ಟ್ರಂಪ್ v/s ಮಾಸ್ಕ್: ವರ್ಷಪೂರ್ತಿ ನಡೆದಿತ್ತು ‘ಮಾಸ್ಕ್ ಮಹಾಯುದ್ಧ’
2020 ಜಗತ್ತಿನ ಪಾಲಿಗೆ ಮಾತ್ರವಲ್ಲ ಅಮೆರಿಕದ ಪಾಲಿಗೂ ಶತಮಾನದಲ್ಲೇ ಅತಿ ಭೀಕರ ವರ್ಷ. ಅಮೆರಿಕ ವಿಶ್ವದ ಪವರ್‌ಫುಲ್ ರಾಷ್ಟ್ರವಾದ ಬಳಿಕ ಎಂದಿಗೂ ಇಂತಹ ಕರಾಳ ಪರಿಸ್ಥಿತಿಯನ್ನ ಎದುರಿಸಿಲ್ಲ. ಕೊರೊನಾ ಕಾರಣಕ್ಕೆ ಅಮೆರಿಕ ನಲುಗಿ ಹೋಗಿತ್ತು. ಹೀಗೆ ಕೊರೊನಾ ಕಾರಣಕ್ಕೆ ಅಮೆರಿಕ ವರ್ಷಪೂರ್ತಿ ಸುದ್ದಿಯಲ್ಲಿತ್ತು. ಕೊರೊನಾ ಸೋಂಕು ಕಂಟ್ರೋಲ್‌ಗೆ ತರಲು ಅತ್ಯಗತ್ಯವಾಗಿದ್ದ ಮಾಸ್ಕ್ ವಿಚಾರವಾಗಿ ಸ್ವತಃ ಅಧ್ಯಕ್ಷ ಟ್ರಂಪ್ ತಜ್ಞರ ಕೆಂಗಣ್ಣಿಗೆ ಗುರಿಯಾದರು.
ಮಾಸ್ಕ್ ತೊಟ್ಟರೆ ಮಾತ್ರ ಕೊರೊನಾ ಓಡಿ ಹೋಗುವುದಿಲ್ಲ, 'ಕೊರೊನಾ' ವೈರಸ್ ಓಡಿಸಲು ಮಾಸ್ಕ್ ಹಾಕಲೇಬೇಕು ಅಂತಾ ಏನಿಲ್ಲ ಎಂದು ಟ್ರಂಪ್ ಹಠ ಮಾಡಿದ್ದರು. ಸಣ್ಣದೊಂದು ವಿಚಾರ ಅಮೆರಿಕದಲ್ಲಿ ಎಷ್ಟು ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು ಎಂದರೆ, ಮಾಸ್ಕ್ ವಿಚಾರಕ್ಕೆ ಮಹಾಯುದ್ಧವೇ ನಡೆಯಿತು. ಅಷ್ಟೇ ಆಗಿದ್ದರೂ ಹೋಗಲಿ ಬಿಡಿ ಅನ್ನಬಹುದಿತ್ತು, ಆದರೆ ಅದನ್ನೂ ಮೀರಿ ಅಮೆರಿಕದ ಜನರನ್ನ 2 ಬಣವಾಗಿಸಿದ್ದು ಇದೇ ಪುಟಾಣಿ ಪದ 'ಮಾಸ್ಕ್'.
ಅಧ್ಯಕ್ಷೀಯ ಚುನಾವಣೆಯಲ್ಲಿ ಕೂಡ ಮಾಸ್ಕ್ ಅಜೆಂಡಾ ಇಟ್ಟುಕೊಂಡೇ ಡೆಮಾಕ್ರಟ್ಸ್, ರಿಪಬ್ಲಿಕನ್ಸ್ ಪ್ರಚಾರ ಮಾಡಿದ್ದರು. ಬೈಡನ್ ಬೆಂಬಲಿಗರು ಮಾಸ್ಕ್ ಹಾಕಬೇಕು ಅಂತಾ ಪಟ್ಟುಹಿಡಿದು ಕೂತರೆ, ಟ್ರಂಪ್ ಸಪೋರ್ಟರ್ಸ್ ಮಾಸ್ಕ್ ಬೇಡವೇ ಬೇಡ ಎಂದು ಹಠ ಮಾಡಿದ್ದರು.

