ಕೊಟ್ಟ ಹಪ್ಪಳದ ಕಟ್ಟು ಬಿಚ್ಚಿದೆ, ಸುಟ್ಟು ತಿನ್ನುವ ಅಂದ್ರೆ, ಕೆಂಡವೂ ಇಲ್ಲ. ಹಪ್ಪಳ ಎಂದರೆ ಏನೆಂದೇ ಈ ಲೋಕಕ್ಕೆ ಗೊತ್ತಿಲ್ಲ.... ಕೆಂಡದಲ್ಲಿ ಸುಟ್ಟ ರುಚಿ, ಪರಿಮಳ ಓವನ್‌ನಲ್ಲಿಟ್ಟರೆ ಹೇಗೆ ಬರ್ಬೇಕು... ಅಮ್ಮ... ಆಗ ನಿನ್ನದೆ ನೆನಪಾಯಿತು...........

ಈಗ ಊರಲ್ಲಿ ಮಾವಿನ ಹಣ್ಣಿನ ಸುಗ್ಗಿ ಅಲ್ವಾ? ಮಳೆಗಾಲ ಬೇರೆ..ಛೇ, ನಾನೀಗ ಅಲ್ಲಿರಬೇಕಿತ್ತು. ಜಿಟಿಪಿಟಿ ಮಳೆಯಲ್ಲೇ, ತೋಟ ಗುಡ್ಡ ಸುತ್ತಿ, ಬುಟ್ಟಿ ತುಂಬಾ ಮಾವಿನಹಣ್ಣು ತರುವುದರಲ್ಲಿನ ಮಜಾ... ದಿನಾ ಮಾವಿನ ಹಣ್ಣಿನ ಗೊಜ್ಜು, ರಸಾಯನ, ಮಾಂಬುಳದ ಗೌಜಿ... ಹಣ್ಣು ತಿಂದು, ಯಾರದ್ದಾದರೂ ಹೆಸರು ಹಿಡಿದು ಕೂಗಿ, 'ಓ" ಹೇಳಿದಾಗ, 'ಮಾವಿನ ಗೊರಟಿನ ಜತೆ ಹೋಗು" ಎಂದು ಛೇಡಿಸುವ ಆಟ... ಗೊತ್ತಿದ್ದೋ, ಗೊತ್ತಿಲ್ದೆಯೋ, ನೀನು ಪ್ರತಿ ಬಾರಿಯೂ ಓಗೊಡುತ್ತಾನೇ ಇದ್ದಿ ಅಲ್ವಾ! ಕೇಳಿದ್ರೆ, ಮಕ್ಕಳ ಮುಂದೆ ಸೋಲುವುದೇ ಚಂದ ಅಂತ ಹೇಳ್ತಾ ಇದ್ದಿ!! ನಿಜಕ್ಕೂ ನೀನು ಗ್ರೇಟ್‌ ಅಮ್ಮ... ಈಗ ನಿನ್ನನ್ನು ಸೋಲಿಸ್ಲಿಕ್ಕೆ ನಾನಿಲ್ವಲ್ಲ ಅಲ್ಲಿ. ನಿನಗೂ ನನ್ನ ತುಂಬ ನೆನಪಾಗ್ತಿದ್ಯಾ?

I love you Momಈ ಹುಡುಗಿಯರ ಜೀವನವೇ ಹೀಗೆ. ನನ್ನ ಮೇಲೆ ನನಗೇ ಕೋಪ ಬರ್ತದೆ. ನಿಜಕ್ಕೂ ಹುಡುಗಿಯಾಗಿ ಹುಟ್ಟಬಾರದಿತ್ತು ಅಂತ ಅನ್ನಿಸ್ತದೆ. ಅಪ್ಪ , ಅಮ್ಮ, ಅಣ್ಣ, ಹುಟ್ಟಿ ಬೆಳೆದ ಮನೆ, ಪರಿಸರ ಎಲ್ಲಾ ಬಿಟ್ಟು ಹೋಗುವ ಕಷ್ಟ ಯಾಕೆ ಬೇಕು ಹೇಳು. ಆ ದಿನ.. ವಿಮಾನ ನಿಲ್ದಾಣದಲ್ಲಿ ನಮ್ಮನ್ನು ಬೀಳ್ಕೊಡುವಾಗ ನೀನು ಮಕ್ಕಳ ಹಾಗೆ ಅತ್ತದ್ದು ನಾನೆಂದಿಗೂ ಮರೆಯಲಾರೆ. ನೀನು ಹೇಳಿದ ಅಕ್ಕರೆಯ ಎಚ್ಚರವನ್ನೂ ಕೂಡ. ನಿನ್ನ ಮನಸ್ಸಿನ ಕಳವಳ ನನಗಿಂದು ಅರ್ಥವಾಗಿದೆ. ಅಮ್ಮನ ಪ್ರೀತಿಗೆ ಸರಿಸಾಟಿಯಾದದ್ದು ಯಾವುದೂ ಇಲ್ಲ , ಖಂಡಿತ ಇಲ್ಲ. ನನಗೆ ನೆನಪಿರುವಷ್ಟು ಹಿಂದಕ್ಕೆ ಹೋದರೆ... ಅಲ್ಲಿ ನೀನಿಲ್ಲದ ಒಂದು ನೆನಪೂ ಇಲ್ಲ . ಎಲ್ಲದರಲ್ಲಿಯೂ ನೀನಿದ್ದಿ. ನೋವು, ನಲಿವು, ಜಗಳ, ಮುನಿಸು, ಆಟ, ಪಾಠ... ಎಲ್ಲದರಲ್ಲೂ... ನಿಜಕ್ಕೂ ನೀನು ಒಳ್ಳೆಯ ಸ್ನೇಹಿತೆಯಾಗಿದ್ದೆ. ನಾನಲ್ಲಿದ್ದಾಗ ನಿನ್ನೆಲ್ಲಾ ನೋವುಗಳನ್ನು, ಸಂತೋಷಗಳನ್ನು ನನ್ನಲ್ಲಿ ಹಂಚಿಕೊಳ್ಳುತ್ತಿದ್ದೆ. ಈಗೇನು ಮಾಡ್ತಿ ? ಪತ್ರದಲ್ಲಿ ಎಷ್ಟು ಬರೆದ್ರೂ ಎದುರಿಗೆ ಕುಳಿತು ಹೇಳಿದ ಹಾಗೆ ಆಗಲ್ಲ , ಅಲ್ವಾ?

ನಾನಿಲ್ಲದ ಬೇಸರ ಕಳೆಯಲು ನೀವು ಒಂದು ನಾಯಿಮರಿ ತಂದ ಬಗ್ಗೆ ಕಳೆದ ಪತ್ರದಲ್ಲಿ ಬರೆದಿದ್ದಿಯಲ್ಲಾ , ಅದನ್ನು ಓದಿ 'ಇವರು" ನನ್ನನ್ನು ತಮಾಷೆ ಮಾಡಿದ್ದೇ ಮಾಡಿದ್ದು ! ಹೇ ಬಿಡಮ್ಮ, ನಿನ್ನ ಕಷ್ಟ ನನಗೆ ಆರ್ಥ ಆಗತ್ತೆ. ಈ ಹುಡುಗರಿಗೆ ಅದೆಲ್ಲಾ ಈ ಜನ್ಮದಲ್ಲಿ ಅರ್ಥ ಆಗ್ಲಿಕ್ಕಿಲ್ಲ.

ಅಮ್ಮಾ, ನನಗಂತೂ ನಿನ್ನ ಕೈ ಅಡುಗೆ ತಿನ್ನದೆ ಬಾಯಿ ಎಲ್ಲ 'ಹಳಸಿ" ಹೋಗಿದೆ. ನನ್ನ ಫೇವರೆಟ್‌ ಪತ್ರೊಡೆ, ಹಲಸಿನ ಹಣ್ಣು ಕಡುಬು, ನೀರು ದೋಸೆ, ಒತ್ತು ಶ್ಯಾವಿಗೆ... ಇಲ್ಲಿ ಎಲ್ಲಿ ಸಿಗಬೇಕು ಹೇಳು. ಒಲೆ ಮುಂದೆ ಕುಳಿತು ನೀನು ಕಾಸುವ ಅಕ್ಕಿ ರೊಟ್ಟಿ... ನಾನು ಅಲ್ಲೇ ತಟ್ಟೆ ಹಿಡಿದು ಕುಳಿತುಕೊಳ್ಳುತ್ತಿದ್ದೆ... ಒಲೆಯಿಂದಲೇ ರೊಟ್ಟಿ ನನ್ನ ತಟ್ಟೆಗೆ, (ಒಂದೊಂದು ಸಲ ಅದ್ರಲ್ಲಿ ಕೆಂಡವೂ ಅಂಟಿಕೊಂಡಿರ್ತಿತ್ತು!) ಅದರ ಮೇಲೆ ಫ್ರೆಶ್‌ ಬೆಣ್ಣೆ... ಹುಂ... ರುಚಿಯೋ ರುಚಿ. ಇನ್ನದನ್ನೆಲ್ಲ ನಾನು ಕಾಣುವುದು ಯಾವಾಗಲೋ.. ಏನೋ... ಇಲ್ಲಿ ರೊಟ್ಟಿ ಮಾಡುವಾ ಅಂದ್ರೆ, ಒಲೆನೂ ಇಲ್ಲ... ಅದ್ಕಿಂತ ಮುಖ್ಯವಾಗಿ ಮಾಡಲು ನನಗೆ ಬಂದ್ರೆ ತಾನೆ!!

