ಪ್ರಪಂಚಕ್ಕೆ ತುಳುನಾಡಿನ ಪಂಜುರ್ಲಿ, ಗುಳಿಗದ ಕಥೆ ಹೇಳಿದ ರಿಷಬ್ ನಂಬುದ ದೈವ ಯಾವುದು ಗೊತ್ತಾ?
ಉಡುಪಿ, ಆಕ್ಟೋಬರ್ 26: ಪ್ರಪಂಚಕ್ಕೆ ತುಳುನಾಡಿನ ಕಾರಣಿಕ ಶಕ್ತಿಗಳಾದ ಪಂಜುರ್ಲಿ ಮತ್ತು ಗುಳಿಗ ದೈವದ ಮಹಿಮೆಯನ್ನು ಸಾರಿ ಹೇಳಿದ ನಟ ನಿರ್ದೇಶಕ ರಿಷಬ್ ಶೆಟ್ಟಿಯನ್ನು ಭಾರತೀಯ ಚಿತ್ರರಂಗ ಕೊಂಡಾಡುತ್ತಿದೆ.
ಕನ್ನಡ ಚಿತ್ರರಂಗವಲ್ಲದೆ ಬೇರೆ ಭಾಷೆಯ ನಟ-ನಟಿಯರೂ ಕೂಡ ರಿಷಬ್ ಸಾಧನೆಯನ್ನು ತಲೈವಾ ರಜನಿಕಾಂತ್ ಆದಿಯಾಗಿ ದಕ್ಷಿಣ ಮತ್ತು ಉತ್ತರ ಭಾರತದ ಸೂಪರ್‌ಸ್ಟಾರ್ ಗಳೆಲ್ಲಾ ಕೊಂಡಾಡಿದ್ದಾರೆ. ದೈವದ ಶಕ್ತಿಗಳನ್ನು ತೋರಿಸಿ ಕಾಂತಾರಾದ ಕೀರ್ತಿಯನ್ನು ಜಗದಗಲಕ್ಕೆ ಸಾರಿದ ರಿಷಬ್ ಶೆಟ್ಟಿ ನಂಬುವ ದೈವ ಉಡುಪಿಯ ಕೊರಂಗ್ರಪಾಡಿಯ ಶ್ರೀ ನೀಲಕಂಠ ಮಹಾಬಬ್ಬು ಸ್ವಾಮಿ ಅನ್ನೋದು ಬಹುತೇಕ ಮಂದಿಗೆ ತಿಳಿಯದ ವಿಚಾರವಾಗಿದೆ.
ರಿಷಬ್ ಶೆಟ್ಟಿ ಯಾವುದೇ ಚಿತ್ರದಲ್ಲಿ ನಟನೆ ಅಥವಾ ನಿರ್ದೇಶನ ಮಾಡುವ ಮೊದಲು ಉಡುಪಿಯ ಕೊರಂಗ್ರಪಾಡಿಯಲ್ಲಿರುವ ಶ್ರೀ ನೀಲಕಂಠ ಮಹಾ ಬಬ್ಬು ಸ್ವಾಮಿ ದೈವಸ್ಥಾನಕ್ಕೆ ಭೇಟಿ ನೀಡಿ, ಬಬ್ಬು ಸ್ವಾಮಿಯಲ್ಲಿ ಪ್ರಾರ್ಥಿಸಿ ಮತ್ತು ಅಲ್ಲಿರುವ ಕೊರಗಜ್ಜ ಗುಡಿಯಲ್ಲಿ ದೈವದ ಅಪ್ಪಣೆ ಕೇಳುತ್ತಾರೆ. ಅದರಂತೆಯ ಕಾಂತರ ಚಿತ್ರದ ಸಮಯದಲ್ಲಿಯೂ ಇದೇ ಕ್ಷೇತ್ರಕ್ಕೆ ಭೇಟಿ ಚಿತ್ರದ ಯಶಸ್ಸಿಗಾಗಿ ರಿಷಬ್ ಶೆಟ್ಟಿ ಮೊದಲು ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಕಾಂತಾರ ಚಿತ್ರ ಬಿಡುಗಡೆಗೂ ಮೊದಲು ಶ್ರೀ ನೀಲಕಂಠ ಮಹಾ ಬಬ್ಬು ಸ್ವಾಮಿ ದೈವಸ್ಥಾನಕ್ಕೆ ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ಭೇಟಿಕೊಟ್ಟು ಪ್ರಾರ್ಥನೆ ಸಲ್ಲಿದ್ದಾರೆ.

