ವಿ.ಎಸ್ ಆಚಾರ್ಯ ಪುತ್ರನ ಕಲಾಪ್ರೇಮ: ಉಡುಪಿ ಅದಿತಿ ಗ್ಯಾಲರಿಯಲ್ಲಿ ಕಲ್ಲಚ್ಚು ಪ್ರದರ್ಶನ ಸಪನ್ನ
ಉಡುಪಿ, ಮೇ 20: ಉಡುಪಿ ಜಿಲ್ಲೆ ರಾಜ್ಯದಲ್ಲಿಯೇ ಬುದ್ದಿವಂತರ ಜಿಲ್ಲೆ ಎಂದೇ ಪ್ರಖ್ಯಾತಿ. ಇಂತಹ ಬುದ್ಧಿವಂತ ಜಿಲ್ಲೆಯ ಬುದ್ಧಿವಂತ ರಾಜಕಾರಣಿ ಎಂದೇ ಗುರುತಿಸಿಕೊಂಡಿರುವ ದಿವಂಗತ ಡಾ.ವಿ.ಎಸ್ ಆಚಾರ್ಯ ಯಾರಿಗೆ ಗೊತ್ತಿಲ್ಲ ಹೇಳಿ. ರಾಜ್ಯದ ಗೃಹ ಸಚಿವರಾಗಿಯೂ ಕೂಡ ಕೆಲಸ ನಿರ್ವಹಿಸಿದ್ದ ಡಾ. ವಿ.ಎಸ್ ಆಚಾರ್ಯ ಜನ ಮೆಚ್ಚುಗೆಗೆ ಪಾತ್ರರಾದ ರಾಜಕಾರಣಿಯಾಗಿದ್ದರು.
ವೃತ್ತಿಯಲ್ಲಿ ವೈದ್ಯರಾಗಿದ್ದು ರಾಜಕಾರಣದಲ್ಲಿ ವಿಶೇಷ ಆಸಕ್ತಿ ಇರಿಸಿಕೊಂಡಿದ್ದ ಡಾ.ವಿ.ಎಸ್ ಆಚಾರ್ಯ ಅವರ ಪುತ್ರ ಈಗ ಜಿಲ್ಲೆಯ ದೊಡ್ಡ ವೈದ್ಯ. ಡಾ. ಕಿರಣ್ ವಿ ಆಚಾರ್ಯ. ತಂದೆ ಬಿ ಎಸ್ ಆಚಾರ್ಯ ಅವರ ವೃತ್ತಿಯನ್ನು ಮುಂದುವರಿಸಿದರೂ ಕೂಡ ರಾಜಕಾರಣದಲ್ಲಿ ಯಾವುದೇ ಆಸಕ್ತಿ ಇರಿಸಿಕೊಂಡಿಲ್ಲ.

ಸದಾಕಾಲ ಕಲೆ ಸಂಸ್ಕೃತಿ ಸಂಸ್ಕಾರದ ವಿಚಾರವಾಗಿ ಮಾತನಾಡುವ ಡಾಕ್ಟರ್ ಕಿರಣ್ ವಿ ಆಚಾರ್ಯ ತಮ್ಮ ಅಭಿರುಚಿಯನ್ನು ನಾಡಿನ ಜನರಿಗೆ ಉಣಬಡಿಸಲಿಕ್ಕಾಗಿಯೇ ಉಡುಪಿಯಲ್ಲಿ ಅದಿತಿ ಗ್ಯಾಲರಿ ಎನ್ನುವ ಮ್ಯೂಸಿಯಂ ತೆರೆದಿದ್ದಾರೆ. ಸದ್ಯ ಇದೆ ಮ್ಯೂಸಿಯಂನಲ್ಲಿ ಕಲ್ಲಚ್ಚು ಪ್ರದರ್ಶನ ನಡೆಯುತ್ತಿದೆ.
ಆಧುನಿಕ ಪ್ರಿಂಟಿಂಗ್ ಪ್ರೆಸ್‌ಗಳ ಭರಾಟೆಗೂ ಮೊದಲು ಕಲ್ಲಿನ ಮೇಲೆ ಚಿತ್ರವನ್ನು ಚಿತ್ರಿಸಿ, ಅದರ ಮೂಲಕ ಚಿತ್ರ ಪ್ರತಿಯನ್ನು ತೆಗೆಯುವ ಕ್ರಮ ಪುರಾತನ ಕಾಲದಲ್ಲಿ ಚಾಲ್ತಿಯಲ್ಲಿತ್ತು. ಚಿತ್ರಕಲೆಯಲ್ಲಿ ಶ್ರೇಷ್ಠ ಕಲಾವಿದ ಎಂದು ಗುರುತಿಸಿಕೊಂಡಿರುವ ರವಿವರ್ಮ ಅವರ ಅದೆಷ್ಟು ಕಲಾಕೃತಿಗಳು ಇದೆ ಕಲ್ಲಚ್ಚು ಮಾದರಿಯಲ್ಲಿ ಹಲವಾರು ಮುದ್ರಣಗಳನ್ನ ಕಂಡಿದೆ. ಅಲ್ಲದೆ ಇದೆ ಕಲ್ಲುಚ್ಚು ಮುದ್ರಣದ ಮೂಲಕ ದೇವ ದೇವತೆಯವರ ಚಿತ್ರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಅಂದಿನ ಕಾಲದಲ್ಲಿ ನಡೆದಿತ್ತು.

