ರೈತರಿಗೆ ವಕ್ಫ್ ಬೋರ್ಡ್ ನೋಟಿಸ್, ಸರ್ಕಾರಕ್ಕೆ ಯತ್ನಾಳ್ ವಾರ್ನಿಂಗ್!
ವಿಜಯಪುರ ರೈತರಿಗೆ ವಕ್ಫ್ ಬೋರ್ಡ್ ಆಘಾತ ನೀಡಿದೆ. ಈಗಾಗಲೇ ಬರದಿಂದ ತತ್ತರಿಸಿದ್ದ ವಿಜಯಪುರದ ಅನ್ನದಾತರಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ಹಲವು ದಶಕಗಳಿಂದ ಬದುಕು ಕಟ್ಟಿಕೊಂಡಿದ್ದ ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿದ್ದು, ಆಸ್ತಿಯು ವಕ್ಫ್ ಬೋರ್ಡ್‌ಗೆ ಸೇರಿದ್ದು ಎಂದು ತಿಳಿಸಿದೆ.
ಇನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಎಂ.ಬಿ.ಪಾಟೀಲ್ ಅವರ ಸ್ವಕ್ಷೇತ್ರ ಹೊನವಾಡ ಗ್ರಾಮದ ಹಲವು ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿದ್ದು, ಇದರಿಂದ ರೈತರು ಕಂಗೆಟ್ಟಿದ್ದಾರೆ ಎನ್ನಲಾಗಿದೆ. ವಿಜಯಪುರ ಒಂದೇ ಜಿಲ್ಲೆಯಲ್ಲಿ ಸುಮಾರು 15 ಸಾವಿರಕ್ಕೂ ಅಧಿಕ ಎಕರೆ ಜಾಗವನ್ನು ವಕ್ಫ್ ತನ್ನ ಆಸ್ತಿ ಎಂದು ನೋಟಿಸ್ ನೀಡಿದೆ.

ನೋಟಿಸ್‌ನಲ್ಲಿ ರೈತರ ಜಮೀನು ವಕ್ಫ್ ಆಸ್ತಿಯಾಗಿದ್ದು, ಪಹಣಿ ಪತ್ರದಲ್ಲಿ ಕಾಲಂ ನಂ 11 ಹಾಗೂ 9ರಲ್ಲಿ ಉಲ್ಲೇಖಿಸಿ, 2 ದಿನದಲ್ಲಿ ತಕರಾರು ಸಲ್ಲಿಸಲು ಸೂಚಿಸಲಾಗಿದೆ. ಆದರೆ, ವಿಜಯಪುರ ಜಿಲ್ಲಾಧಿಕಾರಿಗಳು, ನೋಟಿಸ್‌ಗೆ ರೈತರು ಹೆದರುವ ಅವಶ್ಯಕತೆ ಇಲ್ಲ. ಸಂಬಂಧಪಟ್ಟ ಕಚೇರಿಗೆ ಸೂಕ್ತ ದಾಖಲಾತಿ ನೀಡಿ ಎಂದಿದ್ದಾರೆ.
ಇತ್ತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಸರ್ಕಾರದ ಈ ನಡೆಗೆ ಕಿಡಿಕಾರಿದ್ದಾರೆ. ರೈತರ ಜಮೀನುಗಳಲ್ಲಿನ ಪಹಣಿ ಪತ್ರದಲ್ಲಿನ ಕಾಲಂ ನಂಬರ್ 11ರ ಋಣಗಳು ಕಾಲಂನಲ್ಲಿ "ಕರ್ನಾಟಕ ವಕ್ಫ್ ಬೋರ್ಡ್ ಬೆಂಗಳೂರು ಮಸಜಿತ್ (ಸುನ್ನಿ) ವಕ್ಫ್" ಎಂದು ನಮೂದಿಸಿರುವುದಾಗಿ ನಮ್ಮ ವಿಜಯಪುರದ ರೈತರು ತಿಳಿಸಿದ್ದಾರೆ ಎಂದಿದ್ದಾರೆ.

