14 ತಿಂಗಳ ನರಕ ಯಾತನೆ ಬಳಿಕ ಭಾರತಕ್ಕೆ ಮರಳಿದ ಜಸಿಂತಾ
ಉಡುಪಿ, ಸೆಪ್ಟೆಂಬರ್ 24 : ಮಾನವ ಕಳ್ಳಸಾಗಾಣಿಕೆ ಜಾಲದಲ್ಲಿ ಸಿಲುಕಿ ನರಕಯಾತನೆ ಅನುಭವಿಸಿದ್ದ ಜೆಸಿಂತಾ ಉಡುಪಿಗೆ ಮರಳಿದ್ದಾರೆ. ಸೌದಿ ಅರೇಬಿಯಾದಲ್ಲಿ ನರಕ ಯಾತನೆ ಅನುಭವಿಸಿದ್ದ ಕಾರ್ಕಳದ ಮುದರಂಗಡಿಯ ಜೆಸಿಂತಾ ಅವರನ್ನು ಭಾರತಕ್ಕೆ ಕರೆ ತರುವಲ್ಲಿ ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನ ಯಶಸ್ವಿಯಾಗಿದೆ.
ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾನವ ಹಕ್ಕುಗಳ ಪ್ರತಿಷ್ಠಾನ ಸಂಚಾಲಕ ಡಾ.ರವೀಂದ್ರನಾಥ್ ಶ್ಯಾನುಭಾಗ್ ಅವರು, 'ಜಸಿಂತಾ ಮುಂಬೈ ಮಾನವ ಕಳ್ಳಸಾಗಾಣಿಕೆಯ ಜಾಲದ ಮೂಲಕ ಸೌದಿ ಅರೇಬಿಯಾಕ್ಕೆ ಸಾಗಿಸಲ್ಪಟ್ಟಿದ್ದರು' ಎಂದು ಮಾಹಿತಿ ನೀಡಿದರು.
'ಸೌದಿ ಅರೇಬಿಯಾದ ಯಾಂಬೂ ಪಟ್ಟಣದ ಅರಬ್ಬಿಯೊಬ್ಬರ ಮನೆಯೊಂದರಲ್ಲಿ ಗುಲಾಮಳಾಗಿ ದಿನದೂಡುತಿದ್ದ ಜೆಸಿಂತಾಳನ್ನು ಇದೀಗ ಅರೇಜೀವ ಸ್ಥಿತಿಯಲ್ಲಿ ಭಾರತಕ್ಕೆ ಕರೆತರಲಾಗಿದೆ' ಎಂದು ಮಾಹಿತಿ ನೀಡಿದರು.
'ಜೆಸಿಂತಾ ಅವರನ್ನು ರಕ್ಷಿಸಿ ಭಾರತಕ್ಕೆ ಕರೆತರಲು ಮಾಡಿದ ಮನವಿಗೆ ಸ್ಪಂದಿಸಿದ ಗಲ್ಫ್ ಕನ್ನಡಿಗರಿಗೆ ನೀಡಿದ ಕರೆಗೆ ಸ್ಪಂದಿಸಿದ ಜೆಡ್ಡಾದ ಎನ್.ಆರ್.ಐ. ಪೋರಂನ ಅಧ್ಯಕ್ಷ ರೋಶನ್ ರಾಡ್ರಿಗಸ್ ಮತ್ತವರ ಸಂಗಡಿಗರ ಸತತ ಪ್ರಯತ್ನದ ಫಲವಾಗಿ 14 ತಿಂಗಳ ಬಳಿಕ ಜಸಿಂತಾ ಮತ್ತೆ ತನ್ನ ಮಕ್ಕಳನ್ನು ಸೇರಿ ಕೊಂಡಿದ್ದಾಳೆ' ಎಂದರು.

ಉದ್ಯೋಗದ ಜಾಹೀರಾತು
ಜೆಸಿಂತಾರ ಪತಿ ತೀರಿಕೊಂಡಾಗ ಅವರಿಗೆ ದಿಕ್ಕೇ ತೋಚದಂತಾಗಿತ್ತು. ಮೂರು ಮಕ್ಕಳ ಪಾಲನೆ ಹಾಗೂ ವಿದ್ಯಾಭ್ಯಾಸಕ್ಕಾಗಿ ಉದ್ಯೋಗದ ಹುಡುಕಾಟದಲ್ಲಿದ್ದರು. ಪತ್ರಿಕೆಯೊಂದರಲ್ಲಿ ಕತಾರ್ ನಲ್ಲಿರುವ ಭಾರತೀಯ ಕುಟುಂಬವೊಂದಕ್ಕೆ ಮಕ್ಕಳ ಪಾಲನೆಗಾಗಿ ಮಹಿಳೆಯೋರ್ವಳ ಅಗತ್ಯವಿದೆ ಎಂದು ಜಾಹೀರಾತು ಪ್ರಕಟವಾಗಿತ್ತು.

25000 ವೇತನ
ಜೆಸಿಂತಾ ಮುಂಬೈ ರಿಕ್ರೂಟ್‍ಮೆಂಟ್ ಎಜೆನ್ಸಿಯನ್ನು ಸಂಪರ್ಕಿಸಿದ್ದರು. ತಿಂಗಳಿಗೆ 25,000 ರೂಪಾಯಿ ಕೊಡಿಸುವುದಾಗಿ ಎಜೆನ್ಸಿಯ ಮಾಲೀಕ ಶಾಬಾಜ್ ಖಾನ್ ಜೆಸಿಂತಾಗೆ ಆಮಿಶವೊಡ್ಡಿದ್ದು, ಯಾವುದೇ ಖರ್ಚುಗಳನ್ನು ತೆಗೆದುಕೊಳ್ಳದೇ ಪ್ರಯಾಣಕ್ಕೆ ಬೇಕಾಗಿರುವ ಪಾಸ್‍ಪೋರ್ಟ್ ಹಾಗೂ ವೀಸಾಗಳನ್ನು ಮಾಡಿಸುವ ಭರವಸೆಯನ್ನೂ ನೀಡಿದ್ದ.