ಇನ್ನು ಈ ಕ್ಷೇತ್ರದ ಬಗ್ಗೆ ರಿಷಬ್ ಶೆಟ್ಟಿಗೆ ತಿಳಿಸಿದ್ದು, ರಿಷಬ್ ಗೆಳೆಯ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ. ಉಳಿದವರು ಕಂಡಂತೆ ಚಿತ್ರದ ಬಳಿಕ ನಟ ರಕ್ಷಿತ್ ಶೆಟ್ಟಿ ಯಾವುದೇ ಒಳ್ಳೆಯ ಕೆಲಸ ಆರಂಭಿಸುವ ಮೊದಲು ಈ ದೈವಸ್ಥಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಬಳಿಕ ಅದೇ ಹಾದಿಯನ್ನು ರಿಷಬ್ ಹಿಡಿದರು ಎಂದು ದೇವಸ್ಥಾನ ಆಡಳಿತ ಮಂಡಳಿ ಹೇಳಿದೆ.
ಸಿನಿಮಾ ಚಿತ್ರೀಕರಣದ ನಡುವೆ ಸಮಸ್ಯೆಗಳಾದಾಗ, ವಿಘ್ನಗಳು ಬಂದಾಗ ರಕ್ಷಿತ್ ಮತ್ತು ರಿಷಬ್ ಬೈಲೂರು ಕೊರಗಜ್ಜ ದೈವಸ್ಥಾನಕ್ಕೆ ಹರಕೆ ಹೇಳಿ ಸಮಸ್ಯೆಗಳನ್ನು ನಿವಾರಿಸಿಕೊಂಡಿದ್ದಾರೆ. ವಿಜ್ಞಾನ ಶಿಕ್ಷಣ ಎಷ್ಟೇ ಮುಂದೆ ಹೋಗಲಿ ತಂತ್ರಜ್ಞಾನ ಎಷ್ಟೇ ಬೆಳೆಯಲಿ, ನಂಬಿಕೆ ಎನ್ನುವುದು ಆಯಾಯ ಕಾಲಕ್ಕೆ ಎಷ್ಟೆಷ್ಟು ಬೇಕೋ ಅಷ್ಟಷ್ಟು ಉಳಿದುಕೊಂಡು ಬಂದಿದೆ ಎನ್ನುವುದಕ್ಕೆ ಇಂತಹ ಸಾಕಷ್ಟು ಸಾಕ್ಷಿಗಳು ನಮಗೆ ನಿದರ್ಶನವಾಗಿವೆ.
ರಿಷಬ್ ಶೆಟ್ಟಿ ರಿಕ್ಕಿ, ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಸಂದರ್ಭದಲ್ಲೂಈ ದೈವವನ್ನು ನೆನವರಿಕೆ ಮಾಡಿಕೊಂಡಿದ್ದರು. ದೈವದ ಅಪ್ಪಣೆ ಯನ್ನು ಪಡೆದೇ ಕೆಲಸಕ್ಕೆ ಕೈ ಹಾಕುವ ರಿಷಬ್ ಶ್ರಮಜೀವಿ ಜೊತೆಗೆ ಅಪ್ಪಟ ದೈವ ಭಕ್ತ ಅನ್ನೋದು ಕ್ಷೇತ್ರದ ಆಡಳಿತ ಮಂಡಳಿಯವರ ಅಭಿಪ್ರಾಯವಾಗಿದೆ.












Click it and Unblock the Notifications