ಕೇಂದ್ರದಲ್ಲಿ ವಿವಾದಿತ ಕಾಯ್ದೆ ಮರುಪರಿಶೀಲನೆಗಾಗಿ ಜಂಟಿ ಸಂಸತ್ ಸಮಿತಿ ರಚನೆಯಾಗಿರುವಾಗ ತರಾತುರಿಯಲ್ಲಿ ಪಹಣಿಯನ್ನು ಬದಲಿಸಿ ವಕ್ಫ್ ಬೋರ್ಡ್ ಹೆಸರು ನಮೂದಿಸಿರುವ ವಕ್ಫ್ ಈ ನಿರಂಕುಶ ನಡೆ ಖಂಡನೀಯ ಹಾಗೂ ಅಸಂವಿಧಾನಿಕವಾಗಿದೆ ಎಂದು ಕಿಡಿಕಾರಿದ್ದಾರೆ.
ಅನ್ನದಾತನ ಜಮೀನನ್ನು ತಂದು ಹೇಳುವ ಹಕ್ಕು ವಕ್ಫ್ ಅವರಿಗಿಲ್ಲ. ಯಾವುದೋ ಒಂದು ಸಮುದಾಯದ ತುಷ್ಟೀಕರಣ ಮಾಡಲು ನಾಡಿನ ಅನ್ನದಾತರನ್ನು ಒಕ್ಕಲೆಬ್ಬಿಸಲು ಹೊರಟಿರುವ ಈ ಕ್ರಮ ಸರ್ಕಾರದ ಆದ್ಯತೆಗಳನ್ನು ತಿಳಿಸುತ್ತದೆ ಎಂದು ದೂರಿದ್ದಾರೆ.
ಜಂಟಿ ಸಂಸತ್ ಸಮಿತಿಯ ಆದೇಶ ಹಾಗೂ ಶಿಫಾರಸುಗಳು ಹೊರ ಬರುವವರೆಗೂ ರೈತರ ಪಹಣಿ ಯಥಾಸ್ಥಿತಿಯಂತೆ (status quo) ಇರಬೇಕು. ಸರ್ಕಾರ ಈ ನಿರ್ಣಯ ವಾಪಸ್ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಈ ವಕ್ಫ್ ಪರವಿರುವ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡುವುದು ನಿಶ್ಚಿತ ಎಂದು ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.
ವಕ್ಫ್ ಜಂಟಿ ಸದನ ಸಮಿತಿಯ ಸದಸ್ಯ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರನ್ನು ರೈತರು ಈ ವಿಚಾರವಾಗಿ ಭೇಟಿ ಮಾಡಿದ್ದಾರೆ. ತಮಗೆ ನ್ಯಾಯ ಒದಗಿಸುವಂತೆ ತೇಜಸ್ವಿ ಸೂರ್ಯಗೆ ಮನವಿ ಕೂಡ ಮಾಡಿದ್ದಾರೆ.
ಇನ್ನು ವಿಜಯಪುರ ಒಂದು ಜಿಲ್ಲೆಯಲ್ಲಿ ಸಾವಿರಾರು ಎಕರೆ ಭೂಪ್ರದೇಶವನ್ನು ವಕ್ಫ್ ಬೋರ್ಡ್ ತನ್ನ ಆಸ್ತಿ ಎಂದು ಹೇಳಿಕೊಂಡು ನೋಟಿಸ್ ಕೊಟ್ಟಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲೂ ವಕ್ಫ್ ಅಕ್ರಮವಾಗಿ ಆಸ್ತಿ ಕಬಳಿಸಲು ಸಂಚು ರೂಪಿಸಿದೆ. ಇದು ಅಕ್ಷ್ಯಮ್ಯ ಅಪರಾಧ ಎಂದು ತೇಜಸ್ವಿ ಸೂರ್ಯ ಖಂಡಿಸಿದ್ದಾರೆ.












Click it and Unblock the Notifications