ಚಿತ್ರಗಳು: ಕಾರ್ಟೂನ್ ಲೋಕದೊಳಗೆ ಗಾಂಧಿ, ದೀಪಿಕಾ, ವಾಜಪೇಯಿ...
ಉಡುಪಿ, ನವೆಂಬರ್ 25: ಆಧುನಿಕ ಜಗತ್ತಿನಲ್ಲಿ ಒಂದು ವ್ಯವಸ್ಥೆಗೆ ಕನ್ನಡಿಯಾಗಿರುವುದಕ್ಕೆ ಹಲವಾರು ಮಾಧ್ಯಮಗಳಿವೆ. ಅದರಲ್ಲಿ, ವ್ಯವಸ್ಥೆಯನ್ನು ಗೇಲಿ ಮಾಡುವುದರ ಜೊತೆಜೊತೆಗೇ, ಹೇಳಬೇಕಾದ್ದನ್ನು ಪರಿಣಾಮಕಾರಿಯಾಗಿ ಮುಟ್ಟಿಸುವ ಮಾಧ್ಯಮ ಕಾರ್ಟೂನ್. ಹಲವು ಕಾರ್ಟೂನಿಸ್ಟ್ ಗಳನ್ನು ಹುಟ್ಟು ಹಾಕಿದ ಕುಂದಾಪುರ ತಾಲೂಕಿನಲ್ಲಿ ಇದೀಗ ಆರನೇ ಕಾರ್ಟೂನ್ ಹಬ್ಬ ಆರಂಭಗೊಂಡಿದೆ.
ಗಾಂಧೀಜಿ ಅವರ 150ನೇ ವರ್ಷಾಚರಣೆ ಅಂಗವಾಗಿ "ರಾಮ ಅಲ್ಲಾ ತೇರೋ ನಾಮ್" ಶೀರ್ಷಿಕೆಯಡಿ ಆರಂಭಗೊಂಡ ಕಾರ್ಟೂನ್ ಹಬ್ಬ ಸದ್ಯ ಕುಂದಾಪುರದಲ್ಲಿ ಕೇಂದ್ರ ಬಿಂದುವಾಗಿದೆ.

ಕುಂದಾಪುರದ ಕಾರ್ಟೂನ್ ಗೆಳೆಯರು ಕುಂದೇಶ್ವರ ಲಕ್ಷದೀಪೋತ್ಸವ ಅಂಗವಾಗಿ ಆರನೇ ಕಾರ್ಟೂನ್ ಹಬ್ಬವನ್ನು ಹಮ್ಮಿಕೊಂಡಿದ್ದಾರೆ. ಕಾರ್ಟೂನ್ ಹಬ್ಬದಲ್ಲಿ ರಾಜ್ಯದ ವಿವಿಧ ವ್ಯಂಗ್ಯಚಿತ್ರಕಾರರು ಬಿಡಿಸಿದ ವ್ಯಂಗ್ಯಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಅಟಲ್ ಬಿಹಾರಿ ವಾಜಪೇಯಿ, ಪೂಜೆಯಲ್ಲಿರುವ ರಾಗಾ, ಎಪಿಜೆ ಅಬ್ದಲ್ ಕಲಾಂ ಅವರು ವೀಣೆ ಹಿಡಿದ ಭಂಗಿ, ನಟಿ ದೀಪಿಕಾ ಪಡುಕೋಣೆ ಎದುರು ರಣವೀರ್ ಸಿಂಗ್ ಗುಲಾಬಿ ಗೊಂಚಲು ಹಿಡಿದು ಪ್ರೇಮ ಭಿಕ್ಷೆ ಬೇಡುವ ಭಂಗಿ, ಬಂಡೆ ಮೇಲೆ ಪಿಎಂ ಮೋದಿ ಫಿಟ್ನೆಸ್ ಚಾಲೆಂಜ್.... ಹೀಗೆ ಅನೇಕ ಕಾರ್ಟೂನ್ ಗಳು ಗಮನ ಸೆಳೆಯುತ್ತಿವೆ.

ಕುಂದಾಪುರ ವ್ಯಂಗ್ಯಚಿತ್ರಕಾರ ಸತೀಶ್ ನೇತೃತ್ವದಲ್ಲಿ ಕಾರ್ಟೂನ್ ಹಬ್ಬ ನಡೆಯುತ್ತಿದೆ. ಕಾರ್ಟೂನ್ ಹಬ್ಬದ ಆಯೋಜಕರು ಕ್ಯಾರಿಕೇಚರ್ ಸ್ಪರ್ಧೆ ಮೂಲಕ ವಿವಿಧ ಶಾಲೆಗಳ ಬಡ ಮಕ್ಕಳಿಗೆ ದೇಣಿಗೆ ಸಂಗ್ರಹಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಚುನಾವಣಾ ಆಯೋಗದಲ್ಲಿ ಬದಲಾವಣೆ ತಂದ ಶೇಷನ್ ಅವರ ಕ್ಯಾರಿಕೇಚರ್ ರಚನಾ ಸ್ಪರ್ಧೆಯನ್ನು ಈ ಬಾರಿ ಆಯೋಜಿಸಿದ್ದು ವಿಶೇಷವಾಗಿತ್ತು. ಕಳೆದ 10 ವರ್ಷಗಳಿಂದ ಆಮೆ ನಡಿಗೆಯಲ್ಲಿರುವ ಕುಂದಾಪುರ ಫ್ಲೈ ಓವರ್ ಕಾಮಗಾರಿಯನ್ನು ಅಣಕಿಸುವ ಕಾರ್ಟೂನ್ ಕೂಡ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿತ್ತು.

ಕುಂದಾಪುರ ತಾಲೂಕಿನ ಜೂನಿಯರ್ ಕಾಲೇಜಿನ ಕಲಾ ಮಂದಿರದಲ್ಲಿ 4 ದಿನಗಳ ಕಾಲ ನಡೆಯುತ್ತಿರುವ ಕಾರ್ಟೂನ್ ಹಬ್ಬದಲ್ಲಿ ನೂರಾರು ಕಾರ್ಟೂನ್ ಗಳು ಕಣ್ಣಿಗೆ ಹಬ್ಬ ನೀಡುತ್ತಿವೆ. ನವೆಂಬರ್ 23ರಿಂದ ಆರಂಭವಾಗಿರುವ ಈ ಪ್ರದರ್ಶನ ನವೆಂಬರ್ 26ರವರೆಗೂ ಮುಂದುವರೆಯಲಿದೆ.













Click it and Unblock the Notifications