ಪಾಲಿಕೆ 7 ಸದಸ್ಯರು ಕಾಂಗ್ರೆಸ್ ತೆಕ್ಕೆಗೆ: ಸದ್ಯದಲ್ಲೇ ಮೇಯರ್ ಸ್ಥಾನಕ್ಕೆ ಚುನಾವಣೆ
ವಿಜಯಪುರ, ಅಕ್ಟೋಬರ್ 11: ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಶಾಸಕರು, ಜೆಡಿಎಸ್ ನಾಯಕರು ಕಾಂಗ್ರೆಸ್ ತೆಕ್ಕೆಗೆ ಬರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ನಡುವೆ. ಏಳು ಮಂದಿ ಪಾಲಿಕೆ ಸದಸ್ಯರು ಕಾಂಗ್ರೆಸ್ ಸೇರ್ಪಡೆ ಆದ ಘಟನೆ ಬುಧವಾರ ನಡೆದಿದೆ.
ಹೌದು, ವಿಜಯಪುರ ಮಹಾನಗರ ಪಾಲಿಕೆಯ 7 ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕೈಗಾರಿಕೆ ಎಂಬಿ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಅವರ ನಿವಾಸದಲ್ಲಿ ಕಾಂಗ್ರೆಸ್ಸಿಗೆ ಸೇರ್ಪಡೆ ಆಗಿದ್ದಾರೆ. ಈ ಮೂಲಕ ಬಿಜೆಪಿಗೆ ಈ ಭಾಗದಲ್ಲಿ ಸಣ್ಣದೊಂದು ಆಘಾತವಾಗಿದೆ.

ವಿಜಯಪುರ ಪಾಲಿಕೆಯ ಮತ್ತೊಬ್ಬ ಸದಸ್ಯರು ಸಹ ಕಾಂಗ್ರೆಸ್ ಸೇರಲು ತೀರ್ಮಾನಿಸಿದ್ದಾರೆ. ಅವರು ಕಾರಣಾಂತರಗಳಿಂದ ಇಲ್ಲಿಗೆ ಬಂದಿರಲಿಲ್ಲ. ಇದರೊಂದಿಗೆ, 35 ಸದಸ್ಯ ಬಲದ ನಗರ ಪಾಲಿಕೆಯಲ್ಲಿ ಕಾಂಗ್ರೆಸ್ಸಿನ ಬಲ 18ಕ್ಕೆ ಏರಿಕೆ ಆಗಿದೆ. ಪಕ್ಷಕ್ಕೆ ಬಂದ ಇವರನ್ನೆಲ್ಲ ಸ್ವತಃ ಪಾಟೀಲರು ಮತ್ತು ಅವರ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರು ನೂತನ ಸದಸ್ಯರುನ್ನು ಗೌರವಿಸಿ ಪಕ್ಷಕ್ಕೆ ಬರಮಾಡಿಕೊಂಡರು.
'ಕೈ' ಜೋಡಿಸಿದ ಸದಸ್ಯರ ಹೆಸರು
ಪಾಲಿಕೆ ಸದಸ್ಯರಾದ ಪಕ್ಷೇತರ ಅಭ್ಯರ್ಥಿಯಾಗಿದ್ದ ಅಶೋಕ ನ್ಯಾಮಗೌಡ, ರಾಜು ಜಾದವ, ಅಲ್ತಾಫ್ ಇಟಗಿ, ರಫೀಕ್ ಕಾಗೆ, ಎಂಐಎಂ ಪಕ್ಷದಿಂದ ಆರಿಸಿ ಬಂದಿದ್ದ ಕೈಸರ್ ಇನಾಮದಾರ ಮತ್ತು ಸೂಫಿಯಾ ವಾಟಿ ಹಾಗೂ ಜೆಡಿಎಸ್ ಸದಸ್ಯ ರಾಜು ಚವಾಣ ಅವರು ಕಾಂಗ್ರೆಸ್ ಜೊತೆ ಕೈ ಜೋಡಿಸಿದರು.
ಸಚಿವ ಪಾಟೀಲರು ಕಳೆದ ಎರಡು ವಾರಗಳಿಂದ ಅಧಿಕೃತ ಪ್ರವಾಸದ ಮೇರೆಗೆ ಅಮೆರಿಕದಲ್ಲಿದ್ದರು. ಅವರು ಬುಧವಾರ ಬೆಂಗಳೂರಿಗೆ ಮರಳುತ್ತಿದ್ದಂತೆಯೇ ಈ ಬೆಳವಣಿಗೆ ನಡೆದಿದೆ.

ಪಾಲಿಕೆಯಲ್ಲಿ ಕಾಂಗ್ರೆಸ್ 32ಕ್ಕೆ ಏರಿಕೆ
ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಇದುವರೆಗೆ ಕಾಂಗ್ರೆಸ್ ಕೇವಲ 10 ಸದಸ್ಯರನ್ನು ಮಾತ್ರ ಹೊಂದಿತ್ತು. ಬದಲಾದ ಪರಿಸ್ಥಿತಿಯಲ್ಲಿ ಅದರ ಬಲ 18 ಆಗಿದೆ. ಜತೆಗೆ ಸ್ಥಳೀಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಸೇರಿ ಅದರ ಬಲ 32ಕ್ಕೆ ಏರಿಕೆ ಆಗಿದೆ. ಹೀಗಾಗಿ ಸದ್ಯದಲ್ಲೇ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ಸಿನ ಗೆಲುವು ನಿಚ್ಚಳವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪಾಟೀಲ್ ಅವರು, ಕಾಂಗ್ರೆಸ್ ಮಾತ್ರ ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸುವ ಸಾಮರ್ಥ್ಯ ಹೊಂದಿದೆ ಎನ್ನುವುದು ಎಲ್ಲರಿಗೂ ಮನವರಿಕೆಯಾಗಿದೆ. ಹೀಗಾಗಿ ಪಕ್ಷೇತರರು ಮತ್ತು ಉಳಿದ ಪಕ್ಷಗಳ ಸದಸ್ಯರು ತಾವಾಗಿಯೇ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಇವರನ್ನೆಲ್ಲ ನಾನು ಸ್ವಾಗತಿಸುತ್ತೇನೆ. ಮುಂಬರುವ ದಿನಗಳಲ್ಲಿ ವಿಜಯಪುರ ನಗರಕ್ಕೆ ನಮ್ಮಿಂದ ಸಮರ್ಥ ಆಡಳಿತ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications