ಗಂಗಾಧರ ಚಡಚಣ ಹತ್ಯೆ : ಮಹಾದೇವ ಭೈರಗೊಂಡ ಸಿಐಡಿ ವಶಕ್ಕೆ
ವಿಜಯಪುರ, ಜುಲೈ 05 : ಗಂಗಾಧರ ಚಡಚಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಭೈರಗೊಂಡನನ್ನು ಸಿಐಡಿ ವಶಕ್ಕೆ ನೀಡಲಾಗಿದೆ. ಗುರುವಾರ ಬೆಳಗ್ಗೆ ಆರೋಪಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದರು.
ಮಹಾದೇವ ಭೈರಗೊಂಡನನ್ನು ಸಿಐಡಿ ಪೊಲೀಸರು ಗುರುವಾರ ಸಂಜೆ ಇಂಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಧೀಶ ಅರವಿಂದ ಹಾಗರಗಿ ಅವರು ಆರೋಪಿಯನ್ನು 7 ದಿನಗಳ ಕಾಲ ಸಿಐಡಿ ವಶಕ್ಕೆ ಒಪ್ಪಿಸಿ ಆದೇಶ ನೀಡಿದರು.
ಸಿಐಡಿ ತಂಡ ಗುರುವಾರ ಬೆಳಗ್ಗೆ ಇಂಡಿ ತಾಲೂಕಿನ ಕೆರೂರು ಗ್ರಾಮದಲ್ಲಿನ ಮನೆಯಲ್ಲಿ ಮಹಾದೇವ ಭೈರಗೊಂಡನನ್ನು ಬಂಧಿಸಿತ್ತು. ಬೈರಗೊಂಡ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು.

ಸಿಐಡಿ ಪರವಾಗಿ ಆರ್.ಎ.ಗಡಕರಿ ವಾದ ಮಂಡನೆ ಮಾಡಿದರು. ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಸಿಐಡಿ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ಕೋರ್ಟ್ 7 ದಿನಗಳ ಕಾಲ ವಶಕ್ಕೆ ನೀಡಿತು.
ಭೀಮಾ ತೀರದ ರೌಡಿ ಶೀಟರ್ ಧರ್ಮರಾಜ್ ಚಡಚಣ 2017ರ ಅಕ್ಟೋಬರ್ 30ರಂದು ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ. ಎನ್‌ಕೌಂಟರ್ ಬಳಿಕ ಆತನ ಸಹೋದರ ಗಂಗಾಧರ ಚಡಚಣನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಪೊಲೀಸರ ವಶದಲ್ಲಿರುವ ಗಂಗಾಧರ ಚಡಚಣ ನಾಪತ್ತೆಯಾಗಿದ್ದ. ಈ ಕುರಿತು ಆತನ ತಾಯಿ ಐಜಿಪಿಗೆ ದೂರು ನೀಡಿದ್ದರು. ತನಿಖೆ ಬಳಿಕ ಆತ ಕೊಲೆಯಾಗಿದ್ದಾನೆ ಎಂಬ ಮಾಹಿತಿ ದೊರಕಿತ್ತು. ಮಹಾದೇವ ಭೈರಗೊಂಡ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ.
ಕೆಲವು ಪೊಲೀಸ್ ಅಧಿಕಾರಿಗಳು ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವಿದ್ದು, ಮೂವರನ್ನು ಬಂಧಿಸಲಾಗಿದೆ. ಕರ್ನಾಟಕ ಸರ್ಕಾರ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ.












Click it and Unblock the Notifications