ಬತ್ತಿದ ಉಡುಪಿಯ ಜೀವನದಿ; ಇನ್ನೆಷ್ಟು ದಿನ ಸಿಗಬಹುದು ನೀರು?
ಉಡುಪಿ, ಜೂನ್ 07 : ಕರಾವಳಿಯಲ್ಲಿ ಬರ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಉಡುಪಿಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಉಡುಪಿ ನಗರದ ಜೀವನದಿ ಸ್ವರ್ಣಾ ಬತ್ತಿಹೋಗಿರುವುದು ಇದಕ್ಕೆ ಕಾರಣ. ನಗರದ ವಾರ್ಡ್ ಗೆ ಒಂದು ಬಾರಿ ಸರಬರಾಜು ಮಾಡುವಷ್ಟು ನೀರು ಸಂಗ್ರಹವಿದೆಯಷ್ಟೆ. ಉಡುಪಿ ನಗರಕ್ಕೆ ನೀರು ಪೂರೈಕೆಯಾಗುವ ಸ್ವರ್ಣಾ ನದಿಯ ಗುಂಡಿಗಳಲ್ಲಿರುವ ನೀರು ಮುಂದಿನ 4 ದಿನಗಳಿಗೆ ಸಾಕಾಗಬಹುದು ಎಂದು ಅಂದಾಜಿಸಲಾಗಿದೆ. ಇತಿಹಾಸದಲ್ಲೇ ಎಂದೂ ಕಾಣದ ಬರದ ಛಾಯೆ ಉಡುಪಿಯಾದ್ಯಂತ ಆವರಿಸಿದೆ.
ಪ್ರಸ್ತುತ ನದಿಯ ಅಲ್ಲಲ್ಲಿ ಇರುವ ಹಳ್ಳಗಳಿಂದ ನೀರನ್ನು ಪಂಪ್ ಗಳ ಮೂಲಕ ಬಜೆ ಅಣೆಕಟ್ಟಿಗೆ ಹಾಯಿಸಿ ಅಲ್ಲಿಂದ ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ. ಉಡುಪಿ ಜಿಲ್ಲಾದ್ಯಂತ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಪುತ್ತಿಗೆ ಸೇತುವೆ, ಪುತ್ತಿಗೆ ಮಠ ಗುಂಡಿ, ಸಾೖಬ್ರ ಗುಂಡಿಗಳ ಒಟ್ಟು 6 ಪಂಪ್ ಗಳಿಂದ ನೀರನ್ನು ಅಣೆಕಟ್ಟಿಗೆ ಹರಿಸಲಾಗುತ್ತಿದೆ. ಕಳೆದ ಭಾನುವಾರ ನೀರು ಹರಿಯಲು ಅಡ್ಡವಾಗಿದ್ದ ಬಂಡೆಯೊಂದನ್ನು ತೆರವುಗೊಳಿಸಲಾಗಿದೆ. ಇದರಿಂದ ನೀರಿನ ಹರಿವು ಸರಾಗವಾಗಿದೆ. ಇನ್ನೆರಡು ದಿನಗಳಲ್ಲಿ ಮಳೆಯಾಗದಿದ್ದರೆ ಉಡುಪಿಯಲ್ಲಿ ನೀರಿನ ಗಂಭೀರ ಸಮಸ್ಯೆ ಎದುರಾಗಲಿರುವುದು ಖಚಿತ.
ಶೀಘ್ರ ಮಳೆಗಾಗಿ ಉಡುಪಿಯ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳ ನೇತೃತ್ವದಲ್ಲಿ ಇತ್ತೀಚೆಗೆ ಮಳೆಗಾಗಿ ಪ್ರಾರ್ಥಿಸಿ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ ಹಾಗೂ ಚಂದ್ರಮೌಳೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಅದಲ್ಲದೇ ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿಯೂ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ.

ಒಂದು ವೇಳೆ ಶೀಘ್ರ ಮಳೆಯಾಗದಿದ್ದರೆ ಸ್ವರ್ಣಾ ನದಿಯ ಭಂಡಾರಿಬೆಟ್ಟು ಪ್ರದೇಶದಲ್ಲಿರುವ ಹಳ್ಳದಿಂದ ನೀರು ಪಂಪಿಂಗ್ ಮಾಡುವ ಕಾರ್ಯ ನಡೆಸಲು ನಿರ್ಧರಿಸಲಾಗಿದೆ. ಭಂಡಾರಿಬೆಟ್ಟು ಹಳ್ಳದಲ್ಲಿ ಸ್ವಲ್ಪ ನೀರು ದೊರೆಯಬಹುದು ಎಂದು ಅಂದಾಜಿಸಲಾಗಿದೆ.












Click it and Unblock the Notifications