ಭಾಸ್ಕರ್ ಶೆಟ್ಟಿ ಪತ್ನಿ ಒಡೆತನದ ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ ಜಾಲ ಪತ್ತೆ
ಉಡುಪಿ, ಮಾರ್ಚ್ 18; ಹತ್ಯೆಯಾದ ಉದ್ಯಮಿ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ ಒಡೆತನದ ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ ಜಾಲಪತ್ತೆಯಾಗಿದೆ. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ.
ರಾಜೇಶ್ವರಿ ಶೆಟ್ಟಿ ಮಾಲೀಕತ್ವದ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವೇಶ್ಯಾವಾಟಿಕೆ ಜಾಲ ಪತ್ತೆಯಾಗಿದೆ. ಆರೋಪಿಗಳಾದ ಶೇಖರ ಶೆಟ್ಟಿ, ಜಾನ್ಸನ್ ಡಿ ಅಲ್ಮೇಡಾ, ಹರ್ಷಿತ್ ಶೆಟ್ಟಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ರಾಜೇಶ್ವರಿ ಶೆಟ್ಟಿ ಮೇಲೆಯೂ ಪ್ರಕರಣವನ್ನು ದಾಖಲು ಮಾಡಲಾಗಿದೆ. ರಾಜೇಶ್ವರಿ ಶೆಟ್ಟಿ ಸೇರಿದಂತೆ ಮೂವರ ಬಂಧನ ಬಾಕಿ ಇದೆ. ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣ; ಉದ್ಯಮಿ ಭಾಸ್ಕರ್ ಶೆಟ್ಟಿ ಅವರನ್ನು ಜ್ಯೋತಿಷಿ ನಿರಂಜನ್ ಭಟ್ ಜೊತೆ ಸೇರಿ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ ಹತ್ಯೆ ಮಾಡಿದ್ದರು. 2016ರ ಜುಲೈ 28ರಂದು ಭಾಸ್ಕರ್ ಶೆಟ್ಟಿ ಕೊಲೆ ನಡೆದಿದ್ದು, ಶವವನ್ನು ಹೋಮಕುಂಡದಲ್ಲಿ ಹಾಕಿ ಸುಡಲಾಗಿತ್ತು.

ನಿರಂಜನ್ ಭಟ್ ಜೊತೆ ರಾಜೇಶ್ವರಿ ಶೆಟ್ಟಿ ಅಕ್ರಮ ಸಂಬಂಧ ಹೊಂದಿದ್ದರು ಎಂಬುದು ಆರೋಪವಾಗಿದೆ. ಈ ಹತ್ಯೆ ಪ್ರಕರಣದಲ್ಲಿ ರಾಜೇಶ್ವರಿ ಶೆಟ್ಟಿ ಬಂಧನವಾಗಿತ್ತು. ಜಾಮೀನು ಪಡೆದು ಅವರು ಜೈಲಿನಿಂದ ಹೊರ ಬಂದಿದ್ದಾರೆ.
ಭಾಸ್ಕರ್ ಅವರ ಪತ್ನಿ ರಾಜೇಶ್ವರಿ ಶೆಟ್ಟಿ, ಮಗ ನವನೀತ್ ಶೆಟ್ಟಿ ಮತ್ತು ಜ್ಯೋತಿಷಿ ನಿರಂಜನ್ ಭಟ್ ಈ ಪ್ರಕರಣದ ಪ್ರಮುಖ ಆರೋಪಿಗಳು. ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು.












Click it and Unblock the Notifications