ಮರವಂತೆ ಬೀಚ್ ಬಳಿ 3 ಕಾರಿನ ಗ್ಲಾಸ್ ಒಡೆದು ಕಳ್ಳತನ
ಉಡುಪಿ, ಅಕ್ಟೋಬರ್ 2: ರಜೆಯ ಮಜಾ ಕಳೆಯಲೆಂದು ಬೀಚ್ ಗೆ ಆಗಮಿಸಿದ್ದ ಪ್ರವಾಸಿಗರ ಕಾರಿನ ಗಾಜು ಒಡೆದು ಚಿನ್ನಾಭರಣ ದೋಚಿರುವ ಘಟನೆ ಉಡುಪಿಯ ಕುಂದಾಪುರ ತಾಲೂಕಿನ ಮರವಂತೆಯಲ್ಲಿ ನಡೆದಿದೆ.
ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಮರವಂತೆ ಬೀಚ್ ಗೆ ಆಗಮಿಸಿದ್ದ ಪ್ರವಾಸಿಗರ 3 ಕಾರಿನ ಗಾಜುಗಳನ್ನು ಒಡೆಯಲಾಗಿದ್ದು ನಗದು, ಮೊಬೈಲ್ ಹಾಗೂ ಚಿನ್ನಾಭರಣಗಳನ್ನು ದೋಚಲಾಗಿದೆ.

ಬಂಟ್ವಾಳ ಮೂಲದ ಸಂತೋಷ್ ನಾಯಕ್, ಗಣೇಶ್ ಕಾಮತ್ ಹಾಗೂ ಮಡಿಕೇರಿಯ ಸೂರ್ಯನಾರಾಯಣ ಎಂಬವರು ರಜೆಯ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಮರವಂತೆ ಬೀಚ್ ಗೆ ಬಂದಿದ್ದರು.
ಬೀಚ್ ಗೆ ಆಗಮಿಸಿದ್ದ ಪ್ರವಾಸಿ ತಂಡವು ಬೀಚ್ ನಿಂದ ಅನತಿ ದೂರದಲ್ಲಿ ಕಾರನ್ನು ಸುರಕ್ಷಿತ ಸ್ಥಳದಲ್ಲಿಟ್ಟು ಕಡಲ ಕಿನಾರೆಯತ್ತ ತೆರಳಿತ್ತು. ಈ ವೇಳೆ ಯಾರ ಗಮನಕ್ಕೂ ಬಾರದ ರೀತಿಯಲ್ಲಿ ದುಷ್ಕರ್ಮಿಗಳು ಗಾಜನ್ನು ಉಪಾಯದಿಂದ ಒಡೆದು ಕಾರಿನಲ್ಲಿದ್ದ ವಸ್ತುಗಳನ್ನು ದೋಚಿದ್ದಾರೆ.

ದುಷ್ಕರ್ಮಿಗಳು ಮೂರು ಕಾರಿನಿಂದ 13 ಪವನ್ ಚಿನ್ನ, 4 ಮೊಬೈಲ್, ಎಟಿಎಂ ಕಾರ್ಡ್ ಗಳು ಹಾಗೂ ನಗದನ್ನು ದೋಚಿದ್ದಾರೆ. ಒಂದೇ ತಂಡದಿಂದ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.
ಘಟನೆಯ ಕುರಿತು ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಸರಣಿ ಕಳ್ಳತನಗೈದ ಲೂಟಿಕೋರ ಗುಂಪಿನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.












Click it and Unblock the Notifications