ಕಲ್ಲಿನ ಮೇಲೆ ಚಿತ್ರಗಳನ್ನ ಚಿತ್ರಿಸಿ ಅದಕ್ಕೆ ವಿವಿಧ ಬಣ್ಣಗಳ ಲೇಪವನ್ನ ಹಚ್ಚಿ ಹತ್ತರಿಂದ ಹದಿನೈದು ಬಾರಿ ಅಚ್ಚು ತೆಗೆಯುವ ಮೂಲಕ ಈ ಚಿತ್ರಗಳನ್ನು ಚಿತ್ರಿಸಲಾಗುತ್ತಿತ್ತು. ಹೀಗಾಗಿ ಇಂತಹ ವಿಶೇಷ ಕಲಾ ಪ್ರಕಾರವನ್ನು ಜನರಿಗೆ ತಿಳಿಸುವ ಉದ್ದೇಶಕ್ಕೆ ಕಳೆದ ಎರಡು ದಶಕಗಳಿಂದ ಡಾ. ಕಿರಣ್ ವಿ. ಆಚಾರ್ಯ ಅವರು ಕಲೆ ಹಾಕಿರುವ ಸಂಗ್ರಹವನ್ನು ಉಡುಪಿಯ ಆದಿತಿ ಗ್ಯಾಲರಿಯಲ್ಲಿ ಪ್ರದರ್ಶಿಸಲಾಯಿತು.
ವಿಶೇಷವಾಗಿ ಬೆಂಕಿ ಪಟ್ಟಣದ ಮೇಲೆ ಚಿತ್ರಿಸಲಾಗಿರುವ ಕಲ್ಲಚ್ಚು ಮಾದರಿ, ಪಾಂಡವರ ಚಿತ್ರ, ಅರ್ಜುನ ಮಚ್ಚೆ ಯಂತ್ರವನ್ನು ಭೇದಿಸುವ ಚಿತ್ರ, ಗರುಡ ಪುರಾಣದ ನರಕ ವಾಸ ದ ಚಿತ್ರ, ಇನ್ನಿತರ ವಿಶೇಷ ಕಲಾ ಕೃತಿಗಳನ್ನು ಇಲ್ಲಿ ಪ್ರದರ್ಶಿಸಲಾಯಿತು.
ಒಟ್ಟಾರೆಯಾಗಿ ರಾಜ್ಯ ಕಂಡ ಶ್ರೇಷ್ಠ ರಾಜಕಾರಣಿಯ ಪುತ್ರನಾಗಿ ಜಿಲ್ಲೆಯ ಮೆಚ್ಚಿದ ವೈದ್ಯರಾಗಿ ಗುರುತಿಸಿಕೊಂಡಿರುವ ಡಾ. ಕಿರಣ್ ವಿ ಆಚಾರ್ಯ ಸದ್ಯ ಕಲಾತ್ಮಕ ಕಲಾಕೃತಿಯಗಳ ಪ್ರದರ್ಶನದ ಮೂಲಕ ಜಿಲ್ಲೆಯಲ್ಲಿ ಸುದ್ದಿಯಲ್ಲಿದ್ದಾರೆ.












Click it and Unblock the Notifications