ಅದೆಲ್ಲಾ ಇರ್ಲಿ... ನೀನು ಹೇಗಿದ್ದಿ ಈಗ ? ಮೊದ್ಲಿನ ಹಾಗೇ ಇಡೀ ದಿನ ಕೆಲಸ ಕೆಲಸ ಅಂತಾ ಇರ್ತೀಯಾ, ಅಲ್ಲ ನಿನ್ನ ಆರೋಗ್ಯದ ಬಗ್ಗೆ ಯೋಚಿಸ್ಲಿಕ್ಕೆ ಶುರು ಮಾಡಿದ್ದೀಯಾ? ನನಗೆ ಗೊತ್ತು , ಕೆಲಸ ಇಲ್ಲದಿದ್ರೂ ಹುಡುಕಿ ಕೆಲಸ ಮಾಡ್ತಿ ನೀನು. ಭಾರೀ ಹಠಮಾರಿಯಮ್ಮ ನೀನು. ನಿನ್ನ ಗಾರ್ಡನಿಂಗ್‌ ಹೇಗಿದೆ ? ನೀರು ಹಾಕುವುದು, ಕಸ ತೆಗೆಯುವುದು ಎಲ್ಲಾ ನೀನೊಬ್ಳೇ ಮಾಡ್ತೀಯಾ ಹೇಗೆ ? ಅಪ್ಪನಿಗೂ ಕೆಲಸ ಹೇಳು. ನಾನು ಹೇಳಿದೆ ಅನ್ನು, ಅವರೂ ಮಾಡೇ ಮಾಡ್ತಾರೆ!

ನಾವಿಲ್ಲಿ ಪ್ರತಿ ದಿನ ವಾಕಿಂಗ್‌ ಹೋಗ್ತೇವೆ. ಆಗಲೂ ನಿನ್ನ ನೆನಪೇ...ಊರಲ್ಲಿ ನಾವಿಬ್ರೂ ವಾಕಿಂಗ್‌ ಅಂತ ಒಂದಷ್ಟು ದೂರ ಹೋಗ್ತಾಯಿದ್ವಲ್ಲ , ನಮ್ಮ ಹಿಂದೆ ನಾಯಿ, ಬೆಕ್ಕು ಬರ್ತಿದ್ವಲ್ಲ ! ಎಂತಾ ಮಜ ಇತ್ತು... ಇಲ್ಲಿ ವಾಕಿಂಗ್‌ ಅಂದ್ರೆ ನನಗೆ ಬರೀ ಕಿರಿಕಿರಿ... ಯಾಕೆ ಗೊತ್ತಾ, ಚಳಿ ಗಾಳಿ ಅಲ್ವಾ... ಹಾಗಾಗಿ ಜಾಕೆಟ್‌, ಸ್ವೆಟರ್‌, ಸಾಕ್ಸ್‌, ಶೂ... ಎಲ್ಲಾ ಕಟ್ಟಿಕೊಂಡೇ, ಫುಲ್‌ ಪ್ಯಾಕ್‌ ಆಗಿಯೇ ಹೊಗಬೇಕು! ಥೂ.. ಯಾರಿಗೆ ಬೇಕು ಈ ಕಷ್ಟ... ಏನೇ ಹೇಳು, ನಮ್ಮ ಹಳ್ಳಿಯೇ ಚಂದ...

ಈ ಬಾರಿ ಮಾವಿನಕಾಯಿ ಒಳ್ಳೆ ಫಸಲಂತೆ! ನನಗೆ ಅಂತ ಎಷ್ಟು ಭರಣಿ ಉಪ್ಪಿನಕಾಯಿ ಹಾಕಿಟ್ಟಿದ್ದಿ ? ನಾವು ಬರುವಾಗ ನೀನು ಕೊಟ್ಟ ಮಾವಿನಕಾಯಿ ಉಪ್ಪಿನಕಾಯಿ, ಹಲಸಿನ ಹಪ್ಪಳ, ಸಂಡಿಗೆ... ಎಲ್ಲವನ್ನೂ ಬಹಳ ಜಾಗರೂಕತೆಯಿಂದ ಉಪಯೋಗಿಸ್ತಾ ಇದ್ದೇನೆ. ಇವರು 'ಕಂಜೂಸ್‌" ಅಂತ ರೇಗಿಸ್ತಾ ಇರ್ತಾರೆ! ಏನೇ ಹೇಳಲಿ... ನಾನು ಕ್ಯಾರೇ ಮಾಡಲ್ಲ... ಯಾಕೆ ಗೊತ್ತಾ , ಈಗಾಗ್ಲೇ ಎಲ್ಲಾ ಅರ್ಧ ಪಾಲು ಖಾಲಿಯಾಗಿದೆ... ಊರಿಗೆ ಇನ್ನು ಯಾವಾಗ ಬರ್ತೇವೋ ಗೊತ್ತಿಲ್ಲ . ಹಾಗಾಗಿ ಬರುವ ತನಕ ಇವುಗಳು ಮಾತ್ರ ನನ್ನ ಜತೆ ನಿನ್ನ ನೆನಪಾಗಿವೆ.... ನಿನ್ನನ್ನು ನೋಡುವವರೆಗೆ... ಪತ್ರವೊಂದೇ ನನ್ನ ನಿನ್ನ ಬೆಸುಗೆ..... ಇನ್ನೊಂದು ಪತ್ರದ ತನಕ... ಬರಲಾ!

- ಚಿತ್ರಾ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+