ಜಗತ್ತಿನ ಎದುರು ಕಾಮಿಡಿ ಪೀಸ್..!
ಬಹುಪಾಲು ಅಮೆರಿಕನ್ನರು ಮಾಸ್ಕ್ ತೊಡದೆ ಬೇಜವಾಬ್ದಾರಿ ವರ್ತನೆ ತೋರಿದ್ದು ಜಾಗತಿಕ ಮಟ್ಟದಲ್ಲಿ ಭಾರಿ ಸುದ್ದಿಯಾಗಿತ್ತು, ಇದರ ಜೊತೆಗೆ ನಗೆಪಾಟಲಿಗೂ ಕಾರಣವಾಗಿತ್ತು. ಅಮೆರಿಕನ್ನರು ಮಾಸ್ಕ್ ಹಾಕೋದಕ್ಕೆ ಹಠ ಮಾಡಿದ್ದರ ಪರಿಣಾಮ ಕೋಟ್ಯಂತರ ಜನರಿಗೆ ಬಹುಬೇಗ ಸೋಂಕು ಹರಡಿದೆ ಎಂಬ ಆರೋಪವೂ ಇದೆ. ಈ ಆರೋಪದಲ್ಲಿ ಟ್ರಂಪ್ ವಿರುದ್ಧದ ಆರೋಪ ಪಟ್ಟಿ ದೊಡ್ಡದಿದೆ. ಅದರಲ್ಲೂ ಅಮೆರಿಕದ ಸಾಂಕ್ರಾಮಿಕ ತಜ್ಞರು ಈ ವಿಚಾರದಲ್ಲಿ ಅಧ್ಯಕ್ಷರನ್ನೇ ಎದುರು ಹಾಕಿಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಮಾಸ್ಕ್ ಹಾಕದಿದ್ದರೆ ಜೀವ ಹೋಗುತ್ತೆ ಎಂಬ ಸತ್ಯ ಹೇಳಿದ್ದಕ್ಕೂ ಸಾಂಕ್ರಾಮಿಕ ರೋಗಗಳ ತಜ್ಞರನ್ನು ಟ್ರಂಪ್ ಟಾರ್ಗೆಟ್ ಮಾಡಿದ್ದರು.

ಮಾಸ್ಕ್ ಹಾಕುವಂತೆ ಕೇಳಿಕೊಂಡ ಬೈಡನ್
ಅಧಿಕಾರಕ್ಕೆ ಸ್ವೀಕರಿಸುತ್ತಿದ್ದಂತೆ ಅಮೆರಿಕದ ಸರ್ಕಾರಿ ಕಚೇರಿಗಳಲ್ಲಿ ಮಾಸ್ಕ್ ತೊಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸುತ್ತೇನೆ ಎಂದು ನೂತನ ಅಧ್ಯಕ್ಷ ಜೋ ಬೈಡನ್ ಭರವಸೆ ನೀಡಿದ್ದಾರೆ. ಅಲ್ಲದೆ ಪ್ರಜೆಗಳಿಗೂ ಮಾಸ್ಕ್ ಮಹತ್ವದ ಕುರಿತು ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತೇವೆ ಎಂದು ಬೈಡನ್ ಹೇಳಿದ್ದಾರೆ. ಈ ಮೂಲಕ ಬೈಡನ್ ಚುನಾವಣೆಗೂ ಮುನ್ನ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಈಗಾಗಲೇ ಬಹುಮತ ಪಡೆದು ಅಧ್ಯಕ್ಷ ಹುದ್ದೆಯನ್ನು ಕನ್ಫರ್ಮ್ ಮಾಡಿಕೊಂಡಿರುವ ಬೈಡನ್, ಮುಂದಿನ ತಿಂಗಳು ಅಂದರೆ 2021 ಜನವರಿಯಲ್ಲಿ ಅಧಿಕಾರ ಪಡೆಯಲಿದ್ದಾರೆ. ಬೈಡನ್ ಅಧಿಕಾರಕ್ಕೆ ಬಂದ ನಂತರ ಅಮೆರಿಕನ್ನರಲ್ಲಿ ಮಾಸ್ಕ್ ಕುರಿತು ಇರುವ ನಿಲುವು ಬದಲಾದರೂ ಅಚ್ಚರಿ ಪಡಬೇಕಿಲ್ಲ.