ದುಬೈಗೆ ಕಳುಹಿಸಲಾಯಿತು
ಶಾಬಾಜ್ ಖಾನ್ ಮಾತಿನ ಮೇಲಿನ ವಿಶ್ವಾಸದಿಂದಾಗಿ ಜೆಸಿಂತಾ ಮುಂಬೈಗೆ ತೆರಳಿದ್ದರು. ಕೆಲವು ದಿನಗಳ ನಂತರ ಇನ್ನಿಬ್ಬರು ಯುವತಿಯರೊಂದಿಗೆ 2016ರ ಜೂನ್ 19ರಂದು ಅವರನ್ನು ದುಬೈಗೆ ಕಳುಹಿಸಲಾಯಿತು. ಅಲ್ಲಿಂದ ಯಾವ ದೇಶದ ವಿಮಾನ ಹತ್ತಿದೆ ಎನ್ನುವುದು ಅವರಿಗೆ ತಿಳಿಯಲಿಲ್ಲ. ಮರುದಿನ ಯಾವುದೋ ಒಂದು ನಿಲ್ದಾಣದಲ್ಲಿ ವಿಮಾನ ಇಳಿದಾಗ ತಾನು ಬಂದಿದ್ದು ಕತಾರ್ ದೇಶಕ್ಕಲ್ಲ, ಸೌದಿ ಅರೇಬಿಯಾಕ್ಕೆ ಎಂದು ತಿಳಿಯಿತು.

ಮನೆ ಕೆಲಸಕ್ಕೆ ಸೇರಿಸಿದರು
ವಿಮಾನ ನಿಲ್ದಾಣದಿಂದ ಅರಬ್ಬಿಯೊಬ್ಬರ ಮನೆಗೆ ಕೆಲಸಕ್ಕೆ ಕರೆದುಕೊಂಡು ಹೋದರು. ಅದು ಯಜಮಾನನ ತಾಯಿ, ಆತನ ಮೂವರು ಮಡದಿಯರು ಹಾಗೂ ಹತ್ತಾರು ಮಕ್ಕಳಿದ್ದ ಮೂರು ಬೃಹತ್ ಬಂಗ್ಲೆ ಯಾಗಿತ್ತು. ಅಲ್ಲಿ ಬೆಳಗ್ಗೆ ಆರುಗಂಟೆಯಿಂದ ರಾತ್ರಿ ಎರಡುಗಂಟೆಗಳ ತನಕವೂ ಎಲ್ಲರ ಚೌಕರಿ ಮಾಡಬೇಕಾಗಿತ್ತು. ಅವರೆಲ್ಲರ ಊಟ ಮುಗಿದ ಮೇಲೆ ಆಹಾರ ಉಳಿದರೆ ಮಾತ್ರ ಜೆಸಿಂತಾಳಿಗೆ ಊಟ ದೊರೆಯುತ್ತಿತ್ತು. ಇಲ್ಲದಿದ್ದರೆ ಉಪವಾಸ ಇರಬೇಕಿತ್ತು.

ಆರೋಗ್ಯ ಹದಗೆಟ್ಟಿತು
ದಿನಕ್ಕೆ 16 ಗಂಟೆಗೂ ಅಧಿಕ ಕಾಲದ ದುಡಿತದಿಂದಾಗಿ ಜಸಿಂತಾರ ಆರೋಗ್ಯ ಕೆಡುತ್ತಾ ಬಂತು. ದಿನವಿಡೀ ಹಸಿವೆಯಿಂದ ಬಳಲಿದರೆ, ಪ್ರತಿ ರಾತ್ರಿ ಜ್ವರದಿಂದ ನರಳಿದರು. ತನ್ನ ಆರೋಗ್ಯ ಸರಿಯಿಲ್ಲ, ತನ್ನಿಂದ ಕೆಲಸಮಾಡಲು ಸಾಧ್ಯವಿಲ್ಲ ದಯವಿಟ್ಟು ತನ್ನನ್ನು ಹಿಂದಕ್ಕೆ ಕಳುಹಿಸಿ ಎಂದು ಆಕೆ ಪರಿಪರಿಯಾಗಿ ಗೋಗರೆದರೂ ಅಲ್ಲಿ ಕೇಳುವವರೇ ಇರಲಿಲ್ಲ. ಮನೆಯ ಯಜಮಾನ ಹಾಗೂ ಮನೆಯವರು ಜೆಸಿಂತಾ ಅವರಿಗೆ ಹಲವಾರು ಬಾರಿ ದೈಹಿಕ ಹಿಂಸೆ ಕೂಡ ನೀಡಿದ್ದರು. ಈ ನಡುವೆ ಜೆಸಿಂತಾ ಹೇಗೋ ತನ್ನ ಮನೆಯ ಸಂಪರ್ಕಿಸಿ ಆ ಮೂಲಕ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಸಹಕಾರದೊಂದಿಗೆ ಈಗ ಮತ್ತೆ ತವರಿಗೆ ಮರಳಿದ್ದಾರೆ .












Click it and Unblock the Notifications