ಉಡುಪಿ ಮಟ್ಕಾ ದಂಧೆಗೆ ಅಣ್ಣಾಮಲೈ ಕಡಿವಾಣ ಹಾಕಿದ್ದು ಹೇಗೆ?
ಉಡುಪಿ, ನವೆಂಬರ್ 24: ಉಡುಪಿ ಜಿಲ್ಲೆಯ ಮಟ್ಟಿಗೆ ಹೇಳೋದಾದ್ರೆ ವ್ಯಾಪಕವಾಗಿ ನಡೆಯುತ್ತಿದ್ದ ಮಟ್ಕಾ ದಂಧೆ ಕಳೆದೊಂದು ವರ್ಷದಿಂದ ನಿಯಂತ್ರಣಕ್ಕೆ ಬಂದಿದೆ.ಉಡುಪಿ ನಗರ ಕೇಂದ್ರತವಾಗಿ ನಡೆಯುತ್ತಿದ್ದ ಈ ದಂಧೆಗೆ ,ಅಣ್ಣಾಮಲೈ ಎಸ್ಪಿಯಾಗಿ ಬಂದ ನಂತರ ಕಡಿವಾಣ ಬಿತ್ತು. ಈ ದಂಧೆಯ ಕಿಂಗ್ ಪಿನ್ ನನ್ನು ಬಂಧಿಸಿದ್ದೂ ಅಣ್ಣಾಮಲೈ ಎಸ್ಪಿಯಾಗಿದ್ದಾಗಲೇ. ಕಳೆದೊಂದು ವರ್ಷದಲ್ಲಿ ಮಟ್ಕಾ ಸಂಬಂಧಿ ದಾಳಿಯಾಗಲೀ ಬಂಧನವಾಗಲೀ ಉಡುಪಿಯಲ್ಲಿ ದೊಡ್ಡ ಮಟ್ಟದಲ್ಲಿ ನಡೆದಿಲ್ಲ.
ಅಣ್ಣಾಮಲೈ ಇಲ್ಲಿಂದ ಬೆಂಗಳೂರಿಗೆ ವರ್ಗಾ ಆಗಿ ಹೋದ ಮೇಲೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಂದ ಲಕ್ಷ್ಮಣ ನಿಂಬರಗಿಯವರೂ ಮಟ್ಕಾ ದಂಧೆಕೋರರನ್ನು ಹದ್ದುಬಸ್ತಿನಲ್ಲಿಟ್ಟಿದ್ದರು. ಮುಖ್ಯವಾಗಿ ಪ್ರತೀ ವಾರ ಪೊಲೀಸ್ ವರಿಷ್ಠಾಧಿಕಾರಿಯವರು ನಡೆಸುತ್ತಿದ್ದ ಫೋನ್ ಇನ್ ಕಾರ್ಯಕ್ರಮದ ವೇಳೆ ನಾಗರೀಕರು ಈ ದಂಧೆಯ ಕರಾಳ ಮುಖವನ್ನು ಅನಾವರಣಗೊಳಿಸುತ್ತಿದ್ದರು. ತಮಗಾಗುತ್ತಿರುವ ತೊಂದರೆಗಳ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳ ಗಮನ ಸೆಳೆಯುತ್ತಿದ್ದರು.
ನಾಗರೀಕರ ದೂರಿನ ಮೇರೆಗೆ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ದಾಳಿ ಮಾಡಿದ್ದೂ ಉಂಟು.ಮುಖ್ಯವಾಗಿ ಬಸ್ ನಿಲ್ದಾಣ ಮತ್ತು ನಗರದ ಆಯಕಟ್ಟಿನ ಸ್ಥಳಗಳಲ್ಲಿ ದಂಧೆಕೋರರು ವ್ಯವಹಾರ ನಡೆಸುತ್ತಿದ್ದರು.ಪೊಲೀಸರು ದಂಧೆಯ ಬಗ್ಗೆ ಮಾಹಿತಿ ಪಡೆದು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದರು.

ಉಡುಪಿಯಲ್ಲಿ ದೊಡ್ಡ ಮಟ್ಟದಲ್ಲಿ ಬಂಧನ ಆದದ್ದು ಕಳೆದ ವರ್ಷ.ಎಸ್ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಇಪ್ಪತ್ತು ಮಂದಿಯನ್ನು ಬಂಧಿಸಲಾಗಿತ್ತು.ಇನ್ನು ಮುಂದೆ ಜಿಲ್ಲೆಯಲ್ಲಿ ಮಟ್ಕಾ ದಂಧೆ ನಡೆಸೋದು ಕಂಡುಬಂದರೆ, ಅಂತವರ ವಿರುದ್ಧ ರೌಡಿ ಶೀಟರ್ ತೆರೆಯಬೇಕಾಗುತ್ತದೆ ಎಂದು ಜಿಲ್ಲಾ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ್ ನಿಂಬರಗಿ ಖಡಕ್ ಎಚ್ಚರಿಕೆ ನೀಡಿದ್ದರು.
ಮಟ್ಕಾ ದಂಧೆ ಆ ಸಂದರ್ಭದಲ್ಲಿ ವ್ಯಾಪಕವಾಗಿ ಹರಡಿದ್ದರಿಂದ ಜಿಲ್ಲಾ ಪೊಲೀಸ್ ಕಚೇರಿಯ ಮುಂಭಾಗದಲ್ಲಿ ಮಟ್ಕಾ ಆರೋಪಿಗಳ ಪರೇಡ್ ಕೂಡ ನಡೆಸಲಾಗಿತ್ತು! ಮಟ್ಕಾ ದಂಧೆಯಲ್ಲಿ ತೊಡಗಿರುವ ಹಳೇ ಆರೋಪಿಗಳನ್ನು ಕರೆಸಿ, ಇನ್ನುಮುಂದೆ ಜಿಲ್ಲೆಯಲ್ಲಿ ಮಟ್ಕಾ ದಂಧೆ ನಡೆಸೋದು ಕಂಡುಬಂದರೆ, ಅಂತವರ ವಿರುದ್ಧ ರೌಡಿ ಶೀಟರ್ ತೆರೆಯಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಅಲ್ಲದೇ ಮಟ್ಕಾ ದಂಧೆಯ ಕಿಂಗ್‍ಪಿನ್‍ಗಳಿಗೂ ನಡುಕ ಹುಟ್ಟಿಸಿದ್ದರು.
ಪ್ರತೀ ವಾರ ಪೊಲೀಸ್ ವರಿಷ್ಠಾಧಿಕಾರಿಗಳು ನಡೆಸುತ್ತಿದ್ದ ಫೋನ್ ಇನ್ ಕಾರ್ಯಕ್ರಮ ಉಡುಪಿ ಜಿಲ್ಲೆಯಲ್ಲಿ ಮಟ್ಕಾ ದಂಧೆಗೆ ಕಡಿವಾಣ ಹಾಕಲು ಸಾಕಷ್ಟು ಸಹಕಾರಿ ಆಯ್ತು. ನಾಗರೀಕರಿಂದ ಬರುತ್ತಿದ್ದ ದೂರುಗಳನ್ನು ಆಧರಿಸಿ ಪೊಲೀಸರು ಮಟ್ಕಾ ದಂಧೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಂತ ನೂರಕ್ಕೆ ನೂರು ನಿಂತಿದೆ ಎಂದಲ್ಲ.ಹಿಂದೆ ನಗರದ ಆಯಕಟ್ಟಿನ ಸ್ಥಳಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ದಂಧೆಗೆ ಬ್ರೇಕ್ ಬಿದ್ದಿದ್ದು ನಿಜ.












Click it and Unblock the Notifications