ನ್ಯೂಜೆರ್ಸಿಯಲ್ಲಿ ವೈಲ್ಡ್ ಸಫಾರಿ ಮಜಾ
ನ್ಯೂಜೆರ್ಸಿಯಲ್ಲಿ ವೈಲ್ಡ್ ಸಫಾರಿ ಮಜಾ
ಜಗತ್ತಿನ ಎರಡನೇ ಅತೀ ದೊಡ್ಡ ಸಫಾರಿ ಎಂಬ ಖ್ಯಾತಿಯ ಸಿಕ್ಸ್ ಫ್ಲಾಗ್ಸ್‌ಗೆ ಭೇಟಿ ನೀಡಿದ ಅನುಭವ ಬರಹ. ಪ್ರಾಣಿಗಳ ಲೋಕಕ್ಕೆ ಸ್ವಾಗತವು.
- ಸುನಿತ ಜಗದೀಶ, ನ್ಯೂ ಜೆರ್ಸಿ
[email protected]
ಸಿಕ್ಸ್ ಫ್ಲಾಗ್ಸ್ ಸಫಾರಿ ಪ್ರಪಂಚದ ಎರಡನೇ ದೊಡ್ಡ ಸಫಾರಿ. ಮೊದಲನೆಯ ದೊಡ್ಡ ಸಫಾರಿ ದಕ್ಷಿಣ ಆಫ್ರಿಕದಲ್ಲಿದೆ. ಇಲ್ಲಿ ವಿವಿಧ ಜಾತಿಯ ಜಿಂಕೆಗಳು, ಆನೆ, ಜಿರಾಫೆ, ಸಿಂಹ, ಹುಲಿ, ಲಾಮಾ, ಘೕಂಡಾಮೃಗ, ಮಂಗ, ಕರಡಿ, ಜೀಬ್ರಾ, ಒಂಟೆ, ವೈಲ್ಡ್ ಟರ್ಕಿ, ನವಿಲು, ಬಾತುಕೋಳಿ ಇನ್ನೂ ಅನೇಕ ಪ್ರಾಣಿ, ಪಕ್ಷಿಗಳಿವೆ.
ಆನೆ, ಹುಲಿ, ಸಿಂಹವನ್ನು ಬಿಟ್ಟು ಉಳಿದ ಎಲ್ಲಾ ಪ್ರಾಣಿ, ಪಕ್ಷಿಗಳು ಇಲ್ಲಿ ಸ್ವತಂತ್ರ. ವಿಶಾಲ ಜಾಗದಲ್ಲಿ ಓಡಾಟ. ಎಷ್ಟೊಂದು ಜಾತಿಯ ಜಿಂಕೆಗಳಿವೆ ಅಂತೀರಾ? ಒಂದು ಹಿಂಡು ಜಿಂಕೆಯ ಕೋಡುಗಳು ವಿಭಿನ್ನವಾಗಿದ್ದರೆ ಇನ್ನೊಂದು ಹಿಂಡಿನ ಜಿಂಕೆಗಳ ಬಾಲಗಳನ್ನ ನೋಡುವುದೇ ಚೆಂದ. ಮತ್ತೊಂದು ಹಿಂಡಿನತ್ತ ಕಣ್ಣು ಹಾಯಿಸಿದರೆ ಅವುಗಳ ಚರ್ಮದ ಬಣ್ಣವೇ ಸುಂದರ.
ಕೆಲವು ಜಿಂಕೆಗಳ ಮೇಲೆ ಬಿಳಿ ಗೆರೆಗಳು! ಆ ಗೆರೆಗಳ ಎಣಿಸುವುದೊಂದು ಮಜಾ. ನಾ ಎಣಿಸಿದ ಜಿಂಕೆಯ ಮೇಲೆ ಏಳು ಗೆರೆಗಳಿದ್ದವು. ಕಂದು ಚರ್ಮದ ಮೇಲೆ ಈ ಗೆರೆಗಳು ಎದ್ದು ಕಾಣುತ್ತಿದ್ದವು. ನಮ್ಮ ದೇಶದ ಅಳಿಲಿಗೆ ರಾಮ ಗೆರೆ ಎಳೆದಂತೆ, ಇವಕ್ಕೂ ಗೆರೆ ಎಳೆದಿರಬಹುದೇ ಎಂಬ ಸಂಶಯವೂ ಬಂತು.
ಸಫಾರಿ ವಾಹನಕ್ಕೆ ಘೕರಾವ್ !