ಪ್ರಜೆಗಳಿಗೆ ಆಜ್ಞೆ ಹೊರಡಿಸುವಂತಿಲ್ಲ
ಅಮೆರಿಕದ ಕಾನೂನಿನಲ್ಲಿ ಮಾಸ್ಕ್ ಕಡ್ಡಾಯ ಮಾಡಲು ಯಾವುದೇ ಕಾನೂನು ಇಲ್ಲ. ಸರ್ಕಾರಿ ಕಚೇರಿಗಳಲ್ಲಿ ಈ ಬಗ್ಗೆ ಸೂಚನೆ ನೀಡಬಹುದಷ್ಟೇ. ಆದರೆ ಅಮೆರಿಕದ ಪ್ರಜೆಗಳಿಗೆ ಆಜ್ಞೆ ಮೂಲಕ ಅಧ್ಯಕ್ಷರು ಮಾಸ್ಕ್ ಹಾಕಿ ಎಂದು ಸೂಚಿಸುವ ಅಧಿಕಾರ ಇಲ್ಲ. ಇದಕ್ಕೆ ಕಾರಣವೆಂದರೆ ಅಮೆರಿಕದಲ್ಲಿ ರಾಜ್ಯಗಳಿಗಿರುವ ಸಾರ್ವಭೌಮತ್ವ. ಅಮೆರಿಕದ ರಾಜ್ಯಗಳು ಕೇಂದ್ರದ ಅಂದರೆ ಅಧ್ಯಕ್ಷರ ಮಾತನ್ನ ಪಾಲಿಸಲೇಬೇಕು ಎಂಬ ನಿಯಮವಿಲ್ಲ. ಅಲ್ಲಿ ಪ್ರತಿಯೊಂದು ರಾಜ್ಯಕ್ಕೂ ಸಾರ್ವಭೌಮತ್ವ ಇರುತ್ತದೆ. ಈ ಅಧಿಕಾರ ಬಳಸಿ ಕೇಂದ್ರದ ನಿಯಮಕ್ಕೆ ವಿರುದ್ಧ ನಿಲುವು ತಾಳಬಹುದು. ತನ್ನ ರಾಜ್ಯದಲ್ಲಿ ಜಾರಿಯಾಗದಂತೆ ತಡೆಯಬಹುದು. ಇದೆಲ್ಲವನ್ನೂ ಅಳೆದು ತೂಗಿ ಲೆಕ್ಕಾಚಾರ ಹಾಕಿರುವ ಬೈಡನ್, ಅಧ್ಯಕ್ಷರಾಗಿ ಪ್ರಜೆಗಳ ಮನವೊಲಿಸುವ ಮೂಲಕ ಮಾಸ್ಕ್ ತೊಡುವ ಹಾಗೆ ಮಾಡಲು ಮುಂದಾಗಿದ್ದಾರೆ. ಬೈಡನ್ ಐಡಿಯಾ ಎಷ್ಟರಮಟ್ಟಿಗೆ ಸಕ್ಸಸ್ ಆಗುತ್ತೋ ಕಾದು ನೋಡಬೇಕು.

ಮಾಸ್ಕ್ ವಿಚಾರಕ್ಕೆ ರಾಜಕೀಯ ಮಾಡ್ತಾರೆ
ಮಾಸ್ಕ್ ವಿಚಾರಕ್ಕೆ ಟ್ರಂಪ್ ವಿರುದ್ಧ ಮುಗಿಬಿದ್ದವರ ಪೈಕಿ ಬೈಡನ್ ಫಸ್ಟ್ ಪ್ಲೇಸ್ ಪಡೆದರೆ, ಅಮೆರಿಕದ ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಫೌಸಿಗೆ ಸೆಕೆಂಡ್ ಪ್ಲೇಸ್ ಗ್ಯಾರಂಟಿ. ಏಕೆಂದರೆ ಟ್ರಂಪ್‌ಗೆ ಅತ್ಯಂತ ಆಪ್ತರಾಗಿದ್ದರೂ ಡಾ. ಫೌಸಿ ತಮ್ಮ ವೃತ್ತಿಗೆ ಮೋಸ ಮಾಡಲಿಲ್ಲ. ಮಾಸ್ಕ್ ವಿಚಾರದಲ್ಲಿ ಟ್ರಂಪ್ ನಿಲುವು ತಪ್ಪು ಎಂದು ಕಡ್ಡಿ ತುಂಡು ಮಾಡಿದವರಂತೆ ಹೇಳಿಬಿಟ್ಟರು. ಆದರೆ ಇದೇ ವಿಚಾರ ಟ್ರಂಪ್‌ಗೆ ಕೋಪ ತರಿಸಿತ್ತು. ಮೊದಲಿಗೆ ಡಾ. ಫೌಸಿ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿದ್ದ ಟ್ರಂಪ್, ಬರುಬರುತ್ತಾ ಡಾ. ಫೌಸಿ ವಿರುದ್ಧವೇ ಹರಿಹಾಯ್ದರು. ಆದರೆ ಇದಕ್ಕೆಲ್ಲಾ ಫೌಸಿ ತಲೆಕೆಡಿಸಿಕೊಳ್ಳದೆ, ಅಮೆರಿಕನ್ನರ ಆರೋಗ್ಯ ಬಗ್ಗೆ ಚಿಂತಿಸಿದ್ದರು.

ಮಾಸ್ಕ್ ವಿಚಾರಕ್ಕೆ ರಾಜಕೀಯ ಮಾಡ್ತಾರೆ
ಕಳೆದ ತಿಂಗಳು ಮೆಲ್ಬೋರ್ನ್ (Melbourne) ವಿವಿ ಆಯೋಜಿಸಿದ್ದ ಚರ್ಚೆಯಲ್ಲಿ ಭಾಗವಹಿಸಿದ್ದ ಡಾ. ಫೌಸಿ, ಟ್ರಂಪ್ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರಹಾಕಿದ್ದರು. ಅಮೆರಿಕವನ್ನು ಕೊರೊನಾ ಕಿತ್ತು ತಿನ್ನುತ್ತಿರುವಾಗ ದೇಶದಲ್ಲಿ ಮಾಸ್ಕ್ ವಿಚಾರಕ್ಕೆ ರಾಜಕೀಯ ಮಾಡುತ್ತಿದ್ದಾರೆ. ಮಾಸ್ಕ್ ಹಾಕಿಕೊಂಡರೆ ಒಂದು ಪಕ್ಷ, ಹಾಕದೇ ಇದ್ದರೆ ಇನ್ನೊಂದು ಪಕ್ಷ ಅಂತಿದ್ದಾರೆ ಎಂದಿದ್ದರು ಡಾ. ಫೌಸಿ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರಿಂದ ದೊಡ್ಡ ಗೊಂದಲ ಉಂಟಾಗಿದೆ. ಜನಕ್ಕೆ ಕೊರೊನಾ ಬಗ್ಗೆ ಸರಿಯಾದ ತಿಳಿವಳಿಕೆ ಹೇಳಬೇಕಿದೆ. ಇಲ್ಲ ಎಂದರೆ ಭವಿಷ್ಯದಲ್ಲೂ ಅಮೆರಿಕದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವುದಿಲ್ಲ ಎಂದು ಡಾ. ಫೌಸಿ ಎಚ್ಚರಿಸಿದ್ದರು.











Click it and Unblock the Notifications