ಗಂಗಾಧರ ಚಡಚಣ ಹತ್ಯೆ : ಮೂವರು ಆರೋಪಿಗಳು ಸಿಐಡಿ ವಶಕ್ಕೆ
ವಿಜಯಪುರ, ಜುಲೈ 01 : ಗಂಗಾಧರ ಚಡಚಣ ಹತ್ಯೆ ಪ್ರಕರಣದ ಮೂವರು ಆರೋಪಿಗಳನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ಮೂವರು ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿದ್ದರು.
ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಭೈರಗೊಂಡನ ಅಳಿಯ ಸಿದ್ದಗೊಂಡ ಮುಡವೆ, ಹಣಮಂತ ಪೂಜಾರಿ ಸಹೋದರ ಭೀಮು ಪೂಜಾರಿ, ಚಾಂದ್ ಹುಸೇನಿ ಚಡಚಣ ಅವರನ್ನು ಸಿಐಡಿ ಜುಲೈ 2ರ ತನಕ ವಶಕ್ಕೆ ಪಡೆದುಕೊಂಡಿದೆ.

ಗಂಗಾಧರ ಚಡಚಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ 6 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಇಂಡಿ ಜೆಎಂಎಫ್‌ಸಿ ನ್ಯಾಯಾಲಯ ಜುಲೈ 12ರ ತನಕ ವಿಸ್ತರಣೆ ಮಾಡಿದೆ.
ಮಹಾದೇವ ಭೈರಗೊಂಡ ಗಂಗಾಧರ ಚಡಚಣ ಹತ್ಯೆ ಪ್ರಕರಣದ ಆರೋಪಿ. ಪ್ರಕರಣ ಬೆಳಕಿಗೆ ಬಂದ ಬಳಿಕ ಆತ ತಲೆಮರೆಸಿಕೊಂಡಿದ್ದಾನೆ. ವಿಜಯಪುರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಆತ ಅರ್ಜಿ ಸಲ್ಲಿಸಿದ್ದು, ತೀರ್ಪು ಜುಲೈ 2ರಂದು ಪ್ರಕಟವಾಗಲಿದೆ.
ರೌಡಿ ಶೀಟರ್ ಧರ್ಮರಾಜ್ ಚಡಚಣ 2017ರ ಅ.30ರಂದು ತೋಟದ ಮನೆಯಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ. ಈ ಎನ್‌ಕೌಂಟರ್ ಬಳಿಕ ಸಹೋದರ ಗಂಗಾಧರ ಚಡಚಣನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಆತ ನಾಪತ್ತೆಯಾಗಿದ್ದ. ಕೆಲವು ದಿನಗಳ ಹಿಂದೆ ಆತ ಕೊಲೆಯಾದ ಮಾಹಿತಿ ಬಹಿರಂಗವಾಗಿದೆ.












Click it and Unblock the Notifications