ಜಿರಾಫೆ, ಟರ್ಕಿಗಳು ನಮ್ಮ ಸಫಾರಿ ಕಾರುಗಳನ್ನು ಅಡ್ಡಗಟ್ಟಿ ನಿಲ್ಲಿಸುತ್ತಿದ್ದವು. ಪ್ರಾಣಿಗಳಿಗೆ ಏನನ್ನೂ ತಿನ್ನಿಸಬೇಡಿ ಎನ್ನುವ ಫಲಕ ಎಲ್ಲಾ ಕಡೆ ಇದೆ. ಆದ್ರೂ ಈ ಜಿರಾಫೆಗಳ ಕತ್ತು ಉದ್ದ ಮಾಡಿಕೊಂಡು ಕಾರಿಗಡ್ಡ ಬಂದರೆ ಏನಾದರೂ ಕೊಡಬೇಕನಿಸುತ್ತದೆ. ಅವಕ್ಕೂ ಪ್ರೇಕ್ಷಕರು ಪ್ರೀತಿಯಿಂದ ಕೊಟ್ಟದ್ದನ್ನು ತಿಂದು ಅಭ್ಯಾಸವಾಗಿಬಿಟ್ಟಿವೆ. ಕಾರು ಕಿಟಕಿಯನ್ನ ಒಂಚೂರು ತರೆದಿದ್ದರೆ ಬಂದು ಬಾಯಿ ತೂರಿಸಿಬಿಡುತ್ತವೆ.
ಈ ಜಿರಾಫೆಗಳು ಕಾರಿಗಡ್ಡ ಬಂದು ನಿಲ್ಲುವುದು ನೋಡಿದರೆ ಬೆಂಗಳೂರಿನ ಟ್ರಾಫಿಕ್ ಪೊಲೀಸರು ನೆನಪಾಗುತ್ತಾರೆ. ವಾಹನ ಓಡಿಸಿದಾಗ ಪೋಲಿಸರು ಬಂದು ಅಡ್ಡಗಟ್ಟಿ ಲಂಚ ಕೇಳುವ ಹಾಗೆ ಜಿರಾಫೆಗಳು ಸಫಾರಿ ವಾಹನ ನಿಲ್ಲಿಸಿ ತಿಂಡಿ ಕೇಳುತ್ತವೆ. ಈ ದೃಶ್ಯ ನೋಡಲು ರಮಣೀಯ.
ಆನೆ, ಸಿಂಹ, ಹುಲಿಗಳಂತಹ ಘಟಾಣಿ ಪ್ರಾಣಿಗಳಿಗೆ ಬೇಲಿಗಳಿವೆ. ದುಷ್ಟ ಪ್ರಾಣಿಗಳ ಪಟ್ಟಿಗೆ ಸೇರುವ ಇವುಗಳಿಗೆ ಸ್ವಾತಂತ್ರ್ಯ ಇಲ್ಲ. ಕೆಲವು ಆನೆಗಳ ಚರ್ಮ ಬಹಳ ಸುಕ್ಕಾಗಿದ್ದವು. ಅವು ವಯಸ್ಸಾದ ಆನೆಗಳೆಂದು ನಾನು, ನನ್ನ ಗೆಳತಿ ಮಾತಾಡಿಕೊಂಡೆವು. ಒಂದೆರಡು ಆನೆಗಳಿಗೆ ದಂತಗಳಿದ್ದವು. ದಂತ ನೋಡಿದ್ದೇ ತಡ ಯಾರು ನೆನಪಿಗೆ ಬಂದ್ರು ಅಂತ ನಿಮಗೂ ತಿಳಿಯಿತಲ್ವೇ? ವೀರಪ್ಪನ್ ! ಸದ್ಯ ಈ ಆನೆಗಳಿಗೆ ಆತನ ಭಯವಿಲ್ಲ. ಹಾಯಾಗಿ ಮೇಯುತ್ತಿದ್ದವು.
ಇನ್ನೂ ವನರಾಜ ಎಂದೇ ಹೆಸರಾದ ಸಿಂಹಗಳು ಗಡದ್ದಾಗಿ ನಿದ್ದೆಮಾಡುತ್ತಿದ್ದವು. ಎರಡು ಗಂಡು ಸಿಂಹಗಳು, ಆರೇಳು ಹೆಣ್ಣು ಸಿಂಹಗಳಿದ್ದವು. ನಾನು ಮೂರನೇ ತರಗತಿಯಲ್ಲಿ ಓದಿದ್ದು ನೆನಪಿಗೆ ತಂದುಕೊಂಡು ಯಾವುದು ಗಂಡು ಯಾವುದು ಹೆಣ್ಣು ಅಂತ ಗುರುತಿಸಿಬಿಟ್ಟೆ. ‘ಗಂಡು ಸಿಂಹಕ್ಕೆ ಮುಖದಲ್ಲಿ ಕೂದಲಿರುತ್ತದೆ. ಅವಕ್ಕೆ ಕೇಸರಿ ಎನ್ನುತ್ತಾರೆ. ಹೆಣ್ಣು ಸಿಂಹಕ್ಕೆ ಕೇಸರವಿರುವುದಿಲ್ಲ’.. ನಿಮಗೂ ನೆನಪಿದೆಯಾ ?
ಹಾಗೇ ಮುಂದೆ ಹೋಗುತ್ತಿದ್ದಂತೆ ನಮ್ಮ ಬಂಗಾಳ ಮಹಾರಾಜ ಕಂಡ. ಏನಂದುಕೊಂಡ್ರಿ? ಹುಲಿ ರೀ... ನಮ್ಮ ದೇಶದ ಹುಲಿ ‘ಬಂಗಾಳ್ ಟೈಗರ್’ ಕಣ್ಣಿಗೆ ಬಿತ್ತು. ನೆನಪಿದ್ಯಾ, ಧರಣಿ ಮಂಡಲ ಮಧ್ಯದೊಳಗೆ ಹಾಡು... !
ಎರಡು ಹುಲಿಗಳು ಸುಮ್ಮನೆ ಮಲಗಿದ್ದವು. ಇನ್ನೆರಡು ಹುಲಿಗಳು ಬೇಟೆಗೋಸ್ಕರವೇನೋ ಅತ್ತ ಇತ್ತ ಸುತ್ತಾಡುತ್ತಿದ್ದವು. ಎರಡು ಬಿಳಿ ಹುಲಿಗಳು. ಚೆನ್ನಾಗಿ ತಿಂದುಂಡು ದಷ್ಟಪುಷ್ಟವಾಗಿ ಕಾಣುತ್ತಿದ್ದವು.
ಮುಂದೆ ಕಪ್ಪು, ಕಂದು ಬಣ್ಣದ ಕರಡಿಗಳು ಕಾರನ್ನು ಘೕರಾವ್ ಮಾಡುತ್ತಿದ್ದವು. ಒಂದು ಕರಡಿಯಂತೂ ನಮ್ಮ ಮುಂದಿನ ಕಾರಿನ ಟೈರ್ ಚೆಕ್ ಮಾಡುತ್ತಿದ್ದಂತೆ ಕಂಡಿತು. ಪಕ್ಕದಲ್ಲೇ ನೀರ ಕೊಳ. ನೀರ ಬಳಿ ಕರಡಿಗಳು ಗುದ್ದಾಡುವ, ಚಿನ್ನಾಟವಾಡುತ್ತಿರುವ ದೃಶ್ಯ ಬಲು ಸೊಗಸಾಗಿತ್ತು. ಲಾಮಾಗಳು ಕಿವಿಕೇಳದ ಕಿವುಡರ ಹಾಗೆ ಅಡ್ಡಾಡುತ್ತಿದ್ದವು. ಕಾಂಗರುಗಳ ಗ್ಯಾಂಗ್ ನೆರೆದಿತ್ತು. ಚಂಗನೆ ಹಾರಿ ಹಾರಿ ಓಡುವ ಕಾಂಗರುಗಳು. ನಿದ್ದೆ ಹೋದ ಕಾಂಗರೋ, ರೊಮ್ಯಾನ್ಸ್ ಮೂಡಿನಲ್ಲಿರುವವು, ಚಿಂತನೆಗೆ ಕುಳಿತವು... ಹೀಗೆ.
ಪಕ್ಷಿಗಳ ಲೋಕದಲ್ಲಿ ಬಾತುಕೋಳಿ, ಹಂಸ, ಕೆನಡ ಗೀಸ್, ಎಂದೂ ನೋಡಿರದ ತಲೆ ಮೇಲೆ ಜುಟ್ಟು ಇಟ್ಟಿಕೊಂಡಿರುವ ಆಂಗ್ರಿ ಬರ್ಡ್ ನೋಡಿದೆವು. ಒಟ್ಟಿನಲ್ಲಿ ಸಮಯ ಹೋಗಿದ್ದೆ ಗೊತ್ತಾಗಲಿಲ್ಲ. ಸಫಾರಿಯೆಲ್ಲ ಮುಗಿದು ಎಗ್ಸಿಟ್ ಬಂದ್ರೂ ಯಾರಿಗೂ ಹೊರ ಬರಲೂ ಮನಸಿರಲಿಲ್ಲ. ಒಲ್ಲದ ಮನಸ್ಸಿಂದ ಹೊರಬಂದೆವು. ಆ ದಿನವೊಂದು ಮರೆಯಲಾಗದ ಸುಮಧುರ ಅನುಭವ ತಂದಿತ್ತು.
ಸೋ, ನೀವುಗಳು ನ್ಯೂಜೆರ್ಸಿಗೆ ಬಂದ್ರೆ ಆ ವೈಲ್ಡ್ ಸಫಾರಿಗೆ ತಪ್ಪದೆ ನೋಡ್ತೀರಲ್ಲ !












Click it and Unblock the Notifications