ಭೂಮಿಯ ಚಂದಿರ ಒಂಟಿಯಲ್ಲ; ಆತನಿಗೆ ಇನ್ನೂ ಇಬ್ಬರು ಜತೆಗಾರರಿದ್ದಾರೆ!
ವಾಷಿಂಗ್ಟನ್, ನವೆಂಬರ್ 8: ಚಂದ್ರ ಒಬ್ಬನೇ ಅಲ್ಲ, ಭೂಮಿಗೆ ಇನ್ನೂ ಎರಡು ಚಂದ್ರಮಗಳಿದ್ದಾರೆ ಎಂಬ ಅನುಮಾನ ಈಗ ಖಚಿತವಾಗಿದೆ.
ಕತ್ತಲಲ್ಲಿ ಬೆಳಗುವ ಚಂದ್ರನಿಗೆ ಇನ್ನೂ ಕನಿಷ್ಠ ಇಬ್ಬರು ಸಂಗಾತಿಗಳಿದ್ದಾರೆ. ಅವರನ್ನು ದೂಳಿನ ಕಣಗಳು ಸಂಪೂರ್ಣವಾಗಿ ಆವರಿಸಿವೆ ಎಂಬುದನ್ನು ಹಂಗೇರಿಯಾದ ಖಗೋಳ ವಿಜ್ಞಾನಿಗಳು ಮತ್ತು ಭೌತಶಾಸ್ತ್ರಜ್ಞರು ದೃಢಪಡಿಸಿದ್ದಾರೆ.
ಭೂಮಿಗೆ ಎರಡು ಡಸ್ಟ್ ಮೂನ್‌ಗಳು (ದೂಳಿನ ಚಂದ್ರಗಳು) ಇವೆ ಎಂದು ಸಂಶೋಧಕರು ಹೇಳಿದ್ದಾರೆ. ಅವರ ಅಧ್ಯಯನಗಳು ನಮ್ಮ ಗ್ರಹದ ಸುತ್ತ ಖಗೋಳ ಮೋಡಗಳು ಸುತ್ತುತ್ತಿರುವುದನ್ನು ಈ ಸಂಶೋಧನೆ ಖಚಿತಪಡಿಸಿದೆ.

ಭೂಮಿಯಿಂದ ಈ ಚಂದ್ರಗಳು 400,000 ಕಿ.ಮೀ. ದೂರದಲ್ಲಿವೆ ಎಂದು ಹಂಗೇರಿಯಾದ ವಿಜ್ಞಾನಿಗಳು ಹೇಳಿದ್ದಾರೆ. ಇವುಗಳ ಅಸ್ತಿತ್ವದ ಬಗ್ಗೆ ಈ ಹಿಂದೆ ಅನುಮಾನ ವ್ಯಕ್ತಪಡಿಸಿದ್ದ ವಿಜ್ಞಾನಿಗಳು, ಈಗ ಅತೀವ ಸಂತಸಗೊಂಡಿದ್ದಾರೆ.
ಪೊಲ್ಯಾಂಡ್‌ನ ಖಗೋಳ ವಿಜ್ಞಾನಿ ಕಾಜಿಮೀರ್ಜ್ ಕೊರ್ಡಿಲೆವಸ್ಕಿ 1961ರಲ್ಲಿ ಈ ಮೋಡಗಳ ಕುರಿತು ಮೊದಲ ಬಾರಿಗೆ ತಿಳಿಸಿದ್ದರು.
ಭೂಮಿ-ಚಂದ್ರ ವ್ಯವಸ್ಥೆಯಲ್ಲಿನ ಎರಡು ಅಂಶಗಳ ಕುರಿತು ಸಂಶೋಧನೆ ನಡೆಸುವ ಸಂದರ್ಭದಲ್ಲಿ ಎರಡು ಗುರುತ್ವಾಕರ್ಷಕ ಶಕ್ತಿಗಳು ವಸ್ತುಗಳ ಸ್ಥಾನವನ್ನು ಸ್ಥಿರಗೊಳಿಸುವ ಚಟುವಟಿಕೆ ನಡೆಸುತ್ತಿರುವುದನ್ನು ಕಂಡುಕೊಂಡಿದ್ದರು. ಅದನ್ನು ಲಾಗ್ರೇಂಜ್ ಪಾಯಿಂಟ್ ಎಂದು ಕರೆಯಲಾಗಿತ್ತು.
ಇತ್ತೀಚಿನ ಅಧ್ಯಯನದ ವೇಳೆ ಕ್ಯಾಮೆರಾಗಳು ಮೋಡದೊಳಗಿನ ದೂಳಿನ ಕಣಗಳ ನಡುವೆ ಚೆದುರಿದ ಬೆಳಕಿನ ಪ್ರತಿಫಲನಗಳನ್ನು ಪತ್ತೆಹಚ್ಚಿವೆ. ಹೀಗಾಗಿ ಭೂಮಿಯ ಸುತ್ತಲೂ ಸುತ್ತುವ ಇನ್ನೂ ಎರಡು ಚಂದ್ರಗಳು ಅಸ್ತಿತ್ವದಲ್ಲಿ ಇರುವುದು ದೃಢಪಟ್ಟಿದೆ.












Click it and Unblock